ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಿಸುವ ಹಣ್ಣು, ಮೊಟ್ಟೆ ಹೇಗಿರಬೇಕು?

Last Updated 12 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ತಾಜಾ ಹಣ್ಣು ಮತ್ತು ತರಕಾರಿಗಳಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಇದ್ದು, ನಾರಿನಂಶವೂ ಹೆಚ್ಚು. ಹಾಗಾಗಿ ಹೃದಯ ಸಂಬಂಧಿ ಸಮಸ್ಯೆ, ಸಕ್ಕರೆ ಕಾಯಿಲೆಗಳಿದ್ದವರು ಇವುಗಳನ್ನು ಸೇವಿಸುತ್ತಿದ್ದರೆ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿರ್ವಹಿಸಬಹುದು. ಮಾರುಕಟ್ಟೆಯಲ್ಲಿ ಮೇಣ ಬಳಿದುಕೊಂಡು ಈಗ ತಾನೆ ತೋಟದಿಂದ ಕಿತ್ತು ತಂದಂತೆ ಕಾಣುವ ಸೇಬು ಕತ್ತರಿಸಿದಾಗಲೇ ತಿಳಿಯುತ್ತದೆ, ತೋಟದಿಂದ ಅಂಗಡಿಯವರೆಗೆ ಬರಲು ಅದೆಷ್ಟು ದಿನ ಪ್ರಯಾಣ ಮಾಡಿರುತ್ತವೊ?

ನೀರೆಲ್ಲ ಹೋಗಿ ಬೆಂಡಿನಂತೆ ಆಗಿರುವ ಸೇಬಿನಿಂದ ಯಾವ ಡಾಕ್ಟರ್‌ ಅನ್ನು ದೂರವಿಡಲು ಸಾಧ್ಯ? ಸೇಬು ಮಾರಾಟದ ಈ ತಂತ್ರ ಬಿಟ್ಟರೆ ಉಳಿದ ತರಕಾರಿ ಹಣ್ಣುಗಳನ್ನು ಅವುಗಳ ಗಾಢ ಬಣ್ಣ, ಸಹಜ ಚೆಲುವು ರಸಭರಿತವಾದರೂ ಹದವಾದ ಗಟ್ಟಿತನವೆಲ್ಲ ಇದೆಯೆ ಎಂದು ಗಮನಿಸಿ, ಅಳೆದು ಸುರಿದು, ಆಯ್ದು ತರಬಹುದು. ಮುದುಡಿದ ತ್ವಚೆಯ ಹಣ್ಣು ತರಕಾರಿಯಲ್ಲಿ ಏನು ಉಳಿದಿರಲು ಸಾಧ್ಯ? ನೋಡಿದರೆ ಮುಟ್ಟಬೇಕೆನಿಸಬೇಕು, ಮುಟ್ಟಿದರೆ ಆಸ್ವಾದಿಸಬೇಕೆನಿಸಬೇಕು ಆಗಲೇ ಅದು ತಾಜಾ ಆಕರ್ಷಕ ಸೇವಿಸಲು ಉತ್ತಮವಾದ ಹಣ್ಣು, ತರಕಾರಿ. ಇಂಥಹಣ್ಣು, ತರಕಾರಿಯಲ್ಲಿ ಅದರಲ್ಲಿ ಇರಬಹುದಾದ ಹೆಚ್ಚಿನ ಪೌಷ್ಟಿಕಾಂಶಗಳು ಸುಲಭವಾಗಿ ಸಿಗುವುದು. ತಾಜಾ ತರಕಾರಿಗಳಲ್ಲಿ ನಾರಿನಂಶ, ಆ್ಯಂಟಿ ಆಕ್ಸಿಡೆಂಟ್‌ಗಳು, ಫೈಟೊ ನ್ಯೂಟ್ರಿಯಂಟ್‌ ಇವೆ. ನಾರಿನಂಶ ಹೃದಯ ಕಾಯಿಲೆ, ಸಕ್ಕರೆ ಕಾಯಿಲೆ, ಕರುಳಿನ ಕ್ಯಾನ್ಸರ್‌ನ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಆ್ಯಂಟಿ ಆಕ್ಸಿಡೆಂಟ್‌ಗಳು ದೇಹದ ಜೀವಕೋಶ ರಕ್ಷಿಸುತ್ತವೆ. ಫೈಟೋನ್ಯೂಟ್ರಿಯಂಟ್‌ಗಳು ಕ್ಯಾನ್ಸರ್‌ ತಡೆಯುತ್ತವೆ, ಹೃದ್ರೋಗ ತಡೆಯುತ್ತವೆ. 

ಆದರೆ ತರಕಾರಿಯನ್ನು ಹಸಿಯಾಗಿ ಸೇವಿಸಲು, ಬೇಯಿಸಿ ಸೇವಿಸಲೂ ಈಗ ಭಯಪಡುವವಂತಾಗಿದೆ. ಕೀಟನಾಶಕಗಳ ವಿಪರೀತ ಪ್ರಯೋಗದ ಭಯ. ನಮ್ಮ ಸುರಕ್ಷೆಗೆ ತರಕಾರಿ, ಹಣ್ಣುಗಳನ್ನು ಉಪ್ಪು ನೀರಿನಲ್ಲಿ, ಸಾಧ್ಯವಾದರೆ ಉಗುರು ಬೆಚ್ಚನೆ ನೀರಿನಲ್ಲಿ ತೊಳೆದು ಬಳಸುವುದು ಅಗತ್ಯ. ಆಮೇಲೆ ತೊಳೆದರಾಯಿತು ಎಂದು ತುಂಬ ಹೊತ್ತು ನೀರಿನಲ್ಲಿ ಬಿಟ್ಟರೂ ಅದರಲ್ಲಿನ ಜೀವಸತ್ವಗಳನ್ನು ನೀರಲ್ಲೇ ಕಳೆದುಕೊಳ್ಳುತ್ತವೆ. ಮೊದಲೇ ಚೆನ್ನಾಗಿ ತೊಳೆದು ನಂತರ ಕತ್ತರಿಸಬೇಕು. ಕತ್ತರಿಸಿ ನಂತರ ತೊಳೆದರೂ ಅದರಲ್ಲಿ ಸತ್ವ ಉಳಿಯುವುದು ಕಡಿಮೆ. ತುಂಬ ಚಿಕ್ಕದಾಗಿ ಹೆಚ್ಚದೆ ಕನಿಷ್ಠ ಒಂದೂವರೆ ಇಂಚಿನಷ್ಟು ದೊಡ್ಡ ತುಣುಕುಗಳಾಗಿ ಹೆಚ್ಚಿದರೆ ಉತ್ತಮ. ಕಟ್‌ ಮಾಡಿದ ತಕ್ಷಣ ಅಡುಗೆಗೆ ಬಳಸಬೇಕು. ಆದಷ್ಟೂ ಬೆಂದ ಆಹಾರವನ್ನು ಪುನಾ ಬಿಸಿ ಮಾಡದೆ ತಾಜಾ ಇರುವಾಗಲೇ ಸೇವಿಸಬೇಕು. ಸಮಯ ಸಾಲದು ಎಂದು ಹಿಂದಿನ ದಿನವೇ ತರಕಾರಿ ಕತ್ತರಿಸಿ ಫ್ರಿಜ್‌ನಲ್ಲಿಟ್ಟು ಮರುದಿನ ಅಡುಗೆ ಮಾಡಿದರೆ ಅದು ತಾಜಾ ಅಡುಗೆ ಎಂದು ಬೀಗಬೇಕಿಲ್ಲ. ಕಟ್‌ ಮಾಡಿ ಸ್ವಲ್ಪ ಸಮಯ ಕಳೆದಾಗಲೇ ಅದರ ತಾಜಾತನ ಸ್ವಲ್ಪ ಹೋಗಿರುತ್ತದೆ, ಇನ್ನು ಫ್ರಿಜ್‌ನಲ್ಲಿಟ್ಟು ಮತ್ತಷ್ಟು ಸ್ವಾದ ಕಳೆದುಕೊಂಡಿರುತ್ತದೆ. ಆಮೇಲೆ ಸೇವಿಸಿದ್ದು ನಮ್ಮ ಹೊಟ್ಟೆ ತುಂಬಿಸುತ್ತದೆ ಅಷ್ಟೆ. ಆಗಲೇ ಕತ್ತರಿಸಿ ತಕ್ಷಣ ಅಡುಗೆ ಮಾಡುವ ರೂಢಿ ಬೆಳೆಸಿಕೊಳ್ಳುವುದು ಉತ್ತಮ.

ಫ್ರೀಜರ್‌ನಲ್ಲಿಟ್ಟು ಮಾರುವ ಫ್ರೋಜನ್‌ ಆಹಾರದಲ್ಲಿ ಆಹಾರದ ಬಣ್ಣ ಬದಲಾಗದೇ ಉಳಿದು ಅದು ತುಸು ಹೊರಗೆ ಇಟ್ಟ ಆಹಾರಕ್ಕಿಂತ ಪೋಷಕಾಂಶ ಕಳೆದುಕೊಂಡಿರುವುದು ಕಡಿಮೆ. ಸೇವಿಸಬಹುದು.

ತರಕಾರಿಗಳ ಚಟ್ನಿಯಲ್ಲಿ ಬೆಲ್ಲ, ಉಪ್ಪು, ಹುಳಿ ಎಲ್ಲ ಸೇರಿ ಪೋಷಕಾಂಶ ಲವಣಾಂಶ ಭರಿತವಾಗಿರುತ್ತದೆ. ಹೆಚ್ಚು ಪೌಷ್ಟಿಕವೂ ಹೌದು. ಜತೆಗೆ ಆಹಾರದಲ್ಲಿ ವಿವಿಧ ರೀತಿಯ ತಂಬುಳಿಗಳು ಲವಣಾಂಶಗಳ ಕಣಜ. ಮಜ್ಜಿಗೆ, ಅಂಬಲಿಯನ್ನೂ ಆಗಾಗ ಸೇವಿಸುತ್ತಿದ್ದರೆ ಸರಿ.
ಬೇಯಿಸಿದ ಆಹಾರವಾದರೂ ಹೆಚ್ಚು ಹೊತ್ತು ಬೇಯಿಸಿದರೆ, ಅಗತ್ಯಕ್ಕಿಂತ ಹೆಚ್ಚು ನೀರು ಹಾಕಿ ಬೇಯಿಸಿದರೆ ಉಪಯೋಗವಿಲ್ಲ. ಕಾಳು, ತರಕಾರಿ ಬೇಯಿಸಿದ ನೀರನ್ನು ವ್ಯರ್ಥ ಮಾಡದೆ ಬಳಸಬೇಕು.

ಕ್ಯಾರೆಟ್‌ನಲ್ಲಿರುವ ಬೀಟಾ ಕೆರೊಟಿನ್‌ ನಮ್ಮ ದೇಹ ಸೇರಿದ ನಂತರ ವಿಟಮಿನ್‌ ‘ಎ’ ಆಗಿ ಬದಲಾಗುತ್ತದೆ. ಆದರೆ ಹಸಿ ತರಕಾರಿ ಉತ್ತಮ ಎಂದು ರೊಟ್ಟಿ ಜತೆ, ಚಪಾತಿ ಜತೆ ಸೇವಿಸುವ ಕೋಸಂಬರಿಯಲ್ಲಿನ ಕ್ಯಾರೆಟ್‌ನಿಂದ ಇದು ಸಿಗುವುದಿಲ್ಲ. ಬದಲಾಗಿ ಹಸಿ ಕ್ಯಾರೆಟ್‌ನಿಂದ ನಮ್ಮ ದೇಹಕ್ಕೆ ಕೇವಲ ನಾರಿನಂಶ ಸಿಗುತ್ತದೆ. ಮೇಲಾಗಿ ಚೆನ್ನಾಗಿ ಅಗಿದು ತಿನ್ನುವಾಗ ಹಲ್ಲು, ಒಸಡುಗಳಿಗೆ ಉತ್ತಮ ವ್ಯಾಯಾಮ, ದೊರೆತು ಜೀರ್ಣಕ್ರಿಯೆಗೂ ಸಹಾಯವಾಗುತ್ತದೆ. ನಮ್ಮ ಮಿದುಳಿಗೂ ಉತ್ತಮ ರಕ್ತ ಪೂರೈಕೆಯಾಗುವಂತಾಗುತ್ತದೆ, ಹಲ್ಲುಗಳೂ ಸ್ವಚ್ಛವಾಗುತ್ತವೆ. ಮನಸ್ಸೂ ತೃಪ್ತವಾಗುತ್ತದೆ. ಆದರೆ ಅದರಲ್ಲಿನ ಸತ್ವದ ಸಂಪೂರ್ಣ ಲಾಭ ಬೇಕೆಂದರೆ ಅದನ್ನು ತುಸುವೇ ಎಣ್ಣೆ ಅಥವಾ ತುಪ್ಪದಲ್ಲಿಯೂ ಬಾಡಿಸಿ ಬೇಯಿಸಿ ತಿನ್ನುವುದು ಉತ್ತಮ ಎನ್ನುತ್ತಾರೆ ಧಾರವಾಡದ ಕೃಷಿ ವಿಶ್ವದ್ಯಾಲಯದ ಗ್ರಾಮೀಣ ಗೃಹವಿಜ್ಞಾನ ಮಹಾವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ನಿರ್ಮಲಾ ಏಣಗಿ.

ಮೊಟ್ಟೆಯಾದರೆ ಅದೂ ತಾಜಾ ಹೌದೆ ಎಂದು ಅದನ್ನು ಒಡೆದಾಗ ತಿಳಿಯಬಹುದು. ಒಡೆದು ಸುರಿದ ಮೊಟ್ಟೆಯೊಳಗಿನ ಭಾಗದಲ್ಲಿ ಹಳದಿ ಭಾಗ ಬಿಲ್ಲೆಯಂತೇ ಇದ್ದು, ಸದರ ಸುತ್ತ ಬಿಳಿಯ ಭಾಗ ಹರಡಿರಬೇಕು. ಒಡೆದು ತಟ್ಟೆಗೆ ಹಾಕಿದ ಕೂಡಲೇ ಹಳದಿಭಾಗ ಬಿಳಿಯ ಭಾಗದೊಡನೆ ಸೇರಿ ಹರಡಿಕೊಳ್ಳತೊಡಗಿತೆಂದರೆ ಅದು ತಾಜಾ ಮೊಟ್ಟೆಯಲ್ಲ. ದೇಹಕ್ಕೆ ಅಗತ್ಯವಿರುವ ಎಲ್ಲ ಎಂಟು ಅಮೈನೋ ಆಮ್ಲಗಳೂ ಮೊಟ್ಟೆಯಲ್ಲಿವೆ. ಅದು ಪ್ರೊಟೀನ್‌ಭರಿತ. ಉತ್ತಮ ಕೊಲೆಸ್ಟರಾಲ್‌ನ ಕಣಜ (200–300 ಮಿ.ಗ್ರಾಂನಷ್ಟು) ಒಂದು ದಿನಕ್ಕೆ 300 ಮಿ.ಗ್ರಾಂ ಕೊಲೆಸ್ಟರಾಲ್‌ ಸೇವಿಸಬಹುದು.

ಕ್ಯಾಲ್ಸಿಯಂನ ಮೂಲವಾಗಿ ರಾಗಿ ಅತ್ಯುತ್ತಮ, ಜತೆಗೆ ಇದರಲ್ಲಿ ಕಬ್ಬಿಣಾಂಶವೂ ಇದೆ. ಆದರೆ ರಾಗಿ ಮತ್ತು ಇತರ ಧಾನ್ಯಗಳು, ಮತ್ತು ಕೆಲವು ತರಕಾರಿಗಳಲ್ಲಿರುವ ಕ್ಯಾಲ್ಸಿಯಂ ಆಕ್ಸಲೇಟ್‌ ಕ್ಯಾಲ್ಸಿಯಂನಂತಹ ಸಂಕೀರ್ಣ ರೂಪದಲ್ಲಿರುತ್ತದೆ. ಉಪಾಯವೆಂದರೆ ಮಾಲ್ಟ್‌ ಮಾಡಿದರೆ ಕ್ಯಾಲ್ಸಿಯಂ ಅಲ್ಲದೆ ಇತರ ಲವಣಾಂಶಗಳೂ ದೊರೆಯುತ್ತವೆ. ಮೊಳಕೆ ಬರಿಸಿದ ಕಾಳುಗಳಲ್ಲಂತೂ ವಿಟಮಿನ್‌ ‘ಸಿ’ ಹೇರಳ. ಸಿಪ್ಪೆಯೂ ನಷ್ಟವಾಗಿ ಹೋಗುವುದಿಲ್ಲ. ಕಾಳುಗಳನ್ನು ನೀರಿನಲ್ಲಿ ನೆನೆಸಿಟ್ಟು ಇಲ್ಲವೇ ಅರಳು ರೂಪದಲ್ಲಿ ಹುರಿದು ಸೇವಿಸಿದರೂ ಪೌಷ್ಟಿಕಾಂಶ ನಷ್ಟವಾಗದು.

ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ನಮ್ಮ ದೇಹ ಸುಲಭವಾಗಿ ಒಗ್ಗಿಸಿಕೊಳ್ಳುತ್ತದೆ. ಏನೇ ಆದರೂ ದೇಹ ಕ್ರಿಯಾಶೀಲವಾಗಿದ್ದಾಗ ಅಂದರೆ ಚಿಕ್ಕವರಿದ್ದಾಗ ಮತ್ತು ಬಳೆದ ನಂತರವೂ ಮೂವತ್ತರ ವಯಸ್ಸಿನ ಒಳಗೇ  ಕ್ಯಾಲ್ಸಿಯಂ ನಮ್ಮ ಮೂಳೆಗಳಲ್ಲಿ ಸಂಗ್ರಹವಾಗುವುದು. ಅದರ ನಂತರ ಇಲ್ಲ. ಆಸಿಡಿಕ್ ಸ್ಥಿತಿಯಲ್ಲಿ, ಲ್ಯಾಕ್ಟಿಕ್‌ ಆಸಿಡ್‌ ಇರುವ ಹಾಲು, ಮೊಸರು ಸೇವಿಸಿದಾಗ ಮತ್ತು ಅಂಬಲಿ ದೋಸೆಯಂತಹ ಹುಳಿಬಂದ ಪದಾರ್ಥ ಸೇವನೆ ಇದ್ದಾಗ ಆಹಾರದಲ್ಲಿನ ಕ್ಯಾಲ್ಸಿಯಂ ಅಂಶವನ್ನು ಹೀರಿಕೊಳ್ಳುವ ಪ್ರಕ್ರಿಯೆ ದೇಹದೊಳಗೆ ನಡೆಯುತ್ತದೆ. ಬಿಸಿಲಿಗೆ ಒಡ್ಡಿಕೊಂಡರೂ ಒಳ್ಳೆಯ ಫಲಿತಾಂಶವಿರುತ್ತದೆ. ಹೆಚ್ಚಿನ ಸಮಯ ಎಸಿ ಇರುವ ವಾತಾವರಣದಲ್ಲಿ ಕಳೆಯುವವರಿಗೆ ಕ್ಯಾಲ್ಸಿಯಂನ ಕೊರತೆ ಕಾಡುವುದು ಸಹಜ ಎನ್ನುತ್ತಾರೆ ಡಾ. ನಿರ್ಮಲಾ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT