ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುತಿದೆಯೇ ಮನೆಯ ಮಾಳಿಗೆ?

Last Updated 8 ಜುಲೈ 2014, 19:30 IST
ಅಕ್ಷರ ಗಾತ್ರ

‘ಸ್ವಂತ ಮನೆ’ ಎನ್ನುವುದು ಸಾಮಾನ್ಯರ ಪಾಲಿಗಂತೂ ಬರೀ ಮನೆಯಷ್ಟೇ ಅಲ್ಲ, ಕನಸಿನ ಗೋಪುರ. ಪ್ರತಿ ಮನೆಯೊಂದಿಗೆ ಬೆರೆತು ಬಂದ ಭಾವ ಬೆಸುಗೆಗಳಿಗೆ ಇಲ್ಲಿ ಒಂದೊಂದೂ ಪ್ರತ್ಯೇಕ ಕಥೆಗಳೆ ಇವೆ. ತಾತನ ಕಾಲದಿಂದ ಬಂದಿದ್ದು, ಅಪ್ಪ ಕಟ್ಟಿಸಿದ್ದು, ಅಮ್ಮನಿಂದ ಬಳುವಳಿಯಾಗಿ ಸಿಕ್ಕಿದ್ದು, ಬೆವರು ಹರಿಸಿ ಇಷ್ಟಿಷ್ಟೇ ಕೂಡಿಟ್ಟ ಕಷ್ಟದ ದುಡ್ಡಲ್ಲಿ ಕಟ್ಟಿಸಿದ್ದು, ನಿವೃತ್ತಿ ವೇಳೆ ಬಂದ ಹಣದಲ್ಲಿ ಖರೀದಿಸಿದ್ದು, ವಿಮಾ ಹಣದಿಂದ ಕೊಂಡಿದ್ದು... ಹೀಗೆ...

ಆದರೆ ಇಂತಹ ಮನೆಯ ಛಾವಣಿಯ ಮೂಲೆ ಒಂದಿಷ್ಟು ಒದ್ದೆಯಾದರೂ ಸಾಕು ಹಣೆಯ ಮೇಲೊಂದು ಚಿಂತೆಯ ಗೆರೆ ಎದ್ದು ನಿಲ್ಲುತ್ತದೆ. ಗೋಡೆ ಮೇಲಿನ ಸಣ್ಣದೊಂದು ವ್ಯತ್ಯಾಸವೂ ದೊಡ್ಡ ಆತಂಕವನ್ನೇ ಹುಟ್ಟಿಸುತ್ತದೆ. ತಾರಸಿ ಮೇಲೆ ಚಿಕ್ಕ ಬಿರುಕು ಕಂಡುಬಂದರೂ ಎದೆಯಲ್ಲೊಂದು ನೋವಿನೆಳೆ ಹಾಯ್ದು ಹೋಗುತ್ತದೆ....

ಮನೆಯೊಳಗೆ ಕಾಲಿಟ್ಟ ಕ್ಷಣ ಅದರದೇ ಧ್ಯಾನ. ಏನಾಗಿದೆಯೊ, ಎಷ್ಟು ಖರ್ಚಾಗುವುದೊ ಎಂಬುದೇ ಭಯ.
ಎಂದೊ ಕಟ್ಟಿಸಿದ ಹಳೆಯ ಸೂರಿರಲಿ, ಮೊನ್ನೆಯಷ್ಟೆ ಕೊಂಡ ಹೊಚ್ಚ ಹೊಸ ಮನೆಯೇ ಆಗಿರಲಿ ಅದರಲ್ಲಿ ಕಂಡು ಬರುವ ಒಂದು ಸಣ್ಣ ಸಮಸ್ಯೆ ಮನೆ ಮಂದಿಯ ನೆಮ್ಮದಿಗೆ ಭಂಗ ತರಬಹುದು.

ಆದರೆ ನಿಮಗೊಬ್ಬ ನಂಬಿಕಸ್ಥ ‘ಬಿಲ್ಡಿಂಗ್ ಡಾಕ್ಟರ್’ ಸಿಕ್ಕು ಬಿಟ್ಟರೆ ಅರ್ಧ ಚಿಂತೆ ಸರಿದಂತೆಯೇ. ಬಿಲ್ಡಿಂಗಿಗೂ ಡಾಕ್ಟರೇ! ಯಾರವರು? ಎಲ್ಲಿ ಸಿಗುತ್ತಾರೆ? ಅವರನ್ನು ನಂಬುವುದು ಹೇಗೆ? ಎಂಬ ಅನುಮಾನಗಳಿಗೆ ಇಲ್ಲಿದೆ ಉತ್ತರ. ಆದರೆ ಎಚ್ಚರಿಕೆಯ ಹೆಜ್ಜೆ ನಿಮ್ಮದಾಗಿರಬೇಕಷ್ಟೇ.

ಬಿಲ್ಡಿಂಗ್ ಡಾಕ್ಟರ್
ಮನೆಯನ್ನೂ ಒಂದು ದೇಹದಂತೆಯೇ ಪರಿಗಣಿಸುತ್ತಾರೆ ಈ ಬಿಲ್ಡಿಂಗ್ ಡಾಕ್ಟರ್. ಇವರು, ಇಡೀ ಕಟ್ಟಡವನ್ನು ಪರೀಕ್ಷಿಸುತ್ತಾರೆ, ರೋಗ (ಸಮಸ್ಯೆ) ಕಂಡು ಹಿಡಿಯುತ್ತಾರೆ, ಔಷಧ, ಮಾತ್ರೆ, ಇಂಜೆಕ್ಷನ್ ಇತ್ಯಾದಿ ಅಗತ್ಯ ಬಿದ್ದಲ್ಲಿ ಸರ್ಜರಿ ಮೂಲಕ ಸರಿಪಡಿಸುತ್ತಾರೆ.

ಸೀಳು, ಬಿರುಕಗಳಿಂದ ಶಿಥಿಲವಾಗುತ್ತಿರುವ ಕಟ್ಟಡವೊಂದನ್ನು ಇದೇ ಅರ್ಥದಲ್ಲಿ ಸರಿಪಡಿಸುವುದರಿಂದ ಎಂಜಿನಿಯರುಗಳೇ ಆಗಿದ್ದರೂ ಅವರನ್ನು ‘ಬಿಲ್ಡಿಂಗ್ ಡಾಕ್ಟರ್’ ಎಂದೇ ಕರೆಯುವುದು.

ಸಮಸ್ಯೆಯನ್ನು ಕರಾರುವಾಕ್ಕಾಗಿ ಗುರುತಿಸುವ, ಅದನ್ನು ಕೂಲಂಕಷವಾಗಿ ಪರಿಶೀಲಿಸುವ ಮತ್ತು ಸರಿಪಡಿಸುವ ಮೂಲಕ ಮನೆಯ ಸಾಮರ್ಥ್ಯದ ದಕ್ಷತೆಯನ್ನು ಹೆಚ್ಚಿಸುವ ಈ ವಿಶೇಷ ತಂತ್ರಜ್ಞಾನವನ್ನು ‘ಎನರ್ಜಿ ಆಡಿಟ್’ ಎಂದೂ ವಿಶೇಷ ಹೆಸರಿನಿಂದ ಕರೆಯಲಾಗುತ್ತದೆ.

ಇದು ಹೊಸತೇ ಆದ ತಂತ್ರಜ್ಞಾನವೇನೂ ಅಲ್ಲ. 1990ರ ದಶಕದಿಂದ ಈಚೆಗೆ ಭಾರತದಲ್ಲಿಯೂ ಇದು ತನ್ನ ಹೆಜ್ಜೆ ಗುರುತು ಮೂಡಿಸುತ್ತ ಸಾಗಿದೆ.

ಆದರೆ ಮೊದಲ ದಿನಗಳಲ್ಲಿ ಕಾರ್ಪೊರೇಟ್ ಒಳಗೊಂಡಂತೆ ದೊಡ್ಡ ದೊಡ್ಡ ಕಂಪೆನಿಗಳು, ಮಾಲ್‌ಗಳು, ಫ್ಲ್ಯಾಟುಗಳು ಸೇರಿದಂತೆ ಬೃಹತ್ ಕಟ್ಟಡಗಳಿಗೆ ಮಾತ್ರ ಈ ತಂತ್ರಜ್ಞಾನ ಬಳಸಲಾಗುತ್ತಿತ್ತು. ಆದರೆ ಇತ್ತೀಚೆಗೆ ನಗರ–ಪಟ್ಟಣಗಳ ದೊಡ್ಡ ಮನೆಗಳಿಗೂ ಬರುತ್ತಿದ್ದಾರೆ ಈ ಬಿಲ್ಡಿಂಗ್ ಡಾಕ್ಟರ್ಸ್.
 

ಹೊಸ ಮನೆ ಕೊಳ್ಳುವಾಗ...
ಕೇವಲ ಸಮಸ್ಯೆ ಬಂದಾಗ ಮಾತ್ರ ವೈದ್ಯರನ್ನು ಕಾಣುವುದಕ್ಕಿಂತ ಮುಂಚಿತವಾಗಿಯೇ ಪರೀಕ್ಷೆ ಮಾಡಿಸಿದರೆ ತೊಂದರೆ ಬಾರದಂತೆ ತಡೆಯಬಹುದಲ್ಲವೇ? ಅದೇ ರೀತಿ ಇದು.ಸಿದ್ಧ ಆಹಾರ, ಸಿದ್ಧ ವಸ್ತ್ರಗಳಂತೆ ಈಗ ನಗರ–ಪಟ್ಟಣಗಳಲ್ಲೆಲ್ಲ ಬಿಲ್ಡರ್ಸ್‌ಗಳಿಂದ ಪೂರ್ಣ ಪ್ರಮಾಣದಲ್ಲಿ ಕಟ್ಟಿಸಿ ಸಿದ್ಧವಾಗಿರುವ ಮನೆಗಳನ್ನೇ ಕೊಳ್ಳುವುದು ಹೆಚ್ಚು ಪ್ರಚಲಿತವಾಗಿದೆ.
ಆದರೆ ಲಾಭವನ್ನೇ ಮುಖ್ಯವಾಗಿಟ್ಟುಕೊಳ್ಳುವ ಕಟ್ಟಡ ನಿರ್ಮಿಸುವವರು ಸರಿಯಾದ ನಿಯಮಗಳನ್ನು ಪಾಲಿಸಿಯೇ ಮನೆಗಳನ್ನು ಕಟ್ಟಿಸಿದ್ದಾರೆಯೇ? ಕಟ್ಟಡದ ನಿಜವಾದ ಸಾಮರ್ಥ್ಯ ಏನು? ಬಳಸಲಾಗಿರುವ ತಂತ್ರಜ್ಞಾನ ಯಾವುದು? ಬಳಸಿರುವ ಕಟ್ಟಡ ಸಾಮಗ್ರಿಗಳ ಗುಣಮಟ್ಟ ಹೇಗಿದೆ? ಕಟ್ಟಡದ ಬಾಳಿಕೆ ಎಷ್ಟು ವರ್ಷಗಳು? ಎಂಬುದನ್ನೆಲ್ಲಾ ಪರಿಶೀಲಿಸಲೇಬೇಕು.
ಆದರೆ ಇದೆಲ್ಲ ಸಾಮಾನ್ಯರ ಜ್ಞಾನಕ್ಕೆ ಸಿಗದ ವಿಚಾರ. ನೀವು ಖರೀದಿಸಲು ಇಚ್ಛಿಸುವ ಮನೆಯ ನಿಜವಾದ ಗುಣಮಟ್ಟ, ಸಾಮರ್ಥ್ಯವನ್ನು ಅಳೆಯುವ ಮೂಲಕ ಅದರ ಮೌಲ್ಯವನ್ನು ನಿರ್ಧರಿಸುತ್ತಾರೆ ಬಿಲ್ಡಿಂಗ್ ಡಾಕ್ಟರ್ಸ್.

ಪೂರ್ವ ಪರೀಕ್ಷೆ
ಆಡಿಟ್ ಎಂಜಿನಿಯರ್ಗಳು ಬಿಲ್ಡಿಂಗ್‌ ಮಾಲೀಕರಿಂದ ಮೊದಲು ಮಾಹಿತಿ ಕಲೆ ಹಾಕುತ್ತಾರೆ. ಸಂಬಂಧಪಟ್ಟ ಕೆಲವು ದಾಖಲೆಪತ್ರಗಳನ್ನೂ ಪರಿಶೀಲಿಸುತ್ತಾರೆ. ನಿರ್ದಿಷ್ಟ ಸಮಸ್ಯೆಯ ಬಗ್ಗೆ ಅವರು ಸಂಪೂರ್ಣ ವಿವರ ಕೇಳುತ್ತಾರೆ.

ಕಟ್ಟಡದ ಬಗ್ಗೆ ಮಾಲೀಕರಿಂದ ಅಗತ್ಯ ಮಾಹಿತಿ ಸಂಗ್ರಹಿಸಿದ ನಂತರ ಎರಡನೇ ಹೆಜ್ಜೆಯಾಗಿ ಮನೆಗೆ ಭೇಟಿ ನೀಡುವ ಆಡಿಟರ್ಸ್, ಇಡೀ ಮನೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ಈ ಸಂದರ್ಭದಲ್ಲಿ ಮಾಲೀಕರು ಸ್ಥಳದಲ್ಲಿದ್ದರೆ ಉತ್ತಮ. ಕಟ್ಟಡದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲು ಆಡಿಟರ್‌ಗೆ ಅನುಕೂಲ.

ನಿರ್ದಿಷ್ಟ ಸಮಸ್ಯೆಯನ್ನು ಗುರುತಿಸಿದ ನಂತರ ಮುಂದಿನ ಹೆಜ್ಜೆ ಬಗ್ಗೆ ಮಾಲೀಕರೊಂದಿಗೆ ಚರ್ಚಿಸುತ್ತಾರೆ. ಅಗತ್ಯವಿರುವ ಕೆಲಸಗಳೇನು? ತಗುಲಬಹುದಾದ ಸಮಯ ಹಾಗೂ ಖರ್ಚು ಎಷ್ಟು? ಎಂಬ ಬಗ್ಗೆ ನಿಮಗೊಂದು ಅಂದಾಜು ಸಿಗುತ್ತದೆ. ನಿಮ್ಮಿಂದ ಒಪ್ಪಿಗೆ ಸಿಕ್ಕ ನಂತರ ಕೆಲಸ ಆರಂಭಿಸಲಾಗುತ್ತದೆ.

ಎಂಜಿನಿಯರ್‌ಗೂ ಬಿಲ್ಡಿಂಗ್ ಡಾಕ್ಟರ್‌ಗೂ ನಡುವೆ ಸಣ್ಣ ವ್ಯತ್ಯಾಸವಿದೆ. ಬಿಲ್ಡಿಂಗ್ ಡಾಕ್ಟರ್‌ ಕೆಲಸ ಎಂಜಿನಿಯರುಗಳಿಗಿಂತಲೂ ಸೂಕ್ಷ್ಮವೂ, ಭಿನ್ನವೂ ಆಗಿರುತ್ತದೆ. ಮನೆಯ ಯಾವುದೇ ಮೂಲೆಯಲ್ಲಿ ಇರಬಹುದಾದ ಸಣ್ಣ ಸಮಸ್ಯೆಯನ್ನೂ ನಿರ್ದಿಷ್ಟವಾಗಿ ಗುರುತಿಸಬೇಕು. ಕರಾರುವಾಕ್ಕಾಗಿ ಅದನ್ನಷ್ಟೇ ಸರಿಪಡಿಸಬೇಕು. ಕೆಲ ಎಂಜಿನಿಯರುಗಳು ಬೇಜವಾಬ್ದಾರಿಯಿಂದಲೊ, ಅಸಡ್ಡೆಯಿಂದಲೊ, ಹಣ ಉಳಿಸುವುದಕ್ಕಾಗಿಯೊ ಮಾಡಿರುವ ತಪ್ಪುಗಳನ್ನು ಬಿಲ್ಡಿಂಗ್‌ ಡಾಕ್ಟರ್ಸ್‌ ಸರಿಪಡಿಸಬೇಕು. ಇದು ನಿಜಕ್ಕೂ ಸವಾಲಿನ ಕೆಲಸ.

ಮನೆ ಕಟ್ಟುವಾಗ ಹೊಸ ಸಂಭ್ರಮ, ಉತ್ಸಾಹ ಇದ್ದೇ ಇರುತ್ತದೆ. ದುಡ್ಡ ತುಸು ಹೆಚ್ಚಾದರೂ ಜನ ಯೋಚಿಸುವುದಿಲ್ಲ. ಆದರೆ ಕಟ್ಟಡವನ್ನು ರಿಪೇರಿ ಮಾಡುವುದು ಅಥವಾ ಭದ್ರಪಡಿಸುವುದು ಎಂದರೆ ಸಾಮಾನ್ಯವಾಗಿ ಯಾರಿಗೇ ಆದರೂ ಆತಂಕದ ಸಂಗತಿಯೇ. ಇಂತಹ ಸ್ಥಿತಿಯಲ್ಲಿ ಬಿಲ್ಡಿಂಗ್ ಡಾಕ್ಟರ್ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು.

ಕೆಲವು ಸಂದರ್ಭಗಳಲ್ಲಿ ಸಣ್ಣ ದೋಷವಿದ್ದರೂ ಅನಗತ್ಯ ರಿಪೇರಿ ಮಾಡಿ ದುಡ್ಡು ಬಿಚ್ಚುವವರೂ ಇರುತ್ತಾರೆ. ಅಂತಹವರ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ನೈಜ ತೊಂದರೆಯನ್ನಷ್ಟೇ ಗುರುತಿಸಿ, ಆ ದೋಷವನ್ನು ಮಾತ್ರ ಸರಿಪಡಿಸಿ ಅವರು ಬಂದು–ಹೋದ ಶುಲ್ಕವನ್ನಷ್ಟೇ ಪಡೆದು ಮರಳುವವರೂ ಉಂಟು.

ಆದ್ದರಿಂದ ತಮಗೆ ಯಾರು ಹಿತವರು ಎಂಬುದನ್ನು ಸರಿಯಾಗಿ ಆಲೋಚಿಸಿ ಬಿಲ್ಡಿಂಗ್ ಡಾಕ್ಟರ್‌ ಅವರನ್ನು ಕರೆಯುವುದು ಉತ್ತಮ. ಮುಖ್ಯವಾಗಿ ಅವರು ಕಟ್ಟಡ ನಿರ್ವಹಣಾ ಸಂಸ್ಥೆ (A Building Performance Institute –BPI) ಯಿಂದ ಪ್ರಮಾಣಿಕೃತ ಡಾಕ್ಟರ್ ಎನ್ನುವುದನ್ನೂ ಖಚಿತಪಡಿಸಿಕೊಳ್ಳಬೇಕು ಎನ್ನುತ್ತಾರೆ ಸ್ವತಃ ಬಿಲ್ಡಿಂಗ್‌ ಡಾಕ್ಟರ್‌ ಕೂಡ ಆಗಿರುವ ಎಂಜಿನಿಯರ್ ಆರ್.ಕೆ.ಸುನೀಲ್ (ಇ ಮೇಲ್‌: sunilrk.ins@gmail.com).

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT