ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯದ ಖನಿ ಕಪ್ಪು ತಾಜ್

Last Updated 13 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ವಿಜಾಪುರದ ‘ಕಪ್ಪು ತಾಜ್’ ಸ್ಮಾರಕದ ಆವರಣಕ್ಕೆ ಕಾಲಿಡುತ್ತಿದ್ದಂತೆ ಖಗ ಕಲರವ. ಪ್ರಣಯ ಪಕ್ಷಿಗಳ ಚಿಲಿ –ಪಿಲಿ ಸದ್ದಿನ ಮಾರ್ದನಿ. ಗಿಳಿ –ಪಾರಿವಾಳಗಳ ಹಿಂಡು ಹಿಂಡಿನ ಹಾರಾಟ... ರಸದೌತಣ ಉಣಬಡಿಸುತ್ತದೆ. ದೂರದಿಂದಲೇ ಕಣ್ಸೆಳೆಯುವ ಕಾಬಾಳೆ ಹೂವುಗಳು ಆದರದ ಸ್ವಾಗತ ಬಯಸಿದರೆ, ಚೆಂಡು – ನೆಲಗುಲಾಬಿ ಹೂವಿನ ಅಂದವನ್ನು ಕಣ್ತುಂಬಿಕೊಂಡೇ ಆನಂದಿಸಬೇಕು.
ನಿಸರ್ಗದತ್ತವಾಗಿ ಬೆಳೆದ ಗಿಡಗಳಲ್ಲಿ ಅರಳಿದ ಹೂವುಗಳ ಪರಿಮಳ ಆಸ್ವಾದಿಸಲು ಪಾತರಗಿತ್ತಿಯ ಹಾರಾಟ, ಮಕರಂದ ಹೀರಲು ಆಗೊಮ್ಮೆ–ಈಗೊಮ್ಮೆ ಬರುವ ಜೇನ್ನೊಣಗಳ ಝೇಂಕಾರ ರಮಣೀಯ.

ಹಸಿರು ಹುಲ್ಲು ಹಾಸು, ಮಾರ್ಗದ ಎರಡೂ ಬದಿಯಿರುವ ಬುಟ್ಟಿ ಗಿಡಗಳು (ಚಿಗರಿ ಗಿಡ) ಹಸಿರಿನಿಂದ ಕಂಗೊಳಿಸಿದರೆ... ಸುತ್ತಲೂ ಇರುವ ಬುಗುರಿ (ಬಿಂಗ್ರಿ)ಯ ಬೃಹತ್ ಮರಗಳು ತಂಗಾಳಿ ಸೂಸುತ್ತಿದ್ದಂತೆ ಪ್ರವಾಸಿಗರ ಮನದಲ್ಲಿ ಆಹ್ಲಾದಕರ ಮನೋಭಾವ. ಈ ಪರಿಸರದಲ್ಲಿ ಇದೀಗ ಎತ್ತ ನೋಡಿದರೂ ಸೌಂದರ್ಯ ಸೆರೆ ಹಿಡಿಯುವ ಕ್ಯಾಮೆರಾಗಳ ಫ್ಲಾಶ್‌ನದ್ದೇ ಸದ್ದು.
ಇದೀಗ ಪ್ರವಾಸೋದ್ಯಮ ವೈಭವದ ಸಮಯ (ಅಕ್ಟೋಬರ್‌–ಫೆಬ್ರುವರಿ). ಎಲ್ಲೆಡೆ ಪ್ರವಾಸಿಗಳ ಸುಗ್ಗಿ. ಮೂಲ ಸೌಕರ್ಯಗಳ ಕೊರತೆಯಿಂದ ನರಳುತ್ತಿದ್ದರೂ ಐತಿಹಾಸಿಕ ‘ಸ್ಮಾರಕ ನಗರಿ’ ವಿಜಾಪುರ ನಗರವೂ  ನಿತ್ಯ ಒಂದು ಸಾವಿರಕ್ಕೂ ಅಧಿಕ ದೇಶಿ–ವಿದೇಶಿ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ವಿಜಾಪುರದಲ್ಲಿ ನೂರರ ಆಸುಪಾಸು ಶತಮಾನಗಳ ಇತಿಹಾಸ ಹೊಂದಿರುವ ಸ್ಮಾರಕಗಳಿದ್ದರೂ ‘ಕಪ್ಪು ತಾಜ್‌’ ಎಂದೇ ಖ್ಯಾತವಾಗಿರುವ ಇಬ್ರಾಹಿಂ ರೋಜಾ ಪ್ರವಾಸಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಧ್ವನಿ ಸಂಯೋಜನೆಯಿಂದ ಗೋಳಗುಮ್ಮಟ ಜಗದ್ವಿಖ್ಯಾತಗೊಂಡಿದ್ದರೆ, ‘ಪ್ರೀತಿಯ ದ್ಯೋತಕ’ವಾಗಿರುವ ಕಪ್ಪು ತಾಜ್ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಬರಸೆಳೆಯುತ್ತಿದೆ.
ಎರಡನೇ ಇಬ್ರಾಹಿಂ ಆದಿಲ್‌ಶಾಹಿ ತನ್ನ ಪ್ರೀತಿಯ ಮಡದಿ ತಾಜ್ ಸುಲ್ತಾನಳ ಸಮಾಧಿಗಾಗಿ ನಿರ್ಮಿಸಿದ್ದು ಈ ‘ಇಬ್ರಾಹಿಂ ರೋಜಾ’ (1580–1626). ಸ್ಮಾರಕ ನಿರ್ಮಾಣ ಪೂರ್ಣಗೊಳ್ಳುವ ಮುನ್ನವೇ ಅರಸ ಅಸ್ತಂಗತನಾಗುತ್ತಾನೆ.

ತನ್ನ ಮೇಲಿದ್ದ ಅಪಾರ ಪ್ರೇಮದಿಂದ ಅರಸ ನಿರ್ಮಿಸುತ್ತಿದ್ದ ‘ರೋಜಾ’ (ರಾಜ ಪರಿವಾರದ ಸಮಾಧಿ ಸ್ಥಳ) ನಿರ್ಮಾಣವನ್ನು ವಾಸ್ತುಶಿಲ್ಪಿ ಮಲಿಕ್ ಸಂದಲ್ ಮಾರ್ಗದರ್ಶನದಲ್ಲಿ ರಾಣಿ ತಾಜ್ ಸುಲ್ತಾನಳೇ ಮುತುವರ್ಜಿ ವಹಿಸಿ ಪೂರ್ಣಗೊಳಿಸುತ್ತಾಳೆ. ತಾಜ್ ರೋಜಾ ಆಗಬೇಕಿದ್ದ ಸ್ಮಾರಕ ಇಬ್ರಾಹಿಂ ರೋಜಾ ಆಗುತ್ತದೆ. ಇಲ್ಲಿಯೇ ಎರಡನೇ ಇಬ್ರಾಹಿಂ ಆದಿಲ್‌ಶಾಹಿ ಮತ್ತು ತಾಜ್‌ ಸುಲ್ತಾನಳ ಸಮಾಧಿಯಿದೆ.

ಇದು ವಿಜಾಪುರ ಪ್ರಾದೇಶಿಕ ಶೈಲಿಯ ಮಹೋನ್ನತ ಮಾದರಿ. ಹಿಂದೂ–ಮುಸ್ಲಿಂ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು ‘ಕಪ್ಪು ತಾಜ್’ ಎಂದೇ ಪ್ರಸಿದ್ಧಿ. ಪ್ರಮಾಣ ಬದ್ಧತೆ, ಸೂಕ್ಷ್ಮ ಹಾಗೂ ಕಲಾತ್ಮಕ ಕುಸುರಿ ಅಲಂಕರಣ, ಸದೃಢ ಗಾರೆಯಿಂದ ಆಧಾರ ರಹಿತವಾಗಿ ನಿರ್ಮಿಸಿದ ಆಶ್ಚರ್ಯಕರ ಮೇಲ್ಛಾವಣಿ ಹೊಂದಿರುವ ಇಬ್ರಾಹಿಂ ರೋಜಾ ವಾಸ್ತು ಶಿಲ್ಪಿಗಳ ಅಮೋಘ ಕಲ್ಪನೆಯಲ್ಲಿ ಮೂಡಿ ಬಂದ ಸಂಯೋಜನಾ ಸಾಮರ್ಥ್ಯ, ತಾಂತ್ರಿಕ ನೈಪುಣ್ಯ ಹಾಗೂ ನಿರ್ಮಾಣ ಕೌಶಲದ ಅಸಾಮಾನ್ಯ ಪ್ರತೀಕ.

ಎರಡನೇ ಇಬ್ರಾಹಿಂ ಆದಿಲ್‌ಶಾಹಿ ಆರಂಭಿಸಿದ, ತಾಜ್ ಸುಲ್ತಾನ್ ಪೂರ್ಣಗೊಳಿಸಿದ ಈ ‘ರೋಜಾ’ ಸ್ಮಾರಕವೇ ಆಗ್ರಾದಲ್ಲಿ ನಿರ್ಮಾಣಗೊಂಡಿರುವ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ‘ತಾಜ್‌ ಮಹಲ್‌’ ನಿರ್ಮಾಣಕ್ಕೆ ಪ್ರೇರಣೆ ಎಂದು ಸ್ಮರಿಸುತ್ತಾರೆ ವಿಜಾಪುರದ ಪ್ರವಾಸಿ ಮಾರ್ಗದರ್ಶಿ ಉಮೇಶ್ ರಾಥೋಡ್‌. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಿರ್ಮಾಣಗೊಂಡ ಮೂರನೇ ತಾಜ್ ಎಂದೇ ಹೆಸರಾದ ಬೀಬಿ ಕಮಕ ಬಾರಾ ಸ್ಮಾರಕ ನಿರ್ಮಾಣಕ್ಕೂ ಇದೇ ಕಪ್ಪು ತಾಜ್ ಪ್ರೇರಣೆ ಎನ್ನುತ್ತಾರೆ ಉಮೇಶ್.

ಇಬ್ರಾಹಿಂ ರೋಜಾದಲ್ಲಿ ಗಾಳಿ–ಬೆಳಕಿನ ಸಂಯೋಜನೆ ಅಭೂತಪೂರ್ವವಾಗಿದೆ. ಪರ್ಶಿಯನ್ ಭಾಷೆಯಲ್ಲಿ ಕುರಾನ್‌ನ ಪ್ರಮುಖ ಶ್ಲೋಕಗಳನ್ನು ಸ್ಮಾರಕದ ಮೇಲೆ ಬರೆಯಲಾಗಿದೆ. ಇಲ್ಲಿಂದ ನೆಲ ಮಾಳಿಗೆ ಮೂಲಕ ಗೋಳಗುಮ್ಮಟ, ಸಂಗೀತ ಮಹಲ್, ತೊರವಿ ಬಳಿಯಿರುವ ಲಕ್ಷ್ಮೀ ನರಸಿಂಹ ದೇಗುಲ ಸೇರಿದಂತೆ ಅರಸು ಪರಿವಾರವಿದ್ದ ಪ್ರಮುಖ ಸ್ಥಳಗಳಿಗೆ ಸಂಪರ್ಕ ರಸ್ತೆಯಿತ್ತು.
ವೈರಿಗಳು ದಾಳಿ ಮಾಡಿದಾಗ ರಾಜ ಪರಿವಾರ ಸೇರಿದಂತೆ ಪ್ರಮುಖರು ಇದೇ ಮಾರ್ಗದಲ್ಲಿ ತಪ್ಪಿಸಿಕೊಳ್ಳಲು ಈ ನೆಲಮಾಳಿಗೆ ನಿರ್ಮಿಸಲಾಗಿತ್ತು. ರೋಜಾದ ಬಾಗಿಲುಗಳಲ್ಲಿರುವ ನೆಲಮಾಳಿಗೆಯ ರಸ್ತೆಯ ನಕ್ಷೆಯನ್ನು ಇಂದಿಗೂ ಕಾಣಬಹುದು. ಆದರೆ ಇದೀಗ ನೆಲಮಾಳಿಗೆ ರಸ್ತೆ ಅಸ್ತವ್ಯಸ್ತಗೊಂಡಿದೆ. ನಗರದ ಆಸುಪಾಸು ವಿವಿಧ ಕಾಮಗಾರಿಗಳಿಗೆ ಭೂಮಿ ಬಗೆಯುವಾಗ ಕುರುಹು ಕಂಡುಬರುತ್ತವೆ.

ಹೆರಿಟೇಜ್ ಪಾಥ್ ನಿರ್ಮಾಣಗೊಳ್ಳಲಿ...
ನಗರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ವಿಜಾಪುರದಲ್ಲಿ ಹೆರಿಟೇಜ್ ಪಾಥ್ ನಿರ್ಮಿಸಲು ಸರ್ಕಾರಗಳು ಮುಂದಾಗಬೇಕು. ಎಲ್ಲಕ್ಕೂ ಮೊದಲು ಉತ್ತಮ ರಸ್ತೆಗಳು ನಿರ್ಮಾಣಗೊಳ್ಳಲಿ. ಕಪ್ಪು ತಾಜ್ ಆವರಣದಲ್ಲಿ ಚಿಗುರುತ್ತಿರುವ ಪಾರ್ಥೇನಿಯಂ ಕಳೆಯನ್ನು ಬೇರು ಸಹಿತ ನಿರ್ಮೂಲನೆಗೊಳಿಸಬೇಕು. ಖಾಲಿ ಸ್ಥಳಗಳಲ್ಲಿ ಇನ್ನಷ್ಟು ಆಲಂಕಾರಿಕ ಗಿಡಗಳನ್ನು ಬೆಳೆಸಬೇಕು ಎಂಬುದು ಪ್ರವಾಸಿಗಳ ಬೇಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT