ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಜನ್ಯವಂತ ಗುರು

ಸಾಶಿಮ ನುಡಿನಮನ
Last Updated 5 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ದಶಕಗಳ ಹಿಂದಿನ ಮಾತು. ಆವತ್ತು ಸಾ.ಶಿ. ಮರುಳಯ್ಯ ಅವರ ಮುಂದೆ ನಿಂತು ನಾನು ಕೇಳಿದ್ದೆ, ‘ನಮಸ್ಕಾರ ಸಾರ್‌, ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಬರೆಯಬೇಕೆಂಬ ಅಪೇಕ್ಷೆ ಇದೆ. ನನಗೆ ಮಾರ್ಗದರ್ಶನ ಮಾಡುವಿರಾ?’

‘ಏನು ಹೆಸರು, ಯಾವ ಊರು, ಎಂಥ ಜಾತಿ’ ಏನೊಂದು ವಿವರ ಕೇಳದ ಆ ದೊಡ್ಡ ಮನುಷ್ಯ, ‘ನಾಳೆಯಿಂದಲೇ ಬನ್ನಿ’ ಎಂದು ತಟ್ಟನೆ ಉತ್ತರಿಸಿದರು. ಅದಕ್ಕಿಂತ ಮುಂಚೆ ಹಲವು ಮೇಷ್ಟ್ರುಗಳ ಮನೆಗಳಿಗೆ ಸುತ್ತಿ ಕಹಿ ಅನುಭವ ಉಂಡಿದ್ದ ನನಗೆ ಪರೀಕ್ಷೆ ಪಾಸಾದಷ್ಟೇ ಖುಷಿಯಾಗಿತ್ತು.

‘ಕನ್ನಡವನ್ನೇ ಮುಖ್ಯ ವಿಷಯವನ್ನಾಗಿ ಪಡೆದು ಎಂ.ಎ. ಮಾಡಿದವರಿಗೂ ಐಎಎಸ್‌ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವುದು ಕಷ್ಟ. ಅಂತಹ ಸನ್ನಿವೇಶದಲ್ಲಿ ನೀನೇನು ಹುಡುಗಾಟ ಆಡುತ್ತೀಯಾ; ಪಾಸಾಗಲು ಸಾಧ್ಯವೇ’ ಎಂದು ಹಂಗಿಸಿದವರಿಗೆ ತಕ್ಕ ಉತ್ತರ ನೀಡುವಂತೆ ಬೆಳೆಸಿದರು ನನ್ನ ಈ ಗುರುದೇವ.

ಕುವೆಂಪು ಅವರ ‘ಕೃತ್ತಿಕಾ’, ಕೇಶಿರಾಜನ ‘ಶಬ್ದಮಣಿದರ್ಪಣ’, ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ಇತ್ಯಾದಿ ಕೃತಿಗಳ ಪರಿಚಯ ಮಾಡಿಕೊಟ್ಟ ಅವರು, ಕ್ಲಿಷ್ಟಕರವಾದ ವಿಷಯಗಳನ್ನು ಕಥಾರೂಪದಲ್ಲಿ ಹೇಳುತ್ತಾ ಆಸಕ್ತಿ ಮೂಡಿಸಿದವರು.

ಕುವೆಂಪು, ಡಿ.ಎಲ್.ಎನ್, ದೇಜಗೌರಂಥ ಶ್ರೇಷ್ಠ ಗುರು ಪರಂಪರೆಯನ್ನು ಪಡೆದಿದ್ದ ಸಾಶಿಮ, ಬೋಧನೆಯಲ್ಲಿ ಅದೇ ಪರಂಪರೆಯನ್ನು ಮುಂದುವರಿಸಿದ್ದ ಪ್ರಾಧ್ಯಾಪಕ. ಗುರುಗಳು ಗದ್ಯವನ್ನೇ ಆಗಲಿ, ಪದ್ಯವನ್ನೇ ಆಗಲಿ ಪಾಠ ಮಾಡಲು ಆರಂಭಿಸಿದರೆ, ಆ ಸನ್ನಿವೇಶಗಳು ನಮ್ಮ ಸ್ಮೃತಿಪಟಲದ ಮೇಲೆ ಜೀವ ತಾಳುತ್ತಿದ್ದವು; ದೃಶ್ಯರೂಪಕಗಳಾಗಿ ಕಣ್ಮುಂದೆ ಮೆರವಣಿಗೆ ಹೊರಡುತ್ತಿದ್ದವು. ಅವರ ಬೋಧನೆಗೆ ಅಂತಹ ತಾಕತ್ತು ಇತ್ತು.

ಸೂಕ್ಷ್ಮ ಸ್ವಭಾವದ, ಮೃದು ಮನೋವೃತ್ತಿಯ, ದರ್ಪ ಧಿಮಾಕುಗಳಿಲ್ಲದ ಮರುಳಯ್ಯ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದರೂ ಕಾವ್ಯ ಮತ್ತು ವಿಮರ್ಶಾ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಮಹತ್ವಪೂರ್ಣವಾದುದು.

ಸಾಶಿಮ ಅವರ ಔದಾರ್ಯ ಹಾಗೂ ಸೌಜನ್ಯ ಬಹಳ ಜನರಿಗೆ ಪ್ರಿಯವಾದ ಅಂಶವಾಗಿತ್ತು. ಆದರೆ, ಅದು ಹೇಗೆ ಮರುಳಯ್ಯ ಅವರಿಗೇ ಸಮಸ್ಯೆಯಾಗಿ ಕಾಡುತ್ತಿತ್ತು ಎಂಬುದನ್ನು ಡಾ. ಎಂ.ಎಂ. ಕಲಬುರ್ಗಿ ಅವರು ಸ್ವತಃ ಗುರುಗಳಿಗೆ ಬರೆದ ಪತ್ರದಲ್ಲಿ ಬಣ್ಣಿಸಿದ್ದರು.

‘ಬೆಂಗಳೂರಿನ ಬಹಳಷ್ಟು ಜನ ಸ್ನೇಹಿತರು ನಿಮ್ಮಿಂದ ಸಹಾಯ ಪಡೆದು, ಮರುಕ್ಷಣವೇ ಮರೆಯುವುದನ್ನು, ತಿರುಗಿಬೀಳುವುದನ್ನು ಗಮನಿಸಿದ್ದೇನೆ. ಇದು ಇಂದಿನ ವ್ಯಕ್ತಿಗಳ ಗುಣವಿಶೇಷ. ಇಂಥ ಅನುಭವ ನನಗೂ ಆಗಿದೆ. ಔದಾರ್ಯದ ಉರುಳಿನಲ್ಲಿ ನೀವಾಗಿಯೇ ಕತ್ತು ಚಾಚುವುದು ನಿಮ್ಮ ಹುಟ್ಟುಗುಣ. ಯಾರೇನು ಮಾಡುವುದು’ ಎಂದು ಕಲಬುರ್ಗಿ ಅವರು ಉದ್ಗಾರ ಎತ್ತಿದ್ದರು.

‘ಸಾಶಿಮ ಅವರು ಸಿಗರೇಟು ಹೊತ್ತಿಸುವಾಗಲೂ ಸೌಜನ್ಯ ಕಾಣುತ್ತಿತ್ತು’ ಎಂದು ಪ್ರೊ. ವಸಂತ ಕುಷ್ಟಗಿ ಅವರೊಮ್ಮೆ ಹೇಳಿದ್ದು ಕೇವಲ ತಮಾಷೆಯ ಮಾತು ಆಗಿರಲಿಕ್ಕಿಲ್ಲ. ಹೌದು, ಗುರುಗಳ ಸೌಜನ್ಯದ ಲಾಭ ಪಡೆದ ಜನರಿಗೆ ಲೆಕ್ಕವಿಲ್ಲ.

ಬಾಲ್ಯದಲ್ಲಿ ಕಷ್ಟ: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಸಾಸಲು ಗ್ರಾಮದಲ್ಲಿ 1931ರ ಜನವರಿ 28ರಂದು ಜನಿಸಿದ (ತಂದೆ ಶಿವರುದ್ರಯ್ಯ; ತಾಯಿ ಸಿದ್ದಮ್ಮ) ಮರುಳಯ್ಯ ಅವರು, ಶಿಕ್ಷಣ ಪಡೆಯಲು ತುಂಬಾ ಕಷ್ಟಪಟ್ಟವರು. ಇಂಟರ್‌ಮೀಡಿಯಟ್‌ ಮುಗಿಸಿದ ಮೇಲೆ ಮುಂದಿನ ವಿದ್ಯಾಭ್ಯಾಸಕ್ಕೆ ಹಣ ಹೊಂಚಲು ಗಣಿ ಗುತ್ತಿಗೆದಾರರ ಬಳಿ ಕೆಲಕಾಲ ಅವರು ಗುಮಾಸ್ತರಾಗಿ ಕೆಲಸ ಮಾಡಿದ್ದರು.

ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿಯನ್ನೂ ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ’ ಕುರಿತ ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿಯನ್ನೂ ಪಡೆದರು. ಚಾಮರಾಜನಗರ, ತುಮಕೂರು, ದಾವಣಗೆರೆ, ಶಿವಮೊಗ್ಗ, ಚನ್ನಪಟ್ಟಣ, ಮಂಗಳೂರು, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮೂವತ್ತು ವರ್ಷಗಳ ಕಾಲ ಬೋಧನೆ ವೃತ್ತಿಯಲ್ಲಿ ತೊಡಗಿದ್ದರು.

ಕಾವ್ಯ, ಪ್ರಹಸನ, ಜೀವನ ಚಿತ್ರಣ, ಕಾದಂಬರಿ, ಸಣ್ಣಕಥೆ, ನಾಟಕ, ವಿಮರ್ಶೆ, ಸಂಶೋಧನೆ, ಜಾನಪದ, ವ್ಯಾಕರಣ ಮುಂತಾದ ಪ್ರಕಾರಗಳಲ್ಲಿ ತೊಂಬತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು ಅವರ ಸಾಹಿತ್ಯಕ ಸಾಧನೆ. ಕನ್ನಡ ವಿಶ್ವಕೋಶದ ಪ್ರಧಾನ ಸಂಪಾದಕರಾಗಿಯೂ (1979–1983) ಅವರು ಕಾರ್ಯ ನಿರ್ವಹಿಸಿದ್ದರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಅವರು ಕನ್ನಡ ಕಟ್ಟುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕಸಾಪ ಚುಕ್ಕಾಣಿ ಹಿಡಿದ ಮೇಲೆ ಅದಕ್ಕೊಂದು ಹೊಸರೂಪ ನೀಡಿದರು.

ಕಂಪ್ಯೂಟರೀಕರಣ ಅದರಲ್ಲಿ ಬಹುದೊಡ್ಡ ಹೆಜ್ಜೆ. ನಿಘಂಟು, ಪುಸ್ತಕ ಪ್ರಕಟಣೆ ಯೋಜನೆಗಳು ಅವರ ಕರ್ತೃತ್ವ ಶಕ್ತಿಗೆ ದ್ಯೋತಕಗಳಾಗಿದ್ದವು. ನಾನು ಐಎಎಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಕನ್ನಡ ಮಾಧ್ಯಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ತರಬೇತಿ ನೀಡುವಂತೆ ಕೇಳಿಕೊಂಡೆ. ಅದಕ್ಕೆ ಮರುಮಾತನಾಡದೆ ಒಪ್ಪಿದರು. ಅವರ ಮಾರ್ಗದರ್ಶನದ ಪರಿಣಾಮ ನೂರಾರು ಜನ ಕನ್ನಡ ಯುವಕರು ಪರೀಕ್ಷೆ ಬರೆದು ದೊಡ್ಡ ಹುದ್ದೆ ಅಲಂಕರಿಸುವಂತೆ ಆಯಿತು.

ನಾನು ಐಎಎಸ್‌ ಅಧಿಕಾರಿಯಾಗಿ ಹೋದ ಜಿಲ್ಲೆಗಳಿಗೆಲ್ಲ ಸಾಶಿಮ ಬಂದು ಹರಿಸಿದರು. ನನ್ನ ಪತ್ನಿ ವಾಣಿ ಕನ್ನಡ ಎಂ.ಎ. ಮಾಡಲು ಅಪೇಕ್ಷಿಸಿದಾಗಲೂ ಮಾರ್ಗದರ್ಶನ ಮಾಡಿದರು. ನಾವು ಕೊಡುತ್ತಿದ್ದ ಅಂಬೇಡ್ಕರ್‌ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವುದು, ಅವರ ಕುರಿತು ಘನವಾದ ಲೇಖನ ಬರೆಯುವುದು ಅವರ ಹೊಣೆಯಾಗಿತ್ತು.

‘ಸರ್‌, ನಿಮಗೆ ಗುರು ಕಾಣಿಕೆ ಸಲ್ಲಿಸಬೇಕಲ್ಲ’ ಎಂದು ಕೇಳಿದಾಗ, ‘ನನಗೆ ಗುರುವಿನ ಸ್ಥಾನ ಕೊಟ್ಟಿದ್ದೀರಲ್ಲ, ಅದೇ ದೊಡ್ಡ ಕಾಣಿಕೆ’ ಎಂದಿದ್ದರು. ಅಂತಹ ಗುರು ಹೊರಟುಹೋಗಿರುವುದು ನನ್ನಂತಹ ಶಿಷ್ಯರಿಗೆಲ್ಲ ಅನಾಥಭಾವ ಕಾಡುವಂತೆ ಮಾಡಿದೆ.

ಮರುಳಯ್ಯ ಅವರ ಪ್ರಮುಖ ಕೃತಿಗಳು
ಸಣ್ಣಕಥೆಗಳು: ಶಿವತಾಂಡವ, ವಿಪರ್ಯಾಸ, ಘೋಷವತಿ, ಬೃಂದಾವನಲೀಲೆ, ರಾಸಲೀಲೆ, ರೂಪಸಿ, ಚೈತ್ರ- ಜ್ಯೋತಿ, ಬಾರೋ   ಮೈಲಾರಕೆ, ಮರೀ ಬೇಡಿ, ವಿಜಯ  ವಾತಾಪಿ, ಶಿವಲೀಲೆ
ಕಥನಕವನ: ಶ್ರೀ ಮರುಳಸಿದ್ಧೇಶ್ವರ ವಚನವೈಭವ
ಕಾದಂಬರಿ: ನೂಪುರಾಲಾಸ, ಪುರುಷಸಿಂಹ, ಹೇಮಕೂಟ, ಸಾಮರಸ್ಯ ಶಿಲ್ಪ, ಅನುಶೀಲನೆ
ಕವನ ಸಂಕಲನಗಳು: ಕೆಂಗನ ಕಲ್ಲು, ಮನಿಷಾ, ನನ್ನ ಕವನಗಳು, ಸುರಭಿ
ವಿಮರ್ಶೆ, ಪ್ರಬಂಧಗಳು: ಭಾಸನ ಮಕ್ಕಳು, ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ
ಜೀವನ ಚರಿತ್ರೆ: ಭಾರತೀಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

(ಲೇಖಕ ನಿವೃತ್ತ ಐಎಎಸ್‌ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT