ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳಾಂತರಕ್ಕೆ ಸಿದ್ಧವಿದ್ದರೂ ಪರಿಹಾರಕ್ಕೆ ಮೀನಮೇಷ

ಪುನರ್ವಸತಿಗಾಗಿ ಕುದುರೆಮುಖ ವಾಸಿಗಳ ಅಳಲು
Last Updated 15 ಜುಲೈ 2014, 15:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿರುವ ಕುಟುಂಬಗಳ ಪುನರ್‌  ವಸತಿಗಾಗಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ₨18 ಕೋಟಿ ಬಿಡುಗಡೆ ಮಾಡಿದೆ. ಸುಮಾರು 600ಕ್ಕೂ ಹೆಚ್ಚು ಕುಟುಂಬಗಳು ಹಲವು ವರ್ಷಗಳಿಂದಲೇ ಸ್ವ ಇಚ್ಚೆಯಿಂದ ಪುನರ್ವಸತಿಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿವೆ. ಆದರೆ ಸರ್ಕಾರದಿಂದ ಹಣ ಬಿಡುಗಡೆಯಾದರೂ ಸಹ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ಸಮರ್ಪಕವಾಗಿ ಪರಿಹಾರ ನೀಡಲು ಅರಣ್ಯ ಇಲಾಖೆಯ ಕುದರೆಮುಖ ವನ್ಯಜೀವಿ ವಿಭಾಗ ಹಾಗೂ ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತಗಳು ವಿಫಲವಾಗಿವೆ ಎಂದು ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿ ರುವ ಕುಟುಂಬಗಳು ದೂರಿವೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿ ರುವ ಜನರ ಜೀವನ ಮಟ್ಟವು ದುಃಸ್ಥಿತಿಯಲ್ಲಿದ್ದು, ಇಲ್ಲಿನ ನಿವಾಸಿಗಳು ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ವೈದ್ಯಕೀಯ ಚಿಕಿತ್ಸೆ, ಶೈಕ್ಷಣಿಕ ಮತ್ತು ಔದ್ಯೋಗಿಕ ಅವಕಾಶಗಳೂ ಸಿಗದಂ ತಾಗಿದೆ. ರಾಷ್ಟ್ರೀಯ ಉದ್ಯಾನವನದೊಳಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲ್ಲದೆ ಇತರೆ ವರ್ಗದ ಜನರೂ ವಾಸಿಸುತ್ತಿದ್ದಾರೆ.

ಇಲ್ಲಿ ಸರ್ಕಾರದ ಯಾವುದೇ ಅಭಿವೃದ್ಧಿ ಕಾರ್ಯ ಯೋಜನೆಗಳು ಕಿಂಚಿತ್ತೂ ಪ್ರಯೋಜನಕಾರಿ ಯಾಗಿಲ್ಲ. ಇತ್ತೀಚೆಗೆ ಹೆಚ್ಚುತ್ತಿರುವ ವನ್ಯಜೀವಿಗಳ ದಾಳಿಯಿಂದ ಬೆಳೆ ರಕ್ಷಿಸಲು ಹಾಗೂ ಕೃಷಿ ಉತ್ಪನ್ನಗಳನ್ನು ಮಾರು ಕಟ್ಟೆಗೆ ಸಾಗಿಸಲು ಅರಣ್ಯವಾಸಿಗಳು ಪರದಾ ಡುತಿದ್ದಾರೆ. ಈ ಪರಿಸ್ಥಿತಿಗೆ ಪರಿಹಾರವೆಂದರೆ ಬದುಕನ್ನು ಕಟ್ಟಿಕೊಳ್ಳುವ ಅವಕಾಶವಿರುವಲ್ಲಿಗೆ ಸ್ಥಳಾಂತರ ಹೊಂದುವುದು ಮಾತ್ರವಾಗಿದೆ ಎಂದು ಕುದುರೆ ಮುಖ ರಾಷ್ಟ್ರೀಯ ಉದ್ಯಾನ ದಿಂದ ಪುನರ್ವಸತಿ ಹೊಂದಲು ಇಚ್ಚಿಸುವ ನಿವಾಸಿಗಳ ಪರವಾಗಿ ಕೆರೆಕಟ್ಟೆಯ ಸುಂದರೇಶ, ಸುಧಾಕರ, ಮುಡುಬದ ಬಾಬು ನಾಯ್ಕ, ದಕ್ಷಿಣ ಕನ್ನಡ ಜಿಲ್ಲೆಯ ಮಲೆಜಂಡದ ಸಂಜೀವ, ಕಾಸರೊಳ್ಳಿಯ ಬಾಬು ಗೌಡ, ಕೊಂಡಾಡಿಯ ಹರಿಣಾಕ್ಷಿ ತಿಳಿಸಿದ್ದಾರೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನ ನಿವಾಸಿಗಳ ಪುನರ್ವಸತಿ ಯೋಜನೆ ಸರ್ಕಾರಿ ಕಾರ್ಯಕ್ರಮ. ಇಲ್ಲಿ ಯಾರನ್ನೂ ಬಲವಂತವಾಗಿ ಒಕ್ಕಲೆಬ್ಬಿಸುವ ಅಥವಾ ಅದಕ್ಕಾಗಿ ಸಂಚು ರೂಪಿಸುವ ಅವಕಾಶವಿಲ್ಲ. ಇಲ್ಲಿನ ಜನರ ಹಾಗೂ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಪುನರ್ವಸತಿ ಹೊಂದುವ ಬಗ್ಗೆ ತೆಗೆದುಕೊಂಡಿರುವ ತೀರ್ಮಾನ ಸರಿಯಾಗಿದೆ ಎಂಬುದು ಇಲ್ಲಿನ ಅರಣ್ಯವಾಸಿಗಳ ಖಚಿತ ನಿಲುವು. ಉತ್ತಮ ಸುಖಮಯ ಜೀವನ ಬಯಸಿ ಕಾಡಿನಿಂದ ಹೊರಬರಲು ಪರಿಹಾರಕ್ಕಾಗಿ ಮನವಿ ನೀಡುವುದು ಇಲ್ಲಿನ ಪ್ರತಿಯೊಬ್ಬ ನಾಗರಿಕನ ಸಂವಿಧಾನಾತ್ಮಕ ಹಕ್ಕು. ಇದರಲ್ಲಿ ಯಾವುದೇ ಒತ್ತಡ ಮತ್ತು ಆಮಿಷ ಇರುವುದಿಲ್ಲ. ಆದರೆ ರಾಷ್ಟ್ರೀಯ ಉದ್ಯಾನದೊಳಗಿನ ಪುನರ್ವಸತಿ ಯೋಜನೆ ಅಚ್ಚುಕಟ್ಟಾಗಿ ಜಾರಿಗೊಳಿಸುವಲ್ಲಿ ಕೆಲವು ಅರಣ್ಯ ಇಲಾಖೆಯ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ವ್ಯೆಫಲ್ಯತೆ ಕಂಡುಬರುತ್ತಿದೆ ಎಂದು ದೂರಿದ್ದಾರೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಸ್ವ-ಇಚ್ಛೆಯಿಂದ ಹೊರಹೋಗಲು 600 ಕ್ಕೂ ಹೆಚ್ಚು ಕುಟುಂಬಗಳು ಅರ್ಜಿ ಸಲ್ಲಿಸಿವೆ. ಕಳೆದ ಸಾಲಿನಲ್ಲಿ ರಾಜ್ಯ ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಪುನರ್ವಸತಿ ಯೋಜನೆಗೆ ₨12 ಕೋಟಿ ಬಿಡುಗಡೆ ಮಾಡಿದರೂ ಸಹ, ಆ ಹಣವನ್ನು ಸಂಪೂರ್ಣವಾಗಿ ಬಳಸಲು ಅರಣ್ಯ ಇಲಾಖೆಯ ಕುದರೆಮುಖ ವನ್ಯಜೀವಿ ವಿಭಾಗ ಮತ್ತು ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತ ವಿಫಲವಾದವು. ಈ ವರ್ಷವೂ ಸಹಾ ರಾಜ್ಯ ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಪುನರ್ವಸತಿ ಯೋಜನೆಗೆ ₨18 ಕೋಟಿ ಬಿಡುಗಡೆ ಮಾಡಿದೆ. ಆದರೂ ಪ್ರಸ ಕ್ತ ಸಾಲಿನಲ್ಲಿ ಯಾವುದೇ ಕುಟುಂಬಗಳಿಗೆ ಇನ್ನೂ ಪರಿಹಾರ ದೊರೆತಿಲ್ಲ ಎಂದು ದೂರಿದ್ದಾರೆ.

ಹಲವಾರು ವರ್ಷಗಳ ಹಿಂದೆಯೇ ಪುನರ್ವ ಸತಿಗೆ ಅರ್ಜಿ ಸಲ್ಲಿಸಿದ ಕುಟುಂಬಗಳ ಆಸ್ತಿ ಹಾಗೂ ಬೆಳೆಯ ಮೌಲ್ಯಮಾಪನ ಇನ್ನೂ ಸಂಪೂರ್ಣವಾಗಿ ನಡೆದಿಲ್ಲ. ಇದಕ್ಕೆ ಮುಖ್ಯವಾಗಿ ಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಪುನರ್ವಸತಿಗೆ ಸಂಬಂಧಪಟ್ಟ ಇತರೆ ಇಲಾಖೆ ಗಳ ಸಂಯೋಜನೆ ಹಾಗೂ ಆಸಕ್ತಿಯ ಕೊರತೆ. ಈ ಮಹತ್ವದ ಯೋಜನೆಯ ಪ್ರಾಮುಖ್ಯತೆಯನ್ನು ಈ ಇಲಾಖೆಗಳು ಅರಿತಿಲ್ಲ. ಇದರಿಂದಾಗಿ ಸರ್ಕಾರದ ಹಣವಿದ್ದರೂ ಪುನರ್ವಸತಿ ಹೊಂದ ಲು ಸಿದ್ಧವಿರುವ ಅರಣ್ಯವಾಸಿ ಕುಟುಂಬಗಳಿಗೆ ಪರಿಹಾರ ಸಿಗುತ್ತಿಲ್ಲ.

ಉದ್ಯಾನದ ಚಿಕ್ಕಮಗಳೂರು ಜಿಲ್ಲೆ ಭಾಗದಲ್ಲಿ (ಕೆರೆಕಟ್ಟೆ ವಲಯದಲ್ಲಿ) ಕೆಲವು ದೊಡ್ಡ ರೈತರು ಹಾಗೂ ಪ್ರಭಾವಿಶಾಲಿ ವ್ಯಕ್ತಿಗಳು ತಮ್ಮ ಪ್ರಾಬಲ್ಯದಿಂದ ಪರಿಹಾರ ಪಡೆಯುತಿದ್ದಾರೆ. ಇಂತಹ ಫಲಾನುಭವಿಗಳನ್ನು ಅರಣ್ಯ ಇಲಾಖೆ ಅಲ್ಲಲ್ಲಿ ಮನಬಂದಂತೆ ಹೆಕ್ಕಿ ಆಯ್ಕೆ ಮಾಡುತ್ತಿದೆ. ಇವರಲ್ಲಿ ನ್ಯಾಯಾಲಯದ ಮೊರೆಹೋದ ಕೆಲವರನ್ನು ಹೊರತುಪಡಿಸಿ ಉಳಿದವರನ್ನು ಯಾವ ಆಧಾರದ ಮೇಲೆ ಅರಣ್ಯ ಇಲಾಖೆ ಪುನರ್ವಸತಿಗೆ ಆಯ್ಕೆ ಮಾಡುತ್ತಿದೆಯೆಂದು ತಿಳಿದಿಲ್ಲ. ಇದರಿಂದ ಒಂದು ಸುತ್ತುಗಟ್ಟು ಪ್ರದೇಶ ಸಂಪೂರ್ಣ ಖಾಲಿಯಾಗದೆ, ಕೆಲ ಬಡ ಕುಟುಂಬಗಳು ಅಸಹಾಯಕರಾಗಿ ಅಲ್ಲಿಯೇ ಉಳಿಯುತ್ತಿದ್ದಾರೆ. ನಿಜವಾಗಿಯೂ ಸಂಕಷ್ಟದಲ್ಲಿ ಕಾಡಿನೊಳಗೆ ಜೀವಿಸುತ್ತಿರುವ ಹಲವಾರು ಬಡ ಕಟುಂಬಗಳಿಗೆ ಪುನರ್ವಸತಿಯ ಪರಿಹಾರ ಮರೀ ಚಿಕೆಯಾಗಿದೆ ಎಂದು ಅಳಲು ವ್ಯಕ್ತಪಡಿಸಿದ್ದಾರೆ.

ಉದ್ಯಾನದೊಳಗಿನರುವ ಭೂ ರಹಿತರು ಹಾಗೂ ಕೃಷಿಕಾರ್ಮಿಕ ಕುಟುಂಬಗಳ ಬಗ್ಗೆ ಜಿಲ್ಲಾ ಪುನರ್ವಸತಿ ಸಮಿತಿಗಳು ಸ್ಪಷ್ಟ ನಿಲುವು ತೆಗೆದುಕೊಳ್ಳಲು ವಿಫಲವಾಗಿದೆ. ಉದ್ಯಾನ ವ್ಯಾಪ್ತಿಯಲ್ಲಿ ಸುಮಾರು 400 ಕುಟುಂಬಗಳು ಭೂರಹಿತ ಮತ್ತು ಕೃಷಿ ಕಾರ್ಮಿಕರದ್ದಾಗಿದೆ. ರಾಜ್ಯ ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನ ಸ್ಥಳಾಂತರ ಮತ್ತು ಪುನರ್ವಸತಿಗಾಗಿ ಹೊರಡಿಸಿರುವ ಸುತ್ತೋಲೆಯಲ್ಲಿಯೂ ಭೂರ ಹಿತ ಕೃಷಿ ಕಾರ್ಮಿಕರನ್ನು ಪುನರ್ವಸತಿ ಯೋಜನೆಯ ಫಲಾನುಭವಿಗಳೆಂದು ಪರಿಗಣಿ ಸುವಂತೆ ಸ್ಪಷ್ಟವಾದ ಆದೇಶ ನೀಡಲಾಗಿದೆ.

ಆದರೆ ಜಿಲ್ಲಾ ಪುನರ್ವಸತಿ ಸಮಿತಿ ಈವರೆಗೆ ಒಂದೇ ಒಂದು ಭೂರಹಿತ ಅಥವಾ ಕೃಷಿ ಕಾರ್ಮಿಕರ ಕುಟುಂಬಕ್ಕೆ ಪರಿಹಾರದ ಪ್ಯಾಕೇಜ್ ನೀಡಿಲು ಮಂದಾಗಿಲ್ಲ. ಕೆಲ ವರ್ಷಗಳ ಹಿಂದೆಯೇ ಕೆಲವು ಕಟುಂಬಗಳ ಆಸ್ತಿ ಮೌಲ್ಯಮಾಪನ ನಡೆದಿದ್ದು, ಅಂತಹ ಕುಟುಂಗಳಿಗೆ ಈಗ ಪರಿಹಾರ ನೀಡಲು ಜಿಲ್ಲಾಡಳಿ ಮುಂದಾಗಿದೆ. ಆದರೆ ಇತ್ತಿಚೆಗೆ ಕಂದಾಯ ಇಲಾಖೆಯು ಕೃಷಿ ಜಮೀನಿನ ಮೌಲ್ಯವನ್ನು ಪರಿಷ್ಕರಿಸಿದ್ದು, ಈ ಪರಿಷ್ಕೃತ ಮೌಲ್ಯದ ಆಧಾರದ ಮೇಲೆ ಪುನರ್ವಸತಿ ಹೊಂದುವ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅರಣ್ಯವಾಸಿಗಳು ಎದುರಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳಿಗೆ ಪುನರ್ವಸತಿಯೇ ಶಾಶ್ವತ ಪರಿಹಾರ ಎಂದು ಇಲ್ಲಿನ ಕುಟುಂಬಗಳು ನಂಬಿವೆ. ಅರಣ್ಯವಾಸಿ ಕುಟುಂಬಗಳಿಗೆ ಪುನರ್‌ ವಸತಿ ನೀಡಿ ಮುಖ್ಯವಾಹಿನಿಗೆ ತರುವ ರಾಜ್ಯ ಸರ್ಕಾರದ ಇಚ್ಛಾಶಕ್ತಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಜವಾಬ್ದಾರಿ ಇದೀಗ ಜಿಲ್ಲಾ ಮಟ್ಟದ ಪುನರ್‌ವಸತಿ ಸಮಿತಿ ಮತ್ತು ಕುದರೆಮುಖ ವನ್ಯಜೀವಿ ವಿಭಾಗದ ಅಧಿಕಾರಿಗಳ ಮೇಲಿದೆ. ಪುನರ್ವಸತಿ ಯೋಜನೆಯನ್ನು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತಗಳು ಕ್ರಮಬದ್ಧವಾಗಿ, ನ್ಯಾಯಯುತವಾಗಿ, ನಿಷ್ಪಕ್ಷಪಾತವಾಗಿ ಹಾಗೂ ಸಮಯಬದ್ಧವಾಗಿ ಆದ್ಯತೆಯಿಂದ ಪೂರ್ಣ  ಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT