ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನದಲ್ಲಿ ಸಚಿವ ಜಾರಕಿಹೊಳಿ ವಾಸ್ತವ್ಯ

ಮೂಢನಂಬಿಕೆ ವಿರುದ್ಧ ಜನಜಾಗೃತಿ ಸಮಾವೇಶ ಇಂದು
Last Updated 5 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಳಗಾವಿ: ಮೂಢನಂಬಿಕೆ ನಿವಾರಣೆಗಾಗಿ ಇಲ್ಲಿನ ಸದಾಶಿವ ನಗರದ ‘ವೈಕುಂಠ ಧಾಮ’ದಲ್ಲಿ ಶನಿವಾರ (ಡಿ.6) ನಡೆಯಲಿರುವ ಜನಜಾಗೃತಿ ಸಮಾವೇಶ ಹಾಗೂ ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಅವರ ಸ್ಮಶಾನ ವಾಸ್ತವ್ಯಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಬುದ್ಧ, ಬಸವ, ಅಂಬೇಡ್ಕರ್‌ ಜನಜಾಗೃತಿ ವೇದಿಕೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡಿರುವ ಈ ವಿನೂತನ ಕಾರ್ಯಕ್ರಮಕ್ಕೆ ‘ವೈಕುಂಠ ಧಾಮ’ ಸಜ್ಜಾಗಿದೆ.

ದಿನವಿಡೀ ನಡೆಯುವ ಕಾರ್ಯ­ಕ್ರಮಕ್ಕಾಗಿ ಬೃಹತ್‌ ಶಾಮಿಯಾನ ನಿರ್ಮಾಣಗೊಂಡಿದ್ದು,   5000 ಜನ­ರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸಮಾರಂಭದಲ್ಲಿ ಪಾಲ್ಗೊಳ್ಳುವ ಜನರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಭೋಜನ­ವನ್ನೂ ಸ್ಮಶಾನದಲ್ಲೇ ಸಿದ್ಧಪಡಿಸಲು ಅಗತ್ಯ ಸಿದ್ಧತೆಯನ್ನು ಮಹಾನಗರ ಪಾಲಿಕೆಯ ಆಯುಕ್ತ ಎಂ.ಆರ್‌. ರವಿಕುಮಾರ್‌ ಉಸ್ತುವಾರಿಯಲ್ಲಿ ಮಾಡಿಕೊಳ್ಳಲಾಗಿದೆ.

ಸಿದ್ಧತೆಗಳನ್ನು ಪರಿಶೀಲಿಸಿದ ಸಚಿವ ಸತೀಶ ಜಾರಕಿಹೊಳಿ ಅವರು, ‘ಡಾ. ಬಿ.ಆರ್. ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನವನ್ನು ಮೌಢ್ಯತೆ ಧಿಕ್ಕರಿಸುವ ಮಹಾ ಪರಿವರ್ತನಾ ದಿನವನ್ನಾಗಿ ಆಚರಿಸುವ ಉದ್ದೇಶದಿಂದ ಈ ಚಿಂತನ ಸಮಾವೇಶವನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಮೌಢ್ಯತೆ ಹೋಗಲಾಡಿಸುವ ಸಲುವಾಗಿ ನಾನೂ ರಾತ್ರಿ ಸ್ಮಶಾನದಲ್ಲಿ ವಾಸ್ತವ್ಯ ಮಾಡಲು ಉದ್ದೇಶಿಸಿದ್ದೇನೆ. ಮೂಲಭೂತ­ವಾದಿ­ಗಳ ಕುತಂತ್ರ ಬಹಿರಂಗ­ಗೊಳಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ­ವಾಗಿದೆ’ ಎಂದರು.

ಮೌಢ್ಯತೆಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯದ ಬೀದರ್‌, ಮಂಗಳೂರು, ಕೋಲಾರ, ಮೈಸೂರು ಜಿಲ್ಲೆಗಳಿಂದ ಹೊರಟಿರುವ ಜಾಥಾ ಬೆಳಗಾವಿಗೆ ಬಂದಿದೆ. ಶನಿವಾರ ಬೆಳಿಗ್ಗೆ 9 ಗಂಟೆಗೆ ಚನ್ನಮ್ಮ ವೃತ್ತದಿಂದ ಮೆರವಣಿಗೆ ಮೂಲಕ ‘ವೈಕುಂಠ ಧಾಮ’ಕ್ಕೆ ಬರಲಿದೆ. ಬೆಳಿಗ್ಗೆ 9ರಿಂದ ಡಾ. ಬಾನಂದೂರು ಕೆಂಪಯ್ಯ ಅವರಿಂದ ಕ್ರಾಂತಿಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಸಮಾವೇಶ ಉದ್ಘಾಟನೆಯಾಗಲಿದೆ. ಮಧ್ಯಾಹ್ನ 2.30ಕ್ಕೆ ಹುಲಿಕಲ್‌ ನಟ­ರಾಜ್‌ ಪವಾಡ ಬಯಲು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

ಸಮಯದ ಗೊಂದಲ
ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಅವರ ಸ್ಮಶಾನ ವಾಸ್ತವ್ಯದ ಸಮಯದ ಬಗ್ಗೆ ಗೊಂದಲ ಮೂಡಿದೆ. ಪತ್ರಿಕಾಗೋಷ್ಠಿಯಲ್ಲಿ ಸಚಿವರು ಸ್ಮಶಾನ ವಾಸ್ತವ್ಯ ಮಾಡುವುದಾಗಿ ಹೇಳಿದ್ದರೂ, ಈ ಬಗ್ಗೆ ಮಾಹಿತಿ ಅಧಿ­ಕಾರಿ­ಗಳಿಗೆ ಸ್ಪಷ್ಟ ಮಾಹಿತಿ ಇಲ್ಲ.

‘ಜಾಗೃತಿ ಸಮಾವೇಶವು ಬೆಳಿಗ್ಗೆ 10ರಿಂದ ರಾತ್ರಿ 10.30ರವರೆಗೆ ನಡೆಯಲಿದೆ. ಸಚಿವರ ವಾಸ್ತವ್ಯದ ಬಗ್ಗೆ ಮಾಹಿತಿ ಇಲ್ಲ’ ಎಂದು ಮಹಾನಗರ ಪಾಲಿಕೆ ಆಯುಕ್ತ ಎಂ.ಆರ್‌. ರವಿಕುಮಾರ ಪ್ರತಿಕ್ರಿಯಿಸಿದರು. ‘ಸಮಾವೇಶದ ಕುರಿತ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ಸಚಿವರು ಸ್ಮಶಾನ ವಾಸ್ತವ್ಯ ಮಾಡುತ್ತಿರು­ವುದು ನಮ್ಮ ಗಮನಕ್ಕೆ ಬಂದಿಲ್ಲ’ ಎಂದು ಪೊಲೀಸ್‌ ಆಯುಕ್ತ ಎಸ್‌. ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT