ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಕೆಲಸದ ಕಡೆ ನಡೆ

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರದ ಚದಲಪುರದ ಸಮೀಪದ ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆಗೆ ಭೇಟಿ ನೀಡಿದರೆ, ಅವಕಾಶಗಳ ಮಹಾಪೂರ ತೆರೆದಂತೆ. ಒಂದು–ಎರಡಲ್ಲ, ಬರೋಬ್ಬರಿ 102 ವಿವಿಧ ಮಾದರಿಯ ತರಬೇತಿ ಪಡೆದು ಸ್ವಯಂ–ಉದ್ಯೋಗಾವಕಾಶ ಕಂಡುಕೊಳ್ಳಬಹುದು. ಎಲ್ಲಕ್ಕಿಂತ ಅಚ್ಚರಿ ಮತ್ತು ನಂಬಲೇಬೇಕಾದ ಸಂಗತಿಯೆಂದರೆ, ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ಒಂದು ಪೈಸೆಯೂ ಖರ್ಚು ಮಾಡುವ ಅಗತ್ಯವಿಲ್ಲ. ಊಟ, ವಸತಿ ಸೇರಿದಂತೆ ಇಡೀ ತರಬೇತಿ ಸಂಪೂರ್ಣ ಉಚಿತ. ಯಾರ ಮೇಲೆಯೂ ಹೊರೆಯಾಗಬೇಕಿಲ್ಲ. ಹಣಕಾಸಿನ ಚಿಂತೆಯೇ ಮಾಡಬೇಕಿಲ್ಲ.

ನಿರುದ್ಯೋಗಿ ಯುವಕ–ಯುವತಿಯರಿಗೆ ತರಬೇತಿ ಮತ್ತು ಸ್ವ–ಉದ್ಯೋಗಾವಕಾಶ ಕಲ್ಪಿಸುವ ಏಕೈಕ ಉದ್ದೇಶದಿಂದ ಪ್ರಗತಿ ಕೃಷಿ ಗ್ರಾಮೀಣ ಬ್ಯಾಂಕ್‌ ಸಹಯೋಗದಲ್ಲಿ ಕೆನರಾ ಬ್ಯಾಂಕ್‌ ವಿಶಿಷ್ಟ ಮಾದರಿಯಲ್ಲಿ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆ ನಡೆಸುತ್ತಿದೆ. 2009ರ ಮಾರ್ಚ್‌ 30ರಂದು ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯಸೌಧ ಕಟ್ಟಡದಲ್ಲಿ ಆರಂಭಗೊಂಡ ಸಂಸ್ಥೆಯು 2012ರ ಸೆಪ್ಟೆಂಬರ್ 16ರಂದು ಚದಲಪುರದ ವಿಶಾಲ ಕಟ್ಟಡ ಮತ್ತು ಆವರಣಕ್ಕೆ ಸ್ಥಳಾಂತರಗೊಂಡಿತು. ನೂತನ ಕಟ್ಟಡದಲ್ಲಿ ವರ್ಷದ 365 ದಿನವೂ ಸಹ ತರಬೇತಿ ನೀಡುವುದನ್ನೇ ಕಾಯಕವಾಗಿಸಿಕೊಂಡಿದೆ.

ತರಬೇತಿ ಸಂಸ್ಥೆಯಲ್ಲಿ ಇದುವರೆಗೆ 6900 ಮಂದಿ ತರಬೇತಿ ಪಡೆದಿದ್ದು, ಅವರಲ್ಲಿ ಶೇ 80ರಷ್ಟು ಮಂದಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಬಹುತೇಕ ಮಂದಿ ತಮ್ಮದೇ ಆದ ಸ್ವಂತ ಸಂಸ್ಥೆಯನ್ನು ಸ್ಥಾಪಿಸಿಕೊಂಡಿದ್ದು, ಇತರ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಇದುವರೆಗೆ 220 ತಂಡಗಳಿಗೆ ತರಬೇತಿ ನೀಡಿರುವ ಸಂಸ್ಥೆಯು ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಿದೆ. ಅಷ್ಟಕ್ಕೆ ಸುಮ್ಮನಾಗದೇ, ತರಬೇತಿ ಪೂರ್ಣಗೊಳಿಸಿದ ನಂತರದ ಎರಡು ವರ್ಷಗಳ ಕಾಲ ಪೋಷಕ ಸಂಸ್ಥೆಯಂತೆ ಆಶ್ರಯಕ್ಕೆ ನಿಲ್ಲುತ್ತದೆ. ತರಬೇತಿ ಪಡೆದ ವ್ಯಕ್ತಿಯು ಸ್ವಾವಲಂಬಿಯಾಗುವವರೆಗೆ ಸಂಸ್ಥೆಯಿಂದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆಯುತ್ತದೆ.

‘ನಮ್ಮ ಸಂಸ್ಥೆಯಲ್ಲಿ ನಿರುದ್ಯೋಗಿಗಳು ಅಷ್ಟೇ ಅಲ್ಲ, ರೈತರು, ಉದ್ಯಮಿಗಳು, ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು ಅಲ್ಲದೇ ವಿವಿಧ ಕ್ಷೇತ್ರದ ಜನರು ತರಬೇತಿ ಪಡೆದಿದ್ದಾರೆ. ಇಲ್ಲಿ ತರಬೇತಿ ಪಡೆದವರು ತಮ್ಮದೇ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುತ್ತಾರೆ. ನಂತರ ಅವರೇ ನಮ್ಮ ಸಂಸ್ಥೆಗೆ ಬಂದು ನುರಿತ ತರಬೇತುದಾರರಾಗಿ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಾರೆ’ ಎಂದು ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಕೆ.ಕೆ.ಪೊನ್ನಪ್ಪ ಹೇಳುತ್ತಾರೆ.

‘ಇಲ್ಲಿ ತರಬೇತಿ ಪಡೆದು ಪ್ರಮಾಣಪತ್ರ ಗಳಿಸಿದವರಿಗೆ ಸ್ವ–ಉದ್ಯೋಗ ಕಂಡುಕೊಳ್ಳಲು ಯಾವುದೇ ಬ್ಯಾಂಕು ಕಡ್ಡಾಯವಾಗಿ ಸಾಲಸೌಲಭ್ಯ ನೀಡಬೇಕು. ತರಬೇತಿ ಹೊಂದಿದ ಅಭ್ಯರ್ಥಿಗೆ ಸಾಲಸೌಲಭ್ಯ ಯಾವುದೇ ಕಾರಣಕ್ಕೂ ತಿರಸ್ಕರಿಸುವಂತಿಲ್ಲವೆಂದು ಕೇಂದ್ರ ಸರ್ಕಾರ ಲಿಖಿತವಾಗಿ ಸೂಚಿಸಿದೆ. ಹೀಗಾಗಿ ಅಭ್ಯರ್ಥಿಗಳು ಇಲ್ಲಿ  ತರಬೇತಿ ಜೊತೆಗೆ ನಿರಾತಂಕವಾಗಿ ಉದ್ಯೋಗಾವಕಾಶವೂ ಸಹ ಕಂಡುಕೊಳ್ಳಬಹುದು. ಬಹುತೇಕ ಮಂದಿ ಜೀವನದಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ. ಇಲ್ಲಿ ತರಬೇತಿ ಪಡೆದವರು ಸದ್ಯಕ್ಕೆ ಯಾವ್ಯಾವ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಯೂರಿ ಯಶಸ್ವಿಯಾಗಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣೆಗಳಿವೆ’ ಎನ್ನುತ್ತಾರೆ ಅವರು.

‘ಇಲ್ಲಿ ಏಕಕಾಲಕ್ಕೆ 100 ರಿಂದ 160 ಜನರಿಗೆ ತರಬೇತಿ ನೀಡುತ್ತೇವೆ. ತರಬೇತಿ ಅವಧಿಯಲ್ಲಿ ಊಟ, ವಸತಿ ಎಲ್ಲವೂ ಉಚಿತ. ತರಬೇತಿಗೆ ಅಗತ್ಯವಿರುವ ಕಚ್ಛಾ ಸಾಮಗ್ರಿ ಮತ್ತು ಉಪಕರಣಗಳನ್ನು ಸಂಸ್ಥೆಯಿಂದಲೇ ಒದಗಿಸಲಾಗುವುದು. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಸತಿ ಸೌಲಭ್ಯವಿದೆ. 24 ಗಂಟೆ ಬಿಸಿ ನೀರು ಮತ್ತು ಸೋಲಾರ್ ದೀಪದ ಸೌಕರ್ಯವಿದೆ. ಎಂತಹದ್ದೇ ಸಮಸ್ಯೆ ತಲೆದೋರಿದರೂ ನೆರವಾಗಲೂ ಸಂಸ್ಥೆಯ ಸಿಬ್ಬಂದಿ ಇರುತ್ತಾರೆ’ ಎಂದು ಅವರು ಹೇಳುತ್ತಾರೆ. 

ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕರ್ನಾಟಕದ ಭಾಗದವರು ಮತ್ತು ಹೊರರಾಜ್ಯದವರು ಇಲ್ಲಿ ತರಬೇತಿ ಪಡೆದಿದ್ದಾರೆ. ವಿಪುಲ ಉದ್ಯೋಗಾವಕಾಶವಿದ್ದು ಸದ್ಬಳಕೆ ಮಾಡಿಕೊಳ್ಳಲು ಸ್ಥಳೀಯರಿಗೆ ಸಂಸ್ಥೆಯವರು ಜಾಗೃತಿ ಮೂಡಿಸುತ್ತಲೇ ಇದ್ದಾರೆ. ರಾಜ್ಯವಲ್ಲದೇ ದೇಶದ ಯಾವುದೇ ಮೂಲೆಯವರು ಸಹ ಇಲ್ಲಿ ತರಬೇತಿ ಪಡೆಯಬಹುದು ಎಂಬುದೇ ಈ ಸಂಸ್ಥೆಯ ವಿಶೇಷ. ಮಾಹಿತಿಗಾಗಿ ಸಂಪರ್ಕಿಸಿ, ದೂರವಾಣಿ ಸಂಖ್ಯೆ:  9448236950


6 ವಿಭಾಗಗಳಲ್ಲಿ 102 ತರಬೇತಿ
ಸಾಮಾನ್ಯ ಉದ್ಯಮಶೀಲತಾ ತರಬೇತಿ: 6 ರಿಂದ 12 ದಿನಗಳ ಕಾಲ ಸಾಮಾನ್ಯ ಅಥವಾ ಗ್ರಾಮೀಣ ಉದ್ಯಮಶೀಲತಾ ತರಬೇತಿ. ವ್ಯವಸಾಯ ಸಂಬಂಧಿತ ತರಬೇತಿ: ಸಮಗ್ರ ಕೃಷಿ ಮತ್ತು ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆಕೃಷಿ, ಕೋಳಿ–ಹಂದಿ–ಕುರಿ–ಮೀನು ಸಾಕಾಣಿಕೆ, ಔಷಧಿ, ಸುಗಂಧಿತ ಸಸ್ಯ.

ದುರಸ್ತಿ ತರಬೇತಿ: ಎಲೆಕ್ಟ್ರಿಕ್‌ ಹೋಮ್ ವೈರಿಂಗ್, ಟಿವಿ, ಡಿವಿಡಿ ರಿಪೇರಿ, ಪ್ರಿಂಟಿಂಗ್‌, ಬ್ಯೂಟಿ ಪಾರ್ಲರ್‌ ನಿರ್ವಹಣೆ, ದ್ವಿಚಕ್ರ ವಾಹನ ಸರ್ವಿಸಿಂಗ್, ಮೊಬೈಲ್‌ ರಿಪೇರಿ.
ಕೌಶಲ್ಯಾಭಿವೃದ್ಧಿ ತರಬೇತಿ: ಕೈಕಸೂತಿ, ಅಗರಬತ್ತಿ ತಯಾರಿಕೆ, ಗೃಹೋಪಯೋಗಿ ರಾಸಾಯನಿಕ ವಸ್ತು, ಆಹಾರ ಸಂಸ್ಕರಣೆ, ಗೊಂಬೆ, ಚರ್ಮ ವಸ್ತುಗಳ ತಯಾರಿಕೆ,
ಕಂಪ್ಯೂಟರ್ ತರಬೇತಿ: ಬೇಸಿಕ್‌, ಡಿಟಿಪಿ, ಹಾರ್ಡ್‌ವೇರ್‌, ನೆಟ್‌ವರ್ಕಿಂಗ್‌, ಟ್ಯಾಲಿ, ಡಾಟಾ ಎಂಟ್ರಿ ಆಪರೇಟರ್, ಆಟೋಕ್ಯಾಡ್, ಫೈನಾನ್ಸಿಯಲ್ ಅಕೌಂಟಿಂಗ್‌.
ಉನ್ನತ ಕೌಶಲ್ಯ ತರಬೇತಿ: ಡಿಜಿಟಲ್ ಫೋಟೋಗ್ರಾಫಿ, ಸ್ಟಿಕರ್ ಕಟಿಂಗ್, ಗೃಹಬಳಕೆ ವಸ್ತುಗಳ ನಿರ್ವಹಣೆ, ಲ್ಯಾಪ್ಟಾಪ್‌ ನಿರ್ವಹಣೆ ಮತ್ತು ದುರಸ್ತಿ ಮುಂತಾದವು.

ಕೆಲಸ ಕಾಯಂ 
ಪದವಿಯಷ್ಟೇ ಅಲ್ಲ, ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಗಳಿಸಿದರೂ ಉದ್ಯೋಗ ಸಿಗುವುದು ಕಷ್ಟ. ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಆಧುನಿಕ ತರಬೇತಿ ಪಡೆಯದಿದ್ದರೆ, ಕೆಲಸಾನೂ ಸಿಗುವುದಿಲ್ಲ. ಸ್ವಯಂ–ಉದ್ಯೋಗದ ಬಗ್ಗೆ ಕಲ್ಪನೆ ಮಾಡಿಕೊಳ್ಳುವುದು ಕೂಡ ಕಷ್ಟ.. ಆದರೆ ಚಿಕ್ಕಬಳ್ಳಾಪುರದ ತರಬೇತಿ ಸಂಸ್ಥೆಯೊಂದರಲ್ಲಿ ಕನಿಷ್ಠ 6 ಅಥವಾ ಗರಿಷ್ಠ 45 ದಿನ ಉಚಿತ ತರಬೇತಿ ಪಡೆದರೆ ಸಾಕು, ಆ ಸಂಸ್ಥೆಯವರೇ ಬೆನ್ನೆಲುಬಾಗಿ ನಿಲ್ಲುತ್ತಾರೆ. ಸಾಲಸೌಲಭ್ಯ ಒದಗಿಸುತ್ತಾರೆ. ಉದ್ಯೋಗ ಕೊಡಿಸುತ್ತಾರೆ. ಸ್ವಯಂ–ಉದ್ಯೋಗ ಕಂಡುಕೊಳ್ಳಲು ಆಸರೆಯಾಗಿ ನಿಲ್ಲುತ್ತಾರೆ.
– ಸಂಸ್ಥೆ ನಿರ್ದೇಶಕ ಕೆ.ಕೆ.ಪೊನ್ನಪ್ಪ

ಶ್ರೇಷ್ಠತಾ ಕೇಂದ್ರದ ಶ್ಲಾಘನೆ
ಚಿಕ್ಕಬಳ್ಳಾಪುರದ ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆಯು ಶೀಘ್ರವೇ ಶ್ರೇಷ್ಠತಾ ಕೇಂದ್ರವಾಗಿ ಬಡ್ತಿ ಪಡೆಯಲಿದೆ. ರಾಜ್ಯದ ಪ್ರಥಮ ಅತ್ಯಾಧುನಿಕ ಮಾದರಿಯ ಅಂಗವಿಕಲರ ತರಬೇತಿ ಕೇಂದ್ರವೂ ಇಲ್ಲಿ ಸ್ಥಾಪನೆಯಾಗಲಿದೆ. ದೇಶಾದ್ಯಂತ ಇರುವ 600 ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆಗಳ ಪೈಕಿ ಚಿಕ್ಕಬಳ್ಳಾಪುರದ ತರಬೇತಿ ಸಂಸ್ಥೆಯು ಹೆಚ್ಚಿನ ಸಾಧನೆ ಮಾಡಿದೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಸ್ವ–ಉದ್ಯೋಗ ತರಬೇತಿ ಸಂಸ್ಥೆಗಳ ಕಾರ್ಯನಿರ್ವಹಣೆ ಪರಿಶೀಲಿಸಿದ್ದು, ಒಟ್ಟು 200 ಅಂಶಗಳ ಪಟ್ಟಿಯಾಧರಿಸಿ ಸಂಸ್ಥೆಯ ಕಾರ್ಯ ಅವಲೋಕಿಸಿದೆ. ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಬಗ್ಗೆ ಮಾಹಿತಿ ಪಡೆದಿರುವ ಸಚಿವಾಲಯವು ಅಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಲ್ಲಿ ಸಂಸ್ಥೆಗೆ ಶ್ಲಾಘನಾ ಪ್ರಮಾಣಪತ್ರ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT