ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ ಸರಸ್ವತಿಯ ನಿತ್ಯ ಪೂಜೆ

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ವಿಶ್ವವಿಖ್ಯಾತ ಸರೋದ್‌ ವಾದಕ ಉಸ್ತಾದ್‌ ಅಮ್ಜದ್‌ ಅಲಿ ಖಾನ್‌ ‘ಮೆಟ್ರೊ’ದೊಂದಿಗೆ ತಮ್ಮ ಅನಿಸಿಕೆ, ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

*ಸಂಗೀತವೇ ದೇವರು ಎಂದು ನೀವು ಯಾವತ್ತೂ ಹೇಳುತ್ತಲೇ ಬಂದಿದ್ದೀರಿ. ಈ ಬಗ್ಗೆ ಸ್ವಲ್ಪ ವಿವರಿಸಿ.
ಸ್ವರ ಸರಸ್ವತಿಯೇ ಎಲ್ಲರೂ ಪೂಜಿಸಬೇಕಾದ ದೇವರು. ಇಡೀ ವಿಶ್ವವನ್ನು ಒಂದಾಗಿಸುವುದು ಈ ಸಂಗೀತದಿಂದ ಮಾತ್ರ ಸಾಧ್ಯ. ಇದು ಬಾಂಧವ್ಯದ ಜತೆಗೆ ಆತ್ಮ ಸಂಬಂಧವನ್ನೂ ಬೆಸೆಯುತ್ತದೆ. ಹೀಗಾಗಿ ಸಂಗೀತಗಾರರೆಲ್ಲರೂ ಈ ಮಾತನ್ನು ಒಪ್ಪುತ್ತಾರೆ.  ಸಂಗೀತ ಸಾಮ್ರಾಜ್ಞಿಯಾಗಿದ್ದ ಎಂ.ಎಸ್‌. ಸುಬ್ಬುಲಕ್ಷ್ಮಿ, ಹೆಸರಾಂತ ಗಾಯಕರಾಗಿದ್ದ ಶೆಮ್ಮಂಗುಡಿ  ಶ್ರೀನಿವಾಸ ಅಯ್ಯರ್‌ ಅವರೂ ಇದನ್ನೇ ತಮ್ಮ ಸಂಗೀತ ಬದುಕಿನುದ್ದಕ್ಕೂ ಹೇಳುತ್ತಲೇ ಬಂದಿದ್ದರು.

*ಜುಗಲ್‌ಬಂದಿ ನೀಡುವಾಗ ಯಾವ ಪೂರ್ವಸಿದ್ಧತೆ ಇಲ್ಲದೆ ನುಡಿಸುವ ಕಲೆಗಾರಿಕೆ ನಿಮ್ಮದು. ಇದರಲ್ಲಿ ಸಾಕಷ್ಟು ಯಶ ಕಂಡು ವಿಶ್ವದಾದ್ಯಂತ ಸರೋದ್‌ ನುಡಿಸಿದ್ದೀರಿ. ಜತೆಯ ಕಲಾವಿದರೊಂದಿಗೆ ಸ್ವಲ್ಪವೂ ರಿಹರ್ಸಲ್‌ ಇಲ್ಲದೆ ಕಛೇರಿಗಳಲ್ಲಿ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಿ?
ಜುಗಲ್‌ಬಂದಿ ಕಛೇರಿ ನೀಡುವಾಗ ಪೂರ್ವತಯಾರಿ ಬಹಳ ಮುಖ್ಯ. ಆದರೆ ನನಗೆ ಸ್ವಲ್ಪವೂ ಬಿಡುವಿಲ್ಲದೇ ಇರುವುದರಿಂದ ರಿಹರ್ಸಲ್‌ ಸಾಧ್ಯವಾಗುತ್ತಿಲ್ಲ. ಸದ್ಯ ಬೆಂಗಳೂರಿನಲ್ಲಿ ಎಲ್‌. ಸುಬ್ರಹ್ಮಣ್ಯಂ ಅವರೊಂದಿಗೆ ಕಛೇರಿ ನೀಡುವುದು ಬಹುದೊಡ್ಡ ಸವಾಲು. ಏಕೆಂದರೆ ನಾವಿಬ್ಬರೂ ಯಾವುದೇ ಪೂರ್ವ ತಯಾರಿ ಇಲ್ಲದೆ, ಒಂದು ಬಾರಿ ಕೂಡ ರಿಹರ್ಸಲ್‌ ಇಲ್ಲದೆ ನೇರವಾಗಿ ವೇದಿಕೆಯಲ್ಲೇ ಭೇಟಿಯಾಗಿ ಕಛೇರಿ ನೀಡುವುದು. ಇಂತಹ ಸವಾಲಿನ ಕಛೇರಿಗಳೇ ನನಗಿಷ್ಟ. ವಿದೇಶಗಳಲ್ಲಿ ಸಂಗೀತಗಾರರು ರಿಹರ್ಸಲ್‌ ಇಲ್ಲದೆ ಕಛೇರಿ ಕೊಡುವುದೇ ಇಲ್ಲ. ಯೂರೋಪಿನಲ್ಲಿ ಇತ್ತೀಚೆಗೆ ನಾನು ನೋಡಿದ ಹಾಗೆ 4-5 ಸಲ ರಿಹರ್ಸಲ್‌ ಮಾಡಿದ ಮೇಲೆಯೇ ಕಾರ್ಯಕ್ರಮ ಕೊಡುವುದು ಅಲ್ಲಿನ ಪದ್ಧತಿ. ನನಗೆ ಸುಮಾರು ಐದು ದಶಕಗಳ ಕಾಲ ಸಿಕ್ಕಿದ ಸಂಗೀತ ಕಛೇರಿಯ ಅನುಭವಗಳಿಂದ ಜುಗಲ್‌ಬಂದಿ ಕಛೇರಿಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಿದೆ.

*‘ಸ್ಕಾಟಿಷ್‌ ಚೇಂಬರ್‌ ಆರ್ಕೆಸ್ಟ್ರಾ’ದೊಂದಿಗೆ ನಿಮ್ಮ ಅನುಬಂಧ ನಿಮ್ಮನ್ನು ಜನಪ್ರಿಯತೆಯ ಉತ್ತುಂಗಕ್ಕೆ ಕೊಂಡೊಯ್ದಿದೆ. ನಿಮ್ಮ ಅನಿಸಿಕೆ ಹೇಳಿ.
ಅದು ಸ್ಕಾಟ್ಕೆಂಡಿನ ಎಡಿನ್‌ಬರ್ಗ್‌ನಲ್ಲಿರುವ ಒಂದು ಆರ್ಕೆಸ್ಟ್ರಾ ಕಂಪೆನಿ. ‘ಸ್ಕಾಟಿಷ್‌ ಚೇಂಬರ್‌ ಆರ್ಕೆಸ್ಟ್ರಾ’ ಎಂದು ಅದರ ಹೆಸರು. ಈ ಕಂಪೆನಿಯಲ್ಲಿ ದೊಡ್ಡ ಕಲಾವಿದರ ಒಂದು ತಂಡವಿದೆ. ಇದರಲ್ಲಿನ 50 ಜನ ಕಲಾವಿದರೊಂದಿಗೆ ನಾನು ಸೇರಿ ಸರೋದ್‌ ನುಡಿಸಿದ್ದೆ. ಅಲ್ಲಿನ ಸಂಗೀತ ಶಿಸ್ತು ಕಂಡು ನಿಜಕ್ಕೂ ಬೆರಗಾದೆ. ಇದರ ವತಿಯಿಂದ ‘ಸಮಾಗಮ್‌’ ಎಂಬ ಧ್ವನಿಮುದ್ರಣ ಹೊರಬಂತು. ಇದು ಬಹಳ ಬೇಗ ಜನಪ್ರಿಯವೂ ಆಯಿತು. ಇದೇ ಆರ್ಕೆಸ್ಟ್ರಾ ಭಾರತದಲ್ಲಿಯೂ ನಡೆಸಿಕೊಟ್ಟೆವು. ಆ ಕಾರ್ಯಕ್ರಮದ ಕ್ಷಣಗಳನ್ನು ಮರೆಯಲಾಗದು. ಎರಡು ತಿಂಗಳ ಹಿಂದೆ ಫ್ರಾನ್ಸ್‌ನ ವಿವಿಧ ಭಾಗಗಳಲ್ಲಿ ಮಕ್ಕಳ ಜತೆಗೆ ಸುಮಾರು 25 ಕಛೇರಿಗಳನ್ನು ಕೊಟ್ಟೆ. ಎಲ್ಲ ಕಡೆಯೂ ಕೇಳುಗರಿಂದ ಅಭೂತಪೂರ್ವ ಪ್ರತಿಕ್ರಿಯೆ ಬಂದಿತ್ತು. ಇಂಗ್ಲೆಂಡ್‌ನಲ್ಲಿ ಸಿಂಫೋನಿಯ ಎಂಬ ಶೀರ್ಷಿಕೆಯಡಿ ನೀಡಿದ ಸರೋದ್‌ ಕಛೇರಿ ಕೂಡ ಸದಾ ನೆನಪಿನಲ್ಲಿ ಉಳಿಯುವಂತಿದೆ.

‘ಸುರ್‌ ಹೈ ಈಶ್ವರ್‌ ಹೈ’, ನನ್ನ ಪಾಲಿಗೆ ಸಂಗೀತವೇ ದೇವರು. ಸ್ವರ ಸರಸ್ವತಿಯ ಆರಾಧಕ ನಾನು... ಸ್ವರ ಸರಸ್ವತಿಯದೇ ನಿತ್ಯ ಪೂಜೆ...’ ಎನ್ನುತ್ತಾ ಮಾತಿಗಾರಂಭಿಸಿದರು ಉಸ್ತಾದ್‌ ಅಮ್ಜದ್‌ ಅಲಿ ಖಾನ್‌. ತಮ್ಮ ಸಂಗೀತ ಸಾಧನೆ ಬಗ್ಗೆ, ಜುಗಲ್‌ಬಂದಿ ಬಗ್ಗೆ, ವಿದೇಶಿ ಕಛೇರಿಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು ಈ ಸರೋದ್‌ ಮಾಂತ್ರಿಕ.

*ನೂರಾರು ಸರೋದ್‌ ಕಛೇರಿಗಳು, ಲೆಕ್ಕವಿಲ್ಲದಷ್ಟು ಸೀಡಿಗಳು ನಿಮ್ಮ ಅಮೂಲ್ಯ ಆಸ್ತಿ. ಇವುಗಳಲ್ಲಿ ನಿಮಗೆ ಇಷ್ಟವಾದವು ಯಾವುವು?
ಲಂಡನ್‌ನ ವಿಗ್‌ಮೋರ್‌ ಹಾಲ್‌ನಲ್ಲಿ 2010ರಲ್ಲಿ ನುಡಿಸಿದ ಸರೋದ್‌ ವಾದನ. ಇಲ್ಲಿ ರಾಗ ಶ್ಯಾಮ ಶ್ರೀ, ಪೀಲು, ಕಿರವಾಣಿ ನುಡಿಸಿದ್ದೆ. ಇದು ಸೀಡಿ ಕೂಡ ಆಗಿದೆ. ‘ಎವೆರಿಥಿಂಗ್‌ ಈಸ್‌ ಎವೆರಿವೇರ್‌’ ಮಕ್ಕಳಾದ ಅಮಾನ್‌ ಖಾನ್‌, ಅಯಾನ್‌ ಖಾನ್‌ ಅವರೊಂದಿಗೆ ನುಡಿಸಿದ ಸರೋದ್‌ ವಾದನದ ಸೀಡಿ, ಸ್ಕಾಟಿಷ್‌ ಚೇಂಬರ್‌ ಆರ್ಕೆಸ್ಟ್ರಾದಲ್ಲಿ ನುಡಿಸಿದ ‘ಸಮಾಗಮ್‌’ ಶೀರ್ಷಿಕೆಯ ಕಛೇರಿ, ಸರೋದ್‌ ಸಿಂಫೋನಿ (ಮಕ್ಕಳೊಂದಿಗೆ) ಸೀಡಿ. ಇದರಲ್ಲಿ ಕ್ರಮವಾಗಿ ರಾಗಮಾಲ, ರಾಗ ಜೋನ್‌ಪುರಿ, ಪೀಲು, ಜಿಂಜೂಟಿ, ರಾಗಮಾಲ ಮತ್ತು ಕೀರವಾಣಿ ರಾಗಗಳಿವೆ. ಇವಿಷ್ಟಲ್ಲದೆ ನಾನು ವಿಶ್ವದಾದ್ಯಂತ ನುಡಿಸಿದ ಪ್ರತಿಯೊಂದು ಕಛೇರಿಯೂ ಮನಸ್ಸಿಗೆ ಸಮಾಧಾನ, ತೃಪ್ತಿ, ಖುಷಿ ಕೊಟ್ಟಿದೆ. ಲಾಲ್‌ಗುಡಿ ಜಯರಾಮನ್‌ ಜತೆಗೆ ನುಡಿಸಿದ ಸರೋದ್‌–-ಪಿಟೀಲು ಜುಗಲ್‌ಬಂದಿಯ ಆಲ್ಬಂ ‘ನಾರ್ತ್‌ ಮೀಟ್ಸ್‌ ಸೌತ್‌’ ಬಹಳ ಜನಪ್ರಿಯವಾಗಿದ್ದು, ಹಿಂದೂಸ್ತಾನಿ-ಕರ್ನಾಟಕ ಎರಡೂ ಪ್ರಕಾರಗಳ ಕೇಳುಗರ ಮನ ಗೆದ್ದಿದೆ.

ಜುಗಲ್‌ಬಂದಿಯಲ್ಲಿ, ಅದರಲ್ಲೂ ಕರ್ನಾಟಕ ಸಂಗೀತದ ಪಿಟೀಲು ವಾದಕರ ಜತೆಗೆ ನಿಮ್ಮ ಜುಗಲ್‌ಬಂದಿ ದಾಖಲೆಯ ಭಾಷ್ಯ ಬರೆದಿದೆ. ನೀವು ಬೇರೆ ತಂತಿ ವಾದ್ಯಗಳನ್ನು ಬಿಟ್ಟು ಜುಗಲ್‌ಬಂದಿಗಾಗಿ ಪಿಟೀಲು ಜತೆಗೇ ಹೆಚ್ಚು ಸಖ್ಯ ಬೆಳೆಸಿಕೊಳ್ಳಲು ಕಾರಣವೇನು?
ನನಗೆ ಸರೋದ್‌ ಬಿಟ್ಟರೆ ಪಿಟೀಲಿನ ಮೇಲೆ ಅಪಾರ ಪ್ರೀತಿ. ಅದರ ನಾದ ಗಾಯನಕ್ಕೆ ಅತ್ಯಂತ ಹತ್ತಿರವಾದದ್ದು. ಸರೋದ್‌ ಜತೆಗೆ ಜುಗಲ್‌ಬಂದಿ ನೀಡಲು ಬಹಳ ಸೂಕ್ತವಾದ ವಾದ್ಯ ಎಂದರೆ ಪಿಟೀಲು. ಹೀಗಾಗಿ ಹಲವಾರು ಹೆಸರಾಂತ ಪಿಟೀಲು ವಾದಕರ ಜತೆಗೆ ವಿಶ್ವದಾದ್ಯಂತ ನೂರಾರು ಜುಗಲ್‌ಬಂದಿ ಕಛೇರಿಗಳಲ್ಲಿ, ಫ್ಯೂಷನ್‌ ಸಂಗೀತಗಳಲ್ಲಿ ನುಡಿಸಿದ್ದೇನೆ.  ಪಿಟೀಲು ಮಾಂತ್ರಿಕ ಲಾಲ್ಗುಡಿ ಜಯರಾಮನ್‌ ಅವರ ಜತೆ ಅನೇಕ ಜುಗಲ್‌ಬಂದಿ ಕಛೇರಿ ನಡೆಸಿಕೊಟ್ಟಿದ್ದೇನೆ. ಅವರ ಪಿಟೀಲು ನುಡಿಸಾಣಿಕೆ ಅತ್ಯದ್ಭುತವಾದದ್ದು. ಅವರೊಂದಿಗೆ ಸರೋದ್‌ ನುಡಿಸಿದ್ದೇ ಒಂದು ವಿಶಿಷ್ಟ ಅನುಭವ. ಜಯರಾಮನ್‌ ಅವರಲ್ಲದೆ ಎಂ.ಎಸ್‌. ಗೋಪಾಲಕೃಷ್ಣನ್‌, ಟಿ.ಎಂ. ಕೃಷ್ಣನ್‌, ಎಲ್‌. ಸುಬ್ರಹ್ಮಣ್ಯಂ ಅವರೊಂದಿಗೂ ಅನೇಕ ಜುಗಲ್‌ಬಂದಿ ಕಛೇರಿಗಳನ್ನು ನೀಡಿದ್ದೇನೆ. ಇದಲ್ಲದೆ ಹೆಸರಾಂತ ವೀಣಾ ವಾದಕರಾಗಿದ್ದ ವೀಣೆ ದೊರೆಸ್ವಾಮಿ ಅಯ್ಯಂಗಾರ್‌ ಅವರ ಜತೆಗೂ ನುಡಿಸಿರುವುದು ಸ್ಮರಣಾರ್ಹ.

ಹೊಸ ರಾಗಗಳು, ಅದರಲ್ಲೂ ಅಪರೂಪವೆನಿಸುವ ಅಪೂರ್ವ ರಾಗಗಳು ನಿಮ್ಮಿಂದ ಸೃಷ್ಟಿಯಾಗಿವೆ. ಈ ಬಗ್ಗೆ ಸ್ವಲ್ಪ ವಿವರಿಸಿ.
ಹೊಸ ರಾಗ ಎಂದರೆ ಅದು ಆಗ ತಾನೇ ಹುಟ್ಟಿದ ಮಗುವಿಗೆ ಸಮಾನ. ನಾನು ಸೃಷ್ಟಿಸುವ ರಾಗವನ್ನು ನನ್ನ ಸ್ವಂತ ಮಗುವಿನಂತೆ ಕಂಡು ಪ್ರೀತಿಸುತ್ತೇನೆ. ರಾಗದ ಪ್ರತಿ ಎಳೆಯಲ್ಲೂ, ಪ್ರತಿ ಮೀಟಿನಲ್ಲೂ ಹೊಸತನ ಸೃಷ್ಟಿಯಾದರೆ ಕಲಾವಿದನಿಗಾಗುವ ತೃಪ್ತಿ, ಸಮಾಧಾನ ಬೇರೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ. ತಾಯಿ–ಮಗುವಿನ ನಡುವಿನ ನವಿರಾದ ಬಾಂಧವ್ಯವನ್ನು ನಿರೂಪಿಸುವ ರಾಗವನ್ನು ಸರೋದ್‌ನ ನಾದದ ಮೂಲಕ ಅಭಿವ್ಯಕ್ತಿಸಲು ಪ್ರಯತ್ನಿಸಿದ್ದೇನೆ. ಮಹಾತ್ಮಾ ಗಾಂಧೀಜಿ ಮೇಲೆ ನನಗೆ ಅಪಾರ ಪ್ರೀತಿ, ಗೌರವ. ಹೀಗಾಗಿ ಅವರಿಗಾಗಿಯೇ ರಾಗ ‘ಬಾಪು ಕೌನ್ಸ್‌’ ಸೃಷ್ಟಿಸಿದ್ದೇನೆ. ಹೀಗೆ ರಾಗಗಳ ಹುಟ್ಟು, ಪ್ರಯೋಗ ನನಗೆ ಅತ್ಯಂತ ಪ್ರಿಯವಾದ ಸಂಗತಿ.

ಬೆಂಗಳೂರು ಬಗ್ಗೆ ಏನನ್ನಿಸುತ್ತದೆ?
ಬೆಂಗಳೂರು ಸುಂದರ ನಗರ. ಇಲ್ಲಿನ ಜನ ಸಂಗೀತವನ್ನು ಸವಿಯುತ್ತಾರೆ, ಆಸ್ವಾದಿಸುತ್ತಾರೆ. ನಾನು ಅನೇಕ ಬಾರಿ ಬೆಂಗಳೂರಿಗೆ ಬಂದು ಕಛೇರಿ ನೀಡಿದಾಗಲೂ ನನಗೆ ಉತ್ತಮ ಅನುಭವ ಆಗಿದೆ. ಜನರ ಪ್ರತಿಕ್ರಿಯೆ ನೋಡಿ ಬೆರಗಾಗಿದ್ದೇನೆ. ಸಂಗೀತವನ್ನು ಪ್ರೀತಿಸುವ ಆಸ್ವಾದಿಸುವ, ಆರಾಧಿಸುವ ಸಹೃದಯರು ಇಲ್ಲಿದ್ದಾರೆ.

ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಪ್ರೇಮಾಂಜಲಿ ಚಾರಿಟೆಬಲ್‌ ಟ್ರಸ್ಟ್‌ ಅ. 31ರಂದು ಹೊಸೂರು ರಸ್ತೆಯಲ್ಲಿರುವ ಕ್ರೈಸ್ಟ್ ವಿವಿ ಆಡಿಟೊರಿಯಂನಲ್ಲಿ ಅಮ್ಜದ್‌ ಅಲಿ ಖಾನ್‌ ಮತ್ತು ಹಿರಿಯ ಪಿಟೀಲು ವಿದ್ವಾಂಸ ಎಲ್‌. ಸುಬ್ರಹ್ಮಣ್ಯಂ ಅವರ ಸರೋದ್‌-ಪಿಟೀಲು ಜುಗಲ್‌ಬಂದಿ ಏರ್ಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT