ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಸಿಕ್ಕಾಗ ಇಂಗ್ಲಿಷ್‌ ಮರೆತ ಗಾಂಧಿ!

ಪ್ರಜಾವಾಣಿ ವಾರ್ತೆ
Last Updated 7 ಫೆಬ್ರುವರಿ 2016, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಬಹುದಿನಗಳಿಂದ ನಿರೀಕ್ಷಿಸಿದ್ದ ಸ್ವಾತಂತ್ರ್ಯ ದೇಶ ವಿಭಜನೆ ಮೂಲಕ ಸಿಕ್ಕಿದೆ. ಈಗನಾನು ಹೇಳಲು ಏನು ಉಳಿದಿದೆ? ಗಾಂಧಿಗೆ ಇಂಗ್ಲಿಷ್‌ ಸಂಪೂರ್ಣವಾಗಿ ಮರೆತುಹೋಗಿದೆ ಎಂದು ಆ ವರದಿಗಾರರಿಗೆ ಹೇಳಿಬಿಡಿ’

–1947ರ ಆಗಸ್ಟ್‌ 15ರಂದು ಬಿಬಿಸಿ ಸುದ್ದಿಸಂಸ್ಥೆ ಪ್ರತಿನಿಧಿಗಳು ಹೇಳಿಕೆ ಪಡೆಯಲು ಬಂದಾಗ, ಮಹಾತ್ಮ ಗಾಂಧಿ ತಕ್ಷಣ ಕೊಟ್ಟ ಪ್ರತಿಕ್ರಿಯೆ ಇದಾಗಿತ್ತಂತೆ. ಗಾಂಧೀಜಿ ಬದುಕಿನ ಇಂತಹ ಹಲವು ಸನ್ನಿವೇಶಗಳನ್ನು ಹೆಕ್ಕಿ ತೆಗೆದವರು ಅವರ ಮೊಮ್ಮಗ ರಾಜಮೋಹನ್‌ ಗಾಂಧಿ.

ನಗರದ ಬಾರ್ಟನ್‌, ಸನ್‌ ಅಂಡ್‌ ಕಂಪೆನಿ ಭಾನುವಾರ ಏರ್ಪಡಿಸಿದ್ದ ‘ಮಹಾತ್ಮ ಗಾಂಧಿ: ಎಟರ್ನಲ್‌ ಇನ್‌ಸ್ಪಿರೇಷನ್‌’ ಕೃತಿ ಹಾಗೂ ಗಾಂಧೀಜಿ ಜೀವನಗಾಥೆ ಸಾರುವ ಬೆಳ್ಳಿ ಪದಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶ ವಿಭಜನೆ ಮಹಾತ್ಮನಿಗೆ ಬೇಕಿರಲಿಲ್ಲ. ಹೀಗಾಗಿ ಅಖಂಡ ಭಾರತಕ್ಕೆ ಮಹಮ್ಮದ್‌ ಅಲಿ ಜಿನ್ನಾ ಅವರನ್ನು ಪ್ರಧಾನಿ ಮಾಡಲು ಅವರು ಹೊರಟಿ
ದ್ದರು. ಆದರೆ, ಅಷ್ಟರಲ್ಲಾಗಲೇ ದೇಶ ವಿಭಜನೆಗೆ ಯೋಜನೆ ರೂಪಿಸಿದ್ದ ಲಾರ್ಡ್‌ ಮೌಂಟ್‌ ಬ್ಯಾಟನ್‌, ಆ ಕನಸು ಕೈಗೂಡದಂತೆ ಮಾಡಿದರು’ ಎಂದರು.
‘1947ರ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲಿ ಆಚರಿಸಬೇಕು ಎನ್ನುವ ಗೊಂದಲ ಗಾಂಧೀಜಿಗೆ ಇತ್ತು. ಕೊನೆಗೆ ಅವರು ಕೋಮು ಸಂಘರ್ಷ ಹೆಚ್ಚಾಗಿದ್ದ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗಾಗಿ ಕಳೆಯಲು ನಿರ್ಧರಿಸಿದರು’ ಎಂದು ಅವರು ವಿವರಿಸಿದರು.

‘ಸ್ವಾತಂತ್ರ್ಯ ಸಿಕ್ಕ ಮೂರೇ ದಿನದಲ್ಲಿ ಗಾಂಧೀಜಿ, ಈದ್‌ ಹಬ್ಬದ ಅಂಗವಾಗಿ ಪ್ರಾರ್ಥನೆ ಸಂಘಟಿಸಿದಾಗ ಸುಮಾರು ಐದು ಲಕ್ಷ ಹಿಂದೂ – ಮುಸ್ಲಿಮರು ನೆರೆದಿದ್ದರು’ ಎಂದು ಹೇಳಿದರು. ‘ನಮ್ಮಂತೆಯೇ ಸಾಮಾನ್ಯ ವ್ಯಕ್ತಿಯಾಗಿದ್ದ ಗಾಂಧೀಜಿ ಅಸಾಮಾನ್ಯ ಎನಿಸಿದ್ದನ್ನು ಸಾಧಿಸಿ ತೋರಿದರು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಾರ್ಟನ್‌, ಸನ್‌ ಅಂಡ್‌ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಭರತ್‌ ಮೆಹ್ತಾ, ‘ಶಾಲಾ ದಿನಗಳಲ್ಲಿ ಅಂಜುಬುರುಕ ಹುಡುಗನಾಗಿದ್ದ ಮೋಹನದಾಸ್‌, ಜಗತ್ತೇ ಆರಾಧಿಸುವಂತಹ ಮಹಾತ್ಮನಾಗಿ ಬೆಳೆದ ಕಥೆ ನನ್ನನ್ನು ಮತ್ತೆ ಮತ್ತೆ ಕಾಡಿದೆ. ನನ್ನೊಳಗಿನ ಆ ತುಮುಲ ಈಗ ಪುಸ್ತಕವಾಗಿ ಹೊರಬಂದಿದೆ’ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸರ್ವೋದಯ ಇಂಟರ್‌ನ್ಯಾಷನಲ್‌ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಪಿ.ಎ.ನಸರತ್‌, ‘ಕೋಮು ಸಾಮರಸ್ಯಕ್ಕೆ ನಾವೆಲ್ಲ ಕಾರಣವಾಗುವ ಮೂಲಕ ಗಾಂಧೀಜಿ ಈ ದೇಶದಲ್ಲಿ ಮತ್ತೆ ನಗುವಂತಹ ವಾತಾವರಣವನ್ನು ಸೃಷ್ಟಿಸಬೇಕಿದೆ’ ಎಂದರು.

ಬಯೊಕಾನ್‌ ಸಂಸ್ಥೆ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ, ‘ಗಾಂಧಿ ತತ್ವಗಳು ಇಂದಿನ ಜಗತ್ತಿಗೆ ಹೊಂದುವುದಿಲ್ಲ ಎಂಬ ಮಾತುಗಳಲ್ಲಿ ಯಾವುದೇ ಹುರು
ಳಿಲ್ಲ. ಶಿಕ್ಷಣ, ವ್ಯಾಪಾರ, ರಾಜಕಾರಣ ಕುರಿತಂತೆ ಅವರು ಹೇಳಿದ ಏಳು ಪಾಪಗಳಿಂದ ದೂರವಿದ್ದರೆ ಸಾಕು, ದೇಶದ ಚಿತ್ರಣವೇ ಬದಲಾಗುತ್ತದೆ’ ಎಂದರು.

ಬೆಳ್ಳಿ ಪದಕ
ಬೆಳ್ಳಿ ಸಾಮಗ್ರಿಗಳ ತಯಾರಕರೂ ಆಗಿರುವ ಭರತ್‌ ಮೆಹ್ತಾ ಗಾಂಧೀಜಿ ಅವರ ಜೀವನಗಾಥೆ ಸಾರುವ ಬೆಳ್ಳಿ ಪದಕ ತಯಾರಿಸಿದ್ದಾರೆ. ಮೂರು ಇಂಚು ಸುತ್ತಳತೆಯ ಈ ಪದಕದ ಒಂದು ಬದಿಯಲ್ಲಿ ಗಾಂಧೀಜಿ ಅವರ ದೊಡ್ಡ ಚಿತ್ರವಿದೆ. ಅದರ ಇನ್ನೊಂದು ಬದಿಯಲ್ಲಿ ಗಾಂಧೀಜಿ ಅವರ ಸತ್ಯ, ಸತ್ಯಾಗ್ರಹ ಹಾಗೂ ಸ್ವದೇಶಿ ತತ್ವಗಳನ್ನು ಬಿಂಬಿಸುವ ರೂಪಕಗಳಿವೆ.

ಈ ಪದಕ ಹಾಗೂ ‘ಮಹಾತ್ಮ ಗಾಂಧಿ: ಎಟರ್ನಲ್‌ ಇನ್‌ಸ್ಪಿರೇಷನ್‌’ ಕೃತಿ ಇರುವ ಕಟ್ಟಿಗೆಯ ಕೇಸ್‌ಗೆ ₹ 2,700 ಬೆಲೆ ನಿಗದಿ ಮಾಡಲಾಗಿದೆ. ಪದಕ ಮಾರಾಟಕ್ಕೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿದೆ. ಮಾರಾಟದಿಂದ ಬಂದ ಲಾಭಾಂಶದ ಶೇ 20 ಹಣವನ್ನು ಸಬರಮತಿ ಆಶ್ರಮ ಹಾಗೂ ಮಣಿ ಭವನಕ್ಕೆ ದೇಣಿಗೆ ನೀಡಲಾಗುತ್ತದೆ ಎಂದು ಮೆಹ್ತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT