ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಸ್ ಬ್ಯಾಂಕ್‌ ಹಣ: ಭಾರತೀಯರ ಪಟ್ಟಿ ಸಿದ್ಧ

Last Updated 22 ಜೂನ್ 2014, 20:30 IST
ಅಕ್ಷರ ಗಾತ್ರ

ಜೂರಿಚ್‌/ ನವದೆಹಲಿ (ಪಿಟಿಐ): ಸ್ವಿಟ್ಜರ್‌ಲೆಂಡ್‌ನ ಬ್ಯಾಂಕುಗಳಲ್ಲಿ ಹಣ ಇರಿಸಿರುವ ಭಾರತೀಯರ  ಪಟ್ಟಿಯನ್ನು ಅಲ್ಲಿನ ಸರ್ಕಾರ ಸಿದ್ಧಪಡಿಸಿದ್ದು, ಈ ವಿವರಗಳನ್ನು ಭಾರತ ಸರ್ಕಾರದೊಂದಿಗೆ ಹಂಚಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಕೊಟ್ಟಿದೆ.

ಹೀಗಾಗಿ ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ಅಕ್ರಮವಾಗಿ ಇಟ್ಟ  ಕಪ್ಪುಹಣ ವಾಪಸ್‌ ತರಲು ಭಾರತ  ನಡೆಸಿದ್ದ ಅವಿರತ ಹೋರಾಟ ಕೊನೆಗೂ ಫಲಪ್ರದವಾಗುವ ಲಕ್ಷಣ ಕಂಡುಬಂದಿದೆ.

ಇದರ ನಡುವೆಯೇ, ಕಪ್ಪುಹಣ ಇರಿಸಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾ­ರದ ವಿಶೇಷ ತನಿಖಾ ತಂಡ (ಎಸ್‌ಐಟಿ) ತಿಳಿಸಿದೆ.

ಸಕ್ರಮ ಖಾತೆದಾರರೂ ಇದ್ದಾರೆ:  ‘ಸ್ವಿಟ್ಜರ್‌ಲೆಂಡ್‌ ಸಿದ್ಧಪಡಿಸಿರುವ ಪಟ್ಟಿಬರೀ ಕಪ್ಪುಹಣ ಹೊಂದಿದವರ ಪಟ್ಟಿಯಲ್ಲ. ಇದರಲ್ಲಿ ಕಾನೂನುಬದ್ಧವಾಗಿ ಹಣ ಇಟ್ಟವರ ಹೆಸರೂ ಸೇರಿದೆ. ಹೀಗಾಗಿ ಪಟ್ಟಿಯನ್ನು ಪರಿಶೀಲಿಸಿ ನಂತರ ತಪ್ಪಿತಸ್ಥರನ್ನು ಹುಡುಕಬೇಕಾ­ಗುತ್ತದೆ’ ಎಂದು ಎಸ್‌ಐಟಿ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಎಂ.ಬಿ.ಷಾ ಸ್ಪಷ್ಟಪಡಿಸಿದ್ದಾರೆ.

ಕಾನೂನುಬದ್ಧವಾಗಿ ಹಣ ಇಟ್ಟವರ ಮೇಲೆ ಯಾವ ಕ್ರಮವನ್ನೂ ತೆಗೆದುಕೊಳ್ಳಲಾಗದು. ಅಕ್ರಮವಾಗಿ ಹಣ ಇರಿಸಿರುವವರ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳಬಹುದು. ಯಾವ ರೀತಿಯಲ್ಲಿ ಹಣವನ್ನು ಠೇವಣಿ ಇರಿಸಲಾಗಿದೆ ಎಂಬುದನ್ನು ಅದು ಅವಲಂಬಿಸುತ್ತದೆ ಎಂದೂ ಅವರು ವಿವರಿಸಿದ್ದಾರೆ.

ನೈಜ ವಾರಸುದಾರರು: ಸ್ವಿಟ್ಜರ್‌ಲೆಂಡ್‌ನ ವಿವಿಧ ಬ್ಯಾಂಕುಗಳಲ್ಲಿ ಇರಿಸಿರುವ ಹಣದ ನಿಜವಾದ ಒಡೆಯರು ಯಾರೆಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದು, ಅದರ ಭಾಗವಾಗಿ ಭಾರತೀಯ ಖಾತೆದಾರ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ ಎಂದು ಸ್ವಿಸ್‌ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದೇಶಗಳಲ್ಲಿರುವ ಟ್ರಸ್ಟ್‌ಗಳು, ಸ್ವಿಸ್‌ನಲ್ಲಿ ನೆಪ ಮಾತ್ರಕ್ಕೆ ನೋಂದಣಿ ಮಾಡಿಸಲಾಗಿರುವ ಕಂಪೆನಿಗಳು ಹಾಗೂ ಇನ್ನಿತರ ಕಾನೂನುಬದ್ಧ ಸಂಸ್ಥೆಗಳ ಮೂಲಕ ಈ ಹಣವನ್ನು ಇರಿಸಲಾಗಿದೆ ಎಂದು ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಮಾಹಿತಿ ವಿನಿಮಯ ಒಪ್ಪಂದದ ಪ್ರಕಾರ ಇಂತಹ ಮಾಹಿತಿಗಳ ಗೋಪ್ಯತೆ ಕಾಪಾಡಬೇಕಾಗುತ್ತದೆ. ಹೀಗಾಗಿ, ತೆರಿಗೆ ರಹಿತ ಹಣ ಇರಿಸಿರುವವರ ಖಾತೆದಾರರ ಹೆಸರು, ಸಂಸ್ಥೆಗಳ ಹೆಸರು ಹಾಗೂ ಇರಿಸಿರುವ ಹಣದ ಮೊತ್ತ ಎಷ್ಟೆಂಬುದನ್ನು ಬಹಿರಂಗಗೊಳಿಸಲಾಗದು ಎಂದೂ ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರಕ್ಕೆ ಸಹಕರಿಸಲು ಸ್ವಿಸ್‌ ಇಲಾಖೆಗಳು ಉತ್ಸಾಹದಿಂದಿವೆ. ಭಾರತದಲ್ಲಿ ಕಪ್ಪುಹಣ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಎಲ್ಲಾ ರೀತಿಯ ಸಹಕಾರವನ್ನು ಈ ಇಲಾಖೆಗಳು ನೀಡಲಿವೆ ಎಂದಿದ್ದಾರೆ. ಸ್ವಿಸ್‌ ರಾಷ್ಟ್ರೀಯ ಬ್ಯಾಂಕು ಇತ್ತೀಚೆಗಷ್ಟೇ ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ, ಅಲ್ಲಿನ 283 ಬ್ಯಾಂಕುಗಳಲ್ಲಿ ಎಲ್ಲಾ ವಿದೇಶಗಳ ಖಾತೆದಾರರು ಒಟ್ಟು ಇರಿಸಿರುವ ಹಣದ ಮೊತ್ತ 1.6 ಲಕ್ಷ ಕೋಟಿ ಡಾಲರ್‌ (ಸುಮಾರು ₨ 97 ಲಕ್ಷ ಕೋಟಿ). ಹೀಗಾಗಿ ಭಾರತೀಯರು ಸ್ವಿಸ್‌ ಬ್ಯಾಂಕುಗಳಲ್ಲಿ ಇರಿಸಿರುವ ಕಪ್ಪುಹಣದ ಮೊತ್ತ 1ಲಕ್ಷ ಕೋಟಿ ಡಾಲರ್‌ (₨ 60 ಲಕ್ಷ ಕೋಟಿ)  ದಾಟಬಹುದೆಂಬ ಹೇಳಿಕೆಗಳನ್ನು ಅವರು ಅಲ್ಲಗಳೆದಿದ್ದಾರೆ.

ಪಟ್ಟಿ ಪರಿಶೀಲಿಸಿ ಕ್ರಮ
ಸ್ವಿಟ್ಜರ್‌ಲೆಂಡ್‌ ಸರ್ಕಾರ ಸಿದ್ಧಪಡಿಸಿರುವ ಭಾರತದ ಖಾತೆದಾರರ ಪಟ್ಟಿಯನ್ನು ಕೂಲಂಕಷ­ವಾಗಿ ಪರಿಶೀಲಿಸಲಾಗುವುದು. ಅಕ್ರಮವಾಗಿ ಹಣ ಇರಿಸಿರುವವರ ವಿರುದ್ಧ ಕ್ರಮ ತೆಗೆದು­ಕೊಳ್ಳಲಾ­ಗುವುದು.
ನ್ಯಾಯಮೂರ್ತಿ ಎಂ.ಬಿ.ಷಾ, ಕಪ್ಪುಹಣದ ತನಿಖೆಗಾಗಿ ಕೇಂದ್ರ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥರು

ಪಿಡುಗು ನಿರ್ಮೂಲನೆಗೆ ಬಳಸಿ

ಸ್ವಿಟ್ಜರ್‌ಲೆಂಡ್‌ ಬ್ಯಾಂಕ್‌ಗಳಲ್ಲಿ ಹಣ ಇರಿಸಿರುವ ಭಾರತದ ಖಾತೆದಾರರ ಪಟ್ಟಿ ಸಿದ್ಧ­ವಾ­ಗಿದೆ ಎಂಬುದನ್ನು ತಿಳಿದು ಬಹಳ ಸಂತೋಷ­ವಾಗಿದೆ. ಒಂದು ರೀತಿಯ ನಿರಾಳ ಭಾವವೂ ಮೂಡಿದೆ. ಈ ಮಾಹಿತಿಯ ಸಂಪೂರ್ಣ ಪ್ರಯೋಜನವನ್ನು ಎನ್‌ಡಿಎ ಸರ್ಕಾರ ಬಳಸಿ­ ಕೊಳ್ಳಲಿದೆ ಎಂದು ಆಶಿಸು­ತ್ತೇನೆ. ಭಾರತ­ದಿಂದ ಅಪಾರ ಪ್ರಮಾ­ಣದ ಸಂಪನ್ಮೂಲ ಸೂರೆಗೊಂಡಿದೆ. ಈ ಹಣವನ್ನು ವಾಪಸ್‌ ಪಡೆದು ಅದನ್ನು ಬಡತನ ನಿರ್ಮೂಲನೆ ಹಾಗೂ ಇನ್ನಿತರ ಸಾಮಾಜಿಕ ಪಿಡುಗಗಳ ನಿವಾರಣೆಗಾಗಿ ಬಳಸಬೇಕು

ರಾಮ್‌ ಜೇಠ್ಮಲಾನಿ,  ಕಪ್ಪುಹಣದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿರುವ ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT