ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವೀಕರಣವೂ ಬೌದ್ಧಿಕ ಪರಿಣಾಮವೂ

Last Updated 13 ಜುಲೈ 2016, 19:30 IST
ಅಕ್ಷರ ಗಾತ್ರ

‘ಬಂಡಾಯ ಸಾಹಿತಿಗಳೂ ನಿರಾಕರಣ ಗುಣದಿಂದ ಸ್ವೀಕರಣ ಗುಣದತ್ತ ಸಾಗುವುದು ಅನಿವಾರ್ಯ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಈಚೆಗೆ ಹೇಳಿದ್ದಾರೆ. ಅವರು ಗಹನವಾದ ಹಿನ್ನೆಲೆಯಲ್ಲೇ ಹೀಗೆ ನುಡಿದಿದ್ದಾರೆಂದು ಭಾವಿಸುತ್ತಲೇ ನನಗನ್ನಿಸಿದ್ದನ್ನು ಇಲ್ಲಿ ನಿವೇದಿಸಿಕೊಳ್ಳಬಯಸುತ್ತೇನೆ.

ಜಗತ್ತಿನ ಇತಿಹಾಸದುದ್ದಕ್ಕೂ ಸಾಹಿತ್ಯಕ ಚಟುವಟಿಕೆಗಳು ಪರಿಷ್ಕೃತಗೊಳ್ಳುತ್ತಲೇ ಬಂದಿವೆ. ಇದು ಆರೋಗ್ಯಕರ. ಕಾಲವೇ ಪರಿಷ್ಕರಣೆಯ ಸ್ವರೂಪ, ದಿಶೆ ನಿರ್ಧರಿಸುತ್ತದೆ.ಹಾಗಾಗಿ ಬಂಡಾಯ ನಿರಂತರ ವಿದ್ಯಮಾನ. ಬಂಡಾಯದ ಗುರಿ ಪರ್ಯಾಯದ ಹುಡುಕಾಟ. ತನ್ಮೂಲಕ ಸಾಮಾಜಿಕ ಬದುಕಿನ ಸುಧಾರಣೆ.

ಕ್ರಿ.ಪೂ. 6ನೇ ಶತಮಾನದಲ್ಲಿ ಚಾರ್ವಾಕ ಎಂಬ ಮಹಾನ್ ವಿಚಾರವಾದಿ ‘ಅಧ್ಯಾತ್ಮದ ಅತಿರೇಕ ಇಹವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವಂತೆ, ಯಾರೂ ಕಾಣದ ಸಾವಿನಾಚೆಯ ಲೋಕಕ್ಕೆ ಹಂಬಲಿಸುವಂತೆ ಮಾಡುತ್ತದೆ. ಶರೀರ ಅಳಿದಮೇಲೆ ಪುನರ್ಜನ್ಮ ಇನ್ನೆಲ್ಲಿ? ಆದ್ದರಿಂದ ಇರುವ ತನಕ ಸಂತೋಷದಿಂದ ಬದುಕಿ, ಸಾಲ ಮಾಡಿಯಾದರೂ ಸರಿ ತುಪ್ಪ ತಿನ್ನಿ’ ಎಂದ.

ಅವನ ವಿಚಾರಪರತೆ ಭಾಗಶಃ ಸರಿಯೆನ್ನಿಸಿತು. ದುಡಿದು ಬದುಕಬೇಕೇ ಹೊರತು ಯಾವುದೇ ಕಾರಣಕ್ಕೂ ಸಾಲದ ಋಣವನ್ನಿರಿಸಿಕೊಳ್ಳಬಾರದು. ಚಾರ್ವಾಕನೂ ಪುನರವಲೋಕನಕ್ಕೆ ಒಳಗಾದ. ಪಾತ್ರಗಳು ಹೀಗಿದ್ದರೆ ಹೇಗೆ ಎನ್ನುವಂತೆ ರಾಮಾಯಣ, ಮಹಾಭಾರತವೇ ಭಿನ್ನ ಭಿನ್ನ ಸ್ವರೂಪಗಳನ್ನು ಪಡೆದವು. ಅವು ಮೂಲ ರೂಪದೊಂದಿಗೆ ಸೃಜನಶೀಲ ಜಿಜ್ಞಾಸೆಗಳಿಗೆ ತೆರೆದುಕೊಳ್ಳುತ್ತ ಹೊಸ ಹೊಸ ಹೊಳಹುಗಳನ್ನು ಬಿಂಬಿಸಿದವು.

ಕಾಳಿದಾಸ, ಪಂಪ, ಕುಮಾರವ್ಯಾಸರಂತಹ ಅತಿರಥ ಕಾವ್ಯಕಾರರ ಕೈಂಕರ್ಯವೂ ಅದೇ ಅಲ್ಲವೇ? ‘ಕ್ರಾಂತಿಕಾರಿ ಸಿದ್ಧಾಂತವಿಲ್ಲದೆ ಕ್ರಾಂತಿಕಾರಿ ಅಭಿವೃದ್ಧಿ ಅಸಾಧ್ಯ’ ಎಂಬ ಲೆನಿನ್  ಮಾತು ಸಾಹಿತ್ಯ ಲೋಕಕ್ಕೂ ಅನ್ವಯಿಸುತ್ತದೆ. ನಾವು ಯಾವುದನ್ನು ಬಂಡಾಯ ಸಾಹಿತ್ಯವೆನ್ನುತ್ತೇವೆಯೋ ಅದರ ಬಿತ್ತನೆಯಾಗಿ ಆರಂಭಗೊಂಡು ಅರ್ಧ ಶತಮಾನ ಸಹ ಸಂದಿಲ್ಲ. ಫಲದ ನಿರೀಕ್ಷೆಗೆ ಈ ಅವಧಿ ಅತ್ಯಲ್ಪವೆ.

ಚಾರ್ವಾಕ ಸ್ಪಷ್ಟವಾಗಿ ಅಲ್ಲಗಳೆದ ‘ಜನ್ಮಾಂತರ’ ಇಂದಿಗೂ ಜೀವಿಸಿದೆ! ‘ದೇಹವೇ ದೇವಾಲಯ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದು ಬಸವಣ್ಣನವರು ಮನಮುಟ್ಟುವಂತೆ ವಾಸ್ತವ ಸಾರಿ ಒಂಬತ್ತು ಶತಮಾನಗಳಾಗಿವೆ. ದೇಗುಲಗಳ ಸ್ಥಾಪನೆ ನಿಂತಿಲ್ಲ. ಪುತ್ಥಳಿಗಳ ಅನಾವರಣ ಜೋರಾಗಿಯೇ ಇದೆ. ಆದರೂ ನಿರಾಶೆಪಡಬೇಕಿಲ್ಲ.

ಜನಮಾನಸದಲ್ಲಿ ಕಿಂಚಿತ್ತಾದರೂ ಅರಿವು ಮೂಡಿದೆ. ದೇಗುಲ ನವೀಕರಣಕ್ಕೆ ಮುಂದಾದವರು ಶಾಲೆಯ ಸೋರುವ ಸೂರನ್ನು ದುರಸ್ತಿಪಡಿಸಲು, ಮಕ್ಕಳು ಕೆಳಗೆ ಕುಳಿತೇ ಪಾಠ ಕೇಳುತ್ತಿದ್ದ ಶಾಲೆಗೆ ಬೆಂಚುಗಳನ್ನು ಒದಗಿಸಲು ಸಂಕಲ್ಪಿಸಿರುವ ಉದಾಹರಣೆಗಳಿವೆ. ದೆವ್ವ, ಪೀಡೆ, ಪಿಶಾಚಿ ಇದೆ ಎಂದು ನಂಬಿ ತೊರೆದು ಪಾಳುಬಿದ್ದ ಮನೆಗಳಲ್ಲಿ ಈಗ ಜನ ವಾಸವಿದ್ದಾರೆ. ಮಾಟ, ವಶೀಕರಣ, ಮಂತ್ರ ಹುಸಿ ಎನ್ನುವಷ್ಟು ವೈಚಾರಿಕತೆ ಬೆಳೆದಿದೆ. ನಮ್ಮ ಭವಿಷ್ಯ ನಮ್ಮನ್ನೇ ಅವಲಂಬಿಸಿದೆಯೆಂಬ ತಥ್ಯಕ್ಕೆ ಇಂಬು ದೊರೆತಿದೆ.

ನನಗೆ ಮತ್ತೆ ಮತ್ತೆ ಅದೇ ನಿದರ್ಶನ ಉದಾಹರಿಸಬೇಕೆನ್ನಿಸುತ್ತದೆ. ‘ನಾಗರ ಹಾವೆ, ಹಾವೊಳು ಹೂವೆ/ ಬಾಗಿಲ ಬಿಲದಲಿ ನಿನ್ನಯ ಠಾವೆ... ಕೊಳಲನೂದುವೆ ಆಲಿಸು ರಾಗ’ ಪಂಜೆ ಮಂಗೇಶರಾಯರ ಈ ಶಿಶು ಗೀತೆಯನ್ನು ಹಾಗೆಯೇ ಉಳಿಸಿಕೊಂಡರೆ ಹಾವಿನ ಆಹಾರ ಹಾಲು, ಅದಕ್ಕೆ ಕೊಳಲ ಧ್ವನಿ ಕೇಳುತ್ತದೆ ಎಂಬ ಅವೈಜ್ಞಾನಿಕ ಅಂಶವನ್ನು ಒಪ್ಪಿದಂತಾದೀತು.

ಮಕ್ಕಳು ಒಂದೊಂದು ತರಗತಿಯಲ್ಲಿ ಒಂದೊಂದು ಪಾಠ ಕಲಿಯಬೇಕಾದ ಗೊಂದಲಕ್ಕೆ ಸಿಲುಕುತ್ತಾರೆ. ಅಥವಾ ಪಂಜೆಯವರು ಬ್ರಿಟಿಷರ ವಿರುದ್ಧ ಸಿಡಿದೆದ್ದ ಪರಿ ಹೀಗೆ ಕವನವಾಗಿದೆ ಎನ್ನುವ ಸಮರ್ಥನೆಗಿಳಿದರೂ ಚಿಣ್ಣರು ಅದೆಷ್ಟರಮಟ್ಟಿಗೆ ಗ್ರಹಿಸಿಯಾರು? ವಿಜ್ಞಾನ ಕ್ಷೇತ್ರದಲ್ಲಂತೂ ಪರಿಷ್ಕರಣೆಗಳು ಅನೂಚಾನವಾಗಿ ಸಾಗಿ ಬಂದಿವೆ. ಆ ತನಕ ಪ್ರಚಲಿತವಿದ್ದ ‘ಭೂ ಕೇಂದ್ರಿತ ಸಿದ್ಧಾಂತ’ವನ್ನು ಇಟಲಿಯ ಖಗೋಳ ವಿಜ್ಞಾನಿ ಗೆಲಿಲಿಯೊ ಅಲ್ಲಗಳೆದ.

ಭೂಮಿಯ ಸುತ್ತ ಸೂರ್ಯ ಸುತ್ತುತ್ತಿಲ್ಲ ಭೂಮಿಯೇ ಸೂರ್ಯನನ್ನು ಸುತ್ತು ಹಾಕುತ್ತಿದೆ ಎಂದು ಗಣಿತೀಯವಾಗಿ ಸಾಧಿಸಿ ತೋರಿಸಿದ. ಅವನ ‘ಸೂರ್ಯ ಕೇಂದ್ರಿತ ಸಿದ್ಧಾಂತ’ ಮಂಡನೆಯಾಗಿ ಕೇವಲ 407 ವರ್ಷಗಳು ಸಂದಿವೆ. ಗೆಲಿಲಿಯೊ ದಿಟ ಸಾರಿದ್ದಕ್ಕೆ ಕಟಕಟೆ ಎದುರಿಸಬೇಕಾಯಿತೆಂಬ ಮಾತು ಬೇರೆ. 1687ರಲ್ಲಿ ನ್ಯೂಟನ್ ‘ಗುರುತ್ವಾಕರ್ಷಣ ಸಿದ್ಧಾಂತ’ ಮಂಡಿಸಿದ. ಜಗಜ್ಜಾಣನೆನ್ನಿಸಿದ.

ಇಲ್ಲ, ಇದರಲ್ಲಿ ತುಸು ಲೋಪವಿದೆ, ಪುನರ್‌ವ್ಯಾಖ್ಯಾನಿಸುವ ಅಗತ್ಯವಿದೆ ಎಂದ 228 ವರ್ಷಗಳ ನಂತರ ಆಲ್ಬರ್ಟ್ ಐನ್‌ಸ್ಟೀನ್ ಎಂಬ ಮಲ್ಲ. ಐನ್‌ಸ್ಟೀನ್ ಶೋಧಗಳು ಕರಾರುವಾಕ್ಕೆಂದು ಸಾಬೀತಾದವು. ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತಕ್ಕಂತೂ ಸೂರ್ಯನೇ ಸಾಕ್ಷಿಯಾದ.

ಅರ್ಥಾತ್ ಸಂಪೂರ್ಣ ಸೂರ್ಯಗ್ರಹಣ ಕಾಲದಲ್ಲಿ ಸೂರ್ಯನ ಹಿಂದಿರುವ ತಾರೆಗಳು ನಮಗೆ ಗೋಚರ. ಬೆಳಕು ಯಾವುದೇ ಕಾಯ ಸಮೀಪಿಸಿದಾಗ ಅದರ ಗುರುತ್ವಕ್ಕೆ ಬಾಗುವ ಕಾರಣ ಆಗುವ ಪರಿಣಾಮವಿದು. ಒಂದು ಅರ್ಥದಲ್ಲಿ ಗೆಲಿಲಿಯೊ, ಐನ್‌ಸ್ಟೀನ್  ಪ್ರತಿಯೋಧರಾಗಿರದಿದ್ದರೆ ಬೌದ್ಧಿಕತೆ ಅಷ್ಟರಮಟ್ಟಿಗೆ ಸೊರಗುತ್ತಿತ್ತು.

ದೇಶ, ಭಾಷೆ, ಆಳ್ವಿಕೆಯ ಗಡಿ ಮೀರಿ ಹೇಗೆ ಮಾನವತೆ ಮೇಲಾಗುತ್ತದೆ ಎನ್ನಲು ಭಾರತದಲ್ಲಿ ಅನಿಷ್ಟ, ಊಹಿಸಲೂ ಆಗದ ‘ಸತಿ’ ಪದ್ಧತಿಯ ಮೂಲೋತ್ಪಾಟನೆ ಆದುದಕ್ಕಿಂತ ಉದಾಹರಣೆ ಬೇಕಿಲ್ಲ. ಕಲ್ಕತ್ತಾದ ಮಸಣ, ಮಸಣಗಳಿಗೂ ಹೋಗಿ ನಿಂತು ಅಲ್ಲಿ ‘ಸತಿ’ ಹೋಗಲು ಮುಂದಾಗುತ್ತಿದ್ದ ಸ್ತ್ರೀಯರನ್ನು ಬೇಡಿ,‘ಹಾಗೆ ಕೂಡದು.

ಯಾವ ಗ್ರಂಥದಲ್ಲೂ ಅದನ್ನು ಹೇಳಿಲ್ಲ’ ಎಂದು ರಾಜಾರಾಮ ಮೋಹನ ರಾಯ್ ಕೋರಿಕೊಳ್ಳುತ್ತಿದ್ದರು. ಅವರು ಇದಕ್ಕಾಗಿ ಕಾವಲು ಸಮಿತಿಗಳನ್ನೂ ರಚಿಸಿದ್ದರು. ಭಾರತದ ಅಂದಿನ ಗವರ್ನರ್ ಜನರಲ್ ಲಾರ್ಡ್ ಬೆಂಟಿಂಕ್‌ರೊಂದಿಗೆ ‘ಸತಿ’ ಪದ್ಧತಿಯನ್ನು ನಿಷೇಧಿಸುವುದರ ಅಗತ್ಯದ ಬಗ್ಗೆ ಚರ್ಚಿಸಿದರು.

ಇಬ್ಬರಿಗೂ ಈ ನಿಷೇಧಕ್ಕಿಂತ ಪುಣ್ಯಕಾರ್ಯ ಮತ್ಯಾವುದಿದೆ ಎಂದು ಮನದಟ್ಟಾಯಿತು. 1829ರಲ್ಲಿ ಬೆಂಟಿಂಕ್ ಆಜ್ಞೆ ಹೊರಡಿಸಿದರು. ಜಗತ್ತಿನ ಇತಿಹಾಸದಲ್ಲೇ ರಾಯ್ ಮತ್ತು ಬೆಂಟಿಂಕ್ ಅಪ್ರತಿಮ ಸಮಾಜ ಸುಧಾರಕರೆನ್ನಿಸಿದರು.

ರಷ್ಯಾದ ಸಮಾಜಶಾಸ್ತ್ರಜ್ಞ ಮತ್ತು ಸಾಹಿತಿ ಜೂರಿ ಲಾಟ್‌ಮನ್ (1922-1993) ‘ಯಾವುದೇ ಸಂಸ್ಕೃತಿ ಎಲ್ಲವನ್ನೂ ಒಳಗೊಂಡಿರುವುದಿಲ್ಲ, ಅದು ಅಸಂಸ್ಕೃತಿಯ ನಿರ್ದಿಷ್ಟ ಭಾಗವಾಗಿ ಮಾತ್ರ ಪ್ರಕಟಗೊಳ್ಳುವುದಷ್ಟೆ’ ಎಂದಿದ್ದಾರೆ. ಸಾಂಸ್ಕೃತಿಕ ಭಂಡಾರಕ್ಕೆ ಆವಕವಾದವನ್ನು ಸಮಯಾನುಸಾರ ನಿರಾಕರಣವೆಂಬ ಜರಡಿಯಲ್ಲಿ ಸೋಸಿಯೆ ಸ್ವೀಕರಿಸುವುದು ತರವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT