ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿ ಬದುಕಿನ ಹಾಡು–ಪಾಡು

ವಿಜ್ಞಾನ ವಿಶೇಷ
Last Updated 4 ಜುಲೈ 2015, 19:30 IST
ಅಕ್ಷರ ಗಾತ್ರ

1. ‘ಹಕ್ಕಿ’–ಅದೆಂಥ ಜೀವಿ?
ಕಶೇರುಕ ವರ್ಗದ, ಬಿಸಿ ರಕ್ತ ಶರೀರದ ಪ್ರಾಣಿಗಳ ಗುಂಪಿಗೆ ಸೇರಿದ ಒಂದು ವಿಶಿಷ್ಟ ಜೀವಿಯೇ ಹಕ್ಕಿ. ಪಕ್ಷಿಗಳ ಪರಮ ವಿಶಿಷ್ಟ ಲಕ್ಷಣ ಏನೆಂದರೆ ಪುಕ್ಕ–ಗರಿ ಅಸ್ತಿತ್ವ. ಪುಕ್ಕಗಳಿಂದ ಆವರಿಸಲ್ಪಟ್ಟ ಶರೀರ ಮತ್ತು ಗರಿಗಳಿಂದ ರೂಪುಗೊಂಡ ರೆಕ್ಕೆ–ಬಾಲ ಇವು ಎಲ್ಲ ಹಕ್ಕಿಗಳ ಅತ್ಯಂತ ವಿಶೇಷ ಅನನ್ಯ ಲಕ್ಷಣ. ಆಹಾರ ಕ್ರಮಕ್ಕೆ ಅನುಗುಣವಾದ ಕೊಕ್ಕಿನ ಜೊತೆಗೆ ಬಹುಪಾಲು ಪ್ರಭೇದಗಳು ಹಾರಾಟ ಶಕ್ತಿಯನ್ನೂ ಪಡೆದಿವೆ. ಇಲ್ಲೊಂದು ಪ್ರಮುಖ ಅಂಶ ಏನೆಂದರೆ ಹಾರಾಟ ಸಾಮರ್ಥ್ಯ ಹಕ್ಕಿಗಳ ವಿಶಿಷ್ಟ ಗುಣ ಅಲ್ಲ. ಹಾರಾಡುವ ಬಲ ಕಿಂಚತ್ತೂ ಇಲ್ಲದ ಹಕ್ಕಿ ಪ್ರಭೇದಗಳು ಬೇಕಾದಷ್ಟಿವೆ (ಚಿತ್ರ–10)

2. ಹಕ್ಕಿಗಳು ಉದಿಸಿದ್ದು ಎಂದು? ಹಕ್ಕಿಗಳಲ್ಲಿ ಪ್ರಸ್ತುತ ಎಷ್ಟು ಪ್ರಭೇದಗಳಿವೆ?
ಧರೆಯ ಜೀವಜಾಲದಲ್ಲಿ ಹಕ್ಕಿಗಳು ಅವತರಿಸಿದ್ದು ‘ಜ್ಯೂರಾಸಿಕ್‌ ಯುಗ’ದ ಅಂತ್ಯದ ವೇಳೆಗೆ ಎಂದರೆ ಈಗ್ಗೆ ಸುಮಾರು ಹದಿನೇಳು ಕೋಟಿ ವರ್ಷಗಳಷ್ಟು ಹಿಂದೆ. ಅವಕ್ಕೂ ಮೊದಲೇ ಬಂದಿದ್ದ ಸರೀಸೃಪಗಳ– ಅವುಗಳಲ್ಲೂ ಕೆಲ ನಿರ್ದಿಷ್ಟ ಡೈನೋಸಾರ್‌ಗಳ– ಶರೀರದಲ್ಲಿ ಒಡಮೂಡಿದ ಮಾರ್ಪಾಡುಗಳಿಂದ ಅಂತಿಮವಾಗಿ ಖಗವರ್ಗ ಉದಯಗೊಂಡಿತು (ಆ ವಿಕಾಸ ಸರಣಿಯನ್ನು ಚಿತ್ರ–5ರಲ್ಲಿ ಗಮನಿಸಿ.) ಪಳೆಯುಳಿಕೆಗಳ ಸ್ಪಷ್ಟ ಸಾಕ್ಷ್ಯಗಳ ಪ್ರಕಾರ ಪೃಥ್ವಿಯ ಪ್ರಪ್ರಥಮ ಹಕ್ಕಿ ‘ಆರ್ಖಿಯಾಪ್ಟರಿಕ್‌’ ಅದರ ಪಳೆಯುಳಿಕೆ ಚಿತ್ರ–11ರಲ್ಲಿ ನೋಡಿ. ಅಷ್ಟೂ ಕಾಲದಿಂದ ಧರೆಯಲ್ಲಿ ಯಶಸ್ವೀ ಜೀವನ ನಡೆಸುತ್ತ ಸರ್ವವಿಧ ಜೀವಾವಾರಗಳಲ್ಲೂ ಹರಡಿ ಬಾಳುತ್ತಿರುವ ಹಕ್ಕಿಗಳ ಸದ್ಯದ ಒಟ್ಟು ಪ್ರಭೇದಗಳ ಸಂಖ್ಯೆ ಸುಮಾರು ಹತ್ತು ಸಾವಿರ.

3. ಹಕ್ಕಿಗಳ ರೆಕ್ಕೆ–ಪುಕ್ಕಗಳು ಭಿನ್ನ ಭಿನ್ನ ವಿಧಗಳಲ್ಲಿ ವರ್ಣಮಯ ಆಗಿರುವುದು ಏಕೆ? ಈ ವರ್ಣಾಲಂಕರಣದಿಂದ ಹಕ್ಕಿಗಳಿಗೆ ಏನು ಪ್ರಯೋಜನ?
ಹಕ್ಕಿಗಳ ಶರೀರವನ್ನು ಬೆಚ್ಚಗಿಡಲೆಂದು ಪುಕ್ಕಗಳನ್ನು ಹಾರಾಟ ಶಕ್ತಿ ಒದಗಿಸಲೆಂದು ಗರಿಗಳಿಂದ ರೂಪಿಸಿದ ರೆಕ್ಕೆಗಳನ್ನು ದತ್ತವಾಗಿಸಿರುವ ಪ್ರಕೃತಿ ರೆಕ್ಕೆ–ಪುಕ್ಕಗಳನ್ನು ಪ್ರತಿ ಪ್ರಭೇದಕ್ಕೂ ವಿಶಿಷ್ಟವಾಗಿರುವಂತೆ ವರ್ಣಾಲಂಕಾರಗೊಳಿಸಲು ಹಲವಾರು ಸ್ಪಷ್ಟ ಉದ್ದೇಶಗಳಿವೆ. ಅಂತಹ ಪ್ರಮುಖ ಉದ್ದೇಶಗಳು: ‘ಪ್ರತಿ ಪ್ರಭೇದದ ಹಕ್ಕಿಯೂ ತನ್ನದೇ ಪ್ರಭೇದದ ಇತರ ಸದಸ್ಯರನ್ನು ಗುರುತಿಸಿಕೊಳ್ಳಲು, ಪ್ರತಿ ಪ್ರಭೇದದಲ್ಲೂ ಗಂಡು–ಹೆಣ್ಣು ನಡುವಣ ವ್ಯತ್ಯಾಸ ತಿಳಿಯಲು (ಚಿತ್ರ–1, 2), ಪ್ರಣಯಕಾಲದಲ್ಲಿ ಗಂಡುಗಳು ಹೆಣ್ಣುಗಳನ್ನು ಆಕರ್ಷಿಸಲು (ಚಿತ್ರ–6), ಶತ್ರುಗಳಿಗೆ ಗೋಚರವಾಗದಂತೆ ಮಾರುವೇಷ ಧರಿಸಲು (ಚಿತ್ರ–3), ಶತ್ರು– ಪ್ರತಿಸ್ಪರ್ಧಿಗಳನ್ನು ಹೆದರಿಸಲು... ಇತ್ಯಾದಿ. ಸ್ಪಷ್ಟವಾಗಿಯೇ ರೆಕ್ಕೆ–ಪುಕ್ಕಗಳ ಅಲಂಕಾರ ಹಕ್ಕಿಗಳ ನಿತ್ಯ ಬದುಕಿಗೆ ಅತ್ಯವಶ್ಯವಾದ ಒಂದು ಆಕರ.

4. ಹಕ್ಕಿಗಳು ಗೂಡು ನಿರ್ಮಿಸುವುದೇಕೆ? ಎಲ್ಲ ಹಕ್ಕಿಗಳೂ ಗೂಡು ನಿರ್ಮಿಸುತ್ತವೆಯೇ?
ಹಕ್ಕಿ ಗೂಡಿನ ಏಕೈಕ ಉದ್ದೇಶ ಸುರಕ್ಷಿತ ಸಂತಾನ ವರ್ಧನೆ. ವಯಸ್ಕ ಹಕ್ಕಿಗಳು ತಾವು ವಾಸಿಸಲೆಂದು ಗೂಡು ನಿರ್ಮಿಸುವುದಿಲ್ಲ. ಮೊಟ್ಟೆ ಇಟ್ಟು, ಕಾವು ಕೊಟ್ಟು ಮರಿ ಮಾಡಲು, ಅವುಗಳನ್ನು ಪ್ರೌಢವಾಗುವವರೆಗೂ ಸುರಕ್ಷಿತವಾಗಿ ಸಾಕಲೆಂದು ಹಕ್ಕಿಗಳು ಗೂಡು ಕಟ್ಟುತ್ತವೆ. ಮರಿಗಳು ಸ್ವತಂತ್ರವಾದೊಡನೆ ಗೂಡುಗಳು ಖಾಲಿ ಬೀಳುತ್ತವೆ.
ಎಲ್ಲ ಹಕ್ಕಿಗಳೂ ಗೂಡು ನಿರ್ಮಿಸುವುದಿಲ್ಲ. ಪ್ರಭೇದದಿಂದ ಪ್ರಭೇದಕ್ಕೆ ಗೂಡಿನ ಗಾತ್ರ, ಆಕಾರ, ವಿನ್ಯಾಸ, ಬಳಕೆಯಾಗುವ ಸಾಮಗ್ರಿಗಳು... ಎಲ್ಲವೂ ಭಿನ್ನ ಭಿನ್ನ. ಅಷ್ಟೇ ಅಲ್ಲ, ಕೆಲವೇ ಪ್ರಭೇದಗಳನ್ನು ಬಿಟ್ಟು ಬೇರಾವ ಹಕ್ಕಿಗಳೂ ತಾವು ಒಮ್ಮೆ ನಿರ್ಮಿಸಿ ಬಳಸಿದ ಗೂಡಿಗೆ ಮತ್ತೆ ಹಿಂದಿರುಗುವುದಿಲ್ಲ. ವಿಶೇಷ ಏನೆಂದರೆ ಹಾಡುಗಾರ ಹಕ್ಕಿಗಳು ತುಂಬ ಸುಂದರ ಸಂಕೀರ್ಣ ಗೂಡುಗಳನ್ನು ಕಟ್ಟುತ್ತವೆ (ಚಿತ್ರ–12). ಹಕ್ಕಿಗಳಿಗೆ ಗೂಡು ಕಟ್ಟುವ ಕೌಶಲ್ಯ ಹುಟ್ಟರಿವಿನಿಂದಲೇ ಪ್ರಾಪ್ತವಾಗಿರುತ್ತದೆ.

5. ಹಕ್ಕಿಗಳ ಕೂಗು–ಚಿಲಿಪಿಲಿ–ಕಲರವ ಇತ್ಯಾದಿ ಶಬ್ದಗಳ ಉದ್ದೇಶ ಏನು?
ಕೆಲವೇ ಪ್ರಭೇದಗಳ ಹಕ್ಕಿಗಳನ್ನು ಹೊರತುಪಡಿಸಿ ಉಳಿದೆಲ್ಲ ಹಕ್ಕಿಗಳೂ ತಮ್ಮ ತಮ್ಮದೇ ವಿಶಿಷ್ಟವಾದ ಕೂಗು–ಕರೆ–ಕಲರವ–ಚಿಲಿಪಿಲಿಗಳನ್ನು ಹೊರಡಿಸುತ್ತವೆ. ಹಾಗೆ ಹಕ್ಕಿಗಳು ಹೊಮ್ಮಿಸುವ ಎಲ್ಲ ಶಬ್ದಗಳನ್ನೂ ಪಕ್ಷಿ ತಜ್ಞರು ‘ಕರೆ (ಕಾಲ್‌) ಮತ್ತು ಗಾನ (ಸಾಂಗ್‌)’ ಎಂಬ ಎರಡು ವಿಧಗಳಲ್ಲಿ ವರ್ಗೀಕರಿಸುತ್ತಾರೆ.

ಎಲ್ಲ ಹಕ್ಕಿಗಳೂ ‘ಕರೆ’ಗಳನ್ನು ಮಾಡುತ್ತವೆ, ಮಾಡುತ್ತಲೇ ಇರುತ್ತವೆ. ತಮ್ಮದೇ ಗುಂಪಿನ ಸಹಚರರೊಡನೆ ನಿರಂತರ ಸಂಪರ್ಕದಲ್ಲಿರಲು, ಶತ್ರುಗಳ ಆಗಮನ– ನಿರ್ಗಮನಗಳನ್ನು ಘೋಷಿಸಲು... ಹಾಗೆಲ್ಲ ಹಲವು ಉದ್ದೇಶಗಳಿಗಾಗಿ ಕರೆಗಳು ಬಳಕೆಯಲ್ಲಿವೆ. ತದ್ವಿರುದ್ಧವಾಗಿ ಗಾನ ಸಾಮರ್ಥ್ಯ ಎಲ್ಲ ಹಕ್ಕಿಗಳಿಗೂ ಸಿದ್ದಿಸಿಲ್ಲದ ವಿಶೇಷ ಗುಣ. ಖಗ ಜಗದ ಸಕಲ ಪ್ರಭೇದಗಳ ಅರ್ಧದಷ್ಟು ಪ್ರಭೇದಗಳ ಗಂಡು ಹಕ್ಕಿಗಳು ಮಾತ್ರ ಹಾಡಬಲ್ಲವಾಗಿವೆ. ಸಂತಾನಕಾಲದಲ್ಲಷ್ಟೇ ವಿಶೇಷವಾಗಿ ಬಳಕೆಯಾಗುವ ಗಂಡು ಹಕ್ಕಿಗಳ ಗಾನಕ್ಕೆ ದ್ವಿವಿಧ ಸ್ಪಷ್ಟ ಉದ್ದೇಶಗಳಿವೆ: ‘ಸಂಗಾತಿಯನ್ನು ಆಕರ್ಷಿಸುವುದು ಮತ್ತು ತಮ್ಮ ಸರಹದ್ದನ್ನು ಘೋಷಿಸಿ ಪ್ರತಿ ಸ್ಪರ್ಧಿಗಳನ್ನು ಆ ಪ್ರದೇಶದಿಂದ ಹೊರಗಿರುವಂತೆ ಎಚ್ಚರಿಕೆ ನೀಡುವುದು.’ ಸ್ಪಷ್ಟವಾಗಿಯೇ ಹಕ್ಕಿಗಳ ಗಾನದ ಸ್ವರೂಪ ಪ್ರಭೇದದಿಂದ ಪ್ರಭೇದಕ್ಕೆ ಭಿನ್ನ ಭಿನ್ನ (ಚಿತ್ರ–7).

6. ಹಕ್ಕಿಗಳು ‘ವಲಸೆ’ ಹೋಗುವುದೇಕೆ? ಎಲ್ಲ ಹಕ್ಕಿಗಳೂ ವಲಸೆ ಪರಿಪಾಠ ಪಡೆದಿವೆಯೇ?
ಸಾಮಾನ್ಯವಾಗಿ ಧರೆಯ ಶೀತಲ ಪ್ರದೇಶಗಳ ಪಕ್ಷಿ ಪ್ರಭೇದಗಳು ಅಲ್ಲಿನ ಚಳಿಗಾಲದ ವಿಪರೀತ ಚಳಿಯ, ಆಹಾರಾಭಾವದ ಪರಿಸರದಿಂದ ದೂರವಾಗಲು ಆ ಋತುಮಾನದಲ್ಲಿ ಬೆಚ್ಚನೆಯ ತಾಣಗಳಿಗೆ ವಲಸೆ ಹೋಗುತ್ತವೆ; ಮತ್ತೆ ತಮ್ಮ ಮೂಲ ನೆಲೆಗೆ ಹಿಂದಿರುಗುತ್ತವೆ. ಹಾಗೆ ತಮ್ಮ ರೆಕ್ಕೆಗಳ ಬಲದಿಂದ ವರ್ಷವಿಡೀ ಹಿತಕರ, ಆಹಾರ ಸಮೃದ್ಧ ಪರಿಸರಲ್ಲಿ ಬಾಳುತ್ತವೆ (ಚಿತ್ರ–8).
ಸಕಲ ಖಗ ಪ್ರಭೇದಗಳು ವಲಸೆ ಹೋಗುವುದಿಲ್ಲ. ಸಮೀಪ ಆರು ಸಾವಿರ ಪ್ರಭೇದಗಳ ಹನ್ನೆರಡು ಸಾವಿರ ಕೋಟಿ ಹಕ್ಕಿಗಳು ಪ್ರತಿ ವರ್ಷ ಎರಡು ಬಾರಿ ಈ ಯಾನವನ್ನು ಕೈಗೊಳ್ಳುತ್ತವೆ.

7. ಪ್ರಕೃತಿಯಲ್ಲಿ, ನಿಸರ್ಗ ಸಮತೋಲನದಲ್ಲಿ ಪಕ್ಷಿಗಳ ಪಾತ್ರ ಏನು?
ಹಕ್ಕಿಗಳು ತಮ್ಮ ಸೌಂದರ್ಯದಿಂದ ‘ಜೀವಂತ ಆಭರಣ’ಗಳಂತೆ ಭೂ ವದನವನ್ನು ಅಲಂಕರಿಸಿವೆ; ತಮ್ಮ ಗಾನ–ಕರೆಗಳಿಂದ ನಿಸರ್ಗಕ್ಕೆ ಧ್ವನಿ ನೀಡಿವೆ. ಅಷ್ಟೇ ಅಲ್ಲದೆ ಪಿಡುಗಿನ ಕೀಟಗಳ–ಪ್ರಾಣಿಗಳ ಸಂಖ್ಯಾ ನಿಯಂತ್ರಣ ಮತ್ತು ಪರಿಸರ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪಕ್ಷಿಗಳು ಮಹತ್ತರ ಪಾತ್ರ ನಿರ್ವಹಿಸುತ್ತಿವೆ (ಚಿತ್ರ 9 ಮತ್ತು 12). ಹೇರಳ ಸಸ್ಯಗಳ ಪರಾಗ ಸ್ಪರ್ಶ ಮತ್ತು ಬೀಜ ಪ್ರಸಾರದಲ್ಲೂ ಹಕ್ಕಿಗಳದು ಅನನ್ಯ ಅಸದೃಶ ಅಮೂಲ್ಯ ಪಾತ್ರ (ಚಿತ್ರ–4).

8. ಪೃಥ್ವಿಯಲ್ಲಿ ಪ್ರಸ್ತುತ ಪಕ್ಷಿಗಳ ಪರಿಸ್ಥಿತಿ ಹೇಗಿದೆ?
ಮನುಷ್ಯರಿಂದಾಗಿ– ಕೇವಲ ಮನುಷ್ಯರಿಂದಾಗಿ– ಇಡೀ ಖಗ ವರ್ಗ ಪ್ರಸ್ತುತ ಭಾರೀ ಸಂಕಷ್ಟದಲ್ಲಿದೆ. ಆವಾಸ ನಾಶ, ವಿಪರೀತ ಕೀಟನಾಶ ಕೀಟನಾಶಕಗಳ ಬಳಕೆ, ಕಳ್ಳ ಬೇಟೆ, ಸಾಕು ಹಕ್ಕಿ ದಂಧೆ, ವಿಕೃತ ಜಿಹ್ವಾ– ಚಾಪಲ್ಯ ಇತ್ಯಾದಿ ಬಹುವಿಧ ದಾಳಿ, ಹಾವಳಿಗಳಿಂದ ಪಕ್ಷಿಗಳು ಭಾರೀ ದುಸ್ಥಿತಿ ತಲುಪಿವೆ (ಚಿತ್ರ–13). ವರ್ಷದಿಂದ ವರ್ಷಕ್ಕೆ ಹೇರಳ ಪ್ರಭೇದಗಳು ಅಳಿದುಹೋಗುತ್ತಿವೆ.
ಎಂಥ ದುರಂತ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT