ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದ ಯೋಚನೆ ಬಿಡಿ, ಆಟದತ್ತ ಗಮನ ಕೊಡಿ...

ವಾರದ ಸಂದರ್ಶನ
Last Updated 18 ಜುಲೈ 2015, 19:30 IST
ಅಕ್ಷರ ಗಾತ್ರ

ಐಪಿಎಲ್‌ ಆರನೇ ಆವೃತ್ತಿಯಲ್ಲಿ ನಡೆದಿದ್ದ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದ ತಪ್ಪಿತಸ್ಥರಿಗೆ ಕೊನೆಗೂ ಶಿಕ್ಷೆಯಾಗಿದೆ. ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಮಾಜಿ ಅಧಿಕಾರಿ ಗುರುನಾಥ್‌ ಮೇಯಪ್ಪನ್‌ ಹಾಗೂ ರಾಜಸ್ತಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್‌ಕುಂದ್ರಾ ಅವರ ಮೇಲೆ ಆಜೀವ ನಿಷೇಧ ಹೇರಲಾಗಿದೆ.

ಶಿಕ್ಷೆ ಪ್ರಮಾಣ ನಿರ್ಧರಿಸಲು ಸುಪ್ರೀಂಕೋರ್ಟ್‌ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ನೇತೃತ್ವದ ಸಮಿತಿ ಈ ಎರಡೂ ಐಪಿಎಲ್‌ ತಂಡಗಳನ್ನು ಎರಡು ವರ್ಷ ಅಮಾನತು ಮಾಡಿದೆ. ಲೋಧಾ ಸಮಿತಿಯ ತೀರ್ಪು ಭಾರತದ ಕ್ರಿಕೆಟ್‌ ಪ್ರೇಮಿಗಳಲ್ಲಿ ಹೊಸ ಆಶಾಭಾವ ಮೂಡಿಸಿದೆ. ಮುಂದೆ ಈ ಆಟ ಕಳಂಕ ಮುಕ್ತವಾಗಬಹುದು ಎನ್ನುವ ಭರವಸೆ ಹುಟ್ಟಿಸಿದೆ.

ತಪ್ಪಿತಸ್ಥರಿಗೆ ಶಿಕ್ಷೆಯೇನೊ ಆಯಿತು. ಆದರೆ, ಸೂಪರ್‌ ಕಿಂಗ್ಸ್‌ ಮತ್ತು ರಾಯಲ್ಸ್ ತಂಡಗಳಲ್ಲಿರುವ ಆಟಗಾರರ ಪರಿಸ್ಥಿತಿಯೇನು? ಐಪಿಎಲ್‌ ಟೂರ್ನಿ ಮುಂದುವರಿಯಬೇಕೇ?... ಹೀಗೆ ಹಲವು ಪ್ರಶ್ನೆಗಳು ಎದ್ದಿವೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಕರ್ನಾಟಕದ ಇ.ಎ.ಎಸ್‌. ಪ್ರಸನ್ನ ಅವರು ಮಾತನಾಡಿದ್ದಾರೆ.

1962ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಪ್ರಸನ್ನ ಅವರು 49 ಟೆಸ್ಟ್‌ಗಳನ್ನು ಆಡಿದ್ದಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ವಿವರ ಇಲ್ಲಿದೆ.

* ಕ್ರಿಕೆಟ್‌ಗೆ ಈಗ ಬಂದಿರುವ ಸ್ಥಿತಿ ನೋಡಿದರೆ ಏನನಿಸುತ್ತದೆ?
ಆಟ ಬೆಳೆಯುತ್ತಿದ್ದ ವೇಗ ನೋಡಿದರೆ ಮುಂದೊಂದು ದಿನ ಇದೆಲ್ಲ ಆಗುತ್ತದೆ ಎಂಬುದು ನಿರೀಕ್ಷಿತವೇ ಆಗಿತ್ತು. ಬೇರೆ ದೇಶಗಳಲ್ಲಿ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್‌ ಅಧಿಕೃತವಾಗಿಯೇ ಇದೆ. ನಮ್ಮಲ್ಲಿ ಕುದುರೆ ರೇಸ್‌ಗೆ ಬೆಟ್ಟಿಂಗ್‌ ನಡೆಸಲು ಅವಕಾಶವಿದೆ. ಆದರೆ, ಕ್ರಿಕೆಟ್‌ನಲ್ಲಿ ಈ ಅವಕಾಶವಿಲ್ಲ. ಆದ್ದರಿಂದ ಬೆಟ್ಟಿಂಗ್‌ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.

ಇತ್ತೀಚಿನ ವರ್ಷಗಳಲ್ಲಿ ಆಗಿರುವ ಬೆಳವಣಿಗೆಗಳಿಂದ ಬೇಸರವಾಗಿದೆ. ಈಗ ಆಗಿರುವುದನ್ನೇ ದೂರುವ ಬದಲು ಸರಿಮಾಡುವ ಪ್ರಯತ್ನವಾಗಬೇಕಿದೆ. ಆದ್ದರಿಂದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕಠಿಣ ನಿಲುವು ತಾಳಬೇಕು.

* ಇದಕ್ಕೆ ಕಾರಣವೇನು?
ಹೊಸದಾಗಿ ಕ್ರಿಕೆಟ್‌ ಅಂಗಳಕ್ಕೆ ಬರುವ ಆಟಗಾರ  ಆಟದ ಬಗ್ಗೆಯಷ್ಟೇ ತಿಳಿದುಕೊಂಡರೆ ಸಾಲದು. ಆಟಗಾರನ ಯಶಸ್ಸಿನಲ್ಲಿ ಶಿಸ್ತು ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಯಾರೂ ಹೇಳಿಕೊಡುವುದಿಲ್ಲ. ತಾವಾಗಿಯೇ ಕಲಿಯಬೇಕು. ಬೇರೆ ವಿಚಾರಗಳಿಗಿಂತ ಆಟದತ್ತ ಹೆಚ್ಚು ಗಮನ ಹರಿಸಬೇಕು.

* ಐಪಿಎಲ್‌ನಿಂದ ಕ್ರಿಕೆಟ್‌ ಸೊಬಗು ಹಾಳಾಗಿದೆ ಎನ್ನುವ ಟೀಕೆ ನಿಜವೇ?
ಹಾಳಾಗಿಲ್ಲ. ಐಪಿಎಲ್‌ನಿಂದ ಕ್ರಿಕೆಟಿಗರ ಬದುಕು ಸುಧಾರಣೆಯಾಗಿದೆ. ನಾವು ಆಟಗಾರರ ಬದುಕಿನ ಬಗ್ಗೆಯೂ ಯೋಚಿಸಬೇಕಲ್ಲವೇ. ಭಾರತದಲ್ಲಿ ಸಾಕಷ್ಟು ಜನಸಂಖ್ಯೆಯಿದೆ. ಕೆಲವರಿಗೆ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿದೆ. ಐಪಿಎಲ್ ಅದೆಷ್ಟೋ ಆಟಗಾರರ ಬದುಕಿಗೆ ನೆರವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತರಕ್ಕೇರಲು ವೇದಿಕೆ ಒದಗಿಸಿದೆ.

* ಲೋಧಾ ಸಮಿತಿಯ ತೀರ್ಪಿನ ಬಗ್ಗೆ ಹೇಳಿ?
ಕಳಂಕ ತೊಳೆಯುವ ನಿಟ್ಟಿನಲ್ಲಿ ಸಮಿತಿ ಮಹತ್ವದ ತೀರ್ಪು ನೀಡಿದೆ. ಇದರಿಂದ ಆಟಗಾರರ ಮೇಲೆ ಪರಿಣಾಮವಾಗದಂತೆ ಬಿಸಿಸಿಐ ಎಚ್ಚರಿಕೆ ವಹಿಸಬೇಕು. ಆಟಗಾರರ ಹಿತವೇ ಮುಖ್ಯವಾಗಬೇಕು.

* ಯಾರದ್ದೋ ಹಿತಾಸಕ್ತಿಗೆ ಆಟಗಾರರು ಬಲಿಯಾಗಬೇಕಾಯಿತಲ್ಲ?
ಇದಕ್ಕೆಲ್ಲ ಏನೂ ಮಾಡಲು ಆಗುವುದಿಲ್ಲ. ಪ್ರತಿ ಆಟಗಾರನ ಬದುಕಿನಲ್ಲಿ ಈ ರೀತಿಯ ಏರಿಳಿತಗಳು ಸಹಜ. ಆಟಗಾರರು ತಾಳ್ಮೆಯಿಂದ ಇದ್ದರೆ ಮುಂದೆ ಉತ್ತಮ ಅವಕಾಶ ಸಿಕ್ಕೇ ಸಿಗುತ್ತದೆ. ಆಟಗಾರರಲ್ಲಿನ ಪ್ರತಿಭೆಗೆ ಅನ್ಯಾಯವಾಗದಂತೆ ಬಿಸಿಸಿಐ ಸರಿಯಾದ ಕ್ರಮವನ್ನೇ ತೆಗೆದುಕೊಳ್ಳುತ್ತದೆ ಎನ್ನುವ ವಿಶ್ವಾಸವಿದೆ.

* ಐಪಿಎಲ್‌ ಟೂರ್ನಿಯನ್ನೇ ರದ್ದು ಮಾಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆಯಲ್ಲ?
ಅದು ತಪ್ಪು. ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ ಆಟಗಾರರಿಗೂ ಐಪಿಎಲ್‌ ವೇದಿಕೆ ಕಲ್ಪಿಸಿಕೊಟ್ಟಿದೆ. ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ಟೂರ್ನಿ ರದ್ದು ಮಾಡುವುದರಿಂದ ಆಗುವ ಪ್ರಯೋಜನವಾದರೂ ಏನು? ಯುವ ಆಟಗಾರರು ಉತ್ತಮ ಅವಕಾಶವೊಂದನ್ನು ಕಳೆದುಕೊಂಡಂತೆ ಆಗುತ್ತದೆಯಲ್ಲವೇ?

ಮುಂದಿನ ವರ್ಷ ಟೂರ್ನಿ ನಡೆಸುತ್ತೇವೆ. ಇದರ ಬಗ್ಗೆ ಯಾವ ಅನುಮಾನವೂ ಬೇಡ ಎಂದು ಐಪಿಎಲ್‌ ಮುಖ್ಯಸ್ಥ ರಾಜೀವ್‌ ಶುಕ್ಲಾ ಹೇಳಿದ್ದಾರೆ. ಆಟಗಾರರಿಗೆ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳಲು ಐಪಿಎಲ್‌ ಆಡಳಿತ ಮಂಡಳಿಯಿದೆ. ಎದುರಾಗಿರುವ ಸಮಸ್ಯೆಗೆ ಪರಿಹಾರವೂ ಸಿಗುತ್ತದೆ.

* ಮೇಯಪ್ಪನ್‌ ಹಾಗೂ ಕುಂದ್ರಾ ಅವರಿಗೆ ಕಠಿಣ ಶಿಕ್ಷೆ ಕೊಡದೇ ನಿಷೇಧ ಹೇರಿದ್ದಷ್ಟೇ ಸಾಕೆ?
ಅವರು ಆಟಗಾರರೇನಲ್ಲ. ಆದ್ದರಿಂದ ಅವರಿಗೆ ಏನು ಮಾಡಲಿಕ್ಕೆ ಆಗುವುದಿಲ್ಲ. ಈಗ ನೀಡಿರುವ ಶಿಕ್ಷೆಯೇ ಸಾಕು.

* ಐಪಿಎಲ್‌ ತಂಡಗಳ ವ್ಯವಹಾರದಲ್ಲಿ ಕೆಲ ಆಟಗಾರರೂ ಪಾಲು ಹೊಂದಿದ್ದಾರೆ ಎನ್ನುವ ಆರೋಪವಿದೆಯಲ್ಲ?
ಇದರ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಷಯದ ಬಗ್ಗೆ ಏನೆಂದು ಹೇಳಲಿ?

* ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಬಿಸಿಸಿಐ ಕೂಡಾ ಕಾರಣವಲ್ಲವೇ?
ಇದಕ್ಕೆಲ್ಲ ಕ್ರಿಕೆಟ್‌ ಮಂಡಳಿ ಕಾರಣವಲ್ಲ. ಕ್ರಿಕೆಟ್‌ ಬೆಳೆಸುವ ಹೆಗ್ಗುರಿ ಹೊಂದಿರುವ ಬಿಸಿಸಿಐ ಹಲವು ಪ್ರಯೋಗಗಳನ್ನು ಮಾಡುತ್ತಿದೆ. ಹೊಸ ಹೊಸ ಮಾದರಿಯ ಟೂರ್ನಿಗಳನ್ನು ಪರಿಚಯಿಸಿ ಕ್ರಿಕೆಟ್‌ ಬೆಳವಣಿಗೆಗೆ ಶ್ರಮಿಸುತ್ತಿದೆ. ಆದರೆ, ಬಿಸಿಸಿಐ ಉದ್ದೇಶವನ್ನು ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ. ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಸಂಶಯ ಬಂದ ತಕ್ಷಣ ಅವರ ಮೇಲೆ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಆರೋಪ ಸಾಬೀತಾಗುವ ಮೊದಲೇ ಶಿಕ್ಷೆ ನೀಡಲು ಹೇಗೆ ತಾನೆ ಸಾಧ್ಯ?

* ಬಿಸಿಸಿಐಗೆ ಆಟವನ್ನು ಬೆಳೆಸುವುದಕ್ಕಿಂತ ಹಣ ಮಾಡುವುದರಲ್ಲಿಯೇ ಹೆಚ್ಚು ಆಸಕ್ತಿ ಇದ್ದಂತಿದೆಯಲ್ಲ?
ಹಣವಿಲ್ಲದೇ ಹೋದರೆ ಈ ಕಾಲದಲ್ಲಿ ಏನು ತಾನೆ ಮಾಡಲು ಸಾಧ್ಯ. ಹಾಗಂದ ಮಾತ್ರಕ್ಕೆ ಬಿಸಿಸಿಐ ಹಣದ ಹಿಂದೆ ಬಿದ್ದಿದೆ. ಎಲ್ಲವನ್ನೂ ಲಾಭದ ದೃಷ್ಟಿಯಿಂದಲೇ ನೋಡುತ್ತಿದೆ ಎಂದರ್ಥವಲ್ಲ.  ಬಿಸಿಸಿಐ ಕ್ರಿಕೆಟ್‌ ಮತ್ತು ಹಣ ಎರಡನ್ನೂ ಬೆಳೆಸಲು ಪ್ರಯತ್ನಿಸುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆಗಿರುವ ಕೆಲ ಘಟನೆಗಳಿಂದ ಕ್ರಿಕೆಟ್‌ಗೆ ಕಳಂಕ ಬಂದಿರುವುದಂತೂ ನಿಜ.

* ಬಿಸಿಸಿಐನಲ್ಲಿರುವ ಕೆಲ ಅಧಿಕಾರಿಗಳೇ ಐಪಿಎಲ್ ತಂಡಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ ಎನ್ನುವ ಸುದ್ದಿಯಿದೆಯಲ್ಲ...
ಒಂದು ವೇಳೆ ಬಿಸಿಸಿಐ ಅಧಿಕಾರಿಗಳೇ ತಂಡ ಖರೀದಿಗೆ ಮುಂದಾದರೆ ಅದು ಹಿತಾಸಕ್ತಿ ಸಂಘರ್ಷವಾಗುತ್ತದೆ. ಆದರೆ ಕ್ರಿಕೆಟ್ ಮಂಡಳಿಯೇ ಫ್ರಾಂಚೈಸ್ ಅಧಿಕಾರ ಪಡೆಯಬಹುದು. ಮಂಡಳಿ ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಿಗೆ ತಂಡವನ್ನು ತರಬೇತುಗೊಳಿಸುತ್ತದೆ. ಮಂಡಳಿ ಐಪಿಎಲ್‌ ತಂಡವನ್ನು ಖರೀದಿಸಿದರೆ ಸಮಸ್ಯೆಯೇನಿಲ್ಲ.

* ರಾಜ್ಯ ಅಥವಾ ರಾಷ್ಟ್ರೀಯ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಾಗ ಪ್ರತಿಭೆಗಿಂತ ಶಿಫಾರಸಿಗೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿದೆ ಎನ್ನುವ ಆರೋಪವಿದೆಯಲ್ಲ?
ಕಾಲ ಬದಲಾದಂತೆಲ್ಲ ಈ ರೀತಿಯ ಬೆಳವಣಿಗೆ ಸಹಜವಾಗಿ ಬಿಟ್ಟಿದೆ. ಇದಕ್ಕೆ ಯಾರು ತಾನೆ ಏನು ಮಾಡಲು ಸಾಧ್ಯ? ಸತ್ಯ ಒಪ್ಪಿಕೊಳ್ಳದೇ ಬೇರೆ ಹಾದಿಯಿಲ್ಲ.

* ನೀವು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಹೇಗಿತ್ತು ಆಗಿನ ಸ್ಥಿತಿ?
ಆಗೆಲ್ಲ ನಮಗೆ ಕಡಿಮೆ ಹಣ ಸಿಗುತ್ತಿತ್ತು. ಆರು ದಿನಗಳ ಟೆಸ್ಟ್‌ ಆಡಿದರೆ ₹300 ಲಭಿಸುತ್ತಿತ್ತು. ರಾಜ್ಯ ತಂಡದಲ್ಲಿ ಆಡಿದರೆ ಪ್ರತಿ ಪಂದ್ಯಕ್ಕೆ ₹5 ಕೊಡುತ್ತಿದ್ದರು. ಅದು ಸಂಭಾವನೆಯೆಂದು ಕೊಡುತ್ತಿರಲಿಲ್ಲ. ಖರ್ಚಿಗೆ ಎಂದಷ್ಟೇ ಹಣ ನೀಡುತ್ತಿದ್ದರು. ಆಗಿನ ಆಟಗಾರರ ಮನೋಭಾವವೂ ಈಗಿನಂತೆ ಇರಲಿಲ್ಲ. ರಾಷ್ಟ್ರೀಯ ತಂಡದಲ್ಲಿ ಆಡುವುದೇ ಹೆಮ್ಮೆ ಎಂದುಕೊಳ್ಳುತ್ತಿದ್ದೆವು. ಆದರೆ, ಈಗ ಬದಲಾವಣೆಯಾಗಿದೆ. ಚೆನ್ನಾಗಿ ಆಡುವ ಆಟಗಾರನಿಗೆ ಕೋಟ್ಯಂತರ ಹಣ ಸಿಗುತ್ತದೆ. ಕ್ರಿಕೆಟ್ ಕೂಡಾ ಕಾರ್ಪೊರೇಟ್‌ ಕಚೇರಿಯಂತಾಗಿದೆ. ಆದ್ದರಿಂದ ಬದಲಾವಣೆ ಅಗತ್ಯವಿದೆ.

* ಬೆಟ್ಟಿಂಗ್‌ ಹಾಗೂ ಸ್ಪಾಟ್ ಫಿಕ್ಸಿಂಗ್‌ನಂಥ ಘಟನೆಗಳನ್ನು ತಡೆಯಲು ನಿಮ್ಮ ಸಲಹೆ ಏನು?
ಮನುಷ್ಯನ ಆಸೆಗೆ ಕೊನೆಯೆಲ್ಲಿದೆ ಹೇಳಿ. ಇದಕ್ಕೆ ಎಷ್ಟೇ ನಿಯಂತ್ರಣ ಹೇರಿದರೂ ಬದಲಾವಣೆ ಕಷ್ಟ. ಕುದುರೆ ರೇಸ್‌ನಲ್ಲೂ ಫಿಕ್ಸಿಂಗ್ ನಡೆಯುತ್ತದೆ ಎನ್ನುವ ಆರೋಪವಿದೆಯಲ್ಲ. ಅಲ್ಲಿಯು ಏನೂ ಆಗಿಲ್ಲವಲ್ಲ.

* ಹಾಗಾದರೆ ಕ್ರಿಕೆಟ್‌ಗೆ ಅಂಟಿರುವ ಕೊಳೆಯನ್ನು ತೊಳೆಯಲು ಸಾಧ್ಯವಿಲ್ಲವೇ?
ಸಾಧ್ಯವಿಲ್ಲ ಎನ್ನಲು ಆಗುವುದಿಲ್ಲ. ಆದರೆ, ಸಾಕಷ್ಟು ಸಮಯ ಬೇಕಾಗುತ್ತದೆ.  ಕೆಲ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಆಡುತ್ತಿರುವುದು ದೇಶಕ್ಕಾಗಿ ಹಾಗೂ ದೇಶದ ಕೀರ್ತಿಗಾಗಿ ಎನ್ನುವ ಅರಿವು ಇರಬೇಕು. ಆಟಗಾರರಿಗೆ ಹಣ ನೀಡುವ ವ್ಯವಸ್ಥೆ ಬದಲಾಗಬೇಕು.

ಮಾಸಿಕ ವೇತನ ಪದ್ಧತಿ ಜಾರಿಗೆ ಬರಬೇಕು. ಇದರಿಂದ ಆಟದತ್ತ ಒಲವು ಹೆಚ್ಚಾಗಬಹುದು ಎನ್ನುವುದು ನನ್ನ ನಂಬಿಕೆ. ಆಟಗಾರರು ಹಣದ ಬಗ್ಗೆ ಯೋಚನೆ ಬಿಟ್ಟು ಆಟದತ್ತ ಗಮನ ಹರಿಸಬೇಕು. ಆಟಗಾರರು ಇಲ್ಲದೇ ಬಿಸಿಸಿಐ ಇಲ್ಲ. ಬಿಸಿಸಿಐ ಇಲ್ಲದಿದ್ದರೆ ಆಟಗಾರರೂ ಇಲ್ಲ. ಆದ್ದರಿಂದ ಇಬ್ಬರ ನಡುವೆ ಹೊಂದಾಣಿಕೆ ಬೇಕೇ ಬೇಕು. ಆಗಷ್ಟೇ ಕ್ರಿಕೆಟ್‌ ಉಳಿಯಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT