ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ಯಾಕಾಂಡ ನಿಲ್ಲಲಿ

Last Updated 25 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅಸ್ಸಾಂನಲ್ಲಿ ಬುಡಕಟ್ಟು ಜನರ ನೆಲೆಗಳ ಮೇಲೆ ನಡೆಸಿದ ಅನೇಕ ದಾಳಿಗಳಲ್ಲಿ 70ಕ್ಕೂ ಹೆಚ್ಚು ಅಮಾಯಕರು ಹತ್ಯೆಯಾಗಿದ್ದಾರೆ.  ಬೋಡೊ­ಲ್ಯಾಂಡ್  ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗದ ಸಾಂಗ್ ಬಿಜಿತ್ ಬಣಕ್ಕೆ (ಎನ್‌ಡಿಎಫ್‌ಬಿ–ಎಸ್)  ಸೇರಿದ ಉಗ್ರರು ನಡೆಸಿರುವ ವಿವೇಚನಾ­ರಹಿತವಾದ ಈ ಮಾರಣ ಹೋಮ ಹೇಡಿತನದ್ದು. ಈ ಬಣದ ಪೈಶಾಚಿಕ ಕೃತ್ಯಗಳನ್ನು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ  ಹಾಗೂ  ರಾಜ್ಯದ  ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಖಂಡಿಸಿವೆ. ಸೋನಿತ್‌ಪುರ, ಕೋಕರಾ­ಝಾರ್  ಹಾಗೂ ಚಿರಾಂಗ್ ಜಿಲ್ಲೆಗಳಲ್ಲಿ ನಡೆದ  ಸರಣಿ ದಾಳಿಗಳಿಂದ ಜನರು ಮನೆಮಠ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ.

ನಿಷೇಧಿತ ಸಂಘಟನೆ­ಯಾಗಿರುವ ಎನ್‌ಡಿಎಫ್‌ಬಿ–ಎಸ್‌ನ ಉಗ್ರರು ಈ ವರ್ಷ ಆಗಸ್ಟ್‌ನಲ್ಲಿ   ಚಿರಾಂಗ್ ಜಿಲ್ಲೆಯಲ್ಲಿ ಹದಿಹರೆಯದ ಹುಡುಗಿಯೊಬ್ಬಳನ್ನು ಪೊಲೀಸ್ ಮಾಹಿತಿದಾರಳೆಂದು ಆರೋಪಿಸಿ ಮನೆಯಿಂದ ಹೊರಗೆಳೆದು ಆಕೆಯ ತಂದೆತಾಯಿ ಕಣ್ಣೆದುರೇ ಗುಂಡಿಟ್ಟು ಕೊಂದು ಕ್ರೌರ್ಯ ಮೆರೆದಿ­ದ್ದರು. ಇಂತಹ ಎನ್‌ಡಿಎಫ್‌ಬಿ–ಎಸ್‌ ವಿರುದ್ಧ ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆ ಇತ್ತೀಚಿನ ತಿಂಗಳುಗಳಲ್ಲಿ ಅನೇಕ ಉಗ್ರರ ಹತ್ಯೆ ಹಾಗೂ ಬಂಧನಗಳಿಗೆ ಕಾರಣವಾಗಿದೆ. ಇದಕ್ಕೆ ಪ್ರತೀಕಾರವಾಗಿ ದಾಳಿ ನಡೆಸಲು ಅಮಾಯಕ ಬುಡಕಟ್ಟು ಜನರನ್ನು ಈ ಉಗ್ರರು ಗುರಿಯಾಗಿಸಿ­ಕೊಂಡಿ­ರು­ವುದು ಖಂಡನೀಯ. ಈ ದಾಳಿಗಳು ಹೇಡಿತನದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಸರಿಯಾಗಿಯೇ ಇದೆ.

ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಉಗ್ರರನ್ನು ಎದುರಿಸುವ ಸನ್ನದ್ಧತೆ ರಾಜ್ಯ ಪೊಲೀಸರಲ್ಲಿ ಇಲ್ಲ. ಗೂಢಚರ್ಯೆ ವ್ಯವಸ್ಥೆಯೂ ದುರ್ಬಲ­ವಾಗಿದ್ದು ತೀವ್ರಗಾಮಿಗಳ ಕೈ ಮೇಲಾಗಿರುವುದು ಮುಂದುವರಿದಿದೆ. ರಾಜ್ಯ­ದಲ್ಲಿ ಜನಾಂಗೀಯ ಹಿಂಸೆ ನಡೆಯುತ್ತಿದ್ದರೂ, ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಕುಟುಂಬ ಸದಸ್ಯರೊಂದಿಗೆ ಸರ್ಕಾರದ ಮುಖ್ಯ ಕಾರ್ಯ­ದರ್ಶಿಯವರು ಆನೆ ಸವಾರಿಯ ಸಡಗರದಲ್ಲಿದ್ದದ್ದು ಅಕ್ಷಮ್ಯ.  ಭದ್ರತಾ ಸನ್ನದ್ಧತೆ  ಪರಿಶೀಲನೆಗಾಗಿ ಅಸ್ಸಾಂಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್  ಅವರ ಭೇಟಿ ಗಲಭೆಕೋರರಿಗೆ ಎಚ್ಚರಿಕೆಯ ಸಂಕೇತವಾಗಬೇಕು. ಇದು ಸ್ಥಳೀಯರಿಗೆ ವಿಶ್ವಾಸ ತುಂಬುವಂತಾಗಬೇಕು. ಉಗ್ರ ಚಟುವಟಿಕೆಗಳಿಗೆ 1990ರ ದಶಕದಿಂದಲೂ ಅಸ್ಸಾಂ ನೆಲೆಯಾಗಿದೆ.

ಪ್ರತ್ಯೇಕ ರಾಜ್ಯಗಳ ಬೇಡಿಕೆ­ಗಳಿಗಾಗಿ ಹಲವು ಗುಂಪುಗಳು ತೀವ್ರಗಾಮಿ ಚಟುವಟಿಕೆಗಳಲ್ಲಿ ನಿರತ­ವಾಗಿರುವುದು ಮುಂದುವರಿದಿದೆ. ಇಡೀ ಜನಾಂಗಗಳನ್ನೇ  ನಾಶ­ಪಡಿಸುವ ಸ್ವರೂಪ ಹೊಂದಿದ ಹಿಂಸಾಚಾರಗಳೂ ನಡೆದಿವೆ. ಹೀಗಾಗಿ ಈಗಿನ ಈ ಹತ್ಯೆಗಳು ಜನಾಂಗೀಯ ಘರ್ಷಣೆಗಳಿಗೆ ಎಡೆ ಮಾಡದಂತೆ ನೋಡಿ­ಕೊಳ್ಳುವ ಸವಾಲನ್ನು ಮುಖ್ಯಮಂತ್ರಿ ತರುಣ್ ಗೊಗೋಯ್ ನೇತೃತ್ವದ ಸರ್ಕಾರ ಎದುರಿಸಬೇಕಾಗಿದೆ.  ಬೋಡೊ ಹಾಗೂ ಇತರ ಜನಾಂಗಗಳ ಮಧ್ಯೆ ಬಿರುಕು ಮೂಡಿಸುವ ಪ್ರಯತ್ನಗಳನ್ನು ತಡೆಯಲು ಪರಿಣಾಮಕಾರಿ­ಯಾಗಿ  ಕಾರ್ಯ ನಿರ್ವಹಿಸಬೇಕು. ಮಾತುಕತೆಗಳು ಗಂಭೀರ ನೆಲೆಗಳಲ್ಲಿ ನಡೆಯ­ಬೇಕಲ್ಲದೆ ಹಂತಕರ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ರಾಷ್ಟ್ರದ ಈಶಾನ್ಯ ಭಾಗದಲ್ಲಿ  ಇಂತಹ ಸ್ಥಿತಿ ಸೃಷ್ಟಿಯಾಗಲು ಕಾರಣವಾದ ಸಮಸ್ಯೆಗಳನ್ನು ಪತ್ತೆಹಚ್ಚಿ  ಅವನ್ನು ಪರಿಹರಿಸುವತ್ತಲೂ ಸರ್ಕಾರ ಗಮನ ಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT