ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿಹರೆಯಕ್ಕೆ ಬೇಕು ಮಾರ್ಗದರ್ಶನ

ಅಕ್ಷರ ಗಾತ್ರ

‘ಈಚೆಗೆ ನನ್ನ ಮಗ ಯಾಕೋ ನನ್ನ ಮಾತೇ ಕೇಳ್ತಿಲ್ಲಾ. ಯಾವಾಗ್ಲೂ ರೂಂ ಬಾಗಿಲು ಮುಚ್ಕೊಂಡಿರ್ತಾನೆ.  ರೂಂ ಒಳಗೆ ಕಾಲಿಟ್ಟರೆ ರೇಗ್ತಾನೆ. ಕೇಳದೇ ಒಳ ಬರಬೇಡ ಅಂತಾನೆ. ಚಿಕ್ಕ ವಿಷಯಕ್ಕೆ ಕೋಪ ಮಾಡ್ಕೋತಾನೆ. ಕೈಲಿರೋ ವಸ್ತುಗಳನ್ನು ಬಿಸಾಕ್ತಾನೆ. ನೆಲವನ್ನೇ ಜಾಡಿಸಿ ಒದೀತಾನೆ. ಅವನಿಗೆ ಅವನ ಸ್ನೇಹಿತರೇ ಹೆಚ್ಚಾಗಿದ್ದಾರೆ. ಕೆಟ್ಟವರ ಸಹವಾಸ ಮಾಡ್ಬೇಡಾ ಅಂದ್ರೆ ಸಾಕು, ಉರಿದು ಬೀಳ್ತಾನೆ. ಯಾವಾಗ್ಲೂ ಮೊಬೈಲ್, ಟಿ.ವಿ. ಲೋಕದಲ್ಲೇ ಮುಳುಗಿರ್ತಾನೆ’ ಇದು ಮೈಸೂರಿನ ಪ್ರತಿಷ್ಠಿತ ಪ್ರೌಢಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿರುವ ರವಿತೇಜನ ತಾಯಿ ಲೀಲಾವತಿ ಅವರು ತಮ್ಮ ಮಗನ ಕುರಿತು ಒಪ್ಪಿಸುವ ದೂರು.

ಪೋಷಕರು ಇದೇ ವಯಸ್ಸಿನ ಮಗ ಅಥವಾ ಮಗಳ ಕುರಿತು ಇದೇ ದಾಟಿಯಲ್ಲಿ ದೂರುತ್ತಾರೆ. ತಾವೂ ಹದಿಹರೆಯದಲ್ಲಿ ಹೀಗೆಯೇ ವರ್ತಿಸಿದ್ದೆವು ಎಂಬುದನ್ನು ಮರೆಯುತ್ತಾರೆ! ಹೌದು, ಆ ವಯಸ್ಸೇ ಅಂತಹುದು. ಬಾಲ್ಯಾವಸ್ಥೆಯ ಪೊರೆ ಕಳಚಿ, ವಯಸ್ಕಾವಸ್ಥೆಯ ಕಿರೀಟ ತೊಡುವ ಮಧ್ಯದ ಈ ಹದಿಹರೆಯ ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದ ನೆನಪು. ಆಂಗ್ಲ ಭಾಷೆಯಲ್ಲಿ ‘Adolescence’ ಎಂದು ಹೆಸರಿರುವ ಈ ಅವಸ್ಥೆ ‘ಪರಿಪಕ್ವತೆಯೆಡೆಗೆ’ ಎಂಬ ಶಾಬ್ದಿಕ ಅರ್ಥ ಹೊಂದಿದೆ. ಕವಿನುಡಿಯಂತೆ ಇದು ಸಸಿ ಚಿಗುರಿ ಮರವಾಗುವ ವಸಂತ ಕಾಲ. ಇದಕ್ಕೆ ಕೌಮಾರ್ಯಾವಾಸ್ಥೆ, ಕಿಶೋರಾವಸ್ಥೆ, ತಾರುಣ್ಯಾವಸ್ಥೆ, ಜನಪದರ ಅನುಭವದಂತೆ ‘ಮಂಗ್ಯಾನ ವಯಸ್ಸು’.

ಯಾರು ಹದಿಹರೆಯದವರು?
ಭಾರತೀಯ ಪರಿಸರಕ್ಕೆ ಅನುಗುಣವಾಗಿ ಸಾಮಾನ್ಯವಾಗಿ 13ರಿಂದ 18ರ ವಯಸ್ಸಿನ ಹುಡುಗಿಯರು ಹಾಗೂ 14ರಿಂದ 19 ವರ್ಷದ ಹುಡುಗರನ್ನು ‘ಹದಿಹರೆಯದವರು’ ಎಂದು ಪರಿಗಣಿಸಲಾಗುತ್ತದೆ. ಈ ವಯಸ್ಸಿನಲ್ಲಿ ದೇಹ, ಮನಸ್ಸು, ಭಾವನೆ, ಬುದ್ಧಿಗಳಲ್ಲಿ ಕ್ಷಿಪ್ರಗತಿಯ ಬದಲಾವಣೆಗಳು ಕಂಡುಬರುತ್ತವೆ

ಹುಚ್ಚುಕೋಡಿ ಮನಸು!
ಬೇಂದ್ರೆ ಅಜ್ಜ ಹೇಳಿರುವಂತೆ ‘ಹದಿನಾರರ ವಯಸ್ಸಿಗೆ ಹುಚ್ಚುಕೋಡಿ ಮನಸು’ ಈ ಅವಧಿಯಲ್ಲಿ ದೇಹ, ಮನಸ್ಸು, ಭಾವನೆ, ಬುದ್ಧಿ ನಮ್ಮ ಮಾತು ಕೇಳುವುದಿಲ್ಲ. ನಿಲ್ಲೆಂದರೆ, ನಿಲ್ಲುವುದಿಲ್ಲ. ಓಡೆಂದರೆ ಓಡುವುದಿಲ್ಲ. ಮಲಗೆಂದರೆ ಮಲಗುವುದಿಲ್ಲ. ಈ ಬದಲಾವಣೆಗಳ ಸಂಕೀರ್ಣತೆ, ಸಂಕ್ರಮಣ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ.

ವೈರುಧ್ಯಗಳ ಸಮಾಗಮ: ‘ಡಬಲ್‌ ರೋಲ್’
ಹದಿಹರೆಯದಲ್ಲಿ ಕಂಡುಬರುವ ಪ್ರಮುಖ ಸಮಸ್ಯೆ ಎಂದರೆ ‘ವೈರುಧ್ಯಗಳ ಸಮಾಗಮ’. ಇದೊಂಥರಾ ‘ತ್ರಿಶಂಕು ಸ್ವರ್ಗ’. ಇತ್ತ ಬಾಲ್ಯವೂ ಅಲ್ಲ, ಅತ್ತ ವಯಸ್ಕಾವಸ್ಥೆಯೂ ಅಲ್ಲದ ಪರಿಸ್ಥಿತಿಯಲ್ಲಿ ತರುಣ, ತರುಣಿ ಯರು ತೊಳಲಾಡುತ್ತಾರೆ. ಹಿರಿಯರಿಂದ ಬೈಸಿ ಕೊಳ್ಳುತ್ತಾರೆ, ಅವರನ್ನೂ ಬೈಯುತ್ತಾರೆ, ಸ್ವತಃ ನೋವು ಅನುಭವಿಸುತ್ತಾರೆ, ಇತರರನ್ನೂ ನೋಯಿಸುತ್ತಾರೆ.

ಏಕಕಾಲಕ್ಕೆ ಪರಸ್ಪರ ವಿರುದ್ಧವಾದ ಗುಣ, ಸ್ವಭಾವಗಳನ್ನು ಹದಿಹರೆಯದವರು ಅಭಿವ್ಯಕ್ತಿಸುತ್ತಾರೆ. ಏಕತಾನತೆ–ಸಾಂಘಿಕತೆ, ಸ್ವತಂತ್ರ–ನಿರ್ಬಂಧಿತ, ಸ್ವಾವಲಂಬನೆ–ಪರಾವಲಂಬನೆ, ತ್ಯಾಗ–ಸ್ವಾರ್ಥ, ಸಹಕಾರ– ಅಸಹಕಾರ, ಸಹನಶೀಲ– ಕೋಪಿಷ್ಠ, ಶಿಸ್ತು– ಅಶಿಸ್ತು, ಪ್ರಬುದ್ಧತೆ– ಅಪ್ರಬುದ್ಧತೆ, ಭದ್ರತೆ– ಅಭದ್ರತೆ, ಭೀತಿ– ನಿರ್ಭೀತಿ, ಆತಂಕ– ನಿರಾತಂಕ, ದ್ವೇಷ– ಪ್ರೀತಿ, ಅಸೂಯೆ– ಪ್ರಶಂಸೆ, ಉತ್ಸಾಹ– ನಿರುತ್ಸಾಹ, ಆದರ್ಶ– ವಾಸ್ತವ, ಸೋಲು– ಗೆಲುವು, ನೈತಿಕ– ಅನೈತಿಕ, ಕೀಳರಿಮೆ– ಮೇಲರಿಮೆ, ಜೀವನಪ್ರೀತಿ– ಆತ್ಮಹತ್ಯಾ ಪ್ರವೃತ್ತಿ... ಇತ್ಯಾದಿ ವರ್ತನೆಗಳು ಹದಿಹರೆಯದಲ್ಲಿ ಏಕಕಾಲಕ್ಕೆ ಕಂಡುಬರುತ್ತವೆ. ಹದಿಹರೆಯದ ಈ ‘ಡಬಲ್‌ ರೋಲ್’ ಪೋಷಕರು, ಒಡಹುಟ್ಟಿದವರು, ಸಂಬಂಧಿ ಗಳು, ಸ್ನೇಹಿತರು, ಶಿಕ್ಷಕರು, ಅಪರಿಚಿತರು ಹೀಗೆ ಎಲ್ಲರ ಮುಂದೆ ಅಭಿವ್ಯಕ್ತವಾಗುತ್ತದೆ.

ಈ ಕ್ಷಣ ಉತ್ಸಾಹದ ಬುಗ್ಗೆಯಂತಿದ್ದ ತರುಣ, ತರುಣಿಯರು ಮರುಕ್ಷಣದಲ್ಲಿ ಉತ್ಸಾಹ ಕಳೆದುಕೊಂಡು ನಿರುತ್ಸಾಹಿಯಾಗುತ್ತಾರೆ. ಪೋಷಕರನ್ನು ಅತಿಯಾಗಿ ಪ್ರೀತಿಸುತ್ತಾರೆ. ಪೋಷಕರ ವಿರುದ್ಧ ಕೋಪ, ತಾಪವನ್ನೂ ಪ್ರದರ್ಶಿಸುತ್ತಾರೆ. ಸ್ನೇಹಿತರೊಂದಿಗೆ ಸ್ವಚ್ಛಂದ, ಸ್ವತಂತ್ರ ಜೀವನ ಅನುಭವಿಸುತ್ತಾರೆ, ಮನೆಯಲ್ಲಿ ಏಕಾಂಗಿಯಾಗಿ ಬದುಕುತ್ತಾರೆ. ಪ್ರಬುದ್ಧರಂತೆ ವರ್ತಿಸುತ್ತಾರೆ, ಮೊಂಡಾಟ ತೋರುತ್ತಾರೆ. ಆದರ್ಶವಾದಿಯಂತೆ ತ್ಯಾಗ, ಸಹಕಾರದ ಮಾತುಗಳನ್ನಾಡುತ್ತಾರೆ, ವಾಸ್ತವವಾದಿಯಂತೆ ಸ್ವಾರ್ಥಿಗಳಾಗುತ್ತಾರೆ.

ಸೋಲಿನಿಂದ ಕಂಗೆಡುತ್ತಾರೆ, ಗೆದ್ದರೆ ಬೀಗುತ್ತಾರೆ. ಮನೆಬಿಟ್ಟು ಸ್ವಾವಲಂಬಿಗಳಾಗಿ ಬದುಕಲು ಹೊರಡುತ್ತಾರೆ, ದಾರಿ ಕಾಣದೇ ಮನೆಗೆ ಮರಳಿ ಪರಾವಲಂಬಿಗಳಾಗುತ್ತಾರೆ. ಸಮಾಜ ಕಟ್ಟುವ ಮಾತುಗಳನ್ನಾಡುತ್ತಾರೆ, ಸಮಾಜದ ಅವ್ಯವಸ್ಥೆ ಕಂಡು ಸಮಾಜವನ್ನು ನಾಶಪಡಿಸಬೇಕು ಎನ್ನುತ್ತಾರೆ. ಗುರು– ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳುತ್ತಾರೆ, ಜೀವನವನ್ನು ಅತಿಯಾಗಿ ಪ್ರೀತಿಸುತ್ತಾರೆ, ಅದೇ ಜೀವನವನ್ನು ಆತ್ಮಹತ್ಯೆಯ ಮೂಲಕ ಕೊನೆಗೊಳಿಸಿಕೊಳ್ಳುತ್ತಾರೆ!

ಸಮಸ್ಯೆಗೆ ಏನು ಕಾರಣ?
ಈ ಹಂತದಲ್ಲಿ ಕಂಡುಬರುವ ತೀವ್ರಗತಿಯ ದೈಹಿಕ, ಅಂತರ್ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ ಬದಲಾವಣೆ, ಸಮವಯಸ್ಕರೊಂದಿಗಿನ ಹೋಲಿಕೆಗಳು, ರಸಗಂಥಿಗಳ ತೀವ್ರ ಕಾರ್ಯಾಚರಣೆ, ಅಗತ್ಯಗಳ ತೀವ್ರತೆ, ತನ್ನತನದ ತುಡಿತ, ಪ್ರದರ್ಶನಪ್ರಿಯತೆ, ದುರ್ಬಲ ಮನಸ್ಥಿತಿ, ಅವಾಸ್ತವಿಕ ಗುರಿಗಳು, ಸಮೂಹ ಮಾಧ್ಯಮ ಗಳ  ಪ್ರಭಾವ, ಅವೈಜ್ಞಾನಿಕ ಲೈಂಗಿಕ ಅರಿವು, ಶಿಕ್ಷಣ ಹಾಗೂ ವೃತ್ತಿಯಲ್ಲಿ ಅನಾರೋಗ್ಯಕರ ಸ್ಪರ್ಧೆ, ಸಮರ್ಪಕ ಮಾರ್ಗದರ್ಶನದ ಕೊರತೆ ಹದಿಹರೆಯದವರನ್ನು ಸಮಸ್ಯೆಯ ಸುಳಿಗೆ ನೂಕುತ್ತದೆ.

ಹೆಚ್ಚುತ್ತಿರುವ ಆತ್ಮಹತ್ಯಾ ಪ್ರವೃತ್ತಿ
ಈಚೆಗೆ ಹದಿಹರೆಯದವರಲ್ಲಿ ‘ಆತ್ಮಹತ್ಯಾ ಪ್ರವೃತ್ತಿ’ ಹೆಚ್ಚಿಗೆ ಕಂಡುಬರುತ್ತಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣ, ಪ್ರೀತಿ ವೈಫಲ್ಯ, ಭವಿಷ್ಯದ ಕುರಿತು ಅಸ್ಥಿರತೆ– ಆತಂಕ ಮುಂತಾದ ಕಾರಣಗಳಿಂದ ಹದಿಹರೆಯದವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಲ್ಲದೆ, ಪೋಷಕರು, ಶಿಕ್ಷಕರು ಬುದ್ಧಿಹೇಳಿದರೆಂದು, ತನಗೆ ಬೇಕಾದ ಟಿ.ವಿ. ಚಾನೆಲ್‌ ಹಚ್ಚಲಿಲ್ಲವೆಂದು, ಬೇಕಾದ ತಿಂಡಿ ಮಾಡಲಿಲ್ಲವೆಂದು, ಮೊಬೈಲ್‌ ಅಥವಾ ಬೈಕ್‌ ಕೊಡಿಸಲಿಲ್ಲ ಎಂದು, ಪಾಕೆಟ್‌ಮನಿ ಕೊಡಲಿಲ್ಲವೆಂದು, ಮುಖದ ಮೇಲೆ ಮೊಡವೆ ಎದ್ದಿವೆ ಎಂದು, ಮೀಸೆ ಚಿಗುರಲಿಲ್ಲವೆಂದು, ಲೈಂಗಿಕ ಅಂಗಾಂಗಗಳು ಪಕ್ವವಾಗಿಲ್ಲ ಎಂದು... ಹೀಗೆ ಕ್ಷುಲ್ಲಕ ಕಾರಣಗಳಿಗೆ ಜೀವ ಕಳೆದುಕೊಂಡವರೆಷ್ಟೋ?
ಬದಲಾದ ಕಾಲಘಟ್ಟ, ಬದಲಾದ ಮನೋಭಾವ, ಬದಲಾದ ಅಗತ್ಯಗಳು, ಬದಲಾದ ನಿರೀಕ್ಷೆ, ಬದಲಾದ ಜೀವನಕ್ರಮ, ಸಂಬಂಧಗಳ ಶಿಥಿಲತೆ  ಈ ಆತ್ಮಹತ್ಯಾ ಪ್ರವೃತ್ತಿ ಹೆಚ್ಚಲು ಕಾರಣವಾಗಿವೆ.

ಮಾರ್ಗದರ್ಶನ ನೀಡಿ
‘ಹದಿಹರೆಯದವರಲ್ಲಿ ಎಲ್ಲವನ್ನೂ ಸಮನಾಗಿ ಸ್ವೀಕರಿಸುವ ‘ಸ್ಥಿತಪ್ರಜ್ಞತೆ’ ಇರುವುದಿಲ್ಲ. ಪ್ರಬುದ್ಧತೆಯ ಕೊರತೆಯಿಂದ ಕೆಲವೊಮ್ಮ ತಪ್ಪು ನಿರ್ಣಯಗಳು ಕಂಡುಬರುತ್ತವೆ. ಹದಿಹರೆಯದವರಲ್ಲಿ ಅವರ ವಾಸ್ತವ ಸಾಮರ್ಥ್ಯದ ಅರಿವು ಮೂಡಿಸಿ, ಯೋಗ್ಯ ಮಾರ್ಗದರ್ಶನ ನೀಡಿದರೆ, ಅವರು ಕರ್ತೃತ್ವಶಾಲಿ ನಾಗರಿಕ ರಾಗುತ್ತಾರೆ’ ಎನ್ನುತ್ತಾರೆ  ಬೆಳಗಾವಿಯ ಕೆಎಸ್‌ಆರ್‌ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎ.ಎಲ್‌. ಪಾಟೀಲ್.

ತಜ್ಞರ ಸಲಹೆಗಳು 
ಹದಿಹರೆಯದವರ ಮನಸ್ಥಿತಿ ಕಾದ ಕಬ್ಬಿಣದಂತಿರುತ್ತದೆ. ಈ ಹಂತದಲ್ಲಿ ಅದನ್ನು ಬೇಕಾದಂತೆ ಮಣಿಸಬಹುದು. ತರುಣ– ತರುಣಿಯರಿಗೆ ಸಂಬಂಧಿಸಿ ಪೋಷಕರು, ಗುರು– ಹಿರಿಯರು ಅನುಸರಿಸಬೇಕಾದ ಕ್ರಮಗಳ ಕುರಿತು ತಜ್ಞರ ಸಲಹೆಗಳು ಹೀಗಿವೆ:

* ಹದಿಹರೆಯದವರಿಗೆ ಶಿಕ್ಷಣ, ವೃತ್ತಿ ಹಾಗೂ ವೈಯಕ್ತಿಕ ಸಮಸ್ಯೆಗಳಿಗೆ ಸಂಬಂಧಿಸಿ ಸಮಯೋಚಿತ ಮಾರ್ಗದರ್ಶನ, ಅಗತ್ಯ ಬಿದ್ದರೆ ಆಪ್ತಸಮಾಲೋಚನೆ ಒದಗಿಸಬೇಕು.

* ಅವರ ನೋವು– ನಲಿವುಗಳಿಗೆ ಸ್ಪಂದಿಸಬೇಕು. ಅವರ ಕಣ್ಣೀರಿಗೆ ಸಾಂತ್ವನ ಹೇಳಬೇಕು. ಸೋತಾಗ ಧೈರ್ಯ ತುಂಬಬೇಕು, ಗೆದ್ದಾಗ ಬೆನ್ನು ತಟ್ಟಬೇಕು.

* ಅವರ ವ್ಯಕ್ತಿತ್ವವನ್ನು ಗೌರವಿಸಬೇಕು. ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು.

* ಸಮೂಹ ಮಾಧ್ಯಮಗಳು ವಾಸ್ತವಿಕ, ಮೌಲಿಕ ಕಾರ್ಯಕ್ರಮ, ಸುದ್ದಿಗಳನ್ನು ಬಿತ್ತರಿಸಬೇಕು.

* ಸಂಬಂಧಗಳ ಪರಿಕಲ್ಪನೆ, ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸುವ ಭಾವನಾತ್ಮಕ ಬುದ್ಧಿಶಕ್ತಿಯ ಅರಿವು ನೀಡಬೇಕು.

* ಮೌಲ್ಯ ಶಿಕ್ಷಣ, ಜೀವನ ಕೌಶಲಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು.

* ವೈಜ್ಞಾನಿಕ ತಳಹದಿಯ ಲೈಂಗಿಕ ಶಿಕ್ಷಣವನ್ನು ನೀಡಬೇಕು. ಹದಿಹರೆಯದವರ ವಿಶೇಷ ಆಸಕ್ತಿ, ಅಭಿರುಚಿ, ಕೌಶಲಗಳನ್ನು ಗುರುತಿಸಿ, ಅವುಗಳನ್ನು ಪ್ರೋತ್ಸಾಹಿಸಬೇಕು.

* ಆಯ್ಕೆಯ ಪರಿಜ್ಞಾನ, ಸೋಲು– ಗೆಲುವಿನ ಅನುಭವ ಹಾಗೂ ನಿರ್ಣಯ ಕೈಗೊಳ್ಳುವಿಕೆಯ ತರಬೇತಿ ನೀಡಬೇಕು.

* ಮನಸ್ಥಿತಿಯ ಬದಲಾವಣೆಗೆ ಯೋಗ, ಧ್ಯಾನ, ಅಧ್ಯಾತ್ಮದ ಲೇಪನವುಳ್ಳ ಯೋಗ್ಯ ವಾತಾವರಣ ಒದಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT