ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿಹರೆಯದವರಿಗೇಕೆ ಬೈಕ್‌?

Last Updated 1 ಜುಲೈ 2016, 19:30 IST
ಅಕ್ಷರ ಗಾತ್ರ

ಜೀವ   ಝಲ್ಲೆನ್ನುವುದಕ್ಕೆ ಆ ಒಂದು ಸುದ್ದಿ ಸಾಕು. ಅವರು ಎಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳು. ಪರೀಕ್ಷೆ ಮುಗಿದ ಸಂಭ್ರಮ. ಸ್ನೇಹಿತರೆಲ್ಲ ಜೊತೆ ಸೇರಿ ಹೋದದ್ದು ಸಣ್ಣದೊಂದು ಟೂರ್. ಎಳೆಯ ವಯಸ್ಸು. ಮಾಗಿಲ್ಲದ ಮನಸ್ಸು. ಬೈಕಿನ ಮೇಲೆ ಇನ್ನಿಲ್ಲದ ವ್ಯಾಮೋಹ. ವೇಗವೆಂದರೆ ಅಚ್ಚುಮೆಚ್ಚು.

ಅದರ ನಡುವೆ ವೀಲಿಂಗ್ ಮಾಡುವ, ಸ್ಟಂಟ್‌ಗಳನ್ನು ಮಾಡುವ ಹುಚ್ಚು. ಇಬ್ಬರು ಕುಳಿತಿದ್ದ ಆ ಬೈಕು ವೀಲಿಂಗ್ ನೆಪದಲ್ಲಿ ಮುಂದಿನ ಚಕ್ರ ಮೇಲಕ್ಕೆತ್ತಿದ್ದೇ ನೆಪವಾಗಿ ಪಕ್ಕದಲ್ಲಿದ್ದ ಮರದ ಮೇಲೇರಿತು. ಕುಳಿತಿದ್ದವರು ನೆಲಕ್ಕುರುಳಿದರು. ಹೆಲ್ಮೆಟ್ ಇರಲಿಲ್ಲ. ಬಾಳಿ ಬದುಕಬೇಕಾದವರು ಅಲ್ಲೇ ಇಲ್ಲವಾದರು.

ಮಾಧ್ಯಮಗಳಲ್ಲಿ ದಿನನಿತ್ಯ ಇಂಥ ಸುದ್ದಿಗಳು ಕಾಣಸಿಗುತ್ತವೆ. ಹದಿನಾರು ಇಪ್ಪತ್ತರ ಆಸುಪಾಸಿನ ಈ ಮಕ್ಕಳೆಲ್ಲ ಹೀಗೆ ಬದುಕು ಮುರುಟಿಸಿಕೊಳ್ಳುವುದನ್ನು ಕಂಡಾಗಲೆಲ್ಲ ಮಹಾಭಾರತದ ಅಭಿಮನ್ಯು ನೆನಪಾಗುತ್ತಾನೆ. ಅವನಾದರೋ ಯುದ್ಧದಲ್ಲಿ ಗೆಲುವಿಗಾಗಿ ಹೋರಾಡಿ ಮಡಿದ. ಆದರೂ ಚಕ್ರವ್ಯೂಹವನ್ನು ತಾನು ಹೊಕ್ಕರೆ ಕ್ಷೇಮವಾಗಿ ಹಿಂತಿರುಗಿ ಬರುವುದು ಗೊತ್ತಿಲ್ಲ ಎಂಬುದರ ಅರಿವಿದ್ದರೂ ಮುನ್ನುಗ್ಗಿದ, ಬದುಕು ಮುಂದುವರಿಯಲಿಲ್ಲ. ವಿವೇಚನಾರಹಿತವಾಗಿ ವಾಹನ ಚಲಾಯಿಸುವ ಕಾಲೇಜು ಹುಡುಗರನ್ನು ನೋಡಿದರೆ, ಅವರೂ ಅಷ್ಟೆ. ವೇಗದ ಮಿತಿ ಎಂಬುದು ಅವರಿಗಿಲ್ಲ. ಆದರೆ ಅವರೆದುರು ಬಂದವರಿಗೂ, ಅವರಿಗೂ ಜೀವದ ಮೇಲೆ ಆಸೆಯೆಂಬುದು ಉಳಿಯುವುದಿಲ್ಲ. ಪುಟ್ಟ ಪಟ್ಟಣಕ್ಕೂ ಹೆದ್ದಾರಿಗೂ ವ್ಯತ್ಯಾಸವಿಲ್ಲದೆ ಆನೆ ಹೋದದ್ದೇ ದಾರಿ ಎಂಬಂತೆ ಹೋದರಾಯಿತು. ಮಿಕ್ಕವರು ಅವರವರ ಜೀವ ಕಾಪಾಡಿಕೊಳ್ಳಬೇಕು, ಅಷ್ಟೆ.

ಸಂಭವಿಸುವ ಬಹುತೇಕ ರಸ್ತೆ ಅಪಘಾತಗಳ ಪೈಕಿ ಹದಿಹರೆಯದ ಹುಡುಗರ ಸಂಖ್ಯೆಯೇ ಹೆಚ್ಚಿರುವುದು ಆತಂಕಕಾರಿ ಬೆಳವಣಿಗೆ. ಆ ವಯಸ್ಸಿನ ಸವಾಲೇ ಅದು. ಎಲ್ಲವನ್ನೂ ಎದುರು ಹಾಕಿಕೊಳ್ಳುವ, ಹೋರಾಡುವ, ಗೆಲ್ಲುವ ಛಲ. ಹಾಗೆಂದು,  ವಾಹನ ಚಾಲನಾ ಪರವಾನಗಿ ಸಿಗುವ ಮುನ್ನವೇ ರಸ್ತೆಗಿಳಿಯುವುದು ಅವರಿಗೂ ಸಾರ್ವಜನಿಕರಿಗೂ ಅಪಾಯದ ಸಂಕೇತವೇ ಹೌದು. ಆ ವಯಸ್ಸಿನಲ್ಲಿ ವೇಗವೆಂದರೆ ಇಷ್ಟ. ಎಲ್ಲದರಲ್ಲೂ ತಾವು ಮುಂದಿರಬೇಕು ಎಂಬ ಬಯಕೆ. ಹಾಗೆಂದು ಸಾವಿಗೆ ಸರದಿ ತಪ್ಪಿದರೆ ಹೇಗೆ? 

ನಾಲ್ಕಾರು ತಿಂಗಳ ಹಿಂದೆ ಇಂಥದೇ ಒಂದು ಘಟನೆ ನಮ್ಮ ಆತ್ಮೀಯರೊಬ್ಬರ ನೆರೆಮನೆಯಲ್ಲಿ ಸಂಭವಿಸಿತು. ಎಂಜಿನಿಯರಿಂಗ್ ಮೊದಲ ಸೆಮಿಸ್ಟರ್ ಓದುವ ಮಗ ಮನೆಯಲ್ಲೇ ಇದ್ದರೆ ವಾಹನ ಬೇಕೆಂದು ಹಟ ಮಾಡುತ್ತಾನೆಂಬ ಕಾರಣಕ್ಕೆ ದೂರದೂರಿನಲ್ಲಿ ಹಾಸ್ಟಲ್‌ನಲ್ಲಿ ಬಿಟ್ಟಿದ್ದರು. ಆತ ಮಹಾ ಒರಟ, ಎಲ್ಲದಕ್ಕೂ ಧಾವಂತ ತೋರುವ ಗಡಿಬಿಡಿಯ ಹುಡುಗ. ಗಾಡಿ ಓಡಿಸುವ ಹುಚ್ಚಿನಲ್ಲಿ, ಹೊಸತಾಗಿ ಗೆಳೆಯರಾದವರ ಗಾಡಿ ತೆಗೆದುಕೊಂಡು ವೇಗವಾಗಿ ಹೋದವನು ಮರಳಿದ್ದು ಹೆಣವಾಗಿ. ಅವನು ಬದುಕಿದ್ದಾಗಲೇ ಮಗನ ಕುರಿತಾಗಿ ಆತಂಕದಿಂದ ಖಿನ್ನತೆಗೊಳಗಾಗಿದ್ದ ಆ ತಾಯಿಯನ್ನು ಈಗ ಸಮಾಧಾನಿಸಬಲ್ಲವರು ಯಾರು?

ನಿಜಕ್ಕೂ ಯೋಚಿಸೋಣ. ತಪ್ಪು ಯಾರದ್ದು?: ಮೊದಲು ದೂರಬೇಕಾದ್ದು ಯಾರನ್ನು ಎಂದು ಕೇಳಿದರೆ ಬೀಜ–ವೃಕ್ಷ ನ್ಯಾಯವಾದೀತು. ಒಂದೊಂದೇ ಕರುಳಕುಡಿಗಳನ್ನು ಹೆತ್ತವರು ಅವರ ಎಲ್ಲಾ ಆಕಾಂಕ್ಷೆಗಳನ್ನೂ ಪೂರೈಸಿಕೊಡುವ ಪಣ ತೊಡುತ್ತಾರೆ. ಇತ್ತೀಚಿನ ದಿನಗಳಲ್ಲಿ ‘ಎಸ್‌ಎಸ್‌ಎಲ್‌ಸಿಯಲ್ಲಿ 90% ಅಂಕ ಪಡೆದರೆ ಕಾಲೇಜಿಗೆ ಹೋಗಲು ಗಾಡಿ ಕೊಡಿಸಬೇಕು’ ಎಂಬುದು ಸಾಮಾನ್ಯ ಬೇಡಿಕೆ. ಮಕ್ಕಳ ಸಾಧನೆಯೆದುರು ಸೋಲುವ ಹೆತ್ತವರು ಅವರ ಅಪೇಕ್ಷೆಯನ್ನು ಈಡೇರಿಸಲು ಶತಾಯಗತಾಯ ಪ್ರಯತ್ನಿಸುತ್ತಾರೆ. ಆದರೆ ಮಕ್ಕಳಿಗೆ ಮುಂಜಾಗರೂಕತಾ ಕ್ರಮಗಳನ್ನು ಕಡ್ಡಾಯ ಮಾಡುವುದಿಲ್ಲ. ಹೆಲ್ಮೆಟ್ ಧರಿಸುವುದಾಗಲೀ, ರಸ್ತೆ ನಿಯಮಗಳನ್ನು ಪಾಲಿಸುವುದಾಗಲೀ, ವೇಗಕ್ಕೊಂದು ಮಿತಿಯಿರಿಸುವುದಾಗಲೀ ಯಾವುದೂ ಇಲ್ಲ. ಹದಿನೆಂಟು ತುಂಬದ ಮಕ್ಕಳಿಗೆ ಗಾಡಿ ಕೊಡಿಸುವುದೇ ಮಹಾ ಅಪರಾಧವಲ್ಲವೇ? ಪರೀಕ್ಷೆಯ ಸಾಧನೆಗೆ ಪ್ರೋತ್ಸಾಹವೆಂಬಂತೆ ಬೇರೇನೂ ಕೊಡಿಸಲು ಸಾಧ್ಯವಿಲ್ಲವೇ? ಗಾಡಿ ಬೇಕೆಂದು ಹಟ ಮಾಡುವುದು ಮಕ್ಕಳ ತಪ್ಪೋ, ಅವರ ಬೇಡಿಕೆಗೆ ಮಣಿದು ಕೊಡಿಸುವುದು ಹೆತ್ತವರ ತಪ್ಪೋ?

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಗಾಡಿಯೆಂದರೆ ಈ ಮಕ್ಕಳಿಗೆ ಕಡಿಮೆ ಸಿ.ಸಿ.ಯ ಸಾಮಾನ್ಯ ದ್ವಿಚಕ್ರ ವಾಹನಗಳು ಸಾಕಾಗುವುದಿಲ್ಲ. ಅವರ ಕಲ್ಪನೆಯ, ಕನಸಿನ ಗಾಡಿಗಳು ದೊಡ್ಡ ಬೈಕುಗಳು. ಅಲ್ಲೂ ತಮ್ಮ ಮಕ್ಕಳಿಗೆ ತೀರಾ ದುಬಾರಿಯಾದುದನ್ನೇ ಕೊಡಿಸಿ ತಮ್ಮ ಪ್ರತಿಷ್ಠೆ ಕಾಪಾಡಿಕೊಳ್ಳುವ ಹೆತ್ತವರೂ ಇದ್ದಾರೆ. ಅಂಥವನ್ನು ಕೊಡಿಸುವ ಸಾಮರ್ಥ್ಯ ತಮ್ಮ ಹೆತ್ತವರಿಗೆ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳದೆ ‘ಗಾಡಿ ಕೊಡಿಸಿದರೆ ಮಾತ್ರ ಕಾಲೇಜಿಗೆ ಹೋಗುತ್ತೇನೆ’ ಎಂದು ಹಟ ಹಿಡಿಯುವ ಮಕ್ಕಳೂ ಇದ್ದಾರೆ. ತಮ್ಮ ಆರ್ಥಿಕ ಸ್ಥಿತಿ ಮಕ್ಕಳ ಬೇಡಿಕೆಯನ್ನು ಪೂರೈಸುವ ಮಟ್ಟದಲ್ಲಿಲ್ಲ ಎಂಬುದು ಗೊತ್ತಿದ್ದೂ ಅವರು ಓದಲಿ ಎಂಬಾಸೆಯಿಂದ ಸಾಲ ಮಾಡಿಯಾದರೂ ಗಾಡಿ ಕೊಡಿಸುವ ಹೆತ್ತವರಿದ್ದಾರೆ.

ಒಂದು ದಶಕದ ಹಿಂದೆ ಹೈಸ್ಕೂಲು, ಕಾಲೇಜಿಗೆ ಬರುವಾಗ ಸೈಕಲ್ ಹೊಂದುವುದೆಂದರೆ ಅತ್ಯಂತ ಗೌರವದ ಸಂಗತಿಯಾಗಿತ್ತು. ಬಸ್ಸಿನಲ್ಲಿ ಬರುವ, ನಡೆದು ಬರುವ ಮಕ್ಕಳ ಸಂಖ್ಯೆ ಹೆಚ್ಚಿತ್ತು. ಇಂದು ಚಿತ್ರ ಬದಲಾಗಿದೆ. ಹೈಸ್ಕೂಲ್ ಓದುವ ಮಕ್ಕಳಿಗೇ ಮೋಟಾರು ಗಾಡಿಗಳು ಬೇಕು. ಸೈಕಲ್ ಎಂದರೆ ಅವಮಾನ. ಈ ಕಾರಣದಿಂದಲೋ ಏನೋ ಕಾಲೇಜುಗಳ ಸೈಕಲ್ ಸ್ಟ್ಯಾಂಡ್ ತುಂಬಾ ಮೋಟಾರ್ ಗಾಡಿಗಳು. ಲೈಸೆನ್ಸ್ ಹೊಂದುವ ವಯಸ್ಸಿಗೆ ಬಾರದ ಮಕ್ಕಳು ಗಾಡಿ ತರುವುದನ್ನು ಕಾಲೇಜುಗಳು ನಿಷೇಧಿಸಬಹುದು. ಪಿಯುಸಿ ಮಕ್ಕಳೆಂದರೋ ಟ್ಯೂಷನ್ನುಗಳ ಸರಪಳಿಯನ್ನೇ ಕೊರಳಿಗೆ ನೇಯ್ದುಕೊಂಡಿರುವವರು. ಅವರ ಸಮಯ ಅಮೂಲ್ಯ. ಅವರ ಓಡಾಟಕ್ಕೆ ಅವರಲ್ಲಿಯೇ ಗಾಡಿಯಿದ್ದು ಬಿಟ್ಟರೆ ಒಳ್ಳೆಯದೆಂಬ ಭಾವ ಹಲವರದ್ದು. ಆದರೆ ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದು ಮಾತ್ರವಲ್ಲದೆ ಬಿಡುವಿನ ವೇಳೆಯಲ್ಲಿ ಇನ್ನೂ ಇಬ್ಬರನ್ನು ಜೊತೆಗೂಡಿಸಿಕೊಂಡು ನಗರದ ಉದ್ದಗಲ ಅಳೆಯುವವರಿಗೇನೂ ಕಡಿಮೆಯಿಲ್ಲ. ಆದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲಾದರೂ ಹೀಗೊಂದು ನಿಯಮ ಮಾಡಿದರೆ ಕಡೆಯ ಪಕ್ಷ ಅನೇಕ ವಿದ್ಯಾರ್ಥಿಗಳು ಕ್ಷೇಮವಾಗಿದ್ದಾರು.

ಇಲ್ಲಿ ಟ್ರಾಫಿಕ್ ಪೊಲೀಸರ ಜವಾಬ್ದಾರಿಯೂ ದೊಡ್ಡದಾಗಿರುತ್ತದೆ. ಮಕ್ಕಳ ಸಮವಸ್ತ್ರ ನೋಡಿದರೆ ಸಾಕು, ಅವರು ಆ ನಗರದ ಯಾವ ಶಾಲೆ–ಕಾಲೇಜಿನ ವಿದ್ಯಾರ್ಥಿಗಳೆಂಬುದು ಗೊತ್ತಾಗಿಬಿಡುತ್ತದೆ. ಅವರಿಗೆ ಕಡಿಮೆ ದಂಡ ವಿಧಿಸುವ ಬದಲು ಗಾಡಿ ಕೊಟ್ಟವರಿಗೇ ಹೆಚ್ಚಿನ ದಂಡ ವಿಧಿಸಬೇಕು. ಶಾಲಾ ಕಾಲೇಜುಗಳಿಗೂ ಸೂಚನೆ ನೀಡಬಹುದು. ಇದನ್ನು ಕಟ್ಟುನಿಟ್ಟು ಮಾಡದೇ ಹೋದಲ್ಲಿ ಮುಂದೆ ಐದನೇ ತರಗತಿಯ ಮಗು ಗಾಡಿ ಕೇಳಿದರೆ, ಹೆತ್ತವರು ಕೊಡಿಸಿದರೆ ಏನೂ ಅಚ್ಚರಿಯಿಲ್ಲ. ಆದರೆ ಅವರ ಬದುಕು ಹೊಸಕಿ ಹೋದರೆ ಅದರ ಹೊಣೆಗಾರಿಕೆ ಯಾರದ್ದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT