ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬಲ್ ಕಣ್ಣಿನಲ್ಲಿ ನಿಹಾರಿಕೆಯ ‘ಮಿಡಿವ ಹೃದಯ’

Last Updated 14 ಜುಲೈ 2016, 20:02 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕ್ರ್ಯಾಬ್ ನೆಬ್ಯುಲಾದ (ಏಡಿ ಆಕಾರದ ನಿಹಾರಿಕೆ)  ಕೇಂದ್ರ ಭಾಗದ ವಿವರವಾದ ಚಿತ್ರವನ್ನು ನಾಸಾದ ಹಬಲ್ ದೂರದರ್ಶಕ ಸೆರಹಿಡಿದಿದೆ. ನಿಹಾರಿಕೆಯ ಕೇಂದ್ರದಲ್ಲಿರುವ ನ್ಯೂಟ್ರಾನ್ ನಕ್ಷತ್ರದ ದ್ರವ್ಯರಾಶಿ ಸೂರ್ಯನಷ್ಟೇ ಇದೆ. ಆದರೆ ನ್ಯೂಟ್ರಾನ್ ನಕ್ಷತ್ರದ ವ್ಯಾಸ ಕೆಲವೇ ಕಿ.ಮೀಗಳಷ್ಟು ಗಾತ್ರಕ್ಕೆ ಕುಗ್ಗಿಹೋಗಿದೆ.

ನ್ಯೂಟ್ರಾನ್ ನಕ್ಷತ್ರ ಪ್ರತೀ ಸೆಕೆಂಡ್‌ನಲ್ಲಿ  ತನ್ನ ಸುತ್ತಲೇ 30 ಬಾರಿ ಸುತ್ತುತ್ತದೆ. ಇಷ್ಟು ಪ್ರಚಂಡ ವೇಗದಲ್ಲಿ ಸುತ್ತುವುದರಿಂದ ಅದರಿಂದ ವಿಕಿರಣಗಳು ಮತ್ತು ಕಾಂತೀಯ ಕಣಗಳ ಅಲೆಗಳು ಸದಾ ಹೊಮ್ಮುತ್ತಲೇ ಇರುತ್ತವೆ. ಇದು ಹೃದಯ ಮಿಡಿದಂತೆ ಕಾಣುತ್ತದೆ.

ಕ್ರ್ಯಾಬ್ ನಿಹಾರಿಕೆಯ ನ್ಯೂಟ್ರಾನ್  ನಕ್ಷತ್ರದ ಸುತ್ತ ಹರಡಿರುವ ದೂಳು, ಅವಶೇಷಗಳನ್ನು ಹಬಲ್ ದೂರದರ್ಶಕ ಸೆರೆಹಿಡಿದಿದೆ. ಚಿತ್ರದ ಅಂಚಿನ ಭಾಗದಲ್ಲಿ ಕೆಂಬಣ್ಣದ ಮೋಡಗಳು ಚದುರಿಹೋಗುತ್ತಿರುವುದು ಕಾಣುತ್ತದೆ.

ಈ ಮೋಡಗಳ ನಡುವಿನ ಪ್ರದೇಶ ಕೊರಕಲಿನಂತೆ ಕಾಣುತ್ತದೆ. ಈ ಮೋಡಗಳಲ್ಲಿ ವಿದ್ಯುತ್‌ಕಾಂತೀಯ ತಂತುಗಳು ರೂಪುಗೊಳ್ಳುತ್ತವೆ. ಈ ತಂತುಗಳು ವಿದ್ಯುತ್‌ ಬಲ್ಬ್‌ಗಳಲ್ಲಿರುವ ತಂತುಗಳಂತೆಯೇ ಕೆಲಸ ಮಾಡುತ್ತವೆ. ಹೀಗಾಗಿ ಈ ಭಾಗ ಕೆಂಪಗೆ ಪ್ರಜ್ವಲಿಸುತ್ತಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಇದರ ಒಳಭಾಗದಲ್ಲಿ ನೀಲಿ ಬಣ್ಣದ ಮೋಡಗಳು ಬಹಳ ಒತ್ತಾಗಿ ಕೂಡಿಕೊಂಡಿದ್ದು, ಹೊಳೆಯುತ್ತಿವೆ. ಬೆಳಕಿನ ವೇಗದಲ್ಲಿ ಎಲೆಕ್ಟ್ರಾನ್‌ಗಳು ಇಲ್ಲಿ ಸುತ್ತುತ್ತಿರುವುದರಿಂದ ಈ ಭಾಗದಲ್ಲಿ ಪ್ರಬಲ ಕಾಂತೀಯ ವಲಯ ರೂಪುಗೊಂಡಿರುತ್ತದೆ.

ನೀಲಿ ಮೋಡಗಳ ಒಳಭಾಗದಲ್ಲಿ ಉಂಗುರದಂತೆ ಕಾಣುವ ಬಿಳಿ ವಸ್ತುಗಳು  ನ್ಯೂಟ್ರಾನ್‌ ನಕ್ಷತ್ರದಿಂದ ಹೊರ ಹೊಮ್ಮುತ್ತಿರುವ ವಿದ್ಯುತ್‌ಕಾಂತೀಯ ತರಂಗಗಳಾಗಿವೆ. ಹಬಲ್‌ ಸೆರೆಹಿಡಿದಿರುವ ಚಿತ್ರದಲ್ಲಿ ಈ ಎಲ್ಲಾ ವಿವರಗಳನ್ನು ಸ್ಪಷ್ಟವಾಗಿ ಕಾಣಬಹುದು ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ನ್ಯೂಟ್ರಾನ್ ನಕ್ಷತ್ರಗಳು ಹೊರಹೊಮ್ಮಿಸುವ ವಿಕಿರಣ ಮತ್ತು ಕಾಂತೀಯ ಕಣಗಳ ಅಲೆಗಳನ್ನು 1968ರಲ್ಲಿ ಮೊದಲ ಬಾರಿ ಪತ್ತೆ ಮಾಡಲಾಗಿತ್ತು. ಆಗ ಅವನ್ನು ಒಂದು ಪ್ರತ್ಯೇಕ ಬಾಹ್ಯಾಕಾಶ ವಸ್ತು ಎಂದೇ ಭಾವಿಸಲಾಗಿತ್ತು. ಆದರೆ ಅವು ನ್ಯೂಟ್ರಾನ್‌ ನಕ್ಷತ್ರಗಳು ಎಂದು ನಂತರದ ದಿನಗಳಲ್ಲಿ ವಿಜ್ಞಾನಿಗಳು ವಿವರಣೆ ನೀಡಿದರು.
ನೆಬ್ಯುಲಾ ಸಾಮಾನ್ಯ ದೂರದರ್ಶಕದಿಂದಲೂ ಗುರುತಿಸಬಹುದಾದಷ್ಟು ಪ್ರಕಾಶಮಾನವಾಗಿದೆ.

ನಿಹಾರಿಕೆಗೂ ಮುನ್ನ: ದೈತ್ಯ ನಕ್ಷತ್ರವೊಂದರ ಜೀವಿತಾವಧಿ  ಅಂತ್ಯವಾಗುವುದು ‘ಸೂಪರ್‌ನೋವಾ’ ಮೂಲಕ. ಸೂಪರ್‌ನೋವಾ ಪ್ರಕ್ರಿಯೆಯಲ್ಲಿ ನಕ್ಷತ್ರ  ಭಾರಿ ಒತ್ತಡದಲ್ಲಿ ಸ್ಫೋಟಗೊಳ್ಳುತ್ತದೆ. ಬಾಹ್ಯಾಕಾಶದಲ್ಲಿ ನಡೆಯುವ ಅತ್ಯಂತ ದೊಡ್ಡ ಸ್ಫೋಟ ಇದು.

ಸ್ಫೋಟದಲ್ಲಿ ನಕ್ಷತ್ರದ ಎಲ್ಲಾ ಭಾಗಗಳು ಉರಿದು ಹೋಗುತ್ತವೆ. ಆಗ ಉಳಿದ  ದೂಳು ನಕ್ಷತ್ರದ ಗುರುತ್ವ ಕೇಂದ್ರದಲ್ಲಿ ಕುಗ್ಗಿಹೋಗುತ್ತದೆ. ಇದೇ ನಿಹಾರಿಕೆ. ಇದು ಒಂದು ದೂಳಿನ ಮೋಡ. ಆದರ ಕೇಂದ್ರದಲ್ಲಿರುವ ಪ್ರೋಟಾನ್ ಮತ್ತು ಎಲೆಕ್ಟ್ರಾನ್‌ಗಳ ಪ್ರಕ್ರಿಯೆಯಿಂದಾಗಿ ನ್ಯೂಟ್ರಾನ್ ನಕ್ಷತ್ರ ರೂಪುಗೊಳ್ಳುತ್ತದೆ. ನಂತರ ನ್ಯೂಟ್ರಾನ್ ನಕ್ಷತ್ರ ವಿಭಜನೆಯಾಗುತ್ತಾ ನಕ್ಷತ್ರ ಸಾಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT