ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬಕೆ ಕಿಲ್ಲೆಗಳ ಸ್ವಾಗತ

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ, ಅಥಣಿ ಮತ್ತು ರಾಯಬಾಗ ತಾಲ್ಲೂಕುಗಳ ಗಡಿಗ್ರಾಮಗಳ  ಗಲ್ಲಿಗಲ್ಲಿಗಳಲ್ಲಿ ಈಗ ಕೋಟೆಗಳದ್ದೇ ಕಾರುಬಾರು. ಎಲ್ಲಿ ನೋಡಿದರೂ ಕೋಟೆ ಕಟ್ಟುವಲ್ಲಿ ಒಂದಿಷ್ಟು ಜನರು ತಲ್ಲೀನ. ಎಲ್ಲ ಕಿಲ್ಲೆಗಳಲ್ಲೂ ಆಳರಸರು ದರ್ಬಾರು ಮಾಡುತ್ತಿದ್ದಾರೆ, ಸುತ್ತಲೂ ಸೈನಿಕರು ಪಹರೆ ಕಾಯುತ್ತಿದ್ದಾರೆ. ಈ ಕೋಟೆಗಳನ್ನು ಇನ್ನಷ್ಟು ಸುಂದರವಾಗಿಸಲು ಸುತ್ತಮುತ್ತ ಗಿಡಗಳನ್ನು ನೆಡಲಾಗುತ್ತಿದೆ. ಹೊಲಗದ್ದೆಗಳೂ ಈಗಾಗಲೇ ಬೆಳೆದು ನಿಂತಿವೆ, ಕೋಟೆಯ ಇಡೀ ಪರಿಸರ ವಿದ್ಯುತ್  ದೀಪಗಳಿಂದ ಝಗಮಗಿಸುತ್ತಿದೆ..!

ರಾಜ ಮಹಾರಾಜರ ಕಾಲ ಎಂದೋ ಕಣ್ಮರೆಯಾಗಿರುವಾಗ ಇಲ್ಲೇಕೆ ಇನ್ನೂ ಅದು ಜೀವಂತವಾಗಿದೆ ಎಂದು ಅಚ್ಚರಿಯಾಯಿತೆ? ಇದು ಇನ್ನೇನು ಕಾಲಿಡಲಿರುವ ದೀಪಾವಳಿ ಝಲಕ್‌. ಇಲ್ಲಿ ಕೋಟೆ ನಿರ್ಮಿಸುತ್ತಿರುವವರು ಆಳುಕಾಳುಗಳಲ್ಲ, ಬದಲಿಗೆ ಪುಟಾಣಿಗಳು.
ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದ  ಸಂಸ್ಕೃತಿಗಳು ಮೇಳೈಸಿರುವ ರಾಜ್ಯದ ಗಡಿಭಾಗದಲ್ಲಿ ಮಕ್ಕಳು ಕಿಲ್ಲೆಗಳ ಮಾದರಿಯನ್ನು ನಿರ್ಮಿಸುವ ಮೂಲಕ ದೀಪಾವಳಿ ಹಬ್ಬವನ್ನು ವೈವಿಧ್ಯಮಯವಾಗಿ ಆಚರಿಸುತ್ತಾ ಬಂದಿರುವ ಪರಿ ಇದು.

ದಸರೆ ಹಬ್ಬ ಮುಗಿಯುತ್ತಿದ್ದಂತೆಯೇ ಕೋಟೆ ನಿರ್ಮಿಸಲು ಆರಂಭಿಸುವ ಮಕ್ಕಳು ದೀಪಾವಳಿ ಬರುವಷ್ಟರಲ್ಲಿ ಕೋಟೆಗಳನ್ನು ಸಿದ್ಧಪಡಿಸಿ ಶೃಂಗಾರಗೊಳಿಸಿ ಸಂಭ್ರಮಿಸುತ್ತಾರೆ. ಅಂದು ರಾಜ–ಮಹಾರಾಜರು ಶತ್ರುಗಳಿಂದ ರಕ್ಷಣೆ ಪಡೆಯಲು ನಿರ್ಮಿಸಿದ ಕೋಟೆಗಳ ಮಾದರಿಯನ್ನೇ ಹೋಲುವ ಚಿಕ್ಕ ಚಿಕ್ಕ ಕಿಲ್ಲೆಗಳು ಬೀದಿ ಬೀದಿಗಳಲ್ಲಿ ನಿರ್ಮಾಣಗೊಳ್ಳುತ್ತಿದೆ. ತಮ್ಮ ತಮ್ಮ ಕಲ್ಪನೆಯ ಮೂಸೆಯಿಂದ ಕಿಲ್ಲೆಗಳನ್ನು ನಿರ್ಮಿಸುವ ಮಕ್ಕಳು, ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುತ್ತಾರೆ. ಹಲವು ಕಿಲ್ಲೆಗಳನ್ನು ನೋಡಿದಾಗ, ಮಕ್ಕಳ ಪರಿಕಲ್ಪನೆಯ ಬಗ್ಗೆ ನಿಜಕ್ಕೂ ಅಚ್ಚರಿಯಾಗುತ್ತದೆ. ಅಂಥ ಅದ್ಭುತ ಕಲೆ ಅಲ್ಲಿ ಮೈದಳೆದಿರುತ್ತದೆ.

ಓಣಿಯ ಹತ್ತಾರು ಮಕ್ಕಳು ಗುಂಪು ಕಟ್ಟಿಕೊಂಡು ಅಲ್ಲಿಂದ–ಇಲ್ಲಿಂದ ಕಲ್ಲು ಮಣ್ಣು,ಇಟ್ಟಿಗೆಗಳನ್ನು ಕೂಡಿಹಾಕಿ ಅದರಿಂದ ಕೋಟೆಗಳ ಪ್ರತಿಕೃತಿಯನ್ನು ನಿರ್ಮಿಸುತ್ತಾರೆ. ಕೋಟೆಯ ಪ್ರವೇಶ ದ್ವಾರ, ಈಜುಗೊಳ, ಸುರಂಗ ಮಾರ್ಗ, ಬುರುಜುಗಳೂ ಅಲ್ಲಿ ನಿರ್ಮಾಣವಾಗುತ್ತವೆ. ಈ ಕೋಟೆಯ ಪ್ರತಿಕೃತಿಗಳಿಗೆ ಸುಣ್ಣ ಬಣ್ಣವನ್ನೂ ಬಳಿಯುತ್ತಾರೆ. ಕೋಟೆಯ ನೆತ್ತಿಯ ಮೇಲೆ ದೊರೆ (ಶಿವಾಜಿ ಮಹಾರಾಜರು)ಯ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಸುತ್ತಮುತ್ತ ಆಯಕಟ್ಟಿನ ಸ್ಥಳಗಳಲ್ಲಿ ಸೈನಿಕರ ಮೂರ್ತಿಗಳನ್ನು ನಿಲ್ಲಿಸುತ್ತಾರೆ. ಕೋಟೆಯ ಆವರಣದಲ್ಲಿ ಗೋಧಿ, ಕಡಲೆ, ಗೋವಿನ ಜೋಳ, ಹುಲ್ಲು ಮುಂತಾದ ಸಸಿಗಳನ್ನು ಬೆಳೆಸಿ ಕೋಟೆ ಸುತ್ತಲಿನ ಪರಿಸರವನ್ನು ಹಸಿರೀಕರಣಗೊಳಿಸುತ್ತಾರೆ.

ಸಲೈನ್ ಪೈಪ್‌ಗಳನ್ನು ಬಳಸಿಕೊಂಡು ಕಾರಂಜಿಗಳನ್ನು ಮಾಡಿ ಸಿಂಗಾರಗೊಳಿಸುತ್ತಾರೆ. ಸಂಜೆಯಾಗುತ್ತಿದ್ದಂತೆಯೇ ಕೋಟೆಯ ಸುತ್ತಮತ್ತ ರಂಗವಲ್ಲಿಯ ಚಿತ್ತಾರಗಳನ್ನು ಬಿಡಿಸಿ, ವಿದ್ಯುತ್ ದೀಪಾಂಲಕಾರ ಮಾಡಿ ಸಡಗರ ಪಡುತ್ತಾರೆ. ಅಲ್ಲದೇ ಐತಿಹಾಸಿಕ ಘಟನೆಗಳ ಸನ್ನಿವೇಶಗಳ ರೂಪಕಗಳ ಪ್ರದರ್ಶಿಸುವ ಮೂಲಕ ಗಮನ ಸೆಳೆಯುತ್ತಾರೆ. ಮಕ್ಕಳು ಕಟ್ಟಿದ ಕಿಲ್ಲೆಗಳ ಅಂದಚೆಂದ ನೋಡಲು  ಜನ ತಂಡೋಪತಂಡವಾಗಿ ಬರುವುದು ಉಂಟು. ಕೆಲವು ಕಡೆಗಳಲ್ಲಿ ಕಿಲ್ಲೆ ಮಾದರಿ ನಿರ್ಮಾಣ ಮತ್ತು ಅಲಂಕಾರಕ್ಕೆ ತಗಲುವ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಸಾರ್ವಜನಿಕರಿಂದ ಚಂದಾ ಎತ್ತುತ್ತಾರೆ.

ಯಾಕೀ ಪರಿಕಲ್ಪನೆ...
ಮಕ್ಕಳಲ್ಲಿ ದೇಶಾಭಿಮಾನ, ಇತಿಹಾಸದ ಅರಿವು ಮೂಡಿಸುವ ಜೊತೆಗೆ ಅವರಲ್ಲಿ ಅಡಗಿರುವ ಸೃಜನಶೀಲತೆಯನ್ನು ಹೊರಹೊಮ್ಮಿಸುವ ಉದ್ದೇಶದಿಂದ ಕೋಟೆಗಳ ಪ್ರತಿಕೃತಿ ನಿರ್ಮಾಣ ಪರಿಕಲ್ಪನೆ ಬೆಳೆದುಕೊಂಡು ಬಂದಿದೆ. ಐತಿಹಾಸಿಕ ಕೋಟೆಗಳು ರಾಜರ ಶಕ್ತಿಕೇಂದ್ರಗಳೂ ಆಗಿವೆ. ಶಿವಾಜಿ ಮಹಾರಾಜರ ಯುದ್ಧನೀತಿಯ ಪ್ರತೀಕವಾಗಿರುವ ಕೋಟೆಗಳ ಮಾದರಿಗಳನ್ನು ನಿರ್ಮಿಸುವ ಮೂಲಕ ಮಕ್ಕಳಲ್ಲಿ ಸುರಕ್ಷತೆಯ ಬಗೆಗೆ ಅರಿವಿನ ಜೊತೆಗೆ ರಚನಾತ್ಮಕ ಮನೋಭಾವ ವೃದ್ಧಿಯಾಗುತ್ತದೆ.

ಈ ಭಾಗದಲ್ಲಿ ಕೋಟೆಗಳ ಮಾದರಿ ನಿರ್ಮಾಣ ಯಾವಾಗಿನಿಂದ ಆರಂಭಗೊಂಡಿತ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೇ ಹೋದರೂ ಶತಮಾನದ ಇತಿಹಾಸವಿದೆ. ದಸರೆ, ದೀಪಾವಳಿಗಾಗಿ ಶಾಲೆಗಳಿಗೂ ರಜೆ ಇರುತ್ತದೆ. ಮನೆಯಲ್ಲಿ ಮಹಿಳೆಯರೂ ಹಬ್ಬದ ತಿಂಡಿ ತಿನಿಸು ತಯಾರಿಸುವಲ್ಲಿ ತಲ್ಲೀನರಾಗಿರುತ್ತಾರೆ. ಇತ್ತ ಬೀದಿಯ ಮಕ್ಕಳೆಲ್ಲ ಸೇರಿಕೊಂಡು ತಮ್ಮದೇ ಆದ ಪರಿಕಲ್ಪನೆಯಲ್ಲಿ ಕೋಟೆಗಳ ಮಾದರಿಯನ್ನು ನಿರ್ಮಿಸುವಲ್ಲಿ ತೊಡಗಿಸಿಕೊಳ್ಳುತ್ತಾರೆ.

ಸ್ಪರ್ಧೆಗಳ ಆಯೋಜನೆ
ಇತ್ತೀಚಿನ ವರ್ಷಗಳಲ್ಲಿ ಕೋಟೆ ಮಾದರಿಗಳ ನಿರ್ಮಾಣ ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಬರುತ್ತಿದೆ. ಮಕ್ಕಳು ಪೈಪೋಟಿಗಿಳಿದು ಥೇಟ್‌ ಹಳೆಯ ಕೋಟೆಗಳನ್ನೇ ಹೋಲುವ ರೀತಿಯಲ್ಲಿ ಕಿಲ್ಲಾ ಪ್ರತಿಕೃತಿ ಕಟ್ಟುತ್ತಾರೆ. ಅತ್ಯುತ್ತಮ ಕೋಟೆ ಮಾದರಿಗಳ ನಿರ್ಮಾಣವನ್ನು ಪ್ರೇರೇಪಿಸುವ ಉದ್ದೇಶದಿಂದ ವಿವಿಧ ಸಂಘ ಸಂಸ್ಥೆಗಳು ಮಕ್ಕಳಿಗಾಗಿಯೇ ಸ್ಪರ್ಧೆಯನ್ನೂ ಏರ್ಪಡಿಸುತ್ತವೆ. ಪ್ರಸಕ್ತ ವರ್ಷ ಚಿಕ್ಕೋಡಿಯಲ್ಲಿ ಐಸಿಬಿ ಸ್ಥಳೀಯ ಸುದ್ದಿವಾಹಿನಿ ಸುಮಾರು ₨ 25 ಸಾವಿರ ಬಹುಮಾನ ಘೋಷಿಸಿದೆ.

ಕೆಲವು ಕಡೆಗಳಲ್ಲಿ ಕಿಲ್ಲೆ ಮಾದರಿ ನಿರ್ಮಾಣ ಮತ್ತು ಅಲಂಕಾರಕ್ಕೆ ತಗಲುವ ಖರ್ಚುವೆಚ್ಚಗಳನ್ನು ಸರಿದೂಗಿಸಲು ಸಾರ್ವಜನಿಕರಿಂದ ಚಂದಾ ಎತ್ತುತ್ತಾರೆ. ಚಿಕ್ಕಂದಿನಲ್ಲೇ ಕೋಟೆ ನಿರ್ಮಿಸುವ ಮಕ್ಕಳು ಭವಿಷ್ಯದಲ್ಲಿ ಸುಭದ್ರ ದೇಶ ಕಟ್ಟುವ ಪ್ರತಿಭಾವಂತರಾಗಿ ಹೊರಹೊಮ್ಮಲಿ ಎನ್ನುವುದು ಎಲ್ಲರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT