ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣದಲ್ಲೂ ಮೋದಿ ಅಲೆ...

ಕಾಂಗ್ರೆಸ್‌ ಸರ್ಕಾರಕ್ಕೆ ಮುಳುವಾದ ಭೂಹಗರಣದ ಕಳಂಕ
Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಚಂಡೀಗಡ: ಹರಿಯಾಣದಲ್ಲಿ ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್‌ ಪಕ್ಷವನ್ನು ನೆಲಕಚ್ಚಿಸುವ ಮೂಲಕ ಬಿಜೆಪಿ ಈ ರಾಜ್ಯದ ಚುನಾ­ವಣಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ೯೦ ಸದಸ್ಯ ಬಲದ ವಿಧಾನಸಭೆ­ಯಲ್ಲಿ  ಬಿಜೆಪಿ ೪೭ ಸ್ಥಾನಗಳಲ್ಲಿ ಜಯ­ಗಳಿಸಿದೆ. ಇದೇ ಮೊದಲ ಬಾರಿ ಪಕ್ಷವು ಇಲ್ಲಿ ಮಿತ್ರಪಕ್ಷಗಳ ಬೆಂಬಲವಿಲ್ಲದೇ ಸ್ವಂತ ಬಲದಿಂದ ಸರ್ಕಾರ ರಚಿಸಲಿದೆ.

ಐದು ವರ್ಷಗಳ ಹಿಂದಿನವರೆಗೂ ಕೇವಲ ಶೇ ೯ರಷ್ಟು ಮತ ಬೆಂಬಲ ಪಡೆಯಲು ಹೆಣಗಾಡಿದ್ದ ಪಕ್ಷವು  ಈ ಸಲ  ಶೇ ೩೩.೨ಕ್ಕಿಂತಲೂ ಹೆಚ್ಚು  ಮತಗಳನ್ನು ಪಡೆಯುವಲ್ಲಿ ಯಶ ಕಂಡಿದೆ. ಇದು ಮೋದಿ ಅಲೆಯ ಪರಿಣಾಮ. ಮೋದಿ ಕೇಂದ್ರಿತ ಬಿಜೆಪಿ ಚುನಾವಣಾ ಪ್ರಚಾರದಿಂದಾಗಿ ನಗರ ಪ್ರದೇಶದ ಮತಗಳು ದೊಡ್ಡ ಸಂಖ್ಯೆಯಲ್ಲಿ ಧ್ರುವೀಕರಣ­ಗೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ವರದಾನವಾಯಿತು. ಬಹುಸಂಖ್ಯಾತ ಜಾಟರ ಮತ ವಿಭಜನೆ ಕೂಡ ಪಕ್ಷಕ್ಕೆ ಲಾಭವಾಯಿತು. 

ಹರಿಯಾಣದಲ್ಲಿ ಸಿಖ್ಖರ ಓಲೈಕೆಗೆ ಕಾಂಗ್ರೆಸ್‌ ಮಾಡಿದ್ದ ಕಾರ್ಯತಂತ್ರ ಕೈಗೂಡಲಿಲ್ಲ. ಗುರುದ್ವಾರ ನಿರ್ವ­ಹಣೆಗೆ ಪ್ರತ್ಯೇಕ ಸಮಿತಿ ರಚಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಇದುವರೆವಿಗೂ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಐಎನ್‌­ಎಲ್‌ಡಿ ಸಾಂಪ್ರ­ದಾಯಿಕ ಎದುರಾಳಿಗಳಾಗಿ­ದ್ದವು. ಇದೇ ಮೊದಲ ಸಲ ಬಿಜೆಪಿಯು ಮತದಾರರಿಗೆ ಪರ್ಯಾಯ ಆಯ್ಕೆಯಾಗಿ ಕಂಡಿದೆ.

ಮೋದಿ ಅಲೆಯ ಜತೆಗೆ ದಶಕಗಳ ಆಡಳಿತ ವಿರೋಧಿ ಅಲೆ ಹಾಗೂ ಭೂಹಗರಣ­ಗಳ ಕಳಂಕ­ಗಳು ಭೂಪಿಂದರ್‌ ಸಿಂಗ್‌ ಹೂಡಾ ನೇತೃತ್ವದ ಕಾಂಗ್ರೆಸ್‌ ಪಕ್ಷದ ಹೀನಾಯ ಸೋಲಿಗೆ ಕಾರಣವಾದವು. ಇದ­ರಿಂದಾಗಿ ಪಕ್ಷದ ಬಲ ಹಿಂದಿದ್ದ ೪೦ರಿಂದ ಕೇವಲ ೧೫ಕ್ಕೆ ಇಳಿದಿದೆ.  

ಮೋದಿ ಅಲೆ ಇದ್ದರೂ ಸುಷ್ಮಾ ಸ್ವರಾಜ್‌ ಅವರ ಸಹೋದರಿ ವಂದನಾ ಶರ್ಮಾ ಅವರು  ಸಫಿದಾನ್‌ ಕ್ಷೇತ್ರ­ದಲ್ಲಿ ಸೋಲು ಕಂಡಿರುವುದು ವಿಪ­ರ್ಯಾಸ. ಈ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಜಸ್‌ಬೀರ್‌ ದೇಸ್ವಾಲ್‌ ಪಾಲಾಗಿದೆ. ಹರಿಯಾಣದಲ್ಲಿ ಪ್ರಮುಖ ವಿರೋಧ-­­­ಪಕ್ಷವಾಗಿರುವ ಐಎನ್‌­ಎಲ್‌ಡಿ ಸ್ಥಿತಿ ಕೂಡ ಕಾಂಗ್ರೆಸ್‌ಗಿಂತ ಭಿನ್ನವಿಲ್ಲ. ೨೦೦೯ರ ಚುನಾವಣೆಯಲ್ಲಿ ೩೧ ಸ್ಥಾನ ಗಳಿಸಿದ್ದ ಪಕ್ಷ ಈ ಬಾರಿ ೧೯ ಸ್ಥಾನಗಳಿಗೆ ಸಮಾಧಾ­ನಪಟ್ಟುಕೊಳ್ಳ­ಬೇಕಾಗಿದೆ. ಹತ್ತು ವರ್ಷಗಳಿಂದ ಅಧಿ­ಕಾರ ವಂಚಿತವಾಗಿರುವ ಈ ಪಕ್ಷದ ಪ್ರಸ್ತು­ತತೆಯೇ ಈಗ ಪ್ರಶ್ನೆಗೆ ಒಳಪಟ್ಟಿದೆ.

ಜೈಲಿನಲ್ಲಿರುವ ತನ್ನ ಮುಖಂಡ ಓಂ ಪ್ರಕಾಶ್‌ ಚೌತಾಲಾ ಹೆಸರು ಮುಂದಿ­ಟ್ಟು­ಕೊಂಡು ಅನುಕಂಪದ ಅಲೆಯ ಮೇಲೆ ಲಾಭ ಪಡೆಯಬೇಕೆನ್ನುವುದು ಪಕ್ಷದ ಕಾರ್ಯತಂತ್ರವಾಗಿತ್ತು. ಆದರೆ ಆ ಲೆಕ್ಕಾಚಾರ ಬುಡಮೇಲಾಗಿದೆ. ಚೌತಾಲಾ ಅವರ ಮೊಮ್ಮಗ ದುಷ್ಯಂತ್‌ ಚೌತಾಲಾ ಹಾಗೂ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಅಶೋಕ್‌ ಅರೋರಾ ಸೇರಿದಂತೆ ಘಟಾನುಘಟಿ ಮುಖಂಡರೆಲ್ಲ ಸೋತಿರುವುದು ಪಕ್ಷಕ್ಕೆ ತೀವ್ರ ಹೊಡೆತ ನೀಡಿದೆ. ಕುಲ್‌ದೀಪ್‌ ಬಿಷ್ಣೋಯಿ ನೇತೃತ್ವದ ಹರಿಯಾಣ ಜನಹಿತ ಕಾಂಗ್ರೆಸ್‌ ಪಕ್ಷವನ್ನೂ (ಎಚ್‌ಜೆಸಿ) ಮತದಾರರು ತಿರಸ್ಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT