ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಗೆ ಸದ್ದು; ಬಣ್ಣದ ಗುದ್ದು

Last Updated 6 ಮಾರ್ಚ್ 2015, 7:09 IST
ಅಕ್ಷರ ಗಾತ್ರ

ಶಿರಸಿ: ಹಲಗೆ ವಾದ್ಯದ ಸದ್ದು, ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸುವ ಮೂಲಕ ಇಡೀ ನಗರ ಗುರುವಾರ ಹೋಳಿಹಬ್ಬವನ್ನು ಆಚರಿಸಿತು.

ಶಿರಸಿಗರಿಗೆ ರಂಗಿನ ಓಕುಳಿಯಾಟದ ಖುಷಿ ಸಿಗುವುದು ಎರಡು ವರ್ಷಕ್ಕೊಮ್ಮೆ ಮಾತ್ರ. ಮಾರಿಕಾಂಬಾ ಜಾತ್ರೆಯ ವರ್ಷ ಇಲ್ಲಿ ಹೋಳಿ ಆಚರಣೆಯ ಪದ್ಧತಿ ಇಲ್ಲ. ಹೀಗಾಗಿ ಎರಡು ವರ್ಷಗಳ ನಂತರ ಮತ್ತೊಮ್ಮೆ ಬಂದ ಹೋಳಿ ಹಬ್ಬದಂದು ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡು ಜನರು ಖುಷಿ ಅನುಭವಿಸಿದರು.

ನಸುಕಿನಿಂದಲೇ ಪ್ರಾರಂಭವಾದ ರಂಗಿನಾಟ ಮಧ್ಯಾಹ್ನವಾಗುತ್ತಿದ್ದಂತೆ ಉತ್ತುಂಗಕ್ಕೆ ತಲುಪಿತು. ದೇವಿಕೆರೆ, ಬಸ್‌ ನಿಲ್ದಾಣ ವೃತ್ತ, ಮಾರಿಗುಡಿ ವೃತ್ತಗಳಲ್ಲಿ ನೂರಾರು ಜನ ಸೇರಿ ಸಾಮೂಹಿಕ ಸಡಗರದಲ್ಲಿ ಪಾಲ್ಗೊಂಡರು. ಪುಟ್ಟ ಮಕ್ಕಳು ಪಿಚಕಾರಿ ಹಿಡಿದು ಸಹಪಾಠಿಗಳೊಂದಿಗೆ ರಂಗಿನಾಟ ಆಡಿದರು. ಮರೆಯಲ್ಲಿ ಅಡಗಿ ನಿಂತು ದಾರಿಹೋಕರ ಮೇಲೆ ಬಣ್ಣ ಚೆಲ್ಲಿ ಕೇಕೆ ಹಾಕಿದರು. ಇದರಲ್ಲಿ ಮಹಿಳೆಯರೂ ಹಿಂದೆ ಬೀಳಲಿಲ್ಲ. ರಸ್ತೆಯಲ್ಲಿ ಸಾಗುವವರನ್ನು ಅಡ್ಡಗಟ್ಟಿ ರಂಗಿನ ನೀರು ಸುರಿದರು !

ಮಧ್ಯಾಹ್ನ ಕಾಮದಹನ ಮಾಡುವ ಮೂಲಕ ಹೋಳಿಹಬ್ಬಕ್ಕೆ ನಾಲ್ಕು ದಿನ ಮೊದಲು ಪ್ರಾರಂಭವಾಗಿದ್ದ ಬೇಡರ ವೇಷ ಪ್ರದರ್ಶನಕ್ಕೆ ತೆರೆಬಿತ್ತು. ವಿಶಿಷ್ಟ ಜಾನಪದ ಶೈಲಿಯ ಬೇಡನ ನರ್ತನ ನೋಡಲು ರಾಜ್ಯದ ವಿವಿಧ ಭಾಗಗಳಿಂದ ಜನರು ಆಗಮಿಸಿದ್ದರು. ಬೇರೆ ಬೇರೆ ಗಲ್ಲಿಗಳ 12ಕ್ಕೂ ಹೆಚ್ಚು ತಂಡಗಳು ಬುಧವಾರ ರಾತ್ರಿ ಬೇಡರ ವೇಷ ಪ್ರದರ್ಶನ ನೀಡಿದವು.

ಬೆಳಗಿನ ಜಾವ 3 ಗಂಟೆ ಕಳೆದರೂ ಬಸ್‌ನಿಲ್ದಾಣ, ದೇವಿಕೆರೆ ವೃತ್ತಗಳಲ್ಲಿ ಜನದಟ್ಟಣಿ ಕಡಿಮೆಯಾಗಲಿಲ್ಲ. ಜನರು ಕುತೂಹಲದಿಂದ ಕಾದು ಬೇಡನ ರೌದ್ರನರ್ತನ, ಅದರೊಂದಿಗೆ ಸಾಗಿ ಬರುವ ಬಂಡಿಚಿತ್ರಗಳನ್ನು ವೀಕ್ಷಿಸಿದರು. ಮಧ್ಯಾಹ್ನದವರೆಗೆ ಎಲ್ಲೆಲ್ಲೂ ಹಲಗೆ ಬಡಿತದ ಸದ್ದಿನ ಅಬ್ಬರವಿದ್ದ ನಗರದಲ್ಲಿ ಮಧ್ಯಾಹ್ನದ ನಂತರ ಅಘೋಷಿತ ರಜೆಯ ವಾತಾವರಣವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT