ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಕಿಡಿಗಳ ‘ರಾಜಮಾರ್ಗ’

ಅಂಕದ ಪರದೆ
Last Updated 5 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಲೇಖಕ, ಕಾದಂಬರಿಕಾರ, ನಟ ಹಾಗೂ ನಾಟಕಕಾರ ಯೋಗೇಶ್‌ ಮಾಸ್ಟರ್ ಅವರ ‘ರಾಜಮಾರ್ಗ’ ಕಲಾ ಸಂಸ್ಕೃತಿ ಒಡಮೂಡಿದ್ದು ಅನೇಕ ತಂಡಗಳ ಒಡನಾಟದಿಂದ. ಪ್ರಾರಂಭದಲ್ಲಿ ‘ಫಿಲೋಥೆಯಾ ಫೌಂಡೇಶನ್’ ಎಂದು ಪ್ರಾರಂಭವಾದ ‘ರಾಜಮಾರ್ಗ’, ಕಾಲಕಾಲಕ್ಕೆ ತನ್ನ ಧ್ಯೇಯ ಮತ್ತು ಧೋರಣೆಗಳನ್ನು ಬದಲಿಸುತ್ತಾ ‘ಸೋಹಂ ಅಕಾಡೆಮಿ’, ‘ಲಲಿತಾ’, ‘ಅವನಿ’ ಇತ್ಯಾದಿ ಹೆಸರುಗಳಲ್ಲಿ ತನ್ನ ಸ್ವರೂಪ ಮತ್ತು ಕಾರ್ಯಶೈಲಿಯನ್ನು ಬದಲಿಸಿಕೊಳ್ಳುತ್ತಾ ಬಂದಿದೆ.

‘ಫಿಲೋಥಿಯಾ ಫೌಂಡೇಶನ್’ ಆಗಿದ್ದಾಗ ಆಧ್ಯಾತ್ಮಿಕ ಗ್ರಂಥಗಳ ಸಾರವನ್ನು ಸಾಮಾನ್ಯರಿಗೆ ಮುಟ್ಟಿಸಲು ರಂಗಪ್ರಯೋಗಗಳನ್ನು ಮಾಡುತ್ತಿತ್ತು. ‘ಸೋಹಂ’ ಆದಾಗ ಸಕಾರಾತ್ಮಕ ಧೋರಣೆಗಳನ್ನು ಹೊಂದುತ್ತಾ ಸಾಮರಸ್ಯ ಜೀವನವನ್ನು ನಡೆಸಲು ಒಳದೃಷ್ಟಿಗಳನ್ನು ಕೊಡುವಂತಹ ಕಥೆಗಳನ್ನು ರಂಗಪ್ರಯೋಗಗಳಿಗೆ ಒಳಪಡಿಸುತ್ತಿತ್ತು. ‘ಲಲಿತಾ’ ಹೆಸರಿನಲ್ಲಿ ಭಾರತೀಯ ತತ್ವಶಾಸ್ತ್ರ, ಜಾನಪದ ಸಿದ್ಧಾಂತಗಳನ್ನು ರಂಗರೂಪಕದಲ್ಲಿ ಪ್ರದರ್ಶಿಸುತ್ತಿತ್ತು. ನಂತರ, ಇವೆಲ್ಲದರ ಸಾರಭೂತವಾಗಿ ೧೯೯೮ರಲ್ಲಿ ‘ರಾಜಮಾರ್ಗ’ ತಂಡವು ಸ್ಥಿರವಾಗಿ ನಿಂತಿತು.

ಯಶಸ್ವಿ ರಂಗ ಪ್ರಯೋಗಗಳು
ಕನ್ನಡ, ಇಂಗ್ಲಿಷ್ ಸೇರಿದಂತೆ, ‘ರಾಜಮಾರ್ಗ’ ಇದುವರೆಗೂ 300ಕ್ಕೂ ಹೆಚ್ಚು ರಂಗಪ್ರಯೋಗಗಳನ್ನು ಮಾಡಿದೆ. ಇದರಲ್ಲಿ ಏಕವ್ಯಕ್ತಿ ಪ್ರದರ್ಶನಗಳು, ನೃತ್ಯರೂಪಕಗಳು ಕೂಡ ಸೇರಿವೆ. ಯೋಗೇಶ್ ಮಾಸ್ಟರ್‌ ಅವರ ಪ್ರಯೋಗಗಳೇ ಇವುಗಳಲ್ಲಿ ಹೆಚ್ಚು. ಜತೆಗೆ, ಸಾಮಾಜಿಕ ಕಳಕಳಿ ಮತ್ತು ವೈಚಾರಿಕ ಕಿಡಿ ಹೊತ್ತಿಸುವ ಕನ್ನಡ ಮತ್ತು ಇಂಗ್ಲಿಷ್ ಬರಹಗಳನ್ನು ಕೂಡ ರಂಗಕ್ಕೆ ಅಳವಡಿಸಿದ್ದೂ ಇದೆ. ಖಲೀಲ್ ಗಿಬ್ರಾನ್‌ನ ‘ಪ್ರವಾದಿ’, ಪಾಲೋಕೋವ್ಲೋನ ‘ಬೆಳಕಿನ ವೀರನ ದಿನಚರಿ’, ಎರಿಕ್ ಫ್ರಾಮ್‌ನ ‘ಪ್ರೀತಿಸುವ ಕಲೆ’, ಹರ್ಮನ್ ಹೆಸ್‌ನ ‘ಸಿದ್ಧಾರ್ಥ’, ಅ.ರಾ. ಮಿತ್ರ ಅವರ ‘ಸಂಕಲ್ಪಗಳು’ ಪ್ರಯೋಗಾತ್ಮಕ ರಂಗಪ್ರಯೋಗಗಳು.

ಕುವೆಂಪು ಅವರ ‘ಬೆರಳ್‌ಗೆ ಕೊರಳ್‌’ ನಾಟಕ ಹೊರತುಪಡಿಸಿದರೆ, ‘ರಾಜಮಾರ್ಗ’ ಇದುವರೆಗೂ ಬೇರಾವುದೇ ಸಿದ್ಧರೂಪದ ನಾಟಕಗಳನ್ನು ರಂಗದ ಮೇಲೆ ತಂದಿಲ್ಲ. ಬದಲಿಗೆ ಧರ್ಮಗ್ರಂಥ­ಗಳೊಳಗಿನ ಸಾರ ಹಾಗೂ ವೈಚಾರಿಕ ಕಿಡಿ ಬರಹಗಳನ್ನು ರಂಗ ರೂಪಕ್ಕಿಳಿಸುತ್ತಾ ಬಂದಿದೆ.

ರಾಜಧಾನಿಯ ಪ್ರಮುಖ ರಂಗ ಮಂದಿರಗಳು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಪ್ರದರ್ಶನಗೊಂಡಿರುವ ಸ್ತ್ರೀ ಸಂವೇದನೆಯುಳ್ಳ ‘ಶ್ರೀಮತಿ ಜಾನಕಿರಾಮ್’, ಏಕವ್ಯಕ್ತಿ ಪ್ರದರ್ಶನವಾದ ‘ಕೊನೆಯ ಅಂಕ’, ‘ಸತ್ಯಕಾಮ’, ‘ಆನಂದವನ’ ಹಾಗೂ ರವೀಂದ್ರನಾಥ ಟ್ಯಾಗೋರರ ‘ಒಂದಾನೊಂದು ಕಾಲದಲ್ಲಿ’ ಸೇರಿದಂತೆ ಉಪನಿಷತ್‌ಗಳಿಂದ ಆರಿಸಲಾದ ‘ನಚಿಕೇತ’, ‘ಆಚಾರ್ಯ’, ‘ಸತ್ಯಕಾಮ’, ‘ಈಶ’ ಇತ್ಯಾದಿ ಪ್ರಯೋಗಗಳು ಪ್ರೇಕ್ಷಕರ ಪ್ರಶಂಸೆಗೆ ಹೆಚ್ಚು ಪಾತ್ರವಾಗಿವೆ. ಸಮಾಜದಲ್ಲಿ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಬಾಧಿಸುವ ವಿಷಯಗಳನ್ನು ಕೂಡ ರಂಗಪ್ರಯೋಗಗಳ ವಸ್ತುವನ್ನಾಗಿಸಿಕೊಳ್ಳುತ್ತಾ ಬರುತ್ತಿರುವುದು ‘ರಾಜಮಾರ್ಗ’ದ ವಿಶೇಷ.

ಸ್ಪರ್ಧೆಗಿಂತ ಸಹಕಾರದಲ್ಲೇ ನಂಬಿಕೆ
ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ‘ರಾಜಮಾರ್ಗ’ವು ತನಗೆ ತಾನೇ ಗೆರೆಯೊಂದನ್ನು ಎಳೆದುಕೊಂಡಿದೆ. ಯೋಗೇಶ್ ಮಾಸ್ಟರ್ ಅವರೇ ಹೇಳುವಂತೆ, ‘ನನಗೆ ಸ್ಪರ್ಧೆಗಿಂತ ಸಹಕಾರದಲ್ಲೇ ಹೆಚ್ಚು ನಂಬಿಕೆ. ಮತ್ತೊಬ್ಬರ ಸೋಲಿನಲ್ಲಿ ವಿಜಯ ಪತಾಕೆ ಹಾರಿಸುವುದನ್ನು ನಾನು ಇಷ್ಟಪಡುವುದಿಲ್ಲ. ಸ್ಪರ್ಧೆಯಲ್ಲಿ ನಾಟಕದ ಉದ್ದೇಶ, ಸಂದೇಶಕ್ಕಿಂತ ಗೆಲುವೇ ಮುಖ್ಯವಾಗಿರುತ್ತದೆ. ಹಾಗಾಗಿ ನಮ್ಮ ತಂಡ ಇದುವರೆಗೂ ಯಾವುದೇ ಸ್ಪರ್ಧೆಗಳಲ್ಲಿ ಪಾಲ್ಗೊಂಡಿಲ್ಲ. ಬದಲಿಗೆ ಉತ್ಸವಗಳಲ್ಲಿ ಭಾಗವಹಿಸಲು ಇಚ್ಛಿಸುತ್ತೇವೆ’.

ರಂಗಪ್ರಯೋಗದಲ್ಲೇ ಹೊಸ ಜೀವನಕ್ಕೆ ಕಾಲಿಟ್ಟ ‘ಮಾಸ್ಟರ್’
ಏಪ್ರಿಲ್‌ 21, 2003ರ ಸಂಜೆ 5.30. ಸ್ಥಳ: ದೊಡ್ಡಕಲ್ಲಸಂದ್ರದ ಶಂಕರ್ ಫೌಂಡೇಷನ್‌ನ ಬಯಲು ನಾಟಕ ಮಂದಿರ. ಅಂದು ‘ರಾಜಮಾರ್ಗ’ ತಂಡದಿಂದ, ಪಾಳೇಗಾರಿಕೆ ವಿರುದ್ಧ ತಿರುಗಿಬೀಳುವ ಹುಡುಗನೊಬ್ಬನ ಕಥಾ ಹಂದರವನ್ನೊಳಗೊಂಡಿರವ ‘ಕಲ್ಯಾಣಿ ಕಲ್ಯಾಣಮ್ಮ’ ನಾಟಕವಿತ್ತು. ನಿರೀಕ್ಷೆಗೂ ಮೀರಿದ ನಾಟಕ ಪ್ರೇಮಿಗಳು ನಾಟಕ ನೋಡಲು ಬರುತ್ತಿದ್ದರು.

ಕಾರಣವಿಷ್ಟೇ– ಅಂದು ಪ್ರಿಂಟ್ ಆಗಿದ್ದ ನಾಟಕದ ಆಹ್ವಾನ ಪತ್ರಿಕೆಯಲ್ಲಿ ‘ಕಲ್ಯಾಣಿ– ಕಲ್ಯಾಣಮ್ಮ ರಂಗ ಪ್ರಯೋಗದಲ್ಲೇ ‘ಗಂಗಾ–ಯೋಗೇಶರ ಶುಭ ಕಲ್ಯಾಣ’ ಎಂದು ನಮೂದಿಸಲಾಗಿತ್ತು. ನಾಟಕಗಳಲ್ಲಿ ನಡೆಯುವ ನಕಲಿ ಮದುವೆಗಳನ್ನು ನೋಡಿದ್ದ ಪ್ರೇಕ್ಷಕರಿಗೆ, ಅಂದು ರಂಗದ ಮೇಲೆ ನಿಜ ಕಲ್ಯಾಣವನ್ನು ಕಣ್ತುಂಬಿಕೊಳ್ಳುವ ಕುತೂಹಲವಿತ್ತು. ಅಂತೆಯೇ ನಾಟಕದಲ್ಲಿ ಬರುವ ಮದುವೆಯ ಸನ್ನಿವೇಶದಲ್ಲಿ ಅಂದುಕೊಂಡಂತೆ ಯೋಗೇಶ್ ಮಾಸ್ಟರ್ ಸಾವಿರಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಗಂಗಾ ಅವರನ್ನು ಮದುವೆಯಾದರು. ಈಗ ಅವರಿಗೆ ಇಬ್ಬರು ಮಕ್ಕಳು.

ಹವ್ಯಾಸಿಗಳೇ ಹೆಚ್ಚು
‘ರಾಜಮಾರ್ಗ’ದಲ್ಲಿ ವೃತ್ತಿಪರ ರಂಗಕರ್ಮಿಗಳು ಬೆರಳೆಣಿಕೆಯಷ್ಟಿದ್ದು, ವಿದ್ಯಾರ್ಥಿಗಳನ್ನು ಒಳಗೊಂಡಂತೆ, ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುವ ಹವ್ಯಾಸಿ ರಂಗಕರ್ಮಿಗಳು ತಂಡದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಇವರೆಲ್ಲರಿಗೂ ಯೋಗೇಶ್ ಮಾಸ್ಟರ್ ಅವರೇ ನಟನೆಯ ಗುರು. ಜತೆಗೆ ತಂಡವು ವಿವಿಧ ಕಂಪೆನಿಗಳ, ವಿದ್ಯಾಸಂಸ್ಥೆಗಳ, ಸಂಘಟನೆಗಳ ಆಸಕ್ತರಿಗೆ ಕಾರ್ಯಾಗಾರಗಳನ್ನು ಏರ್ಪಡಿಸಿ, ಸ್ವತಂತ್ರವಾಗಿ ರಂಗಪ್ರಯೋಗಗಳನ್ನು ನೀಡುವಂತೆ ತರಬೇತಿ ನೀಡುತ್ತದೆ.

ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ರಂಗಾಸಕ್ತರನ್ನು ಒಟ್ಟಾಗಿಸುತ್ತಾ ಅವರಿಗೆ ಅನೌಪಚಾರಿಕವಾದ ರಂಗಶಿಕ್ಷಣ ನೀಡುತ್ತಾ ಪ್ರಯೋಗಾತ್ಮಕವಾದ ರಂಗರೂಪಕಗಳನ್ನು ಪ್ರದರ್ಶಿಸುತ್ತಿದೆ. ‘ರಾಜಮಾರ್ಗ’ದಿಂದ ಅನೇಕರು ಕಿರುತೆರೆ ಮತ್ತು ಬೆಳ್ಳಿತೆರೆ ಪ್ರವೇಶಿಸಿ ನೆಲೆಯೂರಿದ್ದಾರೆ. ಆದರೆ, ಅವರ್‍ಯಾರ ಹೆಸರನ್ನು ಹೇಳಲು ನಾನು ಇಚ್ಛಿಸುವುದಿಲ್ಲ. ಬದಲಿಗೆ ಅವರೇ, ಸಂದರ್ಭ ಬಂದಾಗ ನಮ್ಮ ತಂಡದ ಹೆಸರನ್ನು ಹೇಳುತ್ತಾರೆ’ ಎನ್ನುತ್ತಾರೆ ಯೋಗೇಶ್ ಮಾಸ್ಟರ್.

ಮಾಸ್ಟರ್ ಮಾತು
ರಂಗಭೂಮಿಯತ್ತ  ಆಕರ್ಷಿತರಾಗಲು ಮುಖ್ಯ ಕಾರಣ?


ಹರಿಕಥೆ– ಭಜನೆಗಳು ನನ್ನನ್ನು ಹೆಚ್ಚು ಪ್ರಭಾವಿಸಿವೆ. ನಾನು ರಂಗಭೂಮಿಯತ್ತ ವಾಲಲು ಇವೇ ಕಾರಣ ಎನ್ನಬಹುದು. ನನಗೆ ನಾಟಕ, ಬರವಣಿಗೆ, ಸಂಗೀತ ಹಾಗೂ ನೃತ್ಯ ಅಚ್ಚುಮೆಚ್ಚು. ಬಿ. ಜಯಶ್ರೀ, ಎಂ.ಎಸ್‌. ಸತ್ಯು, ಹಂಸಲೇಖ, ಸುರೇಶ್ ಆನಗಳ್ಳಿ, ಆರ್. ನಾಗೇಶ್, ವಿ. ಮನೋಹರ್, ಸುಂದರಶ್ರೀ ಹಾಗೂ ರೇಣುಕಾಬಾಲಿ, ಉದಯ್ ಕುಮಾರ್ ಅವರೊಂದಿಗ ಕೆಲಸ ಮಾಡಿದ್ದೇನೆ. ಆದ್ದರಿಂದ ನಾನು ಏಕವ್ಯಕ್ತಿ ಪ್ರದರ್ಶನ, ನೃತ್ಯ ರೂಪಕ ಹಾಗೂ ರಂಗಪ್ರಯೋಗಗಳ ಜತೆಜತೆಗೆ ಸಂಗೀತದ ಆಲ್ಬಂ, ಕಿರುಚಿತ್ರ, ಸಾಕ್ಷ್ಯಚಿತ್ರಗಳನ್ನು ಮಾಡಿದ್ದೇನೆ.  ಇವೆಲ್ಲವೂ ನನ್ನ ರಂಗಭೂಮಿ ಅನುಭವವನ್ನು ಹೆಚ್ಚಿಸಿವೆ.

‘ರಾಜಮಾರ್ಗ’ದ ಪ್ರಯೋಗಗಳ ಪ್ರಮುಖ ತಿರುಳೇನು?
ನಾನು ಆರಿಸಿಕೊಳ್ಳುವ ಯಾವುದೇ ವಿಷಯವನ್ನು ವರ್ತಮಾನಕ್ಕೆ ಅನುಸಂಧಾನಗೊಳಿಸುತ್ತೇನೆ. ಜತೆಗೆ ನನ್ನ ಪ್ರಯೋಗಗಳಲ್ಲಿ ಅಮೂರ್ತ ವಿಷಯಗಳು ಮೂರ್ತ ಸ್ವರೂಪ ಪಡೆಯುತ್ತವೆ. ‘ಶ್ರೀಮತಿ ಜಾನಕಿರಾಮ್’ ನಾಟಕದಲ್ಲಿ ಪುರಾಣದ ಸೀತೆ ಮತ್ತು ವರ್ತಮಾನದ ಜಾನಕಿ ಮುಖಾಮುಖಿಯಾಗುತ್ತಾರೆ. ಹಾಗೆಯೇ ಉಪನಿಷತ್‌ಗಳು, ತತ್ವಶಾಸ್ತ್ರಗಳು ಹಾಗೂ ಪುರಾಣಗಳಲ್ಲಿನ ವಿಷಯಗಳನ್ನು ಹೆಕ್ಕಿಕೊಂಡು ಮಾಡಿರುವ ರಂಗಪ್ರಯೋಗಗಳಲ್ಲಿ ಇಂತಹ ವಿಶೇಷತೆಯನ್ನು ಕಾಣಬಹುದಾಗಿದೆ.

ನಿಮ್ಮ ಪ್ರಯೋಗಗಳಲ್ಲಿ ಅತಿಶಯೋಕ್ತಿಯೇ ಹೆಚ್ಚೆಂಬ ಮಾತಿದೆ.
ಇರಲೂ­ಬಹುದು. ಯಾಕೆಂದರೆ, ನಾನು ಆರಿಸಿಕೊಳ್ಳುವ ವಸ್ತು– ವಿಷಯಗಳೇ ಹಾಗಿರುತ್ತವೆ. ನಾನು ಹರಿಕಥೆ ಮತ್ತು ಭಜನೆಗಳಿಂದ ಹೆಚ್ಚಾಗಿ ಪ್ರೇರಿತನಾದವನು. ನನ್ನ ಪ್ರಯೋಗಗಳಲ್ಲಿ ಕಥೆಗೊಂದು ಉಪಕಥೆ, ಹಾಸ್ಯ, ಲೇವಡಿ, ವಿಡಂಬನೆ, ಅಗತ್ಯಕ್ಕೆ ತಕ್ಕ ಹಾಡು, ಹಿಮ್ಮೇಳ ಇದ್ದೇ ಇರುತ್ತದೆ.

ಯೋಗೇಶ್ ಮಾಸ್ಟರ್ ಎಂದರೆ, ವಿವಾದಾತ್ಮಕ ಪ್ರಯೋಗ ಹಾಗೂ ವಿಷಯಗಳ ಬರಹಗಾರ ಎನ್ನುತ್ತಾರೆ ಕೆಲವರು ...
ಪುರಾಣಗಳ ವಿಷಯ­ಗಳನ್ನು ಹೆಕ್ಕಿ, ಅವುಗಳಿಗೆ ವರ್ತಮಾನದ ಸ್ಪರ್ಶ ಕೊಡುವುದರಿಂದ ಕೆಲವೊಮ್ಮೆ ವಿವಾದಕ್ಕೆ ಕಾರಣವಾದದ್ದುಂಟು. ಮತ್ತೊಂದು ವಿಷಯವೆಂದರೆ, ನಾನು ಎರಡು ದಶಕಗಳಿಂದ ಮಾಡಿಕೊಂಡು ಬಂದ ಪ್ರಯೋಗಗಳಲ್ಲಿ ವಿವಾದಕ್ಕೊಳಗಾದ ನಾಟಕಗಳು ಪ್ರೇಕ್ಷಕರಲ್ಲೊಂದು ವೈಚಾರಿಕ ಕಿಡಿ ಹೊತ್ತಿಸಿರುವುದಂತೂ ಸತ್ಯ. ಅಲ್ಲದೆ, ಆಗ ವಿವಾದವೂ ಆಗುತ್ತಿರಲಿಲ್ಲ.  ಆದರೆ, ಇತ್ತೀಚೆಗೆ ‘ಡುಂಢಿ’ ಬರೆದಾಗಿನಿಂದ ಜನ ನನ್ನನ್ನು ನೋಡುವ ಬಗೆಯೇ ಬದಲಾಗಿದೆ.

ಮುಂದಿನ ರಂಗ ಪ್ರಯೋಗ ಯಾವುದು?
ಸದ್ಯದಲ್ಲೇ ‘ಏನೇ ಶಾರದೆ’ ಎಂಬ ರಂಗಪ್ರಯೋಗ ನಡೆಯಲಿದೆ. ಈ ಪ್ರಯೋಗ ಸ್ತ್ರೀವಾದಿ ದೃಷ್ಟಿಕೋನದ್ದಾಗಿದೆ. ರಾಮಕೃಷ್ಣ ಪರಮಹಂಸ ಮತ್ತು ಶಾರದಾ ದೇವಿ ದಾಂಪತ್ಯ ಸಂಬಂಧ, ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಪರಸ್ಪರರು ಹೊಂದಿದ್ದ ದೃಷ್ಟಿಕೋನಗಳ ಕುರಿತದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT