ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಪಾಠ: ಹೊಸ ಸಾಧನೆ

Last Updated 24 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಅಂತರಿಕ್ಷ ಯಾನದ ಇತಿಹಾಸದಲ್ಲಿ ತನ್ನ ಹೆಸರನ್ನು ಸುವರ್ಣಾಕ್ಷರಗಳಿಂದ ಬರೆದ ಇಸ್ರೊದ ವಿಜ್ಞಾನಿಗಳನ್ನು ಅಭಿನಂದಿಸುವುದು ನಮ್ಮೆಲ್ಲರ ಮೊದಲ ಕರ್ತವ್ಯ. ಅಧ್ಯಕ್ಷರಿಂದ ಹಿಡಿದು ಪ್ರತಿಯೊಬ್ಬ ಇಸ್ರೊ ಉದ್ಯೋಗಸ್ಥನದೂ ಈ ಯಶಸ್ಸಿನಲ್ಲಿ ಪಾಲಿದೆ.  ಇದು ಯಾವುದೇ ಒಂದು ತಂಡ ಒಟ್ಟಾಗಿ ನಡೆಸಿ ಸಾಧಿಸಬಹುದಾದ ವಿಜಯದ ದ್ಯೋತಕ.  ತಂಡವಾಗಿ ಒಬ್ಬರ ಹೆಗಲಿಗೆ ಒಬ್ಬರು ಹೆಗಲು ಕೊಟ್ಟು ಕೆಲಸ ಮಾಡಿದಲ್ಲಿ ಮಾತ್ರ ವಿಜಯ ಕಟ್ಟಿಟ್ಟ ಬುತ್ತಿ ಎಂದು ಸಾರಿ ಹೇಳುತ್ತಿದೆ ಇಸ್ರೊ.

ಯಾವುದೇ ಯೋಜನೆಗಳನ್ನು ಕೈಗೆತ್ತಿ­ಕೊಳ್ಳುವಾಗ ಹಿಂದಿನ ಅಂತಹುದೇ ಯೋಜನೆಗಳ ತಪ್ಪುಗಳನ್ನು ಅಧ್ಯಯನ ಮಾಡುವುದು ಅತಿ ಅವಶ್ಯ.  ಈ ದಿಸೆಯಲ್ಲಿ ಮಂಗಳಯಾನಕ್ಕೆ ಅದ್ಭುತ­ವಾದ ಅವಕಾಶಗಳು ದೊರಕಿದವು.  ಏಕೆಂದರೆ ಇದುವರೆಗೆ ಮಂಗಳಕ್ಕೆ ಹಾರಿದ ನೌಕೆಗಳಲ್ಲಿ ಯಶಸ್ವಿಯಾದ­ವುಗಳಿಗಿಂತ ವಿಫಲವಾದವೇ ಹೆಚ್ಚು.  ೨೦೧೧ರಲ್ಲಿ ಹಾರಿದ ಚೀನದ   ಬಾಹ್ಯಾಕಾಶ ನೌಕೆಯೊಂದು ಭೂಮಿ­ಯನ್ನೂ ಬಿಟ್ಟು ಹೋಗುವುದೇ ಸಾಧ್ಯ­ವಾಗದೆ ಭೂಮಿಯ ಮೇಲೇ ಬಿದ್ದಿತು. 

ಇದಕ್ಕೆ ೨೦೦೩ರಲ್ಲಿ ಯುರೋಪಿಯನ್ ಸ್ಪೇಸ್ ಏಜೆನ್ಸಿ ಹಾರಿಸಿದ ಮಾರ್ಸ್ ಎಕ್ಸ್‌ಪ್ರೆಸ್ ಕಕ್ಷೆಯನ್ನೇನೋ ಸೇರಿತು; ಆದರೆ, ಅದು ಮಂಗಳನ ಮೇಲೆ ಇಳಿಸಬೇಕಾಗಿದ್ದ ‘ಬೀಗಲ್೨’ ಎಂಬ ಲ್ಯಾಂಡರ್ ಏನಾಯಿತು ಎಂದು ಇದುವರೆಗೂ ತಿಳಿದಿಲ್ಲ.  ಅದು ಸಂಪರ್ಕವನ್ನೇ ಕಡಿದುಕೊಂಡುಬಿಟ್ಟಿತು.  ೧೯೯೯ರಲ್ಲಿ ಇನ್ನೊಂದು ಲ್ಯಾಂಡರ್ ಇಳಿಯುವಾಗ ನೆಲಕ್ಕೆ ಅಪ್ಪಳಿಸಿತು.  ಇಲ್ಲಿ ತಾಂತ್ರಿಕ ದೋಷ ಇದ್ದುದು ಬಹಳ ಸ್ಪಷ್ಟವಾಗಿತ್ತು.  ೧೯೯೮ರಲ್ಲಿ ಜಪಾನಿನ ನೋಜೋಮಿ ಎಂಬ ನೌಕೆ ಕಕ್ಷೆ ಸೇರುವಲ್ಲಿ ವಿಫಲವಾಗಿತ್ತು.  ಅದೇ ವರ್ಷ ಹಾರಿದ ನಾಸಾದ ಮಾರ್ಸ್ ಕ್ಲೈಮೇಟ್ ಆರ್ಬೈಟರ್ ಮಂಗಳವನ್ನು ಅಪ್ಪಳಿಸಲು ಒಂದು ಕ್ಷುಲ್ಲಕ ದೋಷವೇ ಕಾರಣ.  ಕಂಪ್ಯೂಟರ್‌ನಿಂದ ಹೊರಟ ಸಂದೇಶ ಬಳಸಿದ್ದು ನ್ಯೂಟನ್ - ಸೆಕೆಂಡ್ ಮಾಪಕದಲ್ಲಿರಲಿಲ್ಲ. ಬದಲಿಗೆ ಪೌಂಡ್ - ಸೆಕೆಂಡ್‌ಗಳಲ್ಲಿತ್ತು.  ಲೆಕ್ಕ ತಪ್ಪಿತು.  ಗುರಿಯೂ ತಪ್ಪಿತು.  ಆ ಮುಂಚಿನ ಎಷ್ಟೋ ಯಾನಗಳಲ್ಲಿ ತಾಂತ್ರಿಕ ಹಾಗೂ ಯಾಂತ್ರಿಕ ದೋಷಗಳಿದ್ದ ಕಾರಣ ವಿಫಲವಾದವು. ಇವೆಲ್ಲ ಯಾನಗಳು ಕಲಿಸಿಕೊಟ್ಟ ಪಾಠಗಳು ಅಮೂಲ್ಯ­ವಾದವು.

ಇಂತಹ ಯೋಜನೆಗಳನ್ನು ಕೈಗೆತ್ತಿ­ಕೊಂಡಾಗ ಇದಕ್ಕೆ ವ್ಯಯವಾಗುವ ಹಣವನ್ನು ಅಪವ್ಯಯ ಎಂದು ಸಹಜವಾಗಿ ಹಲವಾರು ಜನ ಕಟಕಿಯಾಡಿದ್ದುಂಟು.  ಆದರೆ, ಇತರ ದೇಶಗಳು, ಮುಖ್ಯವಾಗಿ ಅಮೆರಿಕ, ತನ್ನ ಆಯವ್ಯಯದಲ್ಲಿ ೨೦೧೫ನೆ ಸಾಲಿನಲ್ಲಿ ‘ನಾಸಾ’ಗೆ 1,790  ಕೋಟಿ ಡಾಲರ್‌ಗಳನ್ನು ಗೊತ್ತುಪಡಿಸಿದೆ.  ಇದರಲ್ಲಿ ಯುರೋಪಾ ಎಂಬ ಗುರುಗ್ರಹದ ಉಪ­ಗ್ರಹಕ್ಕೆ ಹಾರಿಸ­ಬೇಕಾದ ಯೋಜನೆಗೆ ಯಾವುದೇ ಮೊತ್ತ ನಿಗದಿಯಾಗಿಲ್ಲ. ಆದರೆ, ವಾಣಿಜ್ಯೋದ್ದೇಶಗಳಿಗೆ     ೮೦.೫0 ಕೋಟಿ ಡಾಲರ್ ನಿಗದಿಯಾಗಿದೆ ಎಂದು ಗ್ರಹಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳು ಅಸಮಾಧಾನ­ಗೊಂಡಿ­ದ್ದಾರೆ.

ಈ ಮೊತ್ತ ಕೂಡ ಮಾರ್ಸ್ ಆರ್ಬೈಟರ್‌ಗೆ ಭಾರತ ಖರ್ಚು ಮಾಡುತ್ತಿರುವುದರ ಹತ್ತು ಪಟ್ಟು ಹೆಚ್ಚು ಎನ್ನಬಹುದು. ಆದರೆ, ನಾಸಾ ಸಾಧನೆಯೂ ಅದೇ ಮಟ್ಟದಲ್ಲಿದೆ ಎಂದೂ ಅಪಸ್ವರ ಎತ್ತಬಹುದು.  ನಾವೂ ಮುಂದೊಂದು ದಿನ ಅದೇ ಹಂತವನ್ನು ತಲುಪಲೇ ಬೇಕಲ್ಲವೇ?  ಹಿಂದೆ ಇಸ್ರೊ ಸಂಸ್ಥೆಯನ್ನು ಸ್ಥಾಪಿಸು­ವಾಗಲೇ ಇಂತಹ ಅಪಸ್ವರಗಳು ಕೇಳಿದ್ದವು.  ಅಂದು ಮೊಂಡು ಧೈರ್ಯದಿಂದ ಹೂಡಿದ ಬಂಡವಾಳ ಇಂದು ನಮಗೆ ಫಲಿತಾಂಶ ಕೊಡುತ್ತಿದೆ.  ಹಾಗೆಯೇ ಇಂದು ಹೂಡಿದ ಬಂಡವಾಳ ನಮ್ಮ ಮುಂದಿನ ಪೀಳಿಗೆಗಳಿಗೆ ಹೊಸ ಹೊಸ ಯೋಜನೆಗಳಿಗೆ ಅಗತ್ಯವಾದ ಬುನಾದಿ­ಯನ್ನು ಒದಗಿಸುತ್ತವೆ.

ಅಪವ್ಯಯವನ್ನು ಕಡಿಮೆ ಮಾಡಲು ಮುಖ್ಯವಾಗಿ ಇಂಧನವನ್ನು ಉಳಿಸ­ಬೇಕಾ­­ಗುತ್ತದೆ.  ಇದಕ್ಕಾಗಿ ಕೆಲವೊಂದು ನಿರ್ದಿಷ್ಟ ಅವಧಿಗಳನ್ನು ಮುಂಚಿತ­ವಾಗಿಯೇ ಲೆಕ್ಕ ಹಾಕಲಾಗಿದೆ.  ಪ್ರತಿ ೭೮೦ ದಿನಗಳಿಗೊಮ್ಮೆ ಇಂತಹ ಮುಹೂರ್ತ ಒದಗುತ್ತದೆ.  ಇದರ ಅರ್ಥ ಅಷ್ಟೇನೂ ಕ್ಲಿಷ್ಟವಲ್ಲ.  ಭೂಮಿ, ಮಂಗಳವನ್ನು ಹಿಂದೆ ಹಾಕಿ ಓಡುವ ಸಂದರ್ಭ. ಇದಕ್ಕೆ ವಿಯುತಿ ಎಂದು ಹೆಸರು. ಆಗ ಮಂಗಳ ಮತ್ತು ಭೂಮಿ­ಗಳ ನಡುವಣ ದೂರ ಕನಿಷ್ಠವಾಗಿ­ರುತ್ತದೆ.  ಇಂಧನ ಉಳಿತಾಯ­ವಾಗು­ತ್ತದೆ.  ಕಳೆದ ನವೆಂಬರ್‌ನಲ್ಲಿ ಮಾರ್ಸ್ ಆರ್ಬೈಟರ್ ಮತ್ತು ನಾಸಾದ ಮಾವೆನ್ ಎರಡೂ ನೌಕೆಗಳು ಇದೇ ಅವಕಾಶ­ವನ್ನು ಉಪಯೋಗಿಸಿಕೊಂಡು ಹಾರಿ­ದ್ದವು. 

ಮಾವೆನ್ ಎರಡು ದಿನಗಳ ಹಿಂದೆ ಕಕ್ಷೆಯನ್ನು ಸೇರಿತು.  ಮುಂದೆ ಇಂತಹ ಅವಕಾಶ ಇರುವುದು ಜನವರಿ ೨೦೧೬ಕ್ಕೆ.  ಆಗ ಯುರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತು ನಾಸಾ ಎರಡೂ ಸಂಸ್ಥೆಗಳು ನೌಕೆಗಳನ್ನು ಕಳುಹಿಸುವ ಯೋಜನೆ ಹಾಕಿಕೊಂಡಿವೆ.  ಮಂಗಳದ ನೆಲದಲ್ಲಿ ರಂಧ್ರ ಕೊರೆದು ಕಂಪನ ಮಾಪಕವನ್ನು ಇರಿಸಿ ನೆಲದೊಳಗಿನ ರಹಸ್ಯವನ್ನು ತಿಳಿಯುವ ಉದ್ದೇಶವಿದೆ.  ಈಗ ನಮಗೆ ತಿಳಿದಿರುವ ಪ್ರಕಾರ ಮಂಗಳ ಮತ್ತು ಭೂಮಿಯ ಮುಖ್ಯ ವ್ಯತ್ಯಾಸ ನೆಲದಲ್ಲಿ ಮಾತ್ರ.  ಭೂಮಿಯ ಮೇಲೆ ಇರುವ ಚಿಪ್ಪುಗಳ ರಚನೆ  ಮಂಗಳದ ಮೇಲೆ ಕಂಡು ಬಂದಿಲ್ಲ.  ಹಿಮಾಲಯ, ಆಂಡೀಸ್ ನಂತಹ ಪರ್ವತ ಶ್ರೇಣಿಗಳ ರಚನೆಗೆ ಚಿಪ್ಪುಗಳ ರಚನೆಯೇ ಕಾರಣ.

ಮಾಹಿತಿ ಮಹಾಪೂರ
ಮುಂದಿನ ನಾಲ್ಕೈದು ವಾರಗಳಲ್ಲಿ ಮಾರ್ಸ್ ಆರ್ಬೈಟರ್ ತನ್ನ ಕಕ್ಷೆಯಲ್ಲಿ ಸ್ಥಿರವಾಗುತ್ತಿದ್ದ ಹಾಗೇ ಅದರ ಐದೂ ಉಪಕರಣಗಳು ಒಂದೊಂದಾಗಿ ಕಾರ್ಯ ನಿರ್ವಹಿಸಲು ಆರಂಭಿಸುತ್ತವೆ.  ಮುಂದಿನ ಆರು ತಿಂಗಳಲ್ಲಿ ಮಾಹಿತಿಯ ಮಹಾಪೂರವೇ ಹರಿದು ಬರಲಿದೆ.
ಅಕ್ಟೋಬರ್ ೧೯ಕ್ಕೆ ಇನ್ನೊಂದು ಆತಂಕವನ್ನು ಆರ್ಬೈಟರ್ ಎದುರಿಸ­ಬೇಕಾಗಿದೆ.  ಸೈಡಿಂಗೆ ಸ್ಪ್ರಿಂಗ್ ಎಂಬ ಧೂಮಕೇತು ಮಂಗಳವನ್ನು ಅತಿ ಸಮೀಪ­ವಾಗಿ (ಕೇವಲ ೧.೩೨ ಲಕ್ಷ ಕಿ.ಮೀ) ಹಾದು ಹೋಗಲಿದೆ. 

ಅದರ ಧೂಳಿನ ಕವಚದೊಳಗೆ (ಕೋಮಾ) ಮಂಗಳ ಮತ್ತು ಆರ್ಬೈಟರ್ ಆವೃತವಾ­ಗಲಿವೆ.  ಈಗಾಗಲೇ ಮಂಗಳ ಮೇಲೆ ಹರಿದಾಡುತ್ತಿರುವ ರೋವರ್‌ಗಳು, ಆಪರ್ಚುನಿಟಿ ಮತ್ತು ಕ್ಯೂರಿಯಾಸಿಟಿ ಇವು ಧೂಮಕೇತುವನ್ನು ಗಮನಿಸುತ್ತವೆ. ಮಂಗಳವನ್ನು ಸುತ್ತುತ್ತಿರುವ ನೌಕೆಗಳೆಂದರೆ ಮಾರ್ಸ್ ಒಡಿಸಿ, ಮಾರ್ಸ್ ಎಕ್ಸ್‌ಪ್ರೆಸ್, ಮಾರ್ಸ್ ರಿಕೊನೈಸಾನ್ಸ್ ಆರ್ಬೈಟರ್ ಇವಲ್ಲದೆ ಜೊತೆಗೆ ಹೊಸದಾಗಿ ಸೇರ್ಪಡೆಯಾ­ಗಿರುವ ಮಾವೆನ್ ಮತ್ತು ಮಾರ್ಸ್ ಆರ್ಬೈಟರ್.

ಧೂಮಕೇತು ಹತ್ತಿರ ಬಂದಾಗ ಇವುಗಳನ್ನು ಮಂಗಳದ ಇನ್ನೊಂದು ಬದಿಗೆ ತಳ್ಳಿ ದೂಳಿನಿಂದ ಕಾಪಾಡುವ ಯೋಜನೆಯೂ ಇದೆ. ಸೂರ್ಯನನ್ನು ಸಮೀಪಿಸುತ್ತಿರುವ ಧೂಮಕೇತುವಿನಿಂದ ಹೊರ ಬೀಳುವ ಕಣಗಳ ವೇಗ ಸೆಕೆಂಡಿಗೆ ೫೦ ರಿಂದ ೬೦ ಕಿ.ಮೀ ಇರಬಹುದು. ಈ ದೂಳಿನ ಕಣಗಳ ಹೊಡೆತವನ್ನು ಆರ್ಬೈಟರ್ ಸಹಿಸಿಕೊಳ್ಳುವುದೇ? ಇನ್ನೊಂದು ದೃಷ್ಟಿಯಿಂದ ನೋಡುವು­ದಾದರೆ  ಧೂಮಕೇತುವನ್ನು ಅತಿ ಸಮೀಪ­ದಿಂದ ನೋಡಬಹುದಾದ ಸುವರ್ಣಾವಕಾಶವೂ ಈ ಎಲ್ಲ ಉಪಕರಣ­ಗಳಿಗೆ ದೊರೆಯಲಿದೆ.  ಯಾವ ನೌಕೆ ಯಾವುದನ್ನು ಆಯ್ದು­ಕೊಳ್ಳುತ್ತದೆ?  ಕಾದು ನೋಡೋಣ.

– ಲೇಖಕಿ ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT