ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಹೈದನ ಭಿನ್ನ ಪಥ

Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಈಶ್ವರ ಎಂದರೆ ಸುಲ್ತಾನ್‌ಪುರ ಮಹಿಳೆಯರಿಗೆ ‘ಊರ ಮಗ’ ಇದ್ದಂತೆ. ಅವರಿಗೆ ಏನೇ ಬೇಕಿದ್ದರೂ ಈಶ್ವರನ ಬಳಿಗೆ ಓಡಿ ಬರುತ್ತಾರೆ. ಈಶ್ವರ ಮಾಡುವ ಕೆಲಸ ಒಂದು ತರಹದ್ದಲ್ಲ. ಮಹಿಳೆಯರಿಗೆ ಅಕ್ಷರ ಕಲಿಸುವ ಜೊತೆಗೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಫಲವನ್ನು ತಿಳಿಸಿಕೊಡುತ್ತಾರೆ. ಎಮ್ಮೆ ಸಾಲ, ಆಕಳ ಸಾಲ, ಅಂಗಡಿ ಸಾಲ, ಬೆಳೆ ಸಾಲ, ವಿಮೆ, ಶೌಚಾಲಯ ಸಬ್ಸಿಡಿ... ಇತ್ಯಾದಿ ಗ್ರಾಮಕ್ಕೆ ಅಗತ್ಯ ಮಾಹಿತಿಯನ್ನು ಊರಿನವರಿಗೆ ತಿಳಿಸಿಕೊಡುತ್ತಾರೆ.

‘ಯಜಮಾನ ಹೊಲ್ದಾಗ್‌ ದುಡೀಲಿ, ನೀವು ಮನ್ಯಾಗೇ ರೊಕ್ಕ ಗಳಿಸಿ’ ಎಂದು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಪ್ರೇರೇಪಿಸುತ್ತಾರೆ. ಗ್ರಾಮದಲ್ಲಿ ಮಹಿಳೆಯರಿಗಾಗಿ ಹಲವು ತರಬೇತಿ ಕಾರ್ಯಕ್ರಮ ಆಯೋಜಿಸಿ ಸಂಪಾದನೆಯ ಮಾರ್ಗ ಹೇಳಿಕೊಟ್ಟಿದ್ದಾರೆ. ಕೆಲವರು ಹಪ್ಪಳ, ಉಪ್ಪಿನಕಾಯಿ, ರೊಟ್ಟಿ ಬಡಿದು ಮಾರಿದರೆ, ಇನ್ನೂ ಕೆಲವರು ಚಹಾ ಪುಡಿ, ಊದುಬತ್ತಿ ಮಾಡಿ ಹಣ ಗಳಿಸುತ್ತಾರೆ, ಹಲವರು ಬಟ್ಟೆ ಹೊಲಿದು ಸಂಪಾದನೆ ಮಾಡುತ್ತಾರೆ. ಮಹಿಳೆಯರು ಮಾತ್ರವಲ್ಲ, ಸುಲ್ತಾನಪುರ ಗ್ರಾಮದ ಯುವಕರಿಗೂ ಈಶ್ವರ ಮಾರ್ಗದರ್ಶನ ನೀಡುತ್ತಾರೆ.

   ಗುಟ್ಕಾ, ಪಾನ್‌ ತಿನ್ನುವ ಹುಡುಗರಿಗೆ ಬುದ್ಧಿಮಾತಿನಿಂದ ತಿಳಿ ಹೇಳುತ್ತಾರೆ. ಅವರನ್ನು ಸಂಘಟಿಸಿ ಕೋಲಾಟ ಆಡಿಸಿದ್ದಾರೆ. ಬೀದಿನಾಟಕ ಆಡುತ್ತಾ ಊರೂರು ಸುತ್ತಿಸಿದ್ದಾರೆ. ಮಲ್ಲಕಂಬ ಏರಿಸಿ ಪೈಲ್ವಾನರನ್ನಾಗಿ ಮಾಡಿದ್ದಾರೆ. ಸುಲ್ತಾನ್‌ಪುರದ ರೈತರೂ ಅಷ್ಟೇ, ಇವರು ಹೇಳಿದ ಮಾತನ್ನು ತಪ್ಪದೇ ಪಾಲಿಸುತ್ತಾರೆ. ಅದಕ್ಕಾಗಿಯೇ ಆ ಊರ ಜಮೀನು ರಾಸಾಯನಿಕಗಳ ವಿಷ ಉಂಡಿಲ್ಲ, ಸಾವಯವ ಕೃಷಿ ಮಾಡುತ್ತಾ ಇನ್ನೂ ಭೂಮಿಯ ಸತ್ವವನ್ನು ಉಳಿಸಿಕೊಂಡಿದ್ದಾರೆ.

ಅಂದ ಹಾಗೆ ಈ ಈಶ್ವರ ಎಂದರೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕು ಸುಲ್ತಾನ್‌ಪುರ ಗ್ರಾಮದ ಪ್ರಗತಿಪರ ರೈತ, ಸಾಮಾಜಿಕ ಕಾರ್ಯಕರ್ತ, ಯುವ ಕಲಾವಿದ ಈಶ್ವರಪ್ಪ ಗಂಗಪ್ಪ ಅರಳಿ. ಇವರು ಓದಿದ್ದು ಕಾನೂನು ಪದವಿ. ಹಾಗೆಂದು ಹೊಟ್ಟೆ ಹೊರೆಯಲು ನಗರಕ್ಕೆ ವಲಸೆ ಹೋಗಲಿಲ್ಲ. ಸುಲ್ತಾನ್‌ಪುರ ಗ್ರಾಮವನ್ನೇ ಅವರ ಕರ್ಮಭೂಮಿ ಮಾಡಿಕೊಂಡರು. ಸಮುದಾಯ ಸಂಘಟನೆ, ಕಲೆ, ಗ್ರಾಮೀಣ ಕ್ರೀಡೆ, ಪರಿಸರ ರಕ್ಷಣೆ, ಕಾನೂನು ಅರಿವು, ಕುರಿತು ತಿಳಿವಳಿಕೆ ನೀಡುವ ಮೂಲಕ ಸಾಮಾಜಿಕ ಬದಲಾವಣೆಯ ಗುರಿ ಹೊಂದಿದ್ದಾರೆ ಇವರು. ಅವರಿಗೆ ಕೇಂದ್ರ ಸರ್ಕಾರದ ಕ್ರೀಡೆ ಮತ್ತು ಯುವಜನ ಸೇವಾ ಸಚಿವಾಲಯದಿಂದ ನೀಡುವ ಈ ಬಾರಿಯ ‘ರಾಷ್ಟ್ರೀಯ ಯುವ ಪುರಸ್ಕಾರ’ ಕೂಡ ಸಂದಿದೆ.

ಈಶ್ವರಪ್ಪ ಅವರು ಗ್ರಾಮ ನೈರ್ಮಲ್ಯೀಕರಣಕ್ಕೆ ಒತ್ತು ಕೊಟ್ಟವರು. ತಮ್ಮ ಮನೆಯನ್ನಷ್ಟೇ ಅಲ್ಲ, ಊರನ್ನೂ ಶುದ್ಧಗೊಳಿಸಲು ಪಣ ತೊಟ್ಟು ನಿಂತರು. ಹೀಗಾಗಿಯೇ ಪ್ರತಿ ಮನೆ ಮುಂದೆಯೂ ರಸ್ತೆ, ಚರಂಡಿ, ನೀರಿನ ನಲ್ಲಿ ಬಂದಿವೆ. ಈಶ್ವರಪ್ಪ ರಾಜಕಾರಣಿಯಲ್ಲ, ಆದರೆ ಬೀದಿ ದೀಪ, ನೀರು, ವಿದ್ಯುತ್‌ ಮುಂತಾದ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ರಾಜಕಾರಣಿಗಳ ಬಳಿ ಪಟ್ಟು ಹಿಡಿಯುತ್ತಾರೆ. ಜೊತೆಗೆ ಆರ್ಥಿಕ ಸ್ವಾವಲಂಬಿ ಯೋಜನೆಗಳನ್ನು ಊರಿಗೆ ತರುವ ತನಕ ಬಿಡುವುದಿಲ್ಲ. ಸದ್ಯ ಸುಲ್ತಾನ್‌ಪುರದಲ್ಲಿ 14 ಸ್ವಸಹಾಯ ಸಂಘಟನೆಗಳಿವೆ. ಸಂಘ ಕಟ್ಟಿ ಸದಸ್ಯರನ್ನು ಈಶ್ವರಪ್ಪ ಸುಮ್ಮನೆ ಕೂರಿಸಿಲ್ಲ. ವಿವಿಧ ಕಾರ್ಯಚಟುವಟಿಕೆಗಳ ಮೂಲಕ ಕ್ರಿಯಾಶೀಲಗೊಳಿಸಿದ್ದಾರೆ. ಈ ಗ್ರಾಮದಲ್ಲಿ ಮಹಿಳೆಯರಿಗಾಗಿ ಹೈನುಗಾರಿಕೆ ಸಂಘಟನೆ ಇದ್ದರೆ, ರೈತರಿಗೆ ಸಾವಯವ ಕೃಷಿ ಸಂಘ ಇದೆ. ಯುವಕರಿಗೆ ಗ್ರಾಮೀಣ ಕ್ರೀಡೆ, ಸಾಂಸ್ಕೃತಿಕ ಸಂಘ ಇವೆ.

ಸಾಕ್ಷರ ಜ್ಯೋತಿ
ಈಶ್ವರಪ್ಪ, ಗಂಗಪ್ಪ ಪರ್ವತಪ್ಪ ಅರಳಿ ಅವರ ಪುತ್ರ. ತಾಯಿ ಚನ್ನವ್ವ. ಆರು ತಿಂಗಳ ಹಿಂದಷ್ಟೇ ತಾಯಿ ತೀರಿಕೊಂಡರು. ಮಗ ಓದಿ ಊರಿಗೆ ಉಪಕಾರ ಮಾಡಲು ಹೊರಟಾಗ ತಂದೆ–ತಾಯಿ ವಿಚಲಿತರಾಗಲಿಲ್ಲ. ಮಗ ‘ಊರಿಗೆ ಉಪಕಾರಿ ಮನೆಗೆ ಮಾರಿ’ ಆಗದಿದ್ದರೆ ಸಾಕು ಎಂಬುದಷ್ಟೇ ಅವರ ಆಶಯವಾಗಿತ್ತು. ಎಲ್ಲರಂತೆ ಓದಿದಾಕ್ಷಣ ನೌಕರಿ ಅರಸಿ ನಗರಕ್ಕೆ ಹೊರಡದೆ, ಇದ್ದ ಎಂಟು ಎಕರೆ ಭೂಮಿಯನ್ನು ನೋಡಿಕೊಂಡು ಊರಲ್ಲೇ ಉಳಿಯುತ್ತೇನೆ ಎಂದಾಗ ಅಪ್ಪ–ಅಮ್ಮ ಬಹಳ ಸಂತಸಪಟ್ಟರು. ಈಶ್ವರಪ್ಪ ಮೊದಲು ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಬಂದಿದ್ದು 1991ರಲ್ಲಿ ದೇಶದಾದ್ಯಂತ ಜಾರಿಗೆ ಬಂದ ಸಾಕ್ಷರತಾ ಆಂದೋಲನದ ಮೂಲಕ.

ಅನಕ್ಷರಸ್ಥ ಗ್ರಾಮೀಣ ಜನರಿಗೆ ಅಕ್ಷರಾಭ್ಯಾಸ ಮಾಡಿಸಲು ಬೀದಿಗೆ ಬಂದ ಅವರು ಮತ್ತೆ ಹಿಂದಿರುಗಿ ನೋಡಲಿಲ್ಲ. ಆಗಿನ್ನು ಅವರಿಗೆ 13 ವರ್ಷ ವಯಸ್ಸು. ಸಾಕ್ಷರತಾ ಆಂದೋಲನ ದೇಶದಲ್ಲಿ ಎಷ್ಟು ಪ್ರಗತಿ ದಾಖಲಿಸಿತು ಎನ್ನುವುದಕ್ಕಿಂತ ಸುಲ್ತಾನ್‌ಪುರದ ಈಶ್ವರಪ್ಪನ ಸಾಮಾಜಿಕ ಬದಲಾವಣೆ ಜವಾಬ್ದಾರಿ ನೂರ್ಮಡಿಯಾಯಿತು. ಗ್ರಾಮದ ಮಾರುತಿ ಯುವಕ ಮಂಡಳಿಯ ಸದಸ್ಯರಾಗಿ ಗ್ರಾಮಸ್ಥರ ಸೇವೆ ಮಾಡಲು ಆರಂಭಿಸಿದರು. ಇದರಿಂದ ಈಶ್ವರಪ್ಪನವರು ಗ್ರಾಮಸ್ಥರಿಗೆ ಇನ್ನಷ್ಟು ಹತ್ತಿರವಾದರು. ಕಚೇರಿ ಕೆಲಸಗಳಿಗೆ ಈಶ್ವರಪ್ಪ ಅವರ ಸಲಹೆ ಪಡೆಯುತ್ತಿದ್ದರು. ಅಷ್ಟೇ ಪ್ರೀತಿಯಿಂದ ಎಲ್ಲರ ಕೆಲಸವನ್ನು ಈಶ್ವರಪ್ಪ ಮಾಡಿಕೊಟ್ಟರು. ಸಾಕ್ಷರತಾ ಸ್ವಯಂ ಸೇವಕನಾಗಿ ಹಲವು ಕಾರ್ಯಾಗಾರ, ಸಭೆ, ಸಮಾರಂಭಗಳಲ್ಲಿ ಪಾಲ್ಗೊಂಡು ತಮ್ಮ ಗುರಿಯನ್ನು ಇನ್ನಷ್ಟು ಗಟ್ಟಿಮಾಡಿಕೊಂಡರು ಅವರು.

ಕಾಲೇಜು ದಿನಗಳಲ್ಲಿ ಇತರರಂತೆ ಇರದ ಈಶ್ವರ ಅವರು ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸ್ಟೂಡೆಂಟ್ಸ್ ಫೆಡರೇಶನ್‌ ಆಫ್‌ ಇಂಡಿಯಾ (ಎಸ್‌ಎಫ್‌ಐ) ಸಹ ಕಾರ್ಯದರ್ಶಿಯಾಗಿ ಶಾಲಾ, ಕಾಲೇಜುಗಳಲ್ಲಿ ಭಾಷಣ ಮಾಡುತ್ತಿದ್ದರು. ಅಂತರ ಕಾಲೇಜು ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಬಾಚಿಕೊಳ್ಳುತ್ತಿದ್ದರು. ಪದವಿ ನಂತರ ಕಾನೂನು ಪದವಿ ಅಭ್ಯಾಸ ಮುಗಿಸಿದ್ದು ಹುಬ್ಬಳ್ಳಿಯಲ್ಲಿ. ಕಾನೂನು ಪದವಿ ಕಲಿಯುವಾಗ ಅಣಕು ನ್ಯಾಯಾಲಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದವರು. ಆಗಲೇ ಹಲವು ಹೋರಾಟಗಳಲ್ಲೂ ಪಾಲ್ಗೊಂಡ ಈಶ್ವರಪ್ಪ, ಆಗ ಉತ್ತುಂಗದಲ್ಲಿದ್ದ ಗ್ರಾಮೀಣ ಕೃಪಾಂಕ ಹೋರಾಟದಲ್ಲಿ ತೊಡಗಿಸಿಕೊಂಡು ಕುಂದಗೋಳ ಬಂದ್‌ನಲ್ಲಿ ಮುಂಚೂಣಿಯಲ್ಲಿದ್ದರು. ಕಾನೂನು ಪದವಿ ಮುಗಿಯುವ ವೇಳೆಗೆ ಈಶ್ವರಪ್ಪ ಅಪ್ಪಟ ಸಾಮಾಜಿಕ ಕಾರ್ಯಕರ್ತರಾಗಿ ಹೊರಹೊಮ್ಮಿದ್ದರು. ಹೀಗಾಗಿ ಅವರು ವಕೀಲಿ ವೃತ್ತಿ ಕೈಗೊಳ್ಳದೆ, ಸಾಮಾಜಿಕ ಕಾರ್ಯಗಳಲ್ಲೇ ಮುಂದುವರಿಯಲು ನಿರ್ಧರಿಸಿದರು.

ಮನೆಯೇ ಮಂತ್ರಾಲಯ
ಸುಲ್ತಾನ್‌ಪುರದಲ್ಲಿರುವ ಅವರ ಮನೆಯ ವಾತಾವರಣವೇ ದೇವಾಲಯದ ರೀತಿಯಲ್ಲಿದೆ. ಮನೆಯ ಹಿಂದೆ ಸಣ್ಣದೊಂದು ಈಶ್ವರನ ಗುಡಿ ಇದೆ. ಆ ಗುಡಿಯಲ್ಲಿ ಕುಳಿತು ಅಭ್ಯಾಸ ಮಾಡಿಯೇ ಈಶ್ವರಪ್ಪ ತಮ್ಮ ಶಿಕ್ಷಣ ಪೂರೈಸಿದ್ದಾರೆ. ಇಂದಿಗೂ ಅವರ ಎಲ್ಲ ಚಟುವಟಿಕೆಗಳು ಆ ಗುಡಿಯಿಂದಲೇ ಆರಂಭಗೊಳ್ಳುತ್ತವೆ. ಅವರ ಮನೆ ಸುಲ್ತಾನ್‌ಪುರದ ಒಂದು ಮಾದರಿ ಮನೆ. ಚಿಕ್ಕ ಮನೆಯಾದರೂ ಅತ್ಯಂತ ಸುಂದರವಾಗಿ ನಿರ್ಮಿಸಿದ್ದಾರೆ. ಮನೆಯಲ್ಲಿರುವ ಧವಸ, ಧ್ಯಾನಗಳು ಕೆಡದಂತೆ ಮನೆಯ ಛಾವಣಿಗೆ ‘ಗಾಳಿ ತೆರವು’ ಮಾಡಿಸಿದ್ದಾರೆ. ಶೌಚಾಲಯದ ನೀರು ಸೇರಿ ಅವರ ಮನೆಯಲ್ಲಿ ಬಳಸಿದ ಒಂದು ತೊಟ್ಟು ನೀರೂ ವ್ಯರ್ಥವಾಗದಂತೆ ಮನೆಯ ಸುತ್ತ ಇಂಗು ಗುಂಡಿ ನಿರ್ಮಿಸಿದ್ದಾರೆ. ಆ ಇಂಗು ಗುಂಡಿಯ ನೀರು ಮನೆಯ ಹಿಂದಿರುವ ಕೈತೋಟಕ್ಕೆ ಜೀವಾಮೃತವಾಗಿದೆ. ಕೈ ತೋಟದಲ್ಲಿ ಯಾವುದೇ ರಾಸಾಯನಿಕ ಬಳಸದೆ ಹೂವು, ತರಕಾರಿ ಬೆಳೆದುಕೊಳ್ಳುತ್ತಾರೆ. ಮನೆಯ ಮೇಲೆ ಮಳೆಕೊಯ್ಲು ಘಟಕವಿದೆ. ಹೀಗಾಗಿ ಈಶ್ವರಪ್ಪ, ಆದರ್ಶಗಳನ್ನು  ಕೇವಲ ಭಾಷಣಕ್ಕೆ ಮಾತ್ರ ಸೀಮಿತ ಮಾಡಿಕೊಂಡಿಲ್ಲ. ತಮ್ಮ ನಡೆ ನುಡಿ, ಆಚರಣೆಯಲ್ಲೂ ‘ನುಡಿದಂತೆ ನಡೆ’ ಎಂಬ ತತ್ವವನ್ನು ಪಾಲಿಸಿಕೊಂಡು ಬಂದು ಊರಿಗೆ ಮಾದರಿಯಾಗಿದ್ದಾರೆ.

ವೈವಿಧ್ಯಮಯ ಚಟುವಟಿಕೆಗಳು
ಸ್ವಸಹಾಯ ಸಂಘಗಳ ಮೂಲಕ ಹಳ್ಳಿಗಳ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಾಹಿತಿ ಎಂ.ಎಸ್‌. ಮಾಳವಾಡ ಅವರಿಂದ ಮನದಟ್ಟು ಮಾಡಿಕೊಂಡರು. ಅವರ ಮಾರ್ಗದರ್ಶನದಿಂದ ಈಶ್ವರಪ್ಪ ಸುಲ್ತಾನ್‌ಪುರದಲ್ಲಿ ಹಲವು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿದರು. ಸಾಮಾಜಿಕ ಕಾರ್ಯಕರ್ತ ಡಾ. ಪ್ರಕಾಶ್‌ಭಟ್‌ ನಡೆಸುವ ‘ಗ್ರಾಮಚೇತನ’ ಕೃಷಿ ತರಬೇತಿ ಕಾರ್ಯಕ್ರಮ ಅವರನ್ನು ಸಂಪೂರ್ಣ ಕೃಷಿಕನನ್ನಾಗಿ ಮಾಡಿತು. ಗ್ರಾಮವೇ ಚೇತನ ಎಂಬ ಪರಿಕಲ್ಪನೆ ಮೇಲೆ ನಡೆಯುವ ಈ ಕಾರ್ಯಕ್ರಮ, ಈಶ್ವರಪ್ಪ ಅವರಿಗೆ ಸ್ಫೂರ್ತಿಯಾಯಿತು.

   ಸಾವಯವ ಕೃಷಿಗೆ ಒತ್ತುಕೊಟ್ಟು ಕೃಷಿ ಕೈಗೊಂಡಿರುವ ಅವರು ಮೆಣಸಿನಕಾಯಿ, ಶೇಂಗಾ, ತೊಗರಿ, ಹೆಸರು, ಹತ್ತಿ ಬೆಳೆಯನ್ನು ಬೆಳೆಯುತ್ತಾರೆ. ಈಶ್ವರಪ್ಪ ಅವರದ್ದು ಕಲೆಯಲ್ಲೂ ಎತ್ತಿದ ಕೈ. ಅವರು ನೂರಾರು ಬೀದಿನಾಟಕಗಳಲ್ಲಿ ಅಭಿನಯಿಸಿದ್ದಾರೆ. ನೂರಾರು ಜಾನಪದ ಗೀತೆಗಳು ಅವರ ನೆನಪಿನಾಳದಲ್ಲಿವೆ. ಸಿ. ಬಸವಲಿಂಗಯ್ಯ ನಿರ್ದೇಶನದ ‘ಮನುಷ್ಯ ಜಾತಿ ತಾನೊಂದೇ ವಲಂ’ ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಿತ್ತೂರು ಚನ್ನಮ್ಮಾ, ಸಂಗ್ಯಾ ಬಾಳ್ಯ, ಐರಾವರ ಮೈರಾವಣ ದೊಡ್ಡಾಟಗಳು, ಪೂಜಾಕುಣಿತಗಳಲ್ಲಿ ಪಾಲ್ಗೊಂಡಿದ್ದಾರೆ. ಎಸ್‌.ಎಸ್‌. ಹಿರೇಮಠ ಅವರ ತಂಡದ ಜೊತೆ ರಾಜ್ಯ, ಹೊರರಾಜ್ಯಗಳಲ್ಲೂ ತತ್ವಪದ, ಗೀಗೀ ಪದ, ಲಾವಣಿ, ನೃತ್ಯ, ರೂಪಕ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ವಾರ್ತಾ ಇಲಾಖೆಯ ಬಹುತೇಕ ಕಾರ್ಯಕ್ರಮಗಳಲ್ಲಿ ಈಶ್ವರಪ್ಪ ಮುಖ್ಯ ಪಾತ್ರ ವಹಿಸಿದ್ದಾರೆ. ಏಡ್ಸ್‌ ನಿರ್ಮೂಲನಾ ಕಾರ್ಯಕ್ರಮದಡಿ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಜಾಗೃತಿ ಜಾಥದಲ್ಲಿ ಪಾಲ್ಗೊಂಡು ಯುವಜನಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಏಡ್ಸ್‌ ಪೀಡಿತರನ್ನು ಸಮಾಜ ಕಡೆಗಣಿಸದಂತ ತಿಳಿ ಹೇಳಿದ್ದಾರೆ. ಕಬಡ್ಡಿ, ಚಿಣ್ಣಿದಾಂಡು, ಮಲ್ಲಕಂಬ, ಕುಸ್ತಿ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಗ್ರಾಮೀಣ ಆಟಗಳ ಉಳಿವಿಗಾಗಿ ಶ್ರಮಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ಕೈಗೊಂಡ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದಾದ್ಯಂತ ಪ್ರವಾಸ ಮಾಡಿ ಮತದಾರರಲ್ಲಿ ಅರಿವು ಮೂಡಿಸಿದ್ದಾರೆ.

ಹಳ್ಳಿ ಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಶ್ರಮಿಸುತ್ತಿರುವ ಅವರು ಮೂಢನಂಬಿಕೆಗಳಿಂದ ದೂರ ಇರುವಂತೆ ಜಾಗೃತಿ ಕಾರ್ಯಕ್ರಮ ನಡೆಸುತ್ತಾರೆ. ಅದಕ್ಕಾಗಿ ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಈಶ್ವರಪ್ಪ ಅವರ ಸಾಮಾಜಿಕ ಸೇವಾ ಕಾರ್ಯಕ್ಕೆ ಹಲವು ಗೌರವ ಪ್ರಶಸ್ತಿಗಳು ಅರಸಿ ಬಂದಿವೆ. ಧಾರವಾಡ ಜಿಲ್ಲಾ ಯುವ ಪ್ರಶಸ್ತಿ, ಯುವಜನ ಸೇವಾ ಪ್ರಶಸ್ತಿ, ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ, ಗುರುಗೋವಿಂದ ರಾಜ್ಯ ಪ್ರಶಸ್ತಿ ಮುಂತಾದುವು ಈಶ್ವರಪ್ಪ ಅವರ ಮುಡಿಗೇರಿವೆ. ಈಚೆಗೆ ‘ರಾಷ್ಟ್ರೀಯ ಯುವ ಪುರಸ್ಕಾರ’ ವನ್ನೂ ತಮ್ಮದಾಗಿಸಿಕೊಂಡಿದ್ದಾರೆ.

   ‘ಹಳ್ಳಿಗಳಲ್ಲಿ ಸ್ವರ್ಗವಿದೆ. ಯುವಕರು ನಗರಕ್ಕೆ ವಲಸೆ ಹೋಗುವುದನ್ನು ಬಿಟ್ಟು ಇಲ್ಲೇ ಬದುಕು ಕಂಡುಕೊಂಡರೆ ಹಳ್ಳಿಯಲ್ಲೇ ಅಮೆರಿಕ ಸೃಷ್ಟಿಸಬಹುದು’ ಎನ್ನುತ್ತಾರೆ ಈಶ್ವರಪ್ಪ ಗಂಗಪ್ಪ ಅರಳಿ. ಅವರ ಸಂಪರ್ಕಕ್ಕೆ: 9741246835.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT