ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಇಂದು ಭಾರತ–ಬೆಲ್ಜಿಯಂ ಪಂದ್ಯ

Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ಆ್ಯಂಟ್‌ವರ್ಪ್, ಬೆಲ್ಜಿಯಂ (ಪಿಟಿಐ):  ಎಂಟರ ಘಟ್ಟದ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ರೋಚಕ ಜಯ ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಭಾರತ ಹಾಕಿ ತಂಡದ ಮುಂದೆ ಈಗ  ಕಠಿಣ ಸವಾಲು ಇದೆ. ಆಕ್ರಮಣಕಾರಿ ಆಟಕ್ಕೆ ಹೆಸರಾಗಿ ರುವ ಆತಿಥೇಯ ಬೆಲ್ಜಿಯಂ ತಂಡವನ್ನು  ಶುಕ್ರವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ  ಸರ್ದಾರ್ ಸಿಂಗ್ ಬಳಗ ಎದುರಿಸಲಿದೆ. 

ಅಂತರರಾಷ್ಟ್ರೀಯ ಹಾಕಿ ಕ್ರೀಡೆಯಲ್ಲಿ ಮಿಂಚಿನ ವೇಗದಲ್ಲಿ ಬೆಳೆಯುತ್ತಿರುವ ಬೆಲ್ಜಿಯಂ ತಂಡವು  ಈ ಹಿಂದೆಯೂ ಹಲವು ಬಾರಿ ಭಾರತ ತಂಡಕ್ಕೆ ಕಠಿಣ ಸವಾಲು ಒಡ್ಡಿದೆ.  2012ರ ಒಲಿಂಪಿಕ್ಸ್ ಮತ್ತು 2014ರ ವಿಶ್ವಕಪ್ ಹಾಕಿಯಲ್ಲಿ ಬೆಲ್ಜಿಯಂ ಆಘಾತ ನೀಡಿತ್ತು. ನಂತರ ಮೆಲ್ಬರ್ನ್‌ನಲ್ಲಿ ನಡೆದ ಚಾಲೆಂಜರ್ಸ್ ಟ್ರೋಫಿಯಲ್ಲಿ  ಬೆಲ್ಜಿಯಂ ವಿರುದ್ಧ ಭಾರತ ಸೇಡು ತೀರಿಸಿಕೊಂಡಿತ್ತು.

‘ಬೆಲ್ಜಿಯಂ ತಂಡವು ಯೋಜನಾಬದ್ಧ ಆಟ ಆಡುತ್ತದೆ. ನಮ್ಮ ಹಾಗೂ ಬೆಲ್ಜಿಯಂ ತಂಡಗಳ ಆಟದ ಶೈಲಿಯಲ್ಲಿ ಸಾಮ್ಯತೆ ಇದೆ. ಅವರ ಸವಾಲನ್ನು ಯಶಸ್ವಿಯಾಗಿ ಗೆಲ್ಲುವ ವಿಶ್ವಾಸ ನಮಗಿದೆ’ ಎಂದು ಭಾರತದ ಕೋಚ್ ಪಾಲ್  ವ್ಯಾನ್ ಆಸ್ ಹೇಳಿದ್ದಾರೆ.

ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಭಾರತವು 3–2ರಿಂದ ಗೆಲುವು ಸಾಧಿಸಲು ಯುವ ಆಟಗಾರ ಜಸ್ಜೀತ್ ಸಿಂಗ್ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಿನಲ್ಲಿ ಪರಿವರ್ತಿಸಿದ್ದು  ಕಾರಣವಾಗಿತ್ತು.   ಎಂಟರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಬೆಲ್ಜಿಯಂ 5–4ರಿಂದ ಫ್ರಾನ್ಸ್‌ ವಿರುದ್ಧ ರೋಚಕ ಜಯ ಗಳಿಸಿತ್ತು.  ಭಾರತ ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಕಾರಣ ಯಾವ ಒತ್ತಡವಿಲ್ಲ.
*
ಇಟಲಿ ವಿರುದ್ಧ ಭಾರತ ವನಿತೆಯರಿಗೆ ಜಯ
ಭರವಸೆಯ ಆಟಗಾರ್ತಿ ರಾಣಿ ರಾಮಪಾಲ್ ಮತ್ತು ಗೋಲ್‌ಕೀಪರ್ ಸವಿತಾ ಅವರ ಛಲದ ಆಟದಿಂದ  ಭಾರತ ವನಿತೆಯರ ತಂಡವು  ಗುರುವಾರ ವಿಶ್ವ ಹಾಕಿ ಸೆಮಿಫೈನಲ್‌ ಲೀಗ್ ಟೂರ್ನಿಯ ಪ್ಲೇಆಫ್‌  ಪಂದ್ಯದಲ್ಲಿ ಗೆದ್ದಿತು.

ಭಾರತದ ವನಿತೆಯರು 5–4ರಿಂದ ಇಟಲಿಯನ್ನು ಸಡನ್‌ ಡೆತ್‌ನಲ್ಲಿ ಸೋಲಿಸಿದರು. ಪಂದ್ಯದ ನಿಗದಿತ ಅವಧಿಯಲ್ಲಿ 1–1 ಗೋಲುಗಳಿಂದ ಉಭಯ ತಂಡಗಳು ಸಮಬಲ ಸಾಧಿಸಿದವು.  ನಂತರ  ಪೆನಾಲ್ಟಿ ಶೂಟೌಟ್‌ನಲ್ಲಿ 4–4ರ ಸಮಬಲ ಸಾಧಿಸಿದವು. ನಂತರ ಸಡನ್‌ ಡೆತ್‌ನಲ್ಲಿ ರಾಣಿ ರಾಮಪಾಲ್ ತಮ್ಮ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದರು.

ಇಟಲಿಯ ಗುಲಿಯಾನಾ ರಗ್ಗೀರಿ ಅವರ ಸ್ಟ್ರೋಕ್‌ಗೆ ಅಡ್ಡಗೋಡೆಯಂತೆ ನಿಂತ ಸವಿತಾ  ಭಾರತಕ್ಕೆ ಗೆಲುವಿನ ಕಾಣಿಕೆ ನೀಡಿದರು. ಪಂದ್ಯದ ಒಂಬತ್ತನೆ ನಿಮಿಷದಲ್ಲಿ ಇಟಲಿಯು ಮೊದಲ ಗೋಲು ದಾಖಲಿಸಿತ್ತು.  ನಂತರ 33ನೇ ನಿಮಿಷದಲ್ಲಿ ರಾಣಿ ರಾಮಪಾಲ್ ಆಕರ್ಷಕ  ಗೋಲು ಗಳಿಸುವ ಮೂಲಕ  ಸ್ಕೋರ್  ಸಮ ಮಾಡಿದ್ದರು.

ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತದ ವಂದನಾ ಕಟಾರಿಯಾ ಗೋಲು ಗಳಿಸುವಲ್ಲಿ ವಿಫಲರಾದರು. ನವಜೋತ್ ಕೌರ್, ಅನುರಾಧಾ ತಕೋಮಾ, ರಾಣಿ ರಾಮಪಾಲ್ ಮತ್ತು ದೀಪಿಕಾ ಗೋಲು ಗಳಿಸಿದರು.  ಇದಕ್ಕೆ ಉತ್ತರವಾಗಿ ಇಟಲಿಯ ವ್ಯಾಲೆಂಟಿನಾ ಬ್ರಾಕೊನಿ, ಮಾರ್ಸೆಲಾ ಕ್ಯಾಸಲೆ, ಗುಲಿಯಾನಾ ರಗ್ಗೀರಿ ಮತ್ತು ಚಿಯರಾ ಟಿಡ್ಡಿ ಗೋಲು ಹೊಡೆದರು.  ದಲಿಲಾ ಮಿರಾಬೆಲ್ಲಾ ಅವರ ಪ್ರಯತ್ನವನ್ನು ಭಾರತದ ಗೋಲ್‌ಕೀಪರ್   ವಿಫಲಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT