ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡು–ಹೊಡೆದಾಟದ ‘ಗಣಪ’

Last Updated 21 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಹೋಟೆಲ್, ಕ್ರೀಡಾಂಗಣದ ಬದಲಿಗೆ ಬೆಂಗಳೂರಿನ ದೊಡ್ಡಗಣಪನ ಗುಡಿಯಲ್ಲಿ ಆಯೋಜಿಸಿದ್ದ ‘ಗಣಪ’ ಸಿನಿಮಾದ ಹಾಡುಗಳ ಸಿ.ಡಿ ಬಿಡುಗಡೆ ಸಮಾರಂಭಕ್ಕೆ ಸಾಮಾಜಿಕ ಸೇವೆಯ ಒಂದಂಶವೂ ಸೇರಿತ್ತು.

ಸಂಗೀತದಲ್ಲಿ ಸಾಧನೆ ಮಾಡಿರುವ ಹಲವಾರು ಅಂಧ ಯುವಕರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಯಿತು. ಕಾರ್ಯಕ್ರಮದ ಬಳಿಕ ಎಲ್ಲರಿಗೆ ವಿಶೇಷ ಕೈಗಡಿಯಾರಗಳನ್ನು ಕೊಡುಗೆಯಾಗಿ ನೀಡಿದಾಗ ಅವರ ಮೊಗದಲ್ಲಿ ಅರಳಿದ ನಗು ಎಲ್ಲರ ಗಮನ ಸೆಳೆಯಿತು.

ಸುಮಾರು ಒಂದು ವರ್ಷದ ಹಿಂದೆ ಆರಂಭವಾದ ‘ಗಣಪ’ ಚಿತ್ರ, ಈಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈ ಹಿಂದೆ ಕಾಮಿಡಿ ಹಾಗೂ ಪ್ರೀತಿಯ ಕಥಾವಸ್ತು ಇಟ್ಟುಕೊಂಡು ಎರಡು ಸಿನಿಮಾ ಮಾಡಿದ್ದ ಪ್ರಭು ಶ್ರೀನಿವಾಸ್ ಅವರ ಮೂರನೇ ಚಿತ್ರ ಆ್ಯಕ್ಷನ್ ಕೇಂದ್ರಿತವಾದದ್ದು. ‘ಈ ಕಥೆಯನ್ನು ನಿರ್ಮಾಪಕ ಪರಮೇಶ್ ಅವರಿಗೆ ಹೇಳಿದಾಗ ತಕ್ಷಣ ಒಪ್ಪಿಕೊಂಡುಬಿಟ್ಟರು’ ಎಂದು ಖುಷಿಪಟ್ಟರು ಪ್ರಭು.

ನಾಯಕ ಹೊಸಬನಾಗಿರಬೇಕು ಎಂಬ ಇರಾದೆಯೊಂದಿಗೆ ಹುಡುಕಾಟ ನಡೆಸಿದಾಗ ಕಂಡಿದ್ದು ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್. ಚೆನ್ನೈ ಸಮೀಪವಿರುವ ಕೂತುಪಟ್ರೆ ಎಂಬ ಅಭಿನಯ ಕೇಂದ್ರದಲ್ಲಿ ಸಂತೋಷ್‌ಗೆ ತರಬೇತಿ ಕೊಡಿಸಿದ್ದು, ಅದರ ಪರಿಣಾಮವಾಗಿ ಅವರಿಂದ ಉತ್ತಮ ಅಭಿನಯ ಹೊರಹೊಮ್ಮಿದ್ದನ್ನು ಪ್ರಭು ನೆನಪಿಸಿಕೊಂಡರು. ಚಿತ್ರೀಕರಣದ ಸಮಯದಲ್ಲಿ ಎರಡು ಸಲ ಸಂತೋಷ್ ಕಾಲು ಮುರಿದುಕೊಂಡಿದ್ದನ್ನು ಸಹ ಅವರು ಬಹಿರಂಗಪಡಿಸಿದರು!

ಸಿನಿಮಾದಲ್ಲಿನ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ ಕರಣ್ ಬಿ. ಕೃಪ, ನಿರ್ಮಾಪಕರ ಬದ್ಧತೆಯನ್ನು ಕೊಂಡಾಡಿದರು. ಒಂದು ಹಾಡನ್ನು ಸೋನು ನಿಗಮ್ ಅವರಿಂದಲೇ ಹಾಡಿಸಬೇಕು ಎಂದು ಮುಂಬೈಗೆ ಹೋದಾಗ, ಅವರು ಅನಾರೋಗ್ಯಕ್ಕೆ ಈಡಾಗಿದ್ದರು. ಇನ್ನೊಬ್ಬ ಗಾಯಕ ಅಂಕಿತ್ ತಿವಾರಿ ಅವರಿಂದ ಹಾಡಿಸಿ, ರೆಕಾರ್ಡಿಂಗ್ ಮಾಡಿಕೊಂಡು ಬಂದರೂ ಪರಮೇಶ್ ಅವರಿಗೆ ತೃಪ್ತಿ ಅನಿಸಲಿಲ್ಲ. ಹೀಗಾಗಿ ಮತ್ತೆ ಸೋನು ನಿಗಮ್ ಅವರಿಂದಲೇ ಹಾಡಿಸಲಾಯಿತಂತೆ. ‘ಚಿತ್ರಕಥೆಯಲ್ಲಿ ಸಂದರ್ಭಕ್ಕೆ ತಕ್ಕಂತೆ ಹಾಡುಗಳು ಇವೆ’ ಎಂದರು ಕರಣ್.

ಸಿ.ಡಿ ಬಿಡುಗಡೆ ಮಾಡಿದ ತೇಜಸ್ವಿನಿ ಅನಂತಕುಮಾರ್, ಚಿತ್ರರಂಗ ಸಂವೇದನೆಯನ್ನು ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು. ನಾಯಕಿ ಪ್ರಿಯಾಂಕ, ಚಿತ್ರದ ಇನ್ನೊಬ್ಬ ನಿರ್ಮಾಪಕ ಪ್ರೇಮ್, ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ, ಮೇಯರ್ ಸತ್ಯನಾರಾಯಣ, ನಿರ್ಮಾಪಕರಾದ ಆನೇಕಲ್ ಬಾಲರಾಜ್, ಎನ್.ಎಂ.ಸುರೇಶ, ರವಿ ಆರ್. ಗರಣಿ, ಬಿ.ವಿಜಯಕುಮಾರ್, ಆನಂದ್ ಆಡಿಯೋದ ಮೋಹನ್ ಇತರರು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT