ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡೇ ಹಾದಿಯ ತೋರಿತು...

Last Updated 13 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಎಲ್ಲ ಕಾಲಕ್ಕೂ ಎಲ್ಲ ಸಮಯಕ್ಕೂ ಒದಗಿಬರುವ ಸಂಗತಿಗಳಲ್ಲಿ ಸಂಗೀತವೂ ಒಂದು. ‘ಈ ಜಗವೆಲ್ಲ ನಾದಮಯ’ ಎನ್ನುವುದು ಹಾಡಷ್ಟೇ ಅಲ್ಲ; ಅದು ಸಂಗೀತದ ಸರ್ವಾವ್ಯಾಪಿ ಗುಣವನ್ನು ಮನಗಾಣಿಸುವ ಸಾಕ್ಷಾತ್ಕಾರದ ವ್ಯಾಖ್ಯಾನ. ಅಮ್ಮನಂತೆ, ಸಖಸಖಿಯರಂತೆ ಒದಗಿಬರುವ ಬಹುರೂಪಿ ಸಂಗೀತದಲ್ಲಿ ಔಷಧಿ ಗುಣವೂ ಇದೆ. ಹಾಡು ತೋರುವ ಹಾದಿಯಲ್ಲಿ ಏನಿಲ್ಲ ಏನಿದೆ ಎನ್ನುವುದರ ಲೆಕ್ಕಾಚಾರ ನಮ್ಮ ಒಳಹೊರಗನ್ನು ನೋಡಿಕೊಳ್ಳುವ ಬಗೆಯೂ ಹೌದು. ಹಾಡಿನ ಹಾದಿಯ ಇಲ್ಲಿನ ಅವಲೋಕನ ಹಾಡಿನ ರುಚಿಯ ಜೊತೆಗೆ ಓದಿನ ರುಚಿಯನ್ನೂ ಹೆಚ್ಚಿಸುವಂತಹದ್ದು.

ಇತ್ತೀಚೆಗೆ ಓದುತ್ತಿರುವಾಗ ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ರ ಎರಡು ಕಥೆಗಳಲ್ಲಿನ ಹಾಡಿನ ಅಥವಾ ಸಂಗೀತದ ಪ್ರಸ್ತಾಪಗಳು ನನ್ನ ಗಮನವನ್ನು ಸೆಳೆದವು. ‘ಈ ಊರಿನಲ್ಲಿ ಕಳ್ಳರೇ ಇಲ್ಲ’ ಎಂಬ ಒಂದು ನೀಳ್ಗಥೆಯ (ಅನುವಾದ: ಎಸ್. ದಿವಾಕರ್) ನಾಯಕ ದಮಾಸೋ ತನ್ನ ಊರಿನ ಒಂದು ಕ್ಲಬ್ಬಿನಲ್ಲಿ ಕಳ್ಳತನ ಮಾಡಲು ಹೋಗಿ ಏನೂ ಸಿಗದಾದಾಗ ಅಲ್ಲಿನ ಬಿಲಿಯರ್ಡ್ಸ್ ಬಾಲುಗಳನ್ನು ಕದ್ದು ತರುತ್ತಾನೆ. ಅದರಿಂದ ಆ ಆಟ ನಿಂತು ಊರಿಗೇ ಒಂದು ರೀತಿ ಮಂಕು ಕವಿದಂತಾದಾಗ, ತನ್ನ ಊರಿನ ಮಂಕಿಗೆ ತಾನೇ ಕಾರಣನಾದ ಬೇಸರವು ಅವನನ್ನು ಕವಿದ ಪರಿಣಾಮವಾಗಿ ಒಂದು ರಾತ್ರಿ ಕ್ಲಬ್ಬಿಗೆ ಹೋಗಿ ಸಮಾ ಕುಡಿಯುತ್ತಾನೆ. ಹಾಡು ಕೇಳಬಯಸಿ ಜೂಕ್‌ಬಾಕ್ಸಿಗೆ ನಾಣ್ಯ ಹಾಕುತ್ತಾನೆ. ಆ ಸಂಗೀತದ ವಾಲ್ಯೂಮು ಮತ್ತು ಆ ಯಂತ್ರಗಳು ಅವನಿಗೆ ತನ್ನ ನಿಷ್ಠೆಯ, ಗದ್ದಲದ ಪ್ರತೀಕದಂತಿವೆ ಎನಿಸಿಬಿಡುತ್ತದೆ.


‘ಪಂಜರಗಳು’ (ಅನುವಾದ: ಜಿ.ಎಸ್.ಸದಾಶಿವ) ಎಂಬ ಮತ್ತೊಂದು ಕಥೆಯಲ್ಲಿ ಅದರ ಕಥಾನಾಯಕ ಬಾಲ್ತಜಾರ್ ಅದ್ಭುತವಾದ ಪಂಜರವೊಂದನ್ನು ತಯಾರಿಸಿದ್ದಾನೆ. ಅದು ಒಳ್ಳೆಯ ಬೆಲೆಗೆ ಮಾರಾಟವಾಗಬಹುದೆಂಬ ನಿರೀಕ್ಷೆಯಲ್ಲಿ ಅವನ ಹೆಂಡತಿ ಇದ್ದಾಳೆ. ಅದೇ ಸಮಯಕ್ಕೆ ಅವರ ನಿರೀಕ್ಷೆಗಿಂತ ಹೆಚ್ಚು ಹಣ ನೀಡಿ ಖರೀದಿಸಲು ಒಬ್ಬ ಗಿರಾಕಿ ಮುಂದೆ ಬಂದಿದ್ದಾನೆ. ಅದನ್ನು ಕೊಂಡು ತನ್ನ ಹೆಂಡತಿಗೆ ಕೊಡುವ ಮೂಲಕ ಅವಳನ್ನು ಖುಷಿಪಡಿಸುವ ತವಕ ಈ ಗಿರಾಕಿಗೆ. ಬಾಲ್ತಜಾರ್‌ಗೆ ಮಾತ್ರ ಅದನ್ನು ಅಲ್ಲಿಯ ಶ್ರೀಮಂತನಾದ ಜೋಸೆ ಮಾಂಟೆಯೋಲ್‌ಗೇ ಮಾರಬೇಕೆಂಬ ಆಸೆ. ಏಕೆಂದರೆ ಅವನು ಅದನ್ನು ಜೋಸೆಯ ಮಗ ಪೆಪಿಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ತಯಾರಿಸಿದ್ದಾನೆ. ಈ ವಿಷಯ ಜೋಸೆಗೂ ಗೊತ್ತಿಲ್ಲ; ಪೆಪಿಗೂ ಗೊತ್ತಿಲ್ಲ. ಆದರೂ ಬಾಲ್ತಜಾರ್ ಅದನ್ನು ಮತ್ತೊಬ್ಬ ಗಿರಾಕಿಗೆ ಮಾರಲು ಸಿದ್ಧನಿಲ್ಲ ಮತ್ತು ಜೋಸೆಯ ಮನೆಗೆ ಮಾರಲೆಂದು ಕೊಂಡೊಯ್ದರೆ ಅವನು ಅದನ್ನು ಕೊಳ್ಳಲು ತಯಾರಿಲ್ಲ. ಅದನ್ನು ತಯಾರಿಸಿದ್ದೇ ಪೆಪಿಗಾಗಿ, ಆದ್ದರಿಂದ ಕೊಳ್ಳದಿದ್ದರೂ ಅದು ಸೇರಬೇಕಾದ್ದು ಅವನಿಗೇ ಎಂದು ಹೇಳಿ ಜೋಸೆಯ ಮನೆಯಲ್ಲಿ ಅದನ್ನಿಟ್ಟು ಕ್ಲಬ್ಬಿಗೆ ಬಂದುಬಿಟ್ಟಿದ್ದಾನೆ ಬಾಲ್ತಜಾರ್. ಅಲ್ಲಿ ನೆರೆದವರಿಗೆ ಮಾತ್ರ ಜಿಪುಣ ಜೋಸೆಯಿಂದ ತಾನು ಸರಿಯಾದ ಮೊತ್ತ ಪಡೆದೇ ಪಂಜರ ಕೊಟ್ಟುಬಂದಿದ್ದಾಗಿ ಸುಳ್ಳು ಹೇಳುತ್ತಿದ್ದಾನೆ. ಜಿಪುಣಾಗ್ರೇಸರ ಜೋಸೆಯಿಂದ ದುಡ್ಡು ಪಡೆದ ಸಾಧನೆಗಾಗಿ ಜನ ಇವನಿಗೆ ಬಿಯರ್ ಕೊಡಿಸುತ್ತಾರೆ. ನಂತರ ಬಾಲ್ತಜಾರ್ ಅಲ್ಲಿರುವ ಜೂಕ್‌ಬಾಕ್ಸಿಗೆ ತನ್ನಿಷ್ಟದ ಹಾಡುಗಳನ್ನು ಕೇಳುವುದಕ್ಕಾಗಿ ರಾತ್ರಿ ಎರಡು ಗಂಟೆಯವರೆಗೆ ದುಡ್ಡು ಸುರಿಯುತ್ತಲೇ ಹೋಗುತ್ತಾನೆ.

ದಮಾಸೋ ಮತ್ತು ಬಾಲ್ತಜಾರ್‌ರ ಪಾತ್ರಗಳ ಮೂಲಕ ಕ್ಲಬ್ಬಿನಲ್ಲಿಯ ಜನಪ್ರಿಯವಷ್ಟೇ ಅಲ್ಲ ಒಟ್ಟಾರೆ ಎಲ್ಲ ವಿಧದ ಸಂಗೀತದ ಸಂತೈಕೆಯ ಗುಣದ ಬಗ್ಗೆ ಮಾರ್ಕ್ವೆಜ್‌ಗಿರುವ ಬಲವಾದ ನಂಬಿಕೆಯು ಇಲ್ಲಿ ಪ್ರಕಟಗೊಂಡಿದೆ ಎಂಬಂತೆ ನಾನು ಓದಿಕೊಂಡೆ. ಏಕೆಂದರೆ ನಾನು, ನೀವು, ಅಷ್ಟೇಕೆ ಎಲ್ಲರೂ ಕೆಲವು ವೇದನೆಯ ಗಳಿಗೆಗಳಲ್ಲಿ, ಕಣ್ಣೀರು ಕೊಡವಿಕೊಳ್ಳಲು ನೆರವಿಗೆ ಬಂದ ಹೆಗಲಿನಂತೆ, ಭರವಸೆ ತುಂಬಲು ಮೌನವಾಗಿ ನಮ್ಮ ಅಂಗೈಯನ್ನು ಅದುಮುವ ಆಪ್ತಮಿತ್ರನಂತೆ- ಸಂಗೀತದ ನೆರವನ್ನು ಪಡೆದೇ ಪಡೆದಿರುತ್ತೇವೆ. ಹಾಗಾಗಿ ಹಾಡೆಂಬುದು ಹಾದಿ ತೋರುವ ಒಂದು ಗುರುಸದೃಶ ವ್ಯಕ್ತಿತ್ವವೆಂದು ನನ್ನ ಬಲವಾದ ನಂಬಿಕೆ.

ಜಗತ್ತಿನ ಯಾವುದೇ ದೇಶವಾಗಲಿ ಹಾಡಿಲ್ಲದೆ ಇಲ್ಲ. ಅಳುವಿಗೆ, ನಗುವಿಗೆ, ಆನಂದಕ್ಕೆ, ಆಘಾತಕ್ಕೆ, ಸಹಮತಕ್ಕೆ, ಸಾಂತ್ವನಕ್ಕೆ, ವಿರಹಕ್ಕೆ, ಮಿಲನಕ್ಕೆ, ವಿಯೋಗಕ್ಕೆ, ವಿಪ್ರಲಂಭಕ್ಕೆ ಎಲ್ಲದಕ್ಕೂ ಹಾಡು ಅನುಗಾಲದ ಗೆಳೆಯನಂತೆ ಹೆಗಲಿಗೆ ಹೆಗಲು ಕೊಡುತ್ತದೆ. ನಮ್ಮ ಭಾರತದಲ್ಲಂತೂ ಹಾಡುಗಳಿರದ ಜನಜೀವನಶೈಲಿಯನ್ನು ಊಹಿಸಿಕೊಳ್ಳುವುದೂ ಕಷ್ಟ. ಜಾನಪದ ಸಾಹಿತ್ಯ, ಸಿನಿಮಾ, ದೈನಂದಿನ ಬದುಕು ಎಲ್ಲ ಗಾನಮಯ, ನಾದಮಯ. ಮನರಂಜನಾ ಪ್ರಕಾರಗಳಲ್ಲಂತೂ ಹಾಡು ಕಡ್ಡಾಯ ಅಂಶವೆಂಬ ಮಟ್ಟಿಗೆ ಬೆರೆತು ಬಂದಿದೆ. ರಂಗಭೂಮಿ ಉತ್ತುಂಗದಲ್ಲಿದ್ದಾಗ ಆ ಕ್ಷೇತ್ರವನ್ನು ನಟರಾಗಿ ಸೇರಬಯಸುವವರು ಸ್ವತಃ ಉತ್ತಮ ಗಾಯಕರಾಗಿರಲೇಬೇಕಾದುದು ಕಡ್ಡಾಯವಾಗಿತ್ತು. ಬಹುಪಾಲು ಸಂಭಾಷಣೆಗಳು ಕೂಡ ಹಾಡಿನ ರೂಪದಲ್ಲೇ ಇರುತ್ತಿದ್ದವು. ಕಾಲ ಬದಲಾಗಿ ನಾಟಕಗಳು ಹಿನ್ನೆಲೆಗೆ ಸರಿದು ಸಿನಿಮಾ ಪ್ರಭಾವ ಜೋರಾಯಿತು.

ಮಾಧ್ಯಮ ಬದಲಾದರೂ ಹಾಡಿನ ಮಹತ್ವ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಹಾಗಾಗಿಯೇ ಇಂದಿಗೂ ಹಾಡಿಲ್ಲದ ಸಿನಿಮಾವು ಮಾತಿಲ್ಲದ ಸಿನಿಮಾದಷ್ಟೇ ಅಪರೂಪದಲ್ಲಿ ಅಪರೂಪ. ಮಾತಿಲ್ಲದ ಸಿನಿಮಾಕ್ಕೆ ಉದಾಹರಣೆಯಾಗಿ ಈ ಕಾಲದಲ್ಲೂ ಸಿಂಗೀತಂ ಶ್ರೀನಿವಾಸರಾವ್‌ರ ನಿರ್ದೇಶನದ, ಕಮಲಹಾಸನ್ ಅಭಿನಯದ ‘ಪುಷ್ಪಕವಿಮಾನ’ ಇದೆಯೆನ್ನಿ. ಆದರೆ ಹಾಡಿಲ್ಲದ್ದು? ಹಾಡೆಂದರೆ ಬರಿಯ ಗಾಯನವೆಂದಲ್ಲ, ಅದು ಹಿನ್ನೆಲೆಯ ವಾದ್ಯಸಂಗೀತವೂ ಆಗಿರಬಹುದು. ಅಂಥದೊಂದು ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಈವರೆಗೆ ಬಂದಿಲ್ಲ. ಪ್ರಾಯಃ ಮುಂದೆ ಬರಲಿಕ್ಕೂ ಇಲ್ಲ. ಒಮ್ಮೆ ಹಿಂತಿರುಗಿ ನೋಡಿದರೆ ಪೇಲವವಾದ ಕಥೆ, ಪೇಲವವಾದ ನಿರೂಪಣೆಯ ಚಿತ್ರಗಳೆಷ್ಟೋ ಸುಂದರವಾದ ಹಾಡುಗಳ ಬಲದಿಂದಲೇ ಗೆದ್ದಿರುವ ಅನೇಕ ಉದಾಹರಣೆಗಳು ನಮಗೆ ಸಿಗುತ್ತವೆ. ರಾಜ್‌ಕಪೂರ್, ಗುರುದತ್, ವಿ.ಶಾಂತಾರಾಂ, ಪುಟ್ಟಣ್ಣ ಕಣಗಾಲ್, ಕೆ.ಬಾಲಚಂದರ್, ಕೆ.ವಿಶ್ವನಾಥ್, ಮಣಿರತ್ನಂರಂಥ ನಿರ್ದೇಶಕರ ಸಿನಿಮಾಗಳಲ್ಲಿ ಹಾಡುಗಳು ಮತ್ತು ಸಂಗೀತ ಅವುಗಳ ಆತ್ಮದಂತೆ ಬೆರೆತು ಇಡಿ ಚಿತ್ರವನ್ನು ಬೆಳಗುವುದನ್ನು ನಾವು ಕಂಡಿದ್ದೇವೆ. ಎಷ್ಟೋ ಜನ ಸಂಗೀತ ನಿರ್ದೇಶಕರು ಮತ್ತು ಗಾಯಕರು ನಾಯಕನಟರಿಗಿಂತ ಒಂದು ಗುಲಗುಂಜಿಯೂ ಕಡಿಮೆಯಿಲ್ಲದ ಖ್ಯಾತಿಯನ್ನು ಪಡೆದಿರುವ ನೂರಾರು ಉದಾಹರಣೆಗಳು ನಮಗೆಲ್ಲ ತಿಳಿದೇ ಇವೆ.

ಸಂಗೀತ ನಿರ್ದೇಶಕರಾದ ಇಳಯರಾಜಾ, ಎ.ಆರ್.ರೆಹಮಾನ್, ಹಂಸಲೇಖ, ಮನೋಮೂರ್ತಿ, ರಾಜನ್-ನಾಗೇಂದ್ರ, ಉಪೇಂದ್ರಕುಮಾರ್ ಮುಂತಾದವರು ಹಾಗೂ ಪಿಬಿಎಸ್, ಎಸ್‌ಪಿಬಿ, ಶಿವಮೊಗ್ಗ ಸುಬ್ಬಣ್ಣ, ರಾಜ್‌ಕುಮಾರ್, ಲತಾ ಮಂಗೇಶ್ಕರ್, ಪಿ.ಸುಶೀಲಾ, ಎಸ್.ಜಾನಕಿ ಮುಂತಾದ ಗಾಯಕರನ್ನು ಹೊರತುಪಡಿಸಿ ಒಂದು ಸಿನಿಮಾವನ್ನು ನೋಡುವುದೆಂದರೆ ಮಾಧುರ್ಯದ ಮುಖ್ಯಪುಟವನ್ನು ಹರಿದೊಗೆದು ಉಳಿಕೆ ಹಾಳೆಗಳನ್ನು ಓದುತ್ತ ಕುಳಿತಂತಾಗುತ್ತದೆ. ಭಾರತೀಯ ಚಲನಚಿತ್ರ ರಂಗದಲ್ಲಿ ದೃಶ್ಯಗಳೇ ಹಾಡಾದ ಸಂದರ್ಭಗಳು ಹಲವಿರುವಂತೆ; ಸುದೀರ್ಘ ಸಂಭಾಷಣೆಗಳೂ ಹಾಡಾಗಿ ರೂಪಾಂತರ ಹೊಂದಿದ ಸಂದರ್ಭಗಳು ಹಲವಿವೆ. ಆದರೆ ಹಾಡುಗಳ ಮೂಲಕವೇ ಇಡೀ ಸಿನಿಮಾದ ಕಥನವನ್ನು ಹೇಳುತ್ತ ಸಾಗಿದ ಮ್ಯೂಸಿಕಲ್ ಹಿಟ್‌ಗಳು ಬೆರಳೆಣಿಕೆಯಷ್ಟಿದ್ದರೂ ಅವು ತಮ್ಮ ಅನನ್ಯ ಅಸ್ತಿತ್ವವನ್ನು ಇಂದಿಗೂ ಕಾಪಾಡಿಕೊಂಡು ಬಂದಿವೆ. ಹಿಂದಿಯ ‘ಹಮ್ ಆಪ್ಕೆ ಹೈ ಕೌನ್’ ಹಾಗೂ ನಮ್ಮ ಕನ್ನಡದ ‘ಪ್ರೇಮಲೋಕ’ಗಳನ್ನು ಈ ಮಾತಿಗೆ ಉದಾಹರಣೆಯಾಗಿ ಇಲ್ಲಿ ಉಲ್ಲೇಖಿಸಬಹುದೆನಿಸುತ್ತದೆ.

ನಾಯಕ, ಗಾಯಕ, ಸಂಗೀತ ದಿಗ್ದರ್ಶಕ ಮತ್ತು ಸಿನೆಮಾ ನಿರ್ದೇಶಕರಿಗೆ ಸಿಗುವ ಸ್ಟಾರ್‌ವಾಲ್ಯೂನ ಅರ್ಧದಷ್ಟಾದರೂ ಸಿನಿಮಾ ಸಾಹಿತಿಗೆ ಎಷ್ಟೋ ಸಲ ಸಿಗದೆ ಹೋಗಿಬಿಡುವುದೂ ಉಂಟು. ಬರೆಯುವವನಿಲ್ಲದೆ ಸಂಗೀತ ಸಂಯೋಜಕನಿಲ್ಲ; ಸಂಗೀತ ಸಂಯೋಜಕನಿಲ್ಲದೆ ಗಾಯಕನಿಲ್ಲ; ಗಾಯಕನಿಲ್ಲದೆ ಬರಿಯ ತುಟಿ ಅಲುಗಿಸುವ ನಾಯಕನಿಗೂ ಜೀವವಿಲ್ಲವೆಂಬುದು ಸತ್ಯವೇ ಆದರೂ ಅದೇಕೋ ಖ್ಯಾತಿಯ ವಿಚಾರಕ್ಕೆ ಬಂದರೆ ಈ ಸೂತ್ರವು ಉಲ್ಟಾಪಲ್ಟಾ ಆಗಿಬಿಡುತ್ತದೆ. ಎಲ್ಲೋ ಒಬ್ಬರು- ತೆಲುಗಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಿನಾರೆ (ಡಾ.ಸಿ.ನಾರಾಯಣರೆಡ್ಡಿ) ಅಂಥವರು ತಮ್ಮ ಹಾಡುಗಳಿಂದಾಗಿಯೇ ಜನರನ್ನು ಸಿನಿಮಾದತ್ತ ಸೆಳೆಯಬಲ್ಲವರಾಗಿದ್ದರು ಎಂಬುದನ್ನು ಓದಿದಾಗ ಸಹಜವಾಗಿ ನನಗೆ ನಂಬಲಿಕ್ಕೇ ಆಗಿರಲಿಲ್ಲ. ಆದರೆ ಅಂಥದೊಂದು ಸಾಹಿತ್ಯಿಕ ಸೂಕ್ಷ್ಮತೆಯ ರಸಿಕ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದೇ ಪ್ರಾಯಃ ಇಂದಿನ ಹಾಡುಗಳ ಗುಣಮಟ್ಟದ ಕುಸಿತಕ್ಕೆ ಒಂದು ಕಾರಣವಾಗಿರಬಹುದೆ? ಹೀಗೆ ಪ್ರೇಕ್ಷಕರ ರಸಗ್ರಹಣ ಗುಣ ಸೊರಗಿದಂತೆ, ಹಾಡುಗಳ ಸಾಹಿತ್ಯದ ಗುಣಮಟ್ಟವೂ ಸೊರಗಿ; ಆ ಕೊರತೆಯನ್ನು ಮುಚ್ಚಿಡಲೆಂದೇ ಅಬ್ಬರದ ವಾದ್ಯಸಂಗೀತದ ಹಿನ್ನೆಲೆಯ ಕರ್ಕಶ ಹಾಡುಗಳು ಮುನ್ನೆಲೆಗೆ ಬಂದಿರಬಹುದೇ? ಏಕೆಂದರೆ ಹಳೆಯ ಹಾಡುಗಳಲ್ಲಿ ಸಾಹಿತ್ಯಕ ಸ್ಪರ್ಶವೊಂದು ಪ್ರಮುಖ ಸಂಗತಿಯಾಗಿತ್ತು.

ಸಾಹಿತ್ಯ ಲೋಕದ ದಿಗ್ಗಜರಾದ ಶ್ರೀಶ್ರೀ, ಸಿನಾರೆ, ದಾಶರಥಿ, ಆರುದ್ರ ಮುಂತಾದವರು ಹಾಡುಗಳನ್ನು ಬರೆಯುವ ಮೂಲಕ ತೆಲುಗು ಸಿನಿಸಾಹಿತ್ಯಕ್ಕೆ ಸಾಹಿತ್ಯಿಕ ಔನ್ನತ್ಯದ ಸ್ಪರ್ಶ ನೀಡಿದರೆ; ಸಾಹಿರ್‌ಲುಧಿಯಾನ್ವಿ, ಪ್ರದೀಪ್, ಮಜ್ರೂಹ್ ಸುಲ್ತಾನ್‌ಪುರಿ, ಹಸ್ರತ್ ಜೈಪುರಿ, ಗುಲ್ಜಾರ್‌ರಂಥ ಖ್ಯಾತ ಲೇಖಕರು ಹಿಂದಿ ಸಿನಿಸಾಹಿತ್ಯಕ್ಕೆ ಸಾಹಿತ್ಯಿಕ ಔನ್ನತ್ಯದ ಸ್ಪರ್ಶ ನೀಡಿದರು. ಕನ್ನಡದಲ್ಲಿ ಮುಂಚಿನಿಂದಲೂ ಸಾಹಿತ್ಯ ಮತ್ತು ಸಿನಿಮಾ ಲೋಕಗಳ ನಡುವೆ ಒಂದು ಕಂದರವೇ ಏರ್ಪಟ್ಟಿತ್ತು. ಬಂಗಾಳಿ, ಮರಾಠಿಯಂತೆ ಭಾರತೀಯ ಭಾಷಾಸಾಹಿತ್ಯದಲ್ಲಿ ಕನ್ನಡವೂ ತನ್ನ ಅಸ್ತಿತ್ವ ಸ್ಥಾಪಿಸುವ ಮಹತ್ವದ ಕೆಲಸ ಮಾಡಿ ಗಮನ ಸೆಳೆಯುತ್ತಿರುವಾಗ್ಗೆ, ಕನ್ನಡ ಕಮರ್ಷಿಯಲ್ ಸಿನಿಮಾಲೋಕವು ಸಿನಿಮಾವನ್ನು ಒಂದು ಮನರಂಜನಾ ಮಾಧ್ಯಮ ಮಾತ್ರವಾಗಿ ಪರಿಭಾವಿಸಿದ ಪರಿಣಾಮವಾಗಿ ಈ ಕಂದರ ರೂಪುಗೊಂಡಿರಬಹುದು ಅಥವಾ ಬೇರೆ ಕಾರಣಗಳಿದ್ದಿರಲೂಬಹುದು. ಒಟ್ಟಿನಲ್ಲಿ ನಮ್ಮಲ್ಲಿ ಸಿನಿಮಾಕ್ಕಾಗಿಯೇ ಹಾಡು ಬರೆಯುವುದು ಸಾಹಿತಿಯ ಘನತೆಗೆ ತಕ್ಕುದಲ್ಲವೆಂಬ ಒಂದು ಅಭಿಪ್ರಾಯ ಬೆಳೆದುಬಿಟ್ಟಿತು. ಸಿನಿಮಾಕ್ಕಾಗಿಯೇ ಎಂದು ಬರೆಯದಿದ್ದರೂ ತಮ್ಮ ಸಿನಿಮಾಗಳ ಸಂದರ್ಭಗಳಿಗೆ ಹೊಂದುವಂತಿರುವ ಖ್ಯಾತ ಲೇಖಕರ ಕವಿತೆಗಳನ್ನು ಬಳಸಿಕೊಳ್ಳುವ ಪರಿಪಾಠವನ್ನು ಪುಣ್ಯಕ್ಕೆ ಕೆಲವು ಸೂಕ್ಷ್ಮಜ್ಞ ನಿರ್ದೇಶಕರು ಪ್ರಾರಂಭಿಸಿದರು. ಇದರ ಪರಿಣಾಮವಾಗಿ ಸಾಹಿತ್ಯ ಮತ್ತು ಸಿನಿಮಾಗಳ ನಡುವಿನ ಕಂದರದ ಪ್ರಮಾಣ ತಕ್ಕಮಟ್ಟಿಗೆ ಕಡಿಮೆಯಾಯಿತು. ಕುವೆಂಪು, ಬೇಂದ್ರೆ, ಮಾಸ್ತಿ, ಅಡಿಗ, ಕಂಬಾರ, ಲಂಕೇಶ್, ಜಿಎಸ್ಸೆಸ್, ಸಿದ್ಧಲಿಂಗಯ್ಯ ಮುಂತಾದ ಲೇಖಕರು ಹಾಗೆ ಕನ್ನಡ ಸಿನಿಸಾಹಿತ್ಯದೊಳಗೆ ಪ್ರವೇಶಿಸಿದರೆ ಬರಗೂರು ರಾಮಚಂದ್ರಪ್ಪ, ಎಚ್ಚೆಸ್ವಿ, ಬಿಆರ್‌ಎಲ್, ಜಯಂತ ಕಾಯ್ಕಿಣಿ ಮುಂತಾದವರು ಸಿನಿಮಾಕ್ಕೆಂದೇ ಬರೆದದ್ದೂ ಆಯಿತು. ಕಾವ್ಯಾತ್ಮಕತೆಯನ್ನು ಬಿಟ್ಟುಕೊಡದೆ ಗೇಯತೆಯನ್ನು ಸಾಧಿಸಿದ ಬೇಂದ್ರೆ, ಕಂಬಾರ ಮತ್ತು ಜಿಎಸ್ಸೆಸ್‌ರ ಕವಿತೆಗಳು ಚಿತ್ರಗೀತೆಗಳಿಗಿಂತ ಹೆಚ್ಚು ಜನಪ್ರಿಯತೆಯನ್ನು ಪಡೆದುದು ಕನ್ನಡಿಗರ ಸೂಕ್ಷ್ಮತೆಗೆ ಹಿಡಿದ ಕನ್ನಡಿಯೇ ಸರಿ.

ಕೆಲವೊಮ್ಮೆ ಪ್ರೇಮಗೀತೆಯೊಂದು ಭಕ್ತಿಗೀತೆಯಾಗಿ, ಭಕ್ತಿಗೀತೆಯೊಂದು ಪ್ರೇಮಗೀತೆಯಾಗಿ, ಮಕ್ಕಳಿಗಾಗಿ ಬರೆದ ಹಾಡೊಂದು ಪ್ರಿಯತಮೆಗಾಗಿ ಹಾಡಿದ ಹಾಡಾಗಿ, ವಿಷಾದ ಗೀತೆಯು ವಿರಹಗೀತೆಯಾಗಿ  ಅರ್ಥಾಂತರಿತ ರೂಪದಲ್ಲಿ ನಮ್ಮನ್ನು ತಾಕಿಬಿಡುವುದುಂಟು. ಬೇಂದ್ರೆಯವರು ತಮ್ಮ ಹರೆಯದ ಪುತ್ರ ನಿಧನನಾದಾಗ ಪತ್ನಿಯನ್ನುದ್ದೇಶಿಸಿ ಬರೆದ ಶೋಕಗೀತೆಯಾದ ‘ನೀ ಹೀಂಗ ನೋಡಬ್ಯಾಡ ನನ್ನ/ ನೀ ಹೀಂಗ ನೋಡಿದರ ನನ್ನ/ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ?’ ಕವಿತೆಯನ್ನು ತುಂಬಾ ಜನ ಕೇಳುಗರು ಪ್ರೇಮಗೀತೆಯಂತೆ ಭಾವಿಸಿ ಬಳಸುವುದನ್ನು, ಉಲ್ಲೇಖಿಸುವುದನ್ನು ನೀವು ಕೇಳಿರಬಹುದು. ಚರಣ ಒಂದೇ ಕೇಳುವ ಅವಸರಗೇಡಿಗಳ ಕಥೆಯಿದು. ಸಂಪೂರ್ಣ ಸಾಹಿತ್ಯ ಕೇಳಿದಾಗ ನಮಗದರ ಸರಿಯಾದ ಭಾವ ಅರ್ಥವಾಗುವುದು. ಅದೇ ಹಾಡಿನಲ್ಲಿ ಮುಂದೆ ಬರುವ- ‘ಹುಣ್ಣಿವಿ ಚಂದಿರನ ಹೆಣಾ ಬಂತು ಮುಗಿಲಾಗ ತೇಲತಾ ಹಗಲ’ ಹಾಗೂ ‘ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು ನಡನಡಕ ಹುಚ್ಚು ನಗಿ ಯಾಕ?/ ಹನಿ ಒಡೆಯಲಿಕ್ಕ ಬಂದಂಥ ಮೋಡ ತಡೆದ್ಹಾಂಗ ಗಾಳಿಯ ನೆವಕ/ ಅತ್ತಾರೆ ಅತ್ತು ಬಿಡು ಹೊನಲು ಬರಲಿ ನಕ್ಕ್ಯಾಕ ಮರಸತಿದಿ ದುಃಖ?/ ಎದೆಬಿಡಿಸಿ ಕೆಡಹು ಬಿರಿಗಣ್ಣು ಬ್ಯಾಡ ತುಟಿ ಕಚ್ಚಿ ಹಿಡಿಯದಿರು ಬಿಕ್ಕ’ ಎಂಬ ಸಾಲುಗಳು ಆ ಹಾಡಿನ ನಿಜಭಾವವನ್ನು ನಮಗೆ ಸ್ಪಷ್ಟವಾಗಿ ದಾಟಿಸುವಂತಿವೆ.

ಇನ್ನೂ ಕೆಲವೊಮ್ಮೆ ಸಂಪೂರ್ಣ ಓದಿದ ನಂತರವೂ ಕವಿ ಉದ್ದೇಶಿಸಿದ ಅರ್ಥ ದಾಟಿ ನಾವು ಬೇರೊಂದು ನೆಲೆಯಲ್ಲಿ ಅದನ್ನು ಅರ್ಥೈಸಿಕೊಳ್ಳಬಹುದು, ಆ ಮಾತು ಬೇರೆ. ಹಾಡಿನ ಮೂಲಭಾವವನ್ನು ಹಿಡಿಯುವವ ಮಧ್ಯಮ ಸ್ತರದ ಕೇಳುಗನಾದರೆ, ಅದನ್ನು ಅದರಾಚೆಗಿನ ಬೇರೊಂದು ಭಾವಕ್ಕೆ ವಿಸ್ತರಿಸಿ ಗ್ರಹಿಸಬಲ್ಲವನು ಉನ್ನತ ಸ್ತರದ ಕೇಳುಗನಾಗುತ್ತಾನೆ. ಅಂದರೆ ಕೇಳುಗನ ಮನಃಸ್ಥಿತಿ, ಅನುಭವದ ಹಿನ್ನೆಲೆ, ಕೇಳಿದ ಸಂದರ್ಭ ಮತ್ತು ವಯಸ್ಸುಗಳ ಆಧಾರದ ಮೇಲೆ ಒಂದೇ ಹಾಡು ನಮಗೆ ಬೇರೆ ಬೇರೆ ಅರ್ಥಗಳಲ್ಲಿ ಎದುರುಗೊಳ್ಳುತ್ತದೆ. ಅದೇ ಹಾಡಿನ ಶಕ್ತಿ. ಇದಕ್ಕೊಂದು ಉದಾಹರಣೆ ನೆನಪಾಗುತ್ತದೆ. ಇದನ್ನು ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟರು ಹೇಳಿದಂತೆ ನೆನಪು. ಗಣ್ಯರೊಬ್ಬರ ನಿಧನ ಕಾರಣ ಒಂದು ವಾರ ಶೋಕಸಂಗೀತ ಪ್ರಸಾರ ಮಾಡಿದ ಬಾನುಲಿಯು ನಂತರ ಯಥಾರೂಢಿ ಪ್ರಸಾರ ಪ್ರಾರಂಭಿಸಿ ಮೊದಲಿಗೆ ಪಂ. ಮಲ್ಲಿಕಾರ್ಜುನ ಮನ್ಸೂರರ ವಚನ ಗಾಯನವನ್ನು ಪ್ರಸ್ತುತಪಡಿಸಿತಂತೆ. ಮನ್ಸೂರರು ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’ ಹಾಡನ್ನು ಹಾಡುತ್ತ ‘ನಾನೊಂದು’ ಪದವನ್ನು ‘ನಾ... ನೊಂದು’ ಎಂದು ಆಲಾಪದಲ್ಲಿ ಹಿಗ್ಗಲಿಸಿದಾಗ ಅದು ಪಟ್ಟಣಶೆಟ್ಟರಿಗೆ ನಾನು ನೊಂದು ಕನಸ ಕಂಡೆ ಎಂಬಂತೆ ಕೇಳಿಸಿತಂತೆ!

ಒಂದು ಹಾಡಿಗೆ ಒಬ್ಬ ವ್ಯಕ್ತಿ ಎದುರಾದಾಗ ಅವನು ಸಂತೋಷದಲ್ಲಿದ್ದರೆ ಅವನ ಗಮನ ಅದರ ಸಂಗೀತದ ಕಡೆಗೆ ಹೋಗುತ್ತದೆ. ಸಂಕಟದಲ್ಲಿದ್ದರೆ ಅದರ ಸಾಹಿತ್ಯದ ಕಡೆಗೆ ಹೋಗುತ್ತದೆ ಎನ್ನುತ್ತದೆ ಒಂದು ಅಧ್ಯಯನ. ಹಾಗಾಗಿಯೇ ಹಾಡೆಂದರೆ ನನ್ನ ಪಾಲಿಗೆ ಕೇವಲ ಹಾಡಲ್ಲ, ಅದೊಂದು ವ್ಯಕ್ತಿತ್ವವೇ. ಬರೆದವನ ವ್ಯಕ್ತಿತ್ವ ಮತ್ತು ಪರಿಭಾವಿಸುವವನ ವ್ಯಕ್ತಿತ್ವಗಳು ಒಂದು ಸಮಪಾಕದ ಹದಬಿಂದುವಿನಲ್ಲಿ ಅನುಸಂಧಾನಕ್ಕೊಳಪಟ್ಟ ಪರಿಣಾಮವಾಗಿ ಒಡಮೂಡಿದ ಕಾಲ್ಪನಿಕ ವ್ಯಕ್ತಿತ್ವವದು. ಹಾಗಾಗಿಯೇ ಅದು ನಮ್ಮನ್ನು ನಗಿಸುತ್ತದೆ, ಅಳಿಸುತ್ತದೆ, ಕುಣಿಸುತ್ತದೆ, ಮಣಿಸುತ್ತದೆ, ಒದೆಯುತ್ತದೆ, ಪುಳಕಗೊಳಿಸುತ್ತದೆ, ತಿವಿಯುತ್ತದೆ, ನೋಯಿಸುತ್ತದೆ, ನೆನಪುಗಳಿಗೆ ಜಾರಿಸುತ್ತದೆ, ಕನಸುಗಳಿಗೆ ತೆರೆಯುತ್ತದೆ, ಹಲವು ಹೊಸತನ್ನು ಕಲಿಸುತ್ತದೆ, ಬೇಡದ ಹಳತನ್ನು ಮರೆಸುತ್ತದೆ. ನೋಡಿ ಎಷ್ಟೋ ಸಲ ತುಂಬಾ ಆತ್ಮೀಯರೇ ಮೋಸ ಮಾಡುತ್ತಾರೆ, ಹಾಗಂತ ಗೆಳೆತನ ಮಾಡದೆ ಇರಲಿಕ್ಕಾಗುವುದಿಲ್ಲ. ಅಂಥ ಸಂದರ್ಭಗಳಲ್ಲಿ ನನಗೆ ‘ಬಸ್ ಯೆ ಅಪರಾಧ್ ಮೈ ಹರ್ ಬಾರ್ ಕರ್‌ತಾ ಹ್ಞೂಂ/ ಆದ್ಮಿ ಹ್ಞೂಂ ಆದ್ಮಿ ಸೆ ಪ್ಯಾರ್ ಕರ್‌ತಾ ಹ್ಞೂಂ’ ಎಂಬ ಹಾಡು ಹಾಗೂ ‘ಗೆದ್ದೇ ಗೆಲ್ಲುವೆ ಒಂದು ದಿನ/ ಗೆಲ್ಲಲೇಬೇಕು ಒಳ್ಳೆತನ’ ಎಂಬ ಹಾಡುಗಳು ನೆನಪಾಗಿ ಧೈರ್ಯ ತುಂಬುತ್ತವೆ. ‘ನೀನಾಡದ ಮಾತು ಮಾತಲ್ಲ/ ನೀನಾಡದ ಹಾಡು ಹಾಡಲ್ಲ/ ನೀನಿಲ್ಲದ ಮನೆ ಮನೆಯಲ್ಲ/ ನೀನಿಲ್ಲದೆ ನನಗೆ ಬಾಳಿಲ್ಲ’ ಎಂಬ ಸಾಲುಗಳನ್ನು ನಾನೊಮ್ಮೆ ಹೀಗೇ ಅನಾಥಭಾವದಲ್ಲಿ ಸಿಲುಕಿ ಒದ್ದಾಡುತ್ತಿದ್ದಾಗ ಕೇಳಿಸಿಕೊಂಡೆ.

‘ನೀನಿಲ್ಲದೆ ನನಗೆ ಬಾಳಿಲ್ಲ’ ಎಂಬ ಸಾಲಂತೂ ಹೊಸ ಬೆಳಕಿನಿಂದ ಹೊಳೆದು- ಈ ಜಗವನ್ನು ನಡೆಸುವ ಅವನಿಲ್ಲದೆ ಏನೂ ಇಲ್ಲ ಮತ್ತು ಯಾರಿಗೆ ಯಾರೂ ಇಲ್ಲವೋ ಅವರಿಗೆ ಒಬ್ಬ ಸದಾಸಖನಾಗಿ ಅವನಂತೂ ಇದ್ದೇ ಇದ್ದಾನೆ ಎಂಬ ಸತ್ಯವನ್ನು ನೆನಪಿಸಿ ನನ್ನಲ್ಲಿ ಹುರುಪನ್ನು ತುಂಬಿ ಬಿಟ್ಟಿತು. ಒಂಟಿಯಾಗಿ ಕತ್ತಲದಾರಿಯಲ್ಲಿ ನಡೆದು ಬರಬೇಕಾದ ಸಂದರ್ಭಗಳಲ್ಲಂತೂ ನನಗೆ ಹಾಡು ಒಂದು ತಾಯಿತ ತುಂಬುವಷ್ಟು ದೈರ್ಯವನ್ನು ನನ್ನೊಳಗೆ ತುಂಬಿದ್ದನ್ನು ನಾನು ಮರೆಯುವಂತೆಯೇ ಇಲ್ಲ. ಹಾಡೊಂದು ಇದ್ದಿಲ್ಲದಿದ್ದರೆ ನನ್ನಂಥ ಪುಕ್ಕಲರು ಆ ಹಾದಿಯನ್ನು ಸವೆಸಲಾಗದೆ ಚಡ್ಡಿಯಲ್ಲೇ ಒಂದು ಎರಡು ಮಾಡಿಕೊಂಡು ಒದ್ದೆಮುದ್ದೆ ಆಗಬೇಕಾಗುತ್ತಿತ್ತೆಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಹಳೆಯ ದೆವ್ವದ ಸಿನಿಮಾಗಳಲ್ಲಿ ಮೋಹಿನಿ ಪಾತ್ರಗಳು ಕಂಪಲ್ಸರಿ ಹಾಡು ಹಾಡಿಕೊಂಡೇ ಬರುತ್ತಿದ್ದುದು ಮಾತ್ರ ಏಕೆಂದು ನನಗೆ ಅರ್ಥವೇ ಆಗಿಲ್ಲ. ನಮಗೆ ಅವುಗಳ ಭಯ ಇರುವಂತೆ, ಅವುಗಳಿಗೂ ಮನುಷ್ಯರ ಭಯ ಇದ್ದು ಅದನ್ನು ಮೀರಲೆಂದೇ ಅವೂ ಕೂಡ ಹಾಡಿನ ಮೊರೆ ಹೋಗಿರಬಹುದೆ? ಎಂದು ಮಾತ್ರ ನಾನು ತುಂಬಾ ಸಲ ಆಲೋಚಿಸಿದ್ದೇನೆ! ಇದರ ನಿಖರ ಉತ್ತರಕ್ಕಾಗಿ ಮನೆಯಲ್ಲಿರುವ ಜೀವಂತಮೋಹಿನಿಯ ಮೊರೆ ಹೋಗಬಹುದೆನಿಸುತ್ತದೆ. ನೋಡಿ, ಸಾಧ್ಯವಾದರೆ ಕೇಳಿ; ಸಿಕ್ಕಾಗ ಹೇಳಿ!

ಸಂಗೀತಪ್ರಿಯರಲ್ಲಿ ಹಿರಿಯ-ಕಿರಿಯ, ಹೆಣ್ಣು-ಗಂಡು, ಸಾಕ್ಷರಿ-ನಿರಕ್ಷರಿಗಳೆಂಬ ಭೇದ ಬಹುಶಃ ಇದ್ದಿರಲಾರದು. ಒಂದು ಒಳ್ಳೆ ಹಾಡಿಗೆ ಯಾರೇ ಆಗಲಿ ಪ್ರತಿಸ್ಪಂದಿಸಿಯೇ ತೀರುತ್ತಾರೆ. ಆಗುವ ಆನಂದಭಾವವನ್ನು ಎಷ್ಟೇ ಅದುಮಿಟ್ಟುಕೊಂಡರೂ ಕಣ್ಣೋ ತುಟಿಯೋ ಕಟಿಯೋ ಕೈಯೋ ಕಾಲೋ ಕಡೆಗೆ ಬೆರಳೋ ಮತ್ತೊಂದೋ ಏನನ್ನಾದರೂ ಮನುಷ್ಯ ಅಲುಗಾಡಿಸುವ ಮೂಲಕ ತನ್ನ ಪರಾವರ್ತಿತ ಪ್ರತಿಕ್ರಿಯೆಯನ್ನು ತೋರಿಯೇ ತೋರುತ್ತಾನೆ. ಕೆಲವರು ಇವೇನನ್ನೂ ಆಡಿಸದಿದ್ದರೂ ವಾಲ್ಯೂಮನ್ನು ಹೆಚ್ಚಿಸುವ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುವರು. ಆದರೆ ಸಂಗೀತದ ನಿಜವಾದ ಸ್ವಾದವಿರುವುದು ಮೆಲುದನಿಯಲ್ಲಿ ಎಂಬುದನ್ನು ನಾವು ಅರಿಯಬೇಕು. ಈಗೀಗ ಹಾಡೆಂದರೆ ಅಬ್ಬರದ ವಾದ್ಯಸಂಗೀತ ಎಂಬಂಥ ವಾತಾವರಣ ಬಂದುಬಿಟ್ಟಿದೆ. ಪ್ರತಿಯೊಬ್ಬನೂ ಎದ್ದೋಡಿ ರಾಗದಲ್ಲಿ ಎದ್ದೂ ಬಿದ್ದೂ ಅರಚುವವನೇ. ಹಾಡಿಕೆಯಂತೆಯೇ, ಅದರ ಕೇಳುವಿಕೆಯೂ ಒಂದು ಪ್ರಾರ್ಥನೆಯಂತೆ. ಕಣ್ಮುಚ್ಚಿ ಮನಸಾರೆಯಾಗಿ ಒಂದಿಡೀ ಹಾಡಿನ ಸಾಹಿತ್ಯ ಮತ್ತು ಸಂಗೀತವನ್ನು ಆಸ್ವಾದಿಸಿ ಎದ್ದರೆ ಒಂದರಗಳಿಗೆಯ ಕುನುಕು ನಿದ್ದೆ ತೆಗೆದಾಗ ಆಗುವಂತೆ ಮನುಷ್ಯ ಫ್ರೆಶ್ ಆಗುತ್ತಾನೆ. ಸಂಗೀತಕ್ಕೆ ಅಂಥ ಒಂದು ಚಿಕಿತ್ಸಕ ಗುಣವಿದೆ. ಅದನ್ನು ಬಳಸಿಕೊಂಡೇ ಮ್ಯೂಸಿಕೋಥೆರಪಿ ಎಂಬ ಚಿಕಿತ್ಸಾವಿಧಾನ ಶುರುವಾಗಿರುವುದು.

ಶಾಸ್ತ್ರೀಯ ಸಂಗೀತಗಾರರ ಮುಖದ ಮೇಲಿನ ಪ್ರಶಾಂತತೆಗೆ ಬಹುಶಃ ಅದನ್ನು ಅವರು ಅದರ ತೀವ್ರ ಸ್ಥಿತಿಯಲ್ಲಿ ಅನುಭವಿಸುವುದೇ ಕಾರಣವಿದ್ದೀತು. ನಾವೂ ಕೂಡ ಅದನ್ನು ಕಣ್ಮುಚ್ಚಿ ಅನುಭವಿಸುವುದೇ ಸರಿ. ಏಕೆಂದರೆ ಬಹುಪಾಲು ಶಾಸ್ತ್ರೀಯ ಹಾಡುಗರು ಹರಳೆಣ್ಣೆ ಕುಡಿದವರ ಮುಖಭಾವದಲ್ಲಿ ಬಾಯಿ ಮೂಗು ಕಣ್ಣು ಕಿವಿ ಮುಂತಾದವನ್ನು ಭಯಂಕರವಾಗಿ ಪ್ರದರ್ಶಿಸುತ್ತ ಸಂಗೀತದ ಬಗ್ಗೆ ವಿರಕ್ತಿ ಹುಟ್ಟುವಂತೆ ಮಾಡಬಲ್ಲವರಾಗಿರುತ್ತಾರೆ. ಆದರೆ ಅವರ ಸಂಗೀತಕ್ಕೆ ಮಾತ್ರ ನಮ್ಮ ಬುದ್ಧಿ-ಭಾವಗಳನ್ನು ಶುದ್ಧಿಗೊಳಿಸುವ ದಿವ್ಯಶಕ್ತಿ ಖಂಡಿತ ಇರುತ್ತದೆ. ಸಿನಿಮಾ ಸಂಗೀತವು ಸಿಪ್ಪೆಯಾದರೆ ಶಾಸ್ತ್ರೀಯ ಸಂಗೀತವು ತಿರುಳಿದ್ದಂತೆ. ಸಿಪ್ಪೆಯೇ ಅಷ್ಟು ಸಿಹಿಯಾಗಿರಬೇಕಾದರೆ ತಿರುಳು ಹೇಗಿದ್ದೀತು! ಜನಪ್ರಿಯವೋ ಶಾಸ್ತ್ರೀಯವೋ ಒಟ್ಟಾರೆ ಸಂಗೀತವು ಒಂದು ಸಂಸ್ಕಾರ. ಅದರ ಸಾಮೀಪ್ಯ ಪಡೆದವನು ಸಂಸ್ಕಾರವಂತನಾಗುತ್ತಾನೆ. ಸಂಗೀತದಿಂದ ವಿಮುಖನಾದವನು, ಸಂಗೀತವನ್ನು ದ್ವೇಷಿಸುವವನು ಹಿಟ್ಲರನಂತೆ ಜೀವವಿರೋಧಿಯಾಗಿರುತ್ತಾನೆ.

ನಮ್ಮ ಸಿನಿಮಾಗಳಲ್ಲಂತೂ ಭಕ್ತಿಗೀತೆ, ಕ್ರಾಂತಿಗೀತೆ, ರಾಜಕೀಯ ಗೀತೆ, ವಿರಹಗೀತೆ, ಶೋಕಗೀತೆ, ಲಾಲಿ ಹಾಡು, ಕ್ಯಾಬರೆ ಹಾಡು ಎಷ್ಟೊಂದು ಬಗೆಗಳಿವೆ. ಪ್ರೇಮಗೀತೆಗಳಿಗಂತೂ ಲೆಕ್ಕವೇ ಇಲ್ಲ. ಅಜರಾಮರವಾಗಿ ಉಳಿದುಕೊಂಡು ಬಂದಿರುವ ಹಾಡುಗಳ ಪೈಕಿ ಪ್ರೇಮಗೀತೆಗಳು ಮತ್ತು ವಿಯೋಗಗೀತೆಗಳದೇ ಸಿಂಹಪಾಲು ಎನ್ನಿಸುತ್ತದೆ. ಅಲ್ಲಿಲ್ಲಿ ಕೆಲ ಬೇರೆ ಹಾಡುಗಳೂ ಅಂಥ ಅಮರತ್ವವನ್ನು ಪಡೆದುಕೊಂಡಿವೆ. ಬಿ.ಆರ್.ಪಂತುಲುರವರ ‘ಸ್ಕೂಲ್‌ಮಾಸ್ಟರ್’ ಚಿತ್ರದ ‘ತಾಯೆ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ/ ಪ್ರೇಮದಿಂದಲೇ ನಮಿಪೆ ತಾಯೆ ಶಾರದಾ ಮಾತೆ’ ಎಂಬ ಹಾಡು ಸುಮಾರು ವರ್ಷಗಳವರೆಗೆ ಎಷ್ಟೋ ಕನ್ನಡ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನಾಪದ್ಯವಾಗಿ ಹಾಡಲ್ಪಡುತ್ತಿತ್ತು.

ಇನ್ನು ಇಂದಿನ ಎಷ್ಟೋ ತಾಯಂದಿರಿಗೆ ‘ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ’ದಂಥ ಸಿನಿಮಾ ಲಾಲಿಹಾಡುಗಳೇ ಆಪತ್ತಿಗೊದಗುವ ಸರಕುಗಳು. ಅವರಿವರ ಮಾತೇಕೆ, ನನ್ನ ಹೆಂಡತಿಯೇ ತೆಲುಗಿನ ‘ಸ್ವಾತಿಮುತ್ಯಂ’ ಚಿತ್ರದ ‘ಒಕಪತ್ರ ಸಾಯಿಕಿ ವರಹಾಲ ಲಾಲಿ’ ಹಾಡಿನಲ್ಲೇ ಹಾಗೂ ಹೀಗೂ ಮ್ಯಾನೇಜ್ ಮಾಡಿ ನಮ್ಮ ಮೊದಲ ಮಗಳು ಋತುವನ್ನು ಬೆಳೆಸಿಬಿಟ್ಟಳು. ಎರಡನೇ ಮಗಳು ಲಿಪಿಗೂ ಅದೇ ಹಾಡನ್ನು ಕಂಟಿನ್ಯೂ ಮಾಡಿದಾಗ ‘ಸಿನೆಮಾ ಹಾಡೇ ಆದರೂ ಪರವಾಗಿಲ್ಲ, ಅಟ್‌ಲಿಸ್ಟ್ ಬೇರೇದು ಹಾಡೇ’ ಅಂತ ನಾನು ತಕರಾರು ಅರ್ಜಿ ಹಾಕಿದೆ. ಅವಳೇನೂ ಅದಕ್ಕೆ ಸೊಪ್ಪು ಹಾಕಲಿಲ್ಲ. ಕೊನೆಗೆ ನಾನೇ ಮಗಳಿಗಾಗಿ ಒಂದು ಜೋಗುಳ ಹಾಡು ಬರೆದು ಟ್ಯೂನೂ ಹಾಕಿ ರೆಡಿ ಮಾಡಿದೆ. ನನ್ನವಳು ಅದನ್ನು ಕಣ್ಣೆತ್ತಿಯೂ ನೋಡಲಿಲ್ಲ. ಸರಿ ಅಂತ ನಾನೇ ಹಾಡಿ ಮಲಗಿಸಹೋದರೆ ಆ ಟ್ಯೂನಿಗೆ ನನ್ನ ಹೆಂಡ್ತಿಯೇ ಮಲಗಿಬಿಟ್ಟಳಾಗಲೀ ಲಿಪಿಯೇನೂ ಮಲಗಲಿಲ್ಲ. ಮತ್ತೆ ಯಥಾಪ್ರಕಾರ ಅವಳು ‘ಒಕಪತ್ರ ಸಾಯಿಕಿ’ ಹಾಡಿನ ಆಸರೆಯಲ್ಲೇ ಬೆಳೆಯತೊಡಗಿದಳು.

ಆಲೋಚಿಸಿ ನೋಡಿದರೆ ಹಳೆಯ ಹಾಡುಗಳ ಆಯುಷ್ಯವೇ ಜಾಸ್ತಿ ಇದೆ ಅನಿಸುತ್ತೆ. ಎಷ್ಟೋ ಹಳೆ ಹಾಡುಗಳು ತಲೆಮಾರುಗಳನ್ನು ದಾಟಿ ಬಂದೂ ಉಳಿದುಕೊಂಡಿವೆ. ಸಾಹಿತ್ಯಕ ಗುಣ ಮತ್ತು ಸಂಗೀತದ ಮಾಧುರ್ಯಗಳೇ ಅದಕ್ಕೆ ಕಾರಣವಿರಬಹುದು. ಈಗಿನ ಚಿತ್ರಾನ್ನ ಚಿತ್ರಾನ್ನ.. ವೈ ದಿಸ್ ಕೊಲೆವರಿ ಡಿ ಹಾಡುಗಳು ಮುಂದಿನ ತಲೆಮಾರಿನವರ ಪಾಲಿನ ಹಳೆಯ ಹಾಡುಗಳಾಗುವುದರಿಂದ ಆ ಲೆಕ್ಕದಲ್ಲಿ ಅವೂ ಉಳಿಯುತ್ತವೆಯೋ ಏನೋ?! ಬಹುಶಃ ಅಂದಂದಿಗೆ ಹೊಂದಿ, ಅಂದಂದಿಗೆ ಸಂದುವ ಸಮಕಾಲೀನತೆಗಿಂತ ಅಂದಿಗೂ ಹೊಂದುವ, ಎಂದೆಂದಿಗೂ ಸಂದುವ ಸಾರ್ವಕಾಲಿಕತೆಯ ಗುಣವೇ ಒಂದು ಹಾಡನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸಿಕೊಂಡು ಬರುತ್ತದೆನಿಸುತ್ತದೆ. ಅದಕ್ಕೇ ಈ ಕಿಶೋರ್, ರಫಿ, ಘಂಟಸಾಲ, ಲತಾ, ಪಿಬಿಎಸ್, ರಾಜ್ ನಮ್ಮ ಹಿರಿಯರನ್ನು ಪುಳಕಗೊಳಿಸಿದರು, ನಮ್ಮನ್ನೂ ಪುಳಕಗೊಳಿಸಿದರು, ಬಹುಶಃ ನಮ್ಮ ಮಕ್ಕಳನ್ನೂ ಪುಳಕಗೊಳಿಸಬಹುದು. ಹಾಗೆಯೇ ನಮ್ಮ ಮೊಮ್ಮಕ್ಕಳ ಭಗ್ನಪ್ರೇಮಕ್ಕೂ ಮುಖೇಶನೇ ಒದಗಿಬರಲೂಬಹುದು. ನನ್ನ ಆಲೋಚನೆಯೊಳಗಿನ ಊನವನ್ನು ಗಮನಿಸಿ. ಹಾಡಿದ ಗಾಯಕನ ಅಮರತ್ವದ ಬಗ್ಗೆ ಮಾತಾಡಿದ ನನಗೆ ಆ ಅಮರ ಸಾಲುಗಳನ್ನು ನೀಡಿದ ಕವಿಗಳನ್ನು ಕೋಟ್ ಮಾಡುವುದಾಗಲಿಲ್ಲ. ಇದೇ ಸಿನಿಮಾ ಸಾಹಿತ್ಯದ ದುರಂತವಿದ್ದಿರಬಹುದು.

ಇವತ್ತು ಕಿವಿಗೆ ಮೊಬೈಲಿನ ವೈರು ಸಿಕ್ಕಿಸಿಕೊಂಡ ಪ್ರತಿಯೊಬ್ಬನೂ ಒಂದು ನಡೆದಾಡುವ ಹಾಡಿನಂತೆ ನಮಗೆ ಕಾಣಿಸುತ್ತಾನೆ. ಅವನ ಮುಖದಲ್ಲಿ ಮಾತ್ರ ಹಾಡು ಕೇಳಿದ ಆನಂದದ ಭಾವ ಲವಲೇಶದಷ್ಟೂ ಇರುವುದಿಲ್ಲ. ವಾರ್ತೆ ಕೇಳಿದಷ್ಟು ನಿರ್ಭಾವುಕವಾಗಿ ಹಾಡು ಕೇಳುವಂಥ ಈ ಪರಿಸ್ಥಿತಿಗೆ ಏನು ಕಾರಣವೋ ನನಗಂತೂ ತಿಳಿಯುತ್ತಿಲ್ಲ. ಅಥವಾ ಅಬ್ಬರದ ವಾದ್ಯಸಂಗೀತ ಮತ್ತು ಅರ್ಥಹೀನ ಸಾಲುಗಳಿಂದಾಗಿ ಇಂದಿನ ಹಾಡುಗಳು ಅವನಿಗೆ ಮರಣಮೃದಂಗದಂತೆ ಕೇಳುತ್ತ ಜೀವನದ ನಶ್ವರತೆಯನ್ನು ನೆನಪಿಸುತ್ತಿರಬಹುದೆ ಎಂಬ ಅನುಮಾನ ಉಂಟಾಗುತ್ತದೆ.

ಮದುವೆಯಾದ ಹೊಸದರಲ್ಲಿ ನನ್ನ ಬಣ್ಣ ಮತ್ತು ಒರಟು ಮುಖಭಾವಗಳನ್ನು ನೋಡಿ ನನ್ನ ಹೆಂಡತಿ ನನ್ನನ್ನು ಒಬ್ಬ ಶುದ್ಧ ಅರಸಿಕನೆಂದುಕೊಂಡಿದ್ದಳಂತೆ. ಹಳೆಯ ಹಾಡುಗಳ ಪರಮ ಅಭಿಮಾನಿಯಾದ ಆಕೆಗೆ ನಾನೂ ಅದೇ ಜಾತಿಯವನೇ ಎಂದು ಗೊತ್ತಾದಾಗ ನಂಬಲಾಗದಷ್ಟು ಸಂತೋಷವಾಗಿತ್ತಂತೆ. ಹಾಗೆ ಹಾಡುಗಳು ನನ್ನೆದೆಯಿಂದ ಅವಳೆದೆಗೆ ಹಾಕಿದ ಸೇತುವೆಗಳಾಗಿ ಕೆಲಸ ಮಾಡಿ, ನವದಾಂಪತ್ಯದ ಹೊಂದಾಣಿಕೆಯ ಸಮಸ್ಯೆಗಳನ್ನು, ಅವು ಹುಟ್ಟುವ ಮೊದಲೇ ಹುಟ್ಟಡಗಿಸಲು ಸಹಾಯವಾದವು. ಎಷ್ಟೋ ಸಲ ನಮ್ಮ ಜಗಳಗಳೂ ಹಾಡಿನ ಜಾಡಿನಲ್ಲೇ ನಡೆದಿರುವುದುಂಟು. ಒಮ್ಮೆ ಹೀಗೆ ಒಂದು ಸಣ್ಣ ಜಗಳ. ತವರಿಗೆ ಹೋಗುವ ಬ್ರಹ್ಮಾಸ್ತ್ರ ಬಳಸಿ ನನ್ನನ್ನು ಸೋಲಿಸಿದ್ದಳು. ನಾನು ನಿಧಾನಕ್ಕೇ ಮೊಬೈಲ್ ತೆಗೆದು ‘ಇದು ಯಾರು ಬರೆದ ಕಥೆಯೋ? ನನಗಾಗಿ ಬಂದ ವ್ಯಥೆಯೋ? ಕೊನೆ ಹೇಗೋ ಅರಿಯಲಾರೆ, ಮರೆಯಾಗಿ ಹೋಗಲಾರೆ’ ಹಾಡು ಹಚ್ಚಿದೆ. ಒಂದೆರಡು ನಿಮಿಷ ಅಷ್ಟೇ. ಅವಳು ತನ್ನ ಮೊಬೈಲಿನಲ್ಲಿ ಅತ್ತ ಕಡೆಯಿಂದ ‘ಎಂದೆಂದೂ ನೀವು ಸುಖವಾಗಿರಿ, ನನ್ನನ್ನು ಮರೆತು ಹಾಯಾಗಿರಿ, ಬಾಳಲ್ಲಿ ಬರುವ ಚಿಂತೆ ನಿರಾಶೆ ಎಂದೆಂದೂ ನನ್ನ ಪಾಲಿಗಿರಲಿ’ ಎಂದು ಕಟ್ ಮಾಡಿದಳು. ಇಬ್ಬರ ಮೊಬೈಲಿನಲ್ಲೂ ಹಳೆಯ ಹಾಡುಗಳಿಗೆ ಬರವಿಲ್ಲವಾಗಿ ನಾನು ಹುಡುಕಿ ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು/ ನೆಲವ ನೀರ ಮೇಲೆ ಬಂಡಿ ಹೋಗದು/ ನನ್ನ ಬಿಟ್ಟು ನಿನ್ನ, ನಿನ್ನ ಬಿಟ್ಟು ನನ್ನ ಜೀವನ ಸಾಗದು’ ಹಾಕಿದೆ. ಈ ಹಾಡುಗಳ ಜುಗಲ್‌ಬಂದಿಯಿಂದಾಗಿಯೇ ಅಂದಿನ ಬಿಗುವಿನ ವಾತಾವರಣ ಬೇಗನೆ ತಹಬಂದಿಗೆ ಬರುವಂತಾಯಿತೆಂದು ಬಿಡಿಸಿಹೇಳಬೇಕಿಲ್ಲವಷ್ಟೆ.

ಸಂಗೀತದ ಹುಚ್ಚು ನನಗೆ ಪಿತ್ರಾರ್ಜಿತವಾಗಿ ಬಂದ ಬಳುವಳಿಯೆಂಬುದರಲ್ಲಿ ಅನುಮಾನವೇ ಇಲ್ಲ. ಅಪ್ಪ ಆಗಾಗ ಹೇಳುತ್ತಿದ್ದ- ‘ಒಂದೊಳ್ಳೆ ಹಾಡು ಕೇಳಿದ್ರೆ ಒಪ್ಪತ್ತು ಊಟ ಬುಡಬಹುದು ನೋಡಪ. ಅಷ್ಟು ಶಕ್ತಿ ಇರುತ್ತ ಅದ್ರಾಗ’ ಎಂಬ ಮಾತು ನನ್ನ ಕಿವಿಯ ಹಾಲೆಗಳಿಗೆ ಮೆತ್ತಿಕೊಂಡೇ ಉಳಿದುಬಿಟ್ಟಿದೆ. ಹಾಗಾಗಿ ಆತ ಈಗ ನಮ್ಮೊಂದಿಗಿಲ್ಲ ಎನ್ನುವ ಮಾತೇ ಇಲ್ಲ. ಹಾಡುಗಳಿವೆಯಲ್ಲ. ನಾನೂ ಒಂದು ಹಾಡಾಗಿಯೇ ನನ್ನ ಮಗಳ ನೆನಪಿನಲ್ಲುಳಿಯಬೇಕು, ಅಷ್ಟೇ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT