ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಜೊತೆ ನೀರೂ ಖರೀದಿ!

ದ.ಕ ಹಾಲು ಒಕ್ಕೂಟಕ್ಕೆ ಜಲಕ್ಷಾಮ
Last Updated 3 ಮೇ 2016, 20:20 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಪ್ರದೇಶವನ್ನು ಕಾಡುತ್ತಿರುವ ಜಲಕ್ಷಾಮದಿಂದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಡಿಕೆಮುಲ್‌) ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಅದು ಹಾಲಿನ ಸಂಸ್ಕರಣೆಗೆ ಬೇಕಿರುವ ನೀರನ್ನು ರೈತರಿಂದಲೇ ಖರೀದಿಸುತ್ತಿದೆ!

ಡಿಕೆಮುಲ್‌ನ ಹಾಲು ಸಂಸ್ಕರಣಾ ಘಟಕಕ್ಕೆ ನಿತ್ಯವೂ ನೀರು ಪೂರೈಸುತ್ತಿದ್ದ ಮಂಗಳೂರು ಮಹಾನಗರ ಪಾಲಿಕೆ ಈಗ ಮೂರು ದಿನಕೊಮ್ಮೆ ಮಾತ್ರ ನೀರು ಒದಗಿಸುತ್ತಿದೆ. ಇದರಿಂದ ಉದ್ಭವಿಸಿದ ನೀರಿನ ಕೊರತೆ ಎದುರಿಸಲು ಹೊಸ ಉಪಾಯ ಕಂಡುಕೊಂಡ ಡಿಕೆಮುಲ್ ಆಡಳಿತ, ಹಳ್ಳಿಗಳಿಂದ ನೀರು ತರಲು  ಹಾಲು ಸಾಗಣೆಯ ಎರಡು ಟ್ಯಾಂಕರ್‌ಗಳನ್ನು ನಿಯೋಜಿಸಿದೆ. ಈ ಮೂಲಕ ಪ್ರತಿದಿನ 1.5 ಲಕ್ಷ ಲೀಟರ್‌ನಿಂದ 2 ಲಕ್ಷ ಲೀಟರ್‌ನಷ್ಟು ನೀರನ್ನು ರೈತರಿಂದಲೇ ಖರೀದಿಸುತ್ತಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಡಿಕೆಮುಲ್‌ ನಿತ್ಯ 3.52 ಲಕ್ಷ ಲೀಟರ್‌ ಹಾಲು ಸಂಗ್ರಹಿಸುತ್ತಿದೆ. ಇದರ ಸಂಸ್ಕರಣೆಗೆ  ನಿತ್ಯವೂ ಎರಡು ಲಕ್ಷ ಲೀಟರ್ ನೀರಿನ ಅಗತ್ಯವಿದೆ. ಅಷ್ಟೇ ಸಾಮರ್ಥ್ಯದ ನೀರು ಸಂಗ್ರಹಾಗಾರವನ್ನು ಹಾಲು ಸಂಸ್ಕರಣಾ ಘಟಕದಲ್ಲಿ ನಿರ್ಮಿಸಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ಮೂರು ದಿನಕ್ಕೊಮ್ಮೆ ನೀರು ಪೂರೈಸಿದಾಗ ಎರಡು ಲಕ್ಷ ಲೀಟರ್‌ಗಿಂತ ಹೆಚ್ಚು ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಡಿಕೆಮುಲ್‌ಗೆ ಸಾಧ್ಯವಾಗುತ್ತಿಲ್ಲ.

ರೈತರಿಗೆ ಹೆಚ್ಚುವರಿ ಸಂಪಾದನೆ
‘ಸಾಕಷ್ಟು ಉಳಿತಾಯ ಕ್ರಮಗಳನ್ನು ಕೈಗೊಂಡ ಬಳಿಕವೂ ಹಾಲಿನ ಸಂಸ್ಕರಣೆಗೆ ನಿತ್ಯ 1.5 ಲಕ್ಷ ಲೀಟರ್‌ ಬೇಕಾಗುತ್ತದೆ. ಪಾಲಿಕೆ ಮೂರು ದಿನಕ್ಕೊಮ್ಮೆ ಒದಗಿಸುವ ಎರಡು ಲಕ್ಷ ಲೀಟರ್‌ ನಮಗೆ ಒಂದು ದಿನಕ್ಕೇ ಖರ್ಚಾಗುತ್ತದೆ. ಉಳಿದ ಎರಡು ದಿನಗಳಿಗೆ ಬೇಕಾದ 3– 4 ಲಕ್ಷ ಲೀಟರ್‌ ನೀರನ್ನು ನಾವು ಬೇರೆ ಮೂಲದಿಂದ ಖರೀದಿಸುವುದು ಅನಿವಾರ್ಯ’ ಎಂದು ಡಿಕೆಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದ ವ್ಯಾಪ್ತಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀರು ಒದಗಿಸುವ ಯಾವುದೇ ಮೂಲಗಳಿಲ್ಲ. ಅದಕ್ಕಾಗಿ ರೈತರ ಬಾವಿಗಳಿಂದ ನೀರನ್ನು ಸಂಗ್ರಹಿಸಿ ಹಾಲು ಸಂಸ್ಕರಣಾ ಘಟಕಕ್ಕೆ ಟ್ಯಾಂಕರ್‌ನಲ್ಲಿ ತರಲಾಗುತ್ತಿದೆ. ಕೆಲವು ರೈತರು ರಿಯಾಯಿತಿ ದರದಲ್ಲಿ, ಇನ್ನು ಕೆಲವರು ಮಾರುಕಟ್ಟೆ ದರದಲ್ಲಿ ನೀರು ಒದಗಿಸುತ್ತಿದ್ದಾರೆ’ ಎಂದರು.

ಬಿಕ್ಕಟ್ಟು ತೀವ್ರವಾಗುವ ಆತಂಕ: ತುಂಬೆ ಕಿಂಡಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕುಸಿದರೆ ಪಾಲಿಕೆ ನೀರು ಪೂರೈಕೆಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಇದರಿಂದ ಡಿಕೆಮುಲ್‌ನ ನೀರಿನ ಕೊರತೆ ಉಲ್ಬಣಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT