ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಉತ್ಪಾದಕರು, ನೌಕರರ ಪ್ರತಿಭಟನೆ

Last Updated 24 ನವೆಂಬರ್ 2015, 20:11 IST
ಅಕ್ಷರ ಗಾತ್ರ

ಬೆಂಗಳೂರು: ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ಹಾಲು ಉತ್ಪಾದಕರು ಮತ್ತು ನೌಕರರ ಹೋರಾಟ ಸಮಿತಿ ಸದಸ್ಯರು ಮಂಗಳವಾರ ವಿಧಾನಸೌಧ ಚಲೊ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಗರ ರೈಲು ನಿಲ್ದಾಣದಿಂದ ವಿಧಾನಸೌಧದತ್ತ ತೆರಳಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದರಿಂದ, ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಬಳಿಕ ಬನಪ್ಪ ಉದ್ಯಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಮಿತಿ ಸಂಚಾಲಕ ಎನ್. ವೆಂಕಟಾಚಲಯ್ಯ, ‘ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆ ಆಗಿರುವಾಗ, ಒಂದು ಲೀಟರ್ ಹಾಲಿಗೆ ರೈತರಿಗೆ ಸಿಗುತ್ತಿರುವ ಬೆಲೆ ಅತಿ ಕಡಿಮೆಯಾಗಿದೆ’ ಎಂದರು.

‘ಹಾಲು ಬೆಲೆ ನಿಗದಿಗೆ ಸಂಬಂಧಿಸಿದಂತೆ ಸ್ವಾಮಿನಾಥನ್ ವರದಿಯಲ್ಲಿ ಉಲ್ಲೇಖಿಸಿರುವಂತೆ, ರೈತರಿಗೆ ಹಾಲಿನಿಂದ ಸಿಗುವ ಲಾಭಕ್ಕಿಂತ ಉತ್ಪಾದನಾ ವೆಚ್ಚವೇ ಹೆಚ್ಚಾಗಿದೆ. ಹೀಗಾಗಿ ಸದ್ಯ ಒಂದು ಲೀಟರ್ ಹಾಲಿಗೆ ಇರುವ ಬೆಲೆಯನ್ನು ಪರಿಷ್ಕರಿಸಿ, ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ’  ಒತ್ತಾಯಿಸಿದರು.

‘ಉತ್ಪಾದಕರಿಗೆ ಒಂದು ಲೀಟರ್ ಹಾಲಿಗೆ ನೀಡುವ ₹ 2 ಪ್ರೋತ್ಸಾಹಧನವನ್ನು ಇತ್ತೀಚೆಗೆ ನಿಲ್ಲಿಸಲಾಗಿದ್ದು, ಈ ದರವನ್ನು ₹ 10ಕ್ಕೆ ಏರಿಸಿ, ಮತ್ತೆ ಆರಂಭಿಸಬೇಕು’ ಎಂದರು. ‘ಹಾಲು ಉತ್ಪಾದನೆ ಮತ್ತು ಸಹಕಾರ ಸಂಘಗಳಲ್ಲಿ ಕೆಲಸ ಮಾಡುತ್ತಿರುವ ಕನಿಷ್ಠ 35 ಸಾವಿರ ಮಂದಿಗೆ ಉದ್ಯೋಗ ಭದ್ರತೆ  ಹಾಗೂ ಇತರ ಸರ್ಕಾರಿ ಸವಲತ್ತುಗಳನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.

ಭರವಸೆ: ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಪಶು ಸಂಗೋಪನಾ ಸಚಿವ ಎ. ಮಂಜು, ಅಧಿಕಾರಿಗಳ ಜತೆ ಚರ್ಚಿಸಿ ಬೇಡಿಕೆ ಈಡೇರಿಸುವ  ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT