ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಯ ಲೋಕದ ನೃಪ ಅ.ರಾ.ಸೇ

ವ್ಯಕ್ತಿ ಸ್ಮರಣೆ
Last Updated 11 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಅ.ರಾ.ಸೇ. 1950ರಿಂದ 1990ರ ದಶಕದವರೆಗೆ ನಗುವನಂದ, ಪ್ರಜಾವಾಣಿ, ಸುಧಾ, ಕೊರವಂಜಿ, ಅಪರಂಜಿ ಮತ್ತು ಹಲವಾರು ವಿಶೇಷಾಂಕಗಳಲ್ಲಿ ರಾರಾಜಿಸುತ್ತಿದ್ದ ಹೆಸರು.

ತಮ್ಮದೇ ಆದ ಹಾಸ್ಯದ ಛಾಪನ್ನು ಮೂಡಿಸಿ, ವಿಶಿಷ್ಟ ವರ್ಗವೊಂದನ್ನು ಬೆಳೆಸಿಕೊಂಡಿದ್ದ ಹಾಸ್ಯ ಲೇಖಕ. 1931ರ ಜನವರಿ 26ರಂದು ಭರಮಸಾಗರದಲ್ಲಿ ಹುಟ್ಟಿ, ಬದುಕಿನ ಬಹುಭಾಗವನ್ನು ಅಲ್ಲೇ ಕಳೆದ ಅ.ರಾ.ಸೇತೂರಾಮ ರಾವ್ ಕನ್ನಡ ಕಂಡ ಅಪ್ರತಿಮ ಹಾಸ್ಯ ಲೇಖಕರಲ್ಲಿ ಒಬ್ಬರು. ಅವರು ತಮ್ಮ ಊರಿನ ಬಗ್ಗೆಯೇ ಬರೆದ ಒಂದು ಕವನದ ಸಾಲುಗಳು ಹೀಗಿವೆ: 

ಭರಮಸಾಗರ, ಭರಮಸಾಗರ ಮರೆವೆನೆಂತಾ ಊರನು
ಮರೆವೆನೆಂತಾ ಊರ ಗಾಳಿಯ ಸೊಳ್ಳೆಗಳ ಝೇಂಕಾರವನು?
ಮರೆವೆನೆಂತಮೃತವನು ಹಳಿಯುವ ನಿನ್ನ ಹಲಸಿನ ಹಣ್ಣನು
ಮರೆವೆನೆಂತಪ್ಸರೆಯ ಜರೆಯುವ ಕಳೆಯ ಕೀಳುವ ಹೆಣ್ಣನು?


ಇಂಗ್ಲಿಷ್‌ನಲ್ಲಿ ಆರ್.ಕೆ.ನಾರಾಯಣ್ ತಮ್ಮದೇ ಆದ ಮಾಲ್ಗುಡಿ ಸೃಷ್ಟಿಸಿದಂತೆ, ಇವರು ತಮ್ಮದೇ ಆದ ಮುಗಿಲಹಳ್ಳಿಯನ್ನು ಸೃಷ್ಟಿಸಿ, ಅಲ್ಲಿ ಶೀನು, ರಾಮಿ, ಕಿಟ್ಟಿ, ಪ್ರಸನ್ನ, ಪಾಂಡಿ, ಭಿಕ್ಕು, ತಥಾಗತ, ಗುರೂಜಿ ಇತ್ಯಾದಿ ಪಾತ್ರಗಳ ಮೂಲಕ ಸಮಾಜದ ಹಲವಾರು ಓರೆಕೋರೆಗಳನ್ನು ವೈನೋದಿಕ ನೋಟದಿಂದ ನೋಡುತ್ತಾ, ಕನ್ನಡ ಓದುಗ ಕುಲಕ್ಕೆ ರಸದೌತಣ ನೀಡಿದರು. ಮುಗಿಲಹಳ್ಳಿಯಲ್ಲಿ ನಡೆಯದಿರುವುದು ಇಲ್ಲವೇ ಇಲ್ಲ. ಅಂದಿನ ಕ್ರಿಕೆಟ್, ರಾಜಕಾರಣ, ಕಾಲೇಜು ಹುಡುಗರ ಪ್ರೇಮದಾಟಗಳು, ವ್ಯಾಪಾರಿಗಳ ಕುತಂತ್ರಗಳು, ಕನ್ನಡದ ಚಳವಳಿ, ಬೆಟ್ಟಿಂಗ್ ಗೆಲ್ಲುವ ಪರಿಗಳು, ಅಡುಗೆಯ ಕರಾಮತ್ತು, ವಿದ್ಯಾರ್ಥಿಗಳಿಂದ ಶಿಕ್ಷಕರು ಬೇಸ್ತು ಬೀಳುವುದು ಎಲ್ಲವನ್ನೂ ಅ.ರಾ.ಸೇ  ತಮ್ಮ ವಿಡಂಬನೆ, ಹಾಸ್ಯ, ಕೊಂಕು, ವ್ಯಂಗ್ಯಭರಿತ ಲೇಖನಗಳ ಮೂಲಕ ಸೊಗಸಾಗಿ ಮಂಡಿಸಬಲ್ಲವರಾಗಿದ್ದರು.

ಭರಮಸಾಗರದ ಸುತ್ತಮುತ್ತಲ ಸ್ಥಳಗಳಾದ ಮರಡಿಹಳ್ಳಿ, ಮಾಯಕೊಂಡ, ದುರ್ಗ ಮುಂತಾದ ಊರುಗಳಲ್ಲಿ ಶಿಷ್ಯರ ಪ್ರೀತಿಯ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಲೇ ತಮ್ಮ ಬರವಣಿಗೆಯನ್ನು ವೃದ್ಧಿಸಿಕೊಂಡು ಬಂದ ಅ.ರಾ.ಸೇ, ಕಡೆಗೆ ಕಾಲೇಜಿನ ಉಪನ್ಯಾಸಕರಾಗಿ ನಿವೃತ್ತರಾದರು. ಶಿಷ್ಯವೃಂದದ ವೈಚಿತ್ರ್ಯಗಳು ಅವರ ಅನೇಕ ಬರಹಗಳಿಗೆ ಸ್ಫೂರ್ತಿಯಾಗಿದ್ದವು.

ಅ.ರಾ.ಸೇ. ವಿಷಯಗಳನ್ನು ಆರಿಸಿಕೊಳ್ಳುತ್ತಿದ್ದ ರೀತಿಯೇ ವಿಭಿನ್ನ. ಅವರ ಅ.ಕ.ವಿ.ಪ್ರೇ.ಪ.ದ ಕಥೆಗಳಂತೂ ನಿತ್ಯನೂತನ. ಮುಗಿಲಹಳ್ಳಿಯಲ್ಲಿ ಸುಂದರಿಯರಿಗೇನೂ ಕೊರತೆಯಿರಲಿಲ್ಲ ಎನಿಸುತ್ತದೆ. ಮುಗಿಲಹಳ್ಳಿಯ ಭರ್ತಿ ವಿಫಲಪ್ರೇಮಿಗಳ ದಂಡೇ ಇತ್ತು. ತಮ್ಮ ಕಷ್ಟಗಳನ್ನು, ವಿರಹವೇದನೆಯನ್ನು ಹೇಳಿಕೊಳ್ಳಲು ಒಂದು ವೇದಿಕೆ ಬೇಕಿತ್ತು. ಅದೇ ಅಖಿಲ ಕರ್ನಾಟಕ ವಿಫಲ ಪ್ರೇಮಿಜನರ ಪರಿಷತ್ ಅಥವಾ ಅ.ಕ.ವಿ.ಪ್ರೇ.ಪ. ಒಂದೊಂದು ಕಥೆಯಲ್ಲೂ ಒಂದೊಂದು ವಿಧದ ಪ್ರೇಮಸಂದಿಗ್ಧ; ಅದನ್ನು ಅಷ್ಟೇ ಬುದ್ಧಿವಂತಿಕೆಯಿಂದ ಬಿಡಿಸುವ ಚಾಕಚಕ್ಯತೆ ಓದುಗರನ್ನು ಬೆರಗುಗೊಳಿಸುತ್ತದೆ.

ಅ.ರಾ.ಸೇ ಎಂದಿಗೂ ವಿಷಯಸಂಗ್ರಹದಲ್ಲಿ ಅಪ್-ಟು-ಡೇಟ್ ಇರುತ್ತಿದ್ದರು. ಯೂರಿ ಗಗರಿನ್ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣ ಮಾಡಿದ ಸಂದರ್ಭದಲ್ಲಿ ‘ಗಗರಿನ್ನಗೊಂದು ಕಾಲ; ಷೆಪರ್ಡಿಗೊಂದು ಕಾಲ; ನನಗೊಂದು ಕಾಲ’ ಎಂಬ ವಿಶಿಷ್ಟ ಹಾಸ್ಯಲೇಖನ ಬರೆದರು. ಅಂದಿನಂದಿನ ಆವಿಷ್ಕಾರಗಳನ್ನು ಶ್ರೀಸಾಮಾನ್ಯನ ಜನಜೀವನಕ್ಕೆ ಹೊಂದಿಸಿ, ಹಾಸ್ಯದ ಚಿಲುಮೆ ಚಿಮ್ಮಿಸುತ್ತಿದ್ದರು.

ಅ.ರಾ.ಸೇ ಕವನಗಳ ಮೂಲಕವೂ ಕಚಗುಳಿ ಇಡುತ್ತಿದ್ದರು. ಡಾಲರ್ ಲೆಕ್ಕದಲ್ಲಿ ಸಂಪಾದಿಸಬೇಕೆನ್ನುವವನನ್ನು ‘ತೆಂಕಣ ಗಾಳಿ ಸೋಂಕಿದೊಡೆಂ’ ಎಂದು ಪಂಪನೆಂದ ರೀತಿಯಲ್ಲೇ ಅಣಕವೊಂದನ್ನು ಅವರು ರಚಿಸಿದುದು ಹೀಗೆ:

ಮಂಕನ ಗಾಳಿ ಸೋಂಕಿದೊಡಂ; ಕಳ್ನುಡಿಗೇಳ್ದಿಡಂ;
ಹಾರ್ಮೋನಿಯಂ ಭೋಂಕನೆ ಕಿವಿಗೊರೆದೊಡಂ;
ಬೀರಿದ ದತ್ತುರಿಗಂಡೊಡಂ;
ಮೇಣ್ ತಾಂಕುವ ಸುಂಟರ್ ಬೀಸಿದೊಡಂ;
ಮದಮಹೋತ್ಸವ ಮಾದೊಡೇನನೆಂಬೆನ್ನಾ ರಂಕುಸ
ವಿಟ್ಟೊಡಂ ನೆನೆವುದೆನ್ನ ಮನಂ ಡಾಲರಿನ ಡಿಂಗರಿಗರಂ.


ಕೆಲವು ದಿನಗಳ ಕಾಲ ಅ.ರಾ.ಸೇ ನಮ್ಮ ಮನೆಯ ಸಮೀಪವೇ ಮನೆ ಮಾಡಿಕೊಂಡಿದ್ದರು. ಆಗ ನನಗೆ ಅವರ ಕಾಫಿಪ್ರಿಯತೆಯ ಅರಿವಾಯಿತು. ಕಾಫಿ ಎಂಬ ಶಬ್ದ ಕಿವಿಗೆ ಬಿದ್ದರೆ ಅವರ ನಡೆಗೆ ತಡೆ! ಕಾಫಿಯನ್ನು ಕುರಿತೇ ಅವರು ಬರೆದ ಸಾಲುಗಳು ಹೀಗಿವೆ:

ಸೂರ್ಯನುದಿಸಿಹನೋಡು ನಿದ್ದೆಯನು ಕೊನೆಮಾಡು
ಏಳೆನ್ನ ಮನದನ್ನೆ ಗಂಟೆ ಎಂಟಾಯ್ತು
ಕಣ್ತೆರೆದು ದಯಮಾಡು ಕಾಫಿ ಒಲೆಯನುಹೂಡು
ಆಳಿಂಡಿಯಾಕಾಶ ವಾಣಿ ಒರಲುತಿದೆ!


ಅ.ರಾ.ಸೇ.ಯವರ ಹತ್ತಿರದ ವಿದ್ವಾಂಸ ಸ್ನೇಹಿತರೊಬ್ಬರು ‘I have maintained level of poverty throughout my life’ ಎಂದಿದ್ದರು. ಅ.ರಾ.ಸೇ.ಗೂ ಇದ್ದ ಶ್ರೀಮಂತಿಕೆಗಳೆಂದರೆ ಸಾಹಿತ್ಯ ಶ್ರೀಮಂತಿಕೆ ಮತ್ತು ಹೃದಯ ಶ್ರೀಮಂತಿಕೆ ಮಾತ್ರ. ಆದರೆ ಬಡತನವನ್ನೂ ನಗುನಗುತ್ತಲೇ ಸ್ವೀಕರಿಸಿದ ಅವರ ಪರಿ ನೋಡಿ:

ನಾನು ಕೊಟ್ಟ ಎಂಟಾಣೆಗಳೆಲ್ಲವು
ಬಂದರೆ ಸಾವಿರ ರೂಪಾಯಿ
ನನಗೆ ಕೊಟ್ಟ ಎಂಟಾಣೆಗಳೆಲ್ಲವು
ಹೋದರೆ ಸಾವಿರ ರೂಪಾಯಿ.
ಆದುದರಿಂ ಡಬಲೆಂಟ್ರಿಯ ಲೆಕ್ಕದ
ಲಯಬಿಲಿಟಿಗಳು ಅಸೆಟ್ಟುಗಳು
ಈಕ್ವಲೈಸಿದವು ಎಂದಿನಂತೆಯೇ
ನಾನಾಗಿರುವೆನು ಪಾಪರ್!


ಅ.ರಾ.ಸೇ. ಅವರನ್ನು ಹತ್ತಿರದಿಂದ ಬಲ್ಲವರಿಗೆ ಅವರ ಇಂಗ್ಲಿಷ್ ಮೇಲಿನ ಪ್ರಭುತ್ವ, ಛಂದೋಬದ್ಧ ಕಾವ್ಯರಚನೆ, ಸಂಸ್ಕೃತದ ಮೇಲಿನ ಹಿಡಿತ ಚೆನ್ನಾಗಿ ತಿಳಿದಿರುತ್ತದೆ. ಅವರ ಬರಹಗಳಲ್ಲಿ ಇವೆಲ್ಲವುಗಳ ಛಾಯೆಯನ್ನು ಅಲ್ಲಲ್ಲಿ ಕಾಣಬಹುದು. ಕೊರವಂಜಿ, ಅಪರಂಜಿಗಳ ಪುನರುತ್ಥಾನದಲ್ಲಂತೂ ಅವರ ಶ್ರಮ ಅಪಾರ.

‘ಅ.ರಾ.ಸೇ. ಹಾಸ್ಯ ಲೇಖಕರು ಎಂದೇಕೆ ಬರೆಯುತ್ತೀರಿ?’ ಎಂದು ಕೆಲವರು ಕೇಳಬಹುದು. ಅದಕ್ಕೆ ಅವರಿತ್ತ ಉತ್ತರವೇ ನನಗೆ ಆಧಾರ. ಅಪರಂಜಿಯ 25ನೇ ವಾರ್ಷಿಕೋತ್ಸವದಂದು ಅ.ರಾ.ಸೇ. ಅವರಿಗಿಂತ ಮುಂಚೆ ಮಾತನಾಡಿದವರು ‘ನಾನು ಮೊದಲು ಕೇವಲ ಹಾಸ್ಯ ಬರೆಯುತ್ತಿದ್ದೆ. ಈಗ ಆ ಮಟ್ಟವನ್ನು ದಾಟಿ ಸೀರಿಯಸ್ ವಿಷಯಗಳನ್ನು ಬರೆಯುವ ಹಂತ ತಲುಪಿದ್ದೇನೆ’ ಎಂದರು. ತದನಂತರ ಮಾತನಾಡಿದ ಅ.ರಾ.ಸೇ. ‘ನಾನು ಮೊದಲು ಗಂಭೀರವಾದುದನ್ನು ಬರೆಯುವ ಮಟ್ಟಕ್ಕೇ ಸೀಮಿತವಾಗಿದ್ದೆ. ಈಗ ಹಾಸ್ಯವನ್ನು ಬರೆಯುವ ಮಟ್ಟಕ್ಕೆ ಏರಿದ್ದೇನೆ. ಹಾಸ್ಯ ಬರೆಯಬೇಕಾದರೆ ವಿಷಯದ ಗಂಭೀರತೆಯೂ ತಿಳಿದಿರಬೇಕು, ಅದನ್ನು ಹಾಸ್ಯವಾಗಿ ಪರಿವರ್ತಿಸುವ ಕಲೆಯೂ ಬೇಕು’ ಎಂದರು. ಅ.ರಾ.ಸೇ.ಗೆ ಹಾಸ್ಯ ಎಲ್ಲದಕ್ಕಿಂತ ಹೆಚ್ಚಿನದಾಗಿತ್ತು.

ಹಾಗೆಂದು ಅವರ ಇತರ ಸಾಹಿತ್ಯ ಪ್ರಕಾರಗಳು ಯಾವುದರಲ್ಲೂ, ಯಾರಿಗೂ ಕಡಿಮೆಯಿಲ್ಲ. ಅವರು ತಮ್ಮ ಗುರುಗಳ ಬಗ್ಗೆ ಬರೆದ ಶ್ಲೋಕಗಳ ಪುಸ್ತಕ ಸರ್ವ ಗುರುಗಳ ಸ್ಮರಣೆಗೆ ಯೋಗ್ಯವಾದ ಕೃತಿ. ಅವರ ‘ಪರಮಾರ್ಥ ಪದ ಕೋಶ’ ಅಧ್ಯಾತ್ಮದಲ್ಲಿ ಬರುವ ಎಲ್ಲ ಕ್ಲಿಷ್ಟ ಪದಗಳ ಅರ್ಥವನ್ನು ನೀಡುವ ವಿಶೇಷ ಹೊತ್ತಿಗೆ. ಇವೆಲ್ಲಕ್ಕೂ ಕಳಶಪ್ರಾಯವಾದದ್ದು ಅವರ ‘ಕುಮಾರವ್ಯಾಸ ಭಾರತ ತಾತ್ಪರ್ಯ ಸಹಿತ’ ಮತ್ತು ‘ಜೈಮಿನಿ ಭಾರತ’. ‘ಕುಮಾರವ್ಯಾಸ ಭಾರತ’ ಒಂದು ಬೃಹತ್ ಗ್ರಂಥ. ಫುಲ್‌ಸ್ಕೇಪ್‌ ಆಕಾರದ, 1500ಕ್ಕೂ ಹೆಚ್ಚು ಪುಟಗಳಿರುವ ಈ ಮಹಾನ್ ಗ್ರಂಥ ಅ.ರಾ.ಸೇ.ಯವರ ಮೇರು ಕೃತಿ. ಹಾಸ್ಯಕ್ಷೇತ್ರದಲ್ಲಿ ಹೊಂದಿದ್ದಷ್ಟೇ ಪರಿಣತಿಯನ್ನು ಗಂಭೀರ, ಅಧ್ಯಾತ್ಮ, ಪುರಾಣ, ಕಾವ್ಯ, ವೇದಾಂತ, ವಿಮರ್ಶೆ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲೂ ಹೊಂದಿದ್ದ ಅ.ರಾ.ಸೇ ಕನ್ನಡ ನಾಡು ಕಂಡ ಧೀಮಂತ ಚಿಂತಕ, ಲೇಖಕ, ಕಚಗುಳಿಗಾರ.

ಒಮ್ಮೆ ಅ.ರಾ.ಸೆ.ಯವರನ್ನು ‘what is the purpose of your life?’ ಎಂದು ಕೇಳಿದುದಕ್ಕೆ ಅವರು ಒಂದು ಪದ್ಯದ ಮೂಲಕವೇ ಉತ್ತರಿಸಿದರು:

ಲೋಕಕ್ಕೆ ಬಂದೆ ನಾನ್, ಏಕೆ? ನಾನದನರಿಯೆ.
ಚೇಳುಕೊಂಡಿಗೆ ವಿಷವದೇಕೆ ಬಂತು?
ಪೋಪೆ ನಿಲ್ಲಿಂ ನಾನು; ಎಲ್ಲಿಗೋ? ಅದನರಿಯೆ,
ಸಿಗರೇಟು ಹೊಗೆಯವೊಲು ಹಾರಿಹೋಗುವೆನು.


ಇದೇ ತಿಂಗಳ ಒಂಬತ್ತರಂದು ಅ.ರಾ.ಸೇ ನವದ್ವಾರಗಳನ್ನೂ ತೊರೆದು ಹೊರನಡೆದರು. ಅಗಲಿದ ನನ್ನ ಗುರುಗಳಿಗೆ ಇದೋ ನನ್ನದೊಂದು ನುಡಿ ನಮನ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT