ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೀರ ಸೊಬಗು

Last Updated 10 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನಗರ ಜೀವನದ ಜಂಜಾಟದಿಂದ ತಪ್ಪಿಸಿಕೊಂಡು ತುಸು ರಿಲ್ಯಾಕ್ಸ್ ಆಗಲು ಮೆಟ್ರೊ ಮಂದಿ ವಾರಾಂತ್ಯಕ್ಕೆ ಊರು ಬಿಟ್ಟು ದೂರ ಹೋಗಲು ಬಯಸುತ್ತಾರೆ. ಅಂಥವರಿಗೆ ಹೇಳಿ ಮಾಡಿಸಿದ ಪ್ರವಾಸಿ ತಾಣವೆಂದರೆ ಮೈಸೂರು ಜಿಲ್ಲೆಯ ಹೊಸ ಕನ್ನಂಬಾಡಿ ಗ್ರಾಮದಲ್ಲಿರುವ ಕೃಷ್ಣರಾಜ ಸಾಗರ ಹಿನ್ನೀರು.

ಕೆ.ಆರ್.ಎಸ್. ಎಂದೇ ಪ್ರಸಿದ್ಧಿಯಾದ ಕೃಷ್ಣರಾಜ ಸಾಗರ ಅಣೆಕಟ್ಟನ್ನು ಕಣ್ತುಂಬಿಕೊಂಡು, ಬೃಂದಾವನ ಉದ್ಯಾನವನ್ನು ಒಂದು ಸುತ್ತು ಹಾಕಿ, ಸಂಗೀತ ಕಾರಂಜಿಯನ್ನೂ ಸವಿದು ಬಂದರೆ ತಮ್ಮ ಪ್ರವಾಸ ಪೂರ್ಣವಾಯಿತು ಎಂದು ಭಾವಿಸುವವರೇ ಅನೇಕ. ಆದರೆ ಇಷ್ಟೆಲ್ಲವನ್ನು ಸುತ್ತಿ, ಅಣೆಕಟ್ಟಿನ ಹಿನ್ನೀರ ಸೊಬಗನ್ನು ಮರೆತು ಬಂದರೆ ಆ ಪ್ರವಾಸ ಅಪೂರ್ಣ ಎನ್ನುವುದನ್ನು ಇಲ್ಲಿ ಹೇಳಲೇಬೇಕು.

ಬೃಂದಾವನ ಗಾರ್ಡನ್‌ನಿಂದ ಸುಮಾರು ಎಂಟು ಕಿ.ಮೀ ದೂರದಲ್ಲಿರುವ ಕೆಆರ್‌ಎಸ್‌ ಹಿನ್ನೀರಿನ ಪ್ರದೇಶಕ್ಕೆ ಬೆಳ್ಳಂ ಬೆಳಿಗ್ಗೆ ಹೋದರೆ ಚಂದ. ಅದರಲ್ಲೂ ಸೂರ್ಯಾಸ್ತ­ ಆಗುವ ವೇಳೆ ಹಿನ್ನೀರಿನ ಬಳಿ ನೀವಿದ್ದರೆ ಆ ಮೋಹಕ ಕ್ಷಣವನ್ನು ಮರೆಯಲು ಒಂದು ಜನ್ಮವೂ ಸಾಲದೇನೋ?

ಎರಡು ದಿನಗಳ ಮಡಿಕೇರಿ ಪ್ರವಾಸ ಮುಗಿಸಿ ಮೂರನೇ ದಿನ ಮೈಸೂರಿ­ನಿಂದ ಬೆಂಗಳೂರಿಗೆ ಹೊರಡುವ ಮುನ್ನ ಕೆ.ಆರ್‌.ಎಸ್‌. ಅಣೆಕಟ್ಟನ್ನು ನೋಡಿಕೊಂಡು ಹೋಗಬೇಕು ಎನ್ನುವುದು ನಮ್ಮ ಯೋಜನೆಯಾಗಿತ್ತು. ಆದರೆ ಇನ್ನೂ ಸಾಕಷ್ಟು ಸಮಯ ಇದ್ದಿದ್ದರಿಂದ ಕೆಆರ್‌ಎಸ್‌ ಹಿನ್ನೀರಿಗೆ ಮೊದಲು ಹೊರಟಿತು ನಮ್ಮ ಗಾಡಿ. ಕೆಆರ್‌ಎಸ್‌ನಿಂದ ಎಂಟು ಕಿ.ಮೀ. ದೂರದಲ್ಲಿದ್ದ ಹಿನ್ನೀರಿಗೆ ಸ್ವಂತ ವಾಹನದಲ್ಲಿ ತೆರಳಿದೆವು. ಮನೆ ಬಿಟ್ಟ 20 ನಿಮಿಷಗಳಲ್ಲಿ ಅಲ್ಲಿಗೆ ತಲುಪಿದೆವು.

ವಾಹನ ಇಳಿದು ಅಲ್ಲಿನ ವಿಹಂಗಮ ನೋಟವನ್ನೊಮ್ಮೆ ಕಣ್ತುಂಬಿಕೊಂಡಾಗ ‘ಅಬ್ಬಾ’ ಎಂಬ ಉದ್ಗಾರ ಹೊರಡಿಸಿದವರೇ ಹೆಚ್ಚು. ಮಧ್ಯೆ ದೇವಸ್ಥಾನದ ಸುತ್ತಲೂ ನೀರು. ಯಾವುದೇ ಆವೇಗ ಇಲ್ಲದೆ, ಸಂಯಮದಿಂದ ಮಧುರ ಗೀತೆಯಂತೆ ಶಾಂತವಾಗಿ ನೀರು ಅಲೆಗಳನ್ನು ಮೂಡಿಸುತ್ತಿತ್ತು.

ಇಂತಹ ಪ್ರಕೃತಿ ಸೌಂದರ್ಯ ಸವಿಯುವುದು ಅಪರೂಪವೇ ಸರಿ ಎಂದುಕೊಂಡು, ಸುತ್ತಲಿನ ನಿಸರ್ಗವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದು ಅಲ್ಲಿಯೇ ಕಲ್ಲಿನಿಂದ ನಿರ್ಮಿತವಾಗುತ್ತಿರುವ ಇನ್ನೂ ನಿರ್ಮಾಣದ ಹಂತದಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಹೋದೆವು.


ಅತ್ಯಂತ ವಿಶಾಲವಾಗಿ ನಿರ್ಮಿತವಾಗು­ತ್ತಿರುವ ಈ ದೇವಾಲಯದೊಳಗೆ ಪ್ರವೇಶ ಪಡೆಯುತ್ತಿದ್ದಂತೆ ತಣ್ಣನೆ ಗಾಳಿ ಮತ್ತಷ್ಟು ಭಾವ ತೀವ್ರತೆಯನ್ನು ಹುಟ್ಟಿಸಿತು. ನಿರ್ಮಾಣ ಹಂತದಲ್ಲಿರುವ ಕಾರಣ ದೇವಾಲಯದೊಳಗೆ ಇನ್ನೂ ಯಾವ ದೇವರ ವಿಗ್ರಹಗಳನ್ನೂ ಪ್ರತಿಷ್ಠಾಪಿಸಿರಲಿಲ್ಲ. ಆದರೂ ಅಲ್ಲಿನ ಪ್ರಶಾಂತ ವಾತಾವರಣ ಮನದಲ್ಲಿ ಭಕ್ತಿಯ ಭಾವ ತುಂಬದೇ ಇರಲಿಲ್ಲ. ದೇವಸ್ಥಾನವನ್ನು ಒಂದು ಸುತ್ತು ಹಾಕಿ, ಆವರಣದಲ್ಲಿ ಮಾರಾಟ ಮಾಡುತ್ತಿದ್ದ ಚುರ್‌ಮುರಿ, ಐಸ್‌ಕ್ರೀಂ ತಿಂದು ಮತ್ತೆ ಗಾಡಿ ಹತ್ತಿದೆವು.

ವೇಣುಗೋಪಾಲ ಸ್ವಾಮಿ ದೇವಸ್ಥಾನದ ಹಿನ್ನಲೆ 
900 ವರ್ಷಗಳ ಪುರಾತನ ದೇವಸ್ಥಾನವಿದು. ಕೆಆರ್‌ಎಸ್‌ ಅಣೆಕಟ್ಟಿನ ನೀರಿನ ಮಟ್ಟ ಹೆಚ್ಚಾದಾಗ ಈ ದೇವಾಲಯ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತಿತ್ತು. ನೀರಿಲ್ಲದಿದ್ದಾಗ ಮಾತ್ರ ದೇವರ ದರ್ಶನ ಪಡೆಯುವ ಅವಕಾಶ ಸಿಗುತ್ತಿತ್ತು. ಆದರೆ ಈಗ ಆ ದೇವಸ್ಥಾನವನ್ನು ಸ್ಥಳಾಂತರ ಮಾಡಲಾಗಿದೆ. ಎರಡು ವರ್ಷಗಳ ಹಿಂದೆ ಆರಂಭವಾದ ದೇವಸ್ಥಾನದ ಕಾಮಗಾರಿ ಇನ್ನೇನು ಮುಗಿಯುವ ಹಂತದಲ್ಲಿದೆ.
ದೇವಾಲಯ ಸಂಪೂರ್ಣ ಕಲ್ಲಿನದ್ದಾದ್ದ­ರಿಂದ ನೀರಿನಲ್ಲಿ ಮುಳುಗಡೆಯಾದರೂ ಯಾವುದೇ ಹಾನಿಯಾಗಿರಲಿಲ್ಲ.

ದೇವಸ್ಥಾನದ ಕಾಮಗಾರಿ ಪೂರ್ಣಗೊಂಡ ನಂತರ ಕೆಆರ್‌ಎಸ್‌ ಬ್ಯಾಕ್‌ವಾಟರ್ ಇನ್ನಷ್ಟು ಪ್ರಸಿದ್ಧಿ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರಕೃತಿ ಸೌಂದರ್ಯ ಸವಿಯಲು ಬಯಸುವ ಮನಗಳಿಗೆ ಈ ತಾಣ ಸೂಕ್ತವಾಗಿದ್ದು, ನಮಗೆ ಬೇಕಾದಷ್ಟು ಸಮಯ ಕೂತು ಅಲ್ಲಿನ ಸೌಂದರ್ಯ ಸವಿದು ವಾಪಸಾಗಬಹುದು.

ಇಲ್ಲಿಗೆ ಬಂದ ಪ್ರವಾಸಿಗರು ಕೇವಲ ಇದೊಂದೇ ಜಾಗವಲ್ಲದೆ ಹತ್ತಿರದಲ್ಲೇ ಇರುವ ಕೃಷ್ಣರಾಜ­ಸಾಗರ ಅಣೆಕಟ್ಟು, ಬಲಮುರಿ ಹಾಗೂ ಎಡಮುರಿ, ರಂಗನತಿಟ್ಟು ಪಕ್ಷಿಧಾಮ, ನಿಮಿಷಾಂಬ ದೇವಸ್ಥಾನಗಳಿಗೂ ಭೇಟಿ ನೀಡಬಹುದು.

ಬ್ಯಾಕ್‌ವಾಟರ್‌ಗೆ ಹೀಗೂ ತಲುಪಬಹುದು
ಬಸ್‌ನಲ್ಲಿ ಹೊರಟರೆ ನಗರದಿಂದ 124 ಕಿ.ಮೀ. ಅಂತರದಲ್ಲಿರುವ ಶ್ರೀರಂಗಪಟ್ಟಣ ತಲುಪಲು 2ಗಂಟೆ 45 ನಿಮಿಷ ಬೇಕು. ಇಲ್ಲಿಂದ ಕೆ.ಆರ್‌.ಎಸ್‌. ತಲುಪಲು ಸಾಕಷ್ಟು ಸರ್ಕಾರಿ ಬಸ್ಸುಗಳಿವೆ. ಅಲ್ಲಿಂದ 30–40 ನಿಮಿಷಗಳಲ್ಲಿ ಅಣೆಕಟ್ಟನ್ನು ತಲುಪಬಹುದು. ಕೆ.ಆರ್‌.ಎಸ್‌ನಿಂದ 8 ಕಿ.ಮೀ. ದೂರದಲ್ಲಿರುವ ಹಿನ್ನೀರಿಗೆ ಬಸ್‌ ಸೌಲಭ್ಯಗಳು ಅಷ್ಟಿಲ್ಲವಾದರೂ ಆಟೊಗಳ ಮೂಲಕ 15 ನಿಮಿಷದಲ್ಲಿ ತಲುಪಬಹುದು. ಸ್ವಂತ ವಾಹನಗಳಿದ್ದಲ್ಲಿ ಮೂರೂವರೆ ತಾಸಿನಲ್ಲಿ ನೇರವಾಗಿ ಹಿನ್ನೀರಿನ ಜಾಗ ತಲುಪಬಹುದು.

ಇನ್ನು ಇಲ್ಲಿ ಯಾವುದೇ ಹೋಟೆಲ್‌ಗಳು ಇಲ್ಲವಾದ್ದರಿಂದ ಪ್ರವಾಸಿಗರು ಊಟ–ತಿಂಡಿಯ ವ್ಯವಸ್ಥೆ ಇಲ್ಲದೇ ಬಂದಲ್ಲಿ ಪ್ರಯಾಸ ತಪ್ಪಿದ್ದಲ್ಲ. ಆದ್ದರಿಂದ ಮೈಸೂ­ರಿನ ಹೆದ್ದಾರಿಯಲ್ಲಿ ಸಿಗುವ ಹೋಟೆಲ್‌­ಗಳಲ್ಲಿ ಊಟ ಮಾಡಿ­ಕೊಂಡು ಹೋಗಬೇಕು ಅಥವಾ ಮನೆ­ಯಿಂದ ಅಡುಗೆ ಮಾಡಿಕೊಂಡು ತರುವುದೂ ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT