ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರು ಸಂತಸದಿಂದ ಇರುವುದು ಏಕೆ?

Last Updated 6 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕೆಲ ತಿಂಗಳ ಹಿಂದೆ ‘ದಿ ಅಟ್ಲಾಂಟಿಕ್‌’ನಲ್ಲಿ ಎಜೆಕಿಲ್‌ ಎಮಾನ್ಯುಯೆಲ್‌ ಪ್ರಬಂಧವೊಂದನ್ನು ಬರೆದಿದ್ದರು. ಬದುಕಿನ ಎಲ್ಲ ಆಯಾಮಗಳನ್ನು ಗಣನೆಗೆ ತೆಗೆದುಕೊಂಡು 75 ಸಮೀಪಿಸುತ್ತಿದ್ದಂತೆ ತಾವು ಸಾಯಲು ಇಚ್ಛಿಸುವುದಾಗಿ ಅವರು ಬರೆದುಕೊಂಡಿದ್ದರು. ಅನಾರೋಗ್ಯ, ಅಸಹಾಯಕತೆಯಿಂದ ಸಾಯುವ ಬದಲು ಶಕ್ತಿಶಾಲಿಯಾಗಿಯೇ ಸಾಯಲು ಇಚ್ಛಿಸುವುದಾಗಿಯೂ ಅವರು ಹೇಳಿಕೊಂಡಿದ್ದರು.

ಎಜೆಕಿಲ್‌ 75ರಲ್ಲಿ ಸತ್ತುಹೋದರೆ ಬದುಕಿನ ಅತ್ಯಂತ ಸಂತಸಕರ ವರ್ಷಗಳನ್ನು ಆತ ಕಳೆದುಕೊಳ್ಳುವ ಸಾಧ್ಯತೆಯಿದೆ. ಸಂಶೋಧಕರು ನಿಮ್ಮ ಆರೋಗ್ಯದ ಬಗ್ಗೆ ಅಭಿಪ್ರಾಯ ಹೇಳಿ ಎಂದಾಗ 20ರ ಹರೆಯದ ಯುವಕರು ಅತ್ಯಂತ ಆರೋಗ್ಯದಿಂದ, ಸಂತಸದಿಂದ ಇರುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ, ಮಧ್ಯ ವಯಸ್ಸು ಸಮೀಪಿಸುತ್ತಿದ್ದಂತೆ ಜನ ಖಿನ್ನರಾಗುತ್ತಾರೆ. 50ರ ವಯಸ್ಸಿನಲ್ಲಿ ದುಃಖ, ಹತಾಶೆಯ ಮಡುವಿನಲ್ಲಿ ಮುಳುಗಿರುತ್ತಾರೆ. ಆನಂತರ ನಿಧಾನವಾಗಿ ಸಂತಸದ  ಮಟ್ಟ ಏರುತ್ತ ಹೋಗುತ್ತದೆ. 82ರಿಂದ 85ರ ವಯೋಮಾನದಲ್ಲಿರುವ ವೃದ್ಧರು ತಾವು ಅತ್ಯಂತ ಹೆಚ್ಚು ಸಂತಸದಿಂದ, ಉಲ್ಲಾಸದಿಂದ ಇರುವುದಾಗಿ ಹೇಳಿಕೊಳ್ಳುತ್ತಾರೆ.

ಸಂತಸದ ಗ್ರಾಫ್‌ನಲ್ಲಿ ಕಾಣುವ ಈ ವಿಚಿತ್ರ ಲಕ್ಷಣವನ್ನು (ಯು– ಕರ್ವ್‌) ಅಧ್ಯಯನ ಮಾಡುತ್ತಿರುವ ಮನಃಶಾಸ್ತ್ರಜ್ಞರು ವಯಸ್ಸಾದ ವ್ಯಕ್ತಿಗಳ ಮಿದುಳಿನಲ್ಲಿ ಆಗುವ ಬದಲಾವಣೆಯೇ ಇದಕ್ಕೆಲ್ಲ ಕಾರಣ ಎನ್ನುತ್ತಾರೆ. ಉದಾಹರಣೆಗೆ ಗುಂಪಿನ ಚಿತ್ರವೊಂದನ್ನು ತೋರಿಸಿದಾಗ ಯುವಕರು ಅವರಿಗೆ ಗೊತ್ತಿಲ್ಲದೆಯೇ ಹೆದರಿಕೆ ಹುಟ್ಟಿಸುವ ಮುಖಗಳತ್ತ ನೋಡುತ್ತಾರೆ. ಆದರೆ, ವಯಸ್ಸಾದವರು ಸಂತಸದಿಂದ ಕೂಡಿದ ಮುಖಗಳನ್ನು ನೋಡುತ್ತಾರೆ.

ಇದಕ್ಕೆ ಕಾರಣ, ವಯಸ್ಸಾದವರು ಹೆಚ್ಚು ನಿರಾಳವಾಗಿ ಇರುತ್ತಾರೆ. ಅವರಿಗೆ ಭವಿಷ್ಯದ ಭೀತಿ, ಚಿಂತೆ ಇರುವುದಿಲ್ಲ. ಇದರಿಂದಾಗಿ ನಿತ್ಯದ ಚಟುವಟಿಕೆಗಳಲ್ಲಿ, ವರ್ತಮಾನದಲ್ಲಿ ಅವರು ಖುಷಿ ಕಂಡುಕೊಳ್ಳುತ್ತಾರೆ.

ವಯಸ್ಸಾದವರ ಸಂತಸಕ್ಕೆ ಸಂಬಂಧಿಸಿದ ಹಲವು ಅಧ್ಯಯನಗಳ ಕುರಿತು ನನಗಿರುವ ತಕರಾರು ಏನೆಂದರೆ ಅವು ಫಲಿತಾಂಶವನ್ನು ಮೊದಲೇ ನಿರ್ಧರಿಸಿಕೊಂಡಂತೆ ಇರುತ್ತವೆ. ಇಂತಹ ಅಧ್ಯಯನಗಳು ವಯಸ್ಸಾದ ವ್ಯಕ್ತಿಯಲ್ಲಿ ಆಗುವ ಭಾವನಾತ್ಮಕ ಬದಲಾವಣೆಗಳನ್ನು ಸಹ ದೈಹಿಕ ಬದಲಾವಣೆಯನ್ನು ಅಳೆವ ಮಾನದಂಡ ಇಟ್ಟುಕೊಂಡೇ ಅಳೆಯುತ್ತವೆ. ಆದರೆ, ದೇಹಕ್ಕೆ ವಯಸ್ಸಾಗುವುದು  ಜೈವಿಕ, ರಾಸಾಯನಿಕ ಹಾಗೂ ವಿಕಾಸದ ಸಹಜ ಪ್ರಕ್ರಿಯೆ.

ವಯಸ್ಸಾದವರು ಸಂತಸದಿಂದ ಇರುವುದು ಒಂದು ಸಾಧನೆಯೇ ಹೊರತು ಅದೊಂದು ಸ್ಥಿತಿಯಲ್ಲ. ಕೆಲವು ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಜನ ಸಂತಸದಿಂದ ಬದುಕಲು ಕಲಿಯುತ್ತಾರೆ ಎಂದು ನಾನು ಅಂದುಕೊಂಡಿದ್ದೇನೆ. ಹದಿಹರೆಯದ ಮಕ್ಕಳೂ ಸೇರಿದಂತೆ ತಾವು ನಿಯಂತ್ರಿಸಲು ಸಾಧ್ಯವಿಲ್ಲದ ಸವಾಲುಗಳಿಂದ ಮಧ್ಯ ವಯಸ್ಕರು ಒತ್ತಡಕ್ಕೆ ಒಳಗಾಗುತ್ತಾರೆ. ಆದರೆ, ವಯಸ್ಸಾದಂತೆ ವ್ಯಕ್ತಿಗಳು ಸವಾಲುಗಳನ್ನು ಸುಲಭವಾಗಿ ಎದುರಿಸುವ ಸಾಮರ್ಥ್ಯ ರೂಢಿಸಿಕೊಳ್ಳುತ್ತಾರೆ. ಅರಿಸ್ಟಾಟಲ್‌ ಹೇಳುವಂತೆ ಒಳ್ಳೆಯ ವ್ಯಕ್ತಿಯಾಗಿರುವುದು ಅಂದರೆ ನೈತಿಕ ನಿಯಮಗಳನ್ನು ಅರಿತುಕೊಂಡು ಅವುಗಳನ್ನು ಅನುಸರಿಸುವುದು ಮಾತ್ರವಲ್ಲ. ಪಾಲಕರಾಗಿ, ಶಿಕ್ಷಕರಾಗಿ, ವಕೀಲರಾಗಿ, ಸ್ನೇಹಿತರಾಗಿ... ನಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬೇಕಾಗುತ್ತದೆ.

ಕಾಲ ಕಳೆದಂತೆ ಕೆಲ ವ್ಯಕ್ತಿಗಳು ಸನ್ನಿವೇಶಗಳನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯ ಪಡೆದುಕೊಳ್ಳುತ್ತಾರೆ.
ಒಂದೇ ಸನ್ನಿವೇಶವನ್ನು ಹಲವು ಆಯಾಮಗಳಿಂದ ವಿಶ್ಲೇಷಿಸುವ ಸಾಮರ್ಥ್ಯ ಇದರಲ್ಲಿ ಮಹತ್ವದ್ದು. ಯೇಲ್‌ ಕಾನೂನು ವಿಶ್ವವಿದ್ಯಾಲಯದ ಆಂಟನಿ ಕ್ರಾನ್‌ಮನ್‌ ಹೇಳುವಂತೆ ಬೈಫೋಕಲ್‌ ಕನ್ನಡಕ (ಸಮೀಪ ಮತ್ತು ದೂರದೃಷ್ಟಿಯ ಮಸೂರ ಒಳಗೊಂಡ ಕನ್ನಡಕ) ಧರಿಸಿದ ವ್ಯಕ್ತಿಗಳು ತಮ್ಮ ದೃಷ್ಟಿಯನ್ನು ಹೊಂದಿಸಿಕೊಳ್ಳಬೇಕಾದರೆ ಕೆಲ ಸಮಯ ಹಿಡಿಯುತ್ತದೆ. ಯಾವುದೇ ಘಟನೆ, ಸನ್ನಿವೇಶದ ಬಗ್ಗೆ ನಿಧಾನಕ್ಕೆ ಚಿಂತಿಸಿ, ಚರ್ಚಿಸಿ ಒಂದು ಅಭಿಪ್ರಾಯಕ್ಕೆ ಬರುವುದು ಸಹ ಹೀಗೆಯೇ ಆಗಿದೆ. ಯಾವುದೋ ವ್ಯಕ್ತಿಯ ಬಗ್ಗೆ ಸಹಾನುಭೂತಿ ತೋರುವುದು  ಕಷ್ಟ. ನಿರ್ಲಿಪ್ತವಾಗಿ ಇರುವುದು ಇನ್ನೂ ಕಷ್ಟ. ಏಕಕಾಲಕ್ಕೆ ಇವೆರಡೂ ಭಾವನೆಗಳನ್ನು ಹೊಂದುವುದು ಮತ್ತಷ್ಟು ಕಷ್ಟ.

ಭಾವತೀವ್ರತೆ ಎದುರಿಸುತ್ತಲೇ ನಿರ್ಲಿಪ್ತವಾಗಿರುವುದನ್ನು ಅನುಭವದಿಂದ ಮಾತ್ರ ಕಲಿಯಲು ಸಾಧ್ಯ. ಸೋಲುಗಳನ್ನು ಸಹಜವಾಗಿ ಸ್ವೀಕರಿಸಿ ಲಘುವಾಗಿರುವುದು ಸಹ ವೃದ್ಧಾಪ್ಯದಲ್ಲಿ ಸಾಧ್ಯವಾಗುತ್ತದೆ. ‘ಲೈಟರ್‌ ಆ್ಯಸ್‌ ವಿ ಗೋ’ ಪುಸ್ತಕದಲ್ಲಿ ಜಿಮ್ಮಿ ಹಾಲಂಡ್‌ ಹಾಗೂ ಮಿಂಡಿ ಗ್ರೀನ್‌ಸ್ಟೇನ್‌, ವಯಸ್ಸಾದವರು ಸ್ಮರಣ ಶಕ್ತಿ ಕಳೆದುಕೊಳ್ಳುತ್ತಾರೆ. ಅದಷ್ಟೇ ಅಲ್ಲದೇ ಸೋಲು ಬದುಕಿನ ಅಂತ್ಯವಲ್ಲ ಎನ್ನುವುದನ್ನು ಅರಿತುಕೊಳ್ಳುತ್ತಾರೆ. ಆತಂಕಕ್ಕೆ ಒಳಗಾಗುವುದು ವ್ಯರ್ಥ. ಇದನ್ನು ತಿಳಿದುಕೊಂಡರೆ ನಿಮ್ಮ ಮನಸ್ಸು ಸಹಜ ಸ್ಥಿತಿಗೆ ಬರುತ್ತದೆ. ನೀವು ಸಮಯವನ್ನು ಉಳಿಸುತ್ತೀರಿ ಹಾಗೂ ಬದುಕಲು ಕಲಿಯುತ್ತೀರಿ ಎಂದು ಬರೆದಿದ್ದಾರೆ.

ಸಣ್ಣ, ಸಣ್ಣ ವಿಚಾರಗಳಿಗೆಲ್ಲ ಕುಸಿಯದೇ, ಆತಂಕಕ್ಕೆ ಒಳಗಾಗದೇ ಇರುವುದನ್ನು ಕಲಿತುಕೊಂಡಾಗ ಬದುಕು ಹಗುರವಾಗುತ್ತ ಹೋಗುತ್ತದೆ. ನಿರ್ದಿಷ್ಟ ಫಲಿತಾಂಶಕ್ಕೆ ಅಂಟಿಕೊಳ್ಳದೇ ಇರುವುದನ್ನು ಸಹ ಕಲಿಯಬೇಕು ಎಂದು ಹಾಲಂಡ್‌ ಹಾಗೂ ಗ್ರೀನ್‌ಸ್ಟೇನ್‌ ಹೇಳುತ್ತಾರೆ.

ಹಾಗೆಯೇ ಹಲವು ಒತ್ತಡಗಳನ್ನು ಏಕಕಾಲಕ್ಕೆ ನಿರ್ವಹಿಸುವ ಸಾಮರ್ಥ್ಯವನ್ನೂ ಕಲಿಯಬೇಕಾಗುತ್ತದೆ. ‘ಪ್ರಾಕ್ಟಿಕಲ್‌ ವಿಸ್ಡಮ್‌’ ಪುಸ್ತಕದಲ್ಲಿ ಬ್ಯಾರಿ ಷುವಾರ್ಜ್‌ ಹಾಗೂ ಕೆನೆತ್‌ ಶಾರ್ಪ್‌ ಹಲವು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವುದು ಅಂದರೆ ಹಲವು ಬೇಡಿಕೆಗಳಿಗೆ ಒಟ್ಟಿಗೆ ಸ್ಪಂದಿಸುವುದಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ವೈದ್ಯರೊಬ್ಬರು ಪ್ರಾಮಾಣಿಕರಾಗಿರಬೇಕು. ಅದೇ ಕಾಲಕ್ಕೆ ಕರುಣಾಳುವಾಗಿರಬೇಕು. ಶಿಕ್ಷಕರೊಬ್ಬರು ಮಕ್ಕಳಿಗೆ ಕಲಿಸುವುದಷ್ಟೇ ಅಲ್ಲದೇ ಸ್ಫೂರ್ತಿ ತುಂಬಬೇಕು. ಯಾವುದೇ ಪಠ್ಯವನ್ನು ಉರುಹೊಡೆದು ಈ ಜ್ಞಾನ ಗಳಿಸಿಕೊಳ್ಳಲು ಸಾಧ್ಯವಿಲ್ಲ. ಅನುಭವದಿಂದ ಮಾತ್ರ ಇಂತಹ ಪಕ್ವತೆ ಬರಲು ಸಾಧ್ಯ.

ಅಂತಿಮವಾಗಿ, ಹಿರಿಯರು ಒಳಗಣ್ಣಿನಿಂದ ವಾಸ್ತವವನ್ನು ಅತಿ ಬೇಗ ಅರಿತುಕೊಳ್ಳುತ್ತಾರೆ. ಘಟನೆಗಳು ಹೇಗೆ ನಡೆಯುತ್ತವೆ, ಇತರರ ಯೋಚನೆ, ಭಾವನೆ ಹೇಗಿದೆ ಎಂಬುದೆಲ್ಲ ಅವರಿಗೆ ಸಹಜವಾಗಿ ತಿಳಿಯುತ್ತದೆ.

‘ದಿ ವಿಸ್ಡಮ್‌ ಪ್ಯಾರಡಾಕ್ಸ್‌’ ಪುಸ್ತಕದಲ್ಲಿ ಎಕ್ನೊನನ್ ಗೋಲ್ಡ್‌ಬರ್ಗ್‌, ವಯಸ್ಸಾದಂತೆ ಮಿದುಳಿನ ಶಕ್ತಿ ಕುಂದುತ್ತದೆ. ಮಿದುಳಿನ ಜೀವಕೋಶಗಳು ಸಾಯುತ್ತವೆ. ಮಾನಸಿಕ ಚಟುವಟಿಕೆ ಕುಂದುತ್ತದೆ. ಆದರೆ, ಜೀವಮಾನದ ಬೌದ್ಧಿಕ ಕಸರತ್ತಿನಿಂದಾಗಿ ಇತರರ ಭಾವನೆ ಅರಿಯುವ ಸಹಜ ಶಕ್ತಿಯನ್ನು ವೃದ್ಧರು ಪಡೆದಿರುತ್ತಾರೆ ಎಂದು ಬರೆದಿದ್ದಾರೆ.

ನನ್ನ ವಯಸ್ಸಿನಿಂದಾಗಿ ಕಠಿಣ ಮಾನಸಿಕ ಚಟುವಟಿಕೆಯ ಶಕ್ತಿ ಕಳೆದುಕೊಂಡಿದ್ದೇನೆ. ಆದರೆ, ಕ್ಷಣಾರ್ಧದಲ್ಲಿ ಸನ್ನಿವೇಶವನ್ನು ಗ್ರಹಿಸುವ, ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಗಳಿಸಿಕೊಂಡಿದ್ದೇನೆ ಎಂದು ಗೋಲ್ಡ್‌ಬರ್ಗ್‌ ಹೇಳುತ್ತಾರೆ. ವಯಸ್ಸಾದಂತೆ ಸಂತಸ ಹೆಚ್ಚುತ್ತ ಹೋಗುತ್ತದೆ ಎನ್ನುವುದು ಸಮಾಧಾನ ನೀಡುವ ಸಂಗತಿ. ಬದುಕಿನ ಸವಾಲುಗಳನ್ನು ಎದುರಿಸುವ ಈ ಕೌಶಲ್ಯವನ್ನು ಹಿರಿಯರಿಂದ ಕಿರಿಯರಿಗೆ ಹೇಗೆ ದಾಟಿಸಬಹುದು ಎಂಬುದು ಮತ್ತಷ್ಟು ಮಹತ್ವದ ವಿಚಾರ.

ಡೇವಿಡ್‌ ಬ್ರೂಕ್ಸ್‌, ನ್ಯೂಯಾರ್ಕ್ಸ್‌ ಟೈಮ್ಸ್‌ ನ್ಯೂಸ್‌ ಸರ್ವೀಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT