ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಜಾಗೃತ ನಾಗರಿಕ ಕೂಟ

Last Updated 27 ಜನವರಿ 2015, 19:30 IST
ಅಕ್ಷರ ಗಾತ್ರ

ಮಿಟಾ ಅವರಿಗೆ ಸಸ್ಯಗಳ ಬಗ್ಗೆ ವಿಶೇಷ ಪ್ರೀತಿ. ತಾನು ವಾಸಿಸುವ ವೈಟ್‌ಫೀಲ್ಡ್‌ನ ರಸ್ತೆಗಳ ಬದಿಯಲ್ಲಿ ಸದಾ ನೆರಳು ನೀಡುವ ಮರಳನ್ನು ನೆಟ್ಟು ಬೆಳೆಸುವ ಹಂಬಲ ಅವರದು. ರೀತಾ ಅಕಸ್ಮಾತ್‌ ಆಗಿ ಕಾಣಿಸಿಕೊಳ್ಳುವ ಹೃದಯಸಂಬಂಧಿ ತೊಂದರೆಗಳಿಗೆ ನೀಡಬೇಕಾದ ಪ್ರಾಥಮಿಕ ಚಿಕಿತ್ಸೆಯ ಬಗ್ಗೆ ಸಾಧ್ಯವಾದಷ್ಟೂ ಹೆಚ್ಚಿನ ಜನರಿಗೆ ತರಬೇತಿ ನೀಡುವ ಮೂಲಕ ಜೀವರಕ್ಷಕ ಕಾರ್ಯದಲ್ಲಿ ಅವರು ತೊಡಗಿಕೊಂಡಿದ್ದಾರೆ. ಜತೆಗೆ ಕಸ ವಿಲೇವಾರಿ ಕಾರ್ಯದಲ್ಲಿಯೂ ಸಕ್ರಿಯರಾಗಿದ್ದಾರೆ. ಸುಮೇಧಾ ಸರ್ಕಾರಿ ಶಾಲೆಗಳ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಹೀಗೆ ತಾವು ವಾಸಿಸುವ ಪ್ರದೇಶವನ್ನು ಇನ್ನಷ್ಟು ಸುಂದರ–ಸುವ್ಯವಸ್ಥಿತಗೊಳಿಸುವ ನಿಟ್ಟಿನಲ್ಲಿ ತಮ್ಮದೇ ಆದ ದಾರಿಯಲ್ಲಿ ಸಾಗುತ್ತಿರುವ ಅಸಂಖ್ಯಾತ ಜಾಗೃತ ನಾಗರಿಕರು ನಗರದ ವೈಟ್‌ಫೀಲ್ಡ್‌ನಲ್ಲಿ ಸಿಗುತ್ತಾರೆ. ಇವರ್‍ಯಾರೂ ಸರ್ಕಾರಿ ಅಧಿಕಾರಿಗಳಲ್ಲ. ಜೀವನೋಪಾಯದ ಮಾರ್ಗವಾಗಿ ಇದನ್ನು ಆರಿಸಿಕೊಂಡವರೂ ಅಲ್ಲ. ಬಹುರಾಷ್ಟ್ರೀಯ ಕಂಪೆನಿಗಳ ಉನ್ನತ ಹುದ್ದೆಗಳಲ್ಲಿರುವವರು. ವಿದೇಶದಲ್ಲಿ ಕೆಲಸ ಮಾಡಿ ಮರಳಿದವರು.

ನೆಮ್ಮದಿಯ ಬದುಕಿಗೆ ಸಾಕಾಗಿ ಮಿಗುವಷ್ಟು ಆದಾಯವಿದ್ದರೂ ತಮ್ಮ ಪ್ರದೇಶವನ್ನು ‘ಮಾದರಿ’ಯಾಗಿ ರೂಪಿಸಬೇಕು ಎಂಬ ನಾಗರಿಕ ಪ್ರಜ್ಞೆಯಿಂದ ಈ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸ್ವಯಂ ಸೇವಕರು. ಇಂಥವರಿಗೆ ವೇದಿಕೆ ಮತ್ತು ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುತ್ತಿರುವುದು  ‘ವೈಟ್‌ಫೀಲ್ಡ್‌ ರೈಸಿಂಗ್‌’ ಎಂಬ  ನಾಗರಿಕ ಸಮೂಹ. ಸುಧಾರಣೆ ಬಯಸುವವರ ಅನೌಪಚಾರಿಕ ಸಮೂಹ ‘ವೈಟ್‌ಫೀಲ್ಡ್‌ ರೈಸಿಂಗ್‌’.

ಶುರುವಾದದ್ದು ಹೀಗೆ
2013 ಮಾರ್ಚ್‌ 10ರಂದು ಪ್ರೆಸ್ಟೀಜ್‌ ಓಝೋನ್‌ನಲ್ಲಿ ವೈಟ್‌ಫೀಲ್ಡ್‌ನ 50 ಜನ ಸಮಾನ ಮನಸ್ಕರ ಗುಂಪು ಸಭೆ ಸೇರಿತು. ಅವರೆಲ್ಲರೂ ಭಿನ್ನ ಹಿನ್ನೆಲೆಯವರಾಗಿದ್ದರೂ ತಮಗೆ ಆಶ್ರಯ ನೀಡಿದ ವೈಟ್‌ಫೀಲ್ಡ್‌ಗಾಗಿ ಏನಾದರೂ ಮಾಡಬೇಕು ಎಂಬ ಬದ್ಧತೆ ಅವರನ್ನು ಒಂದುಗೂಡಿಸಿತ್ತು. ಈ ಸಭೆಯ ಫಲವಾಗಿಯೇ ‘ವೈಟ್‌ಫೀಲ್ಡ್‌ ರೈಸಿಂಗ್‌’ ಹುಟ್ಟಿಕೊಂಡಿದ್ದು.

2013 ಜೂನ್‌ನಲ್ಲಿ ನಡೆಸಲಾದ ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮವೇ ವೈಟ್‌ಫೀಲ್ಡ್‌ ರೈಸಿಂಗ್‌ನ ಮೊದಲ ಹೆಜ್ಜೆ. ಈ ಕಾರ್ಯಕ್ಕೆ ಸಾಕಷ್ಟು ಜನಬೆಂಬಲ ದೊರಕಿತು. ಇಲ್ಲಿಂದ ಆರಂಭವಾದ ವೈಟ್‌ಪೀಲ್ಡ್‌ ರೈಸಿಂಗ್‌ ಯಶೋಗಾಥೆ ಇಂದಿಗೂ ಮುಂದುವರಿದುಕೊಂಡೇ ಬಂದಿದೆ.

‘ಇಂದು ಎಷ್ಟೆಲ್ಲ ನಾಗರಿಕ ಸಮಸ್ಯೆಗಳು ನಮ್ಮನ್ನು ಆವರಿಸಿಕೊಂಡಿವೆ? ನಮ್ಮ ಸುತ್ತಲಿನ ಜಗತ್ತನ್ನು ಇನ್ನಷ್ಟು ಸುಂದರವಾಗಿಡಲು ಸಾಧ್ಯವಿಲ್ಲವೇ? ವೈಟ್‌ ಫೀಲ್ಡ್‌ ರೈಸಿಂಗ್‌ ಆ ನಿಟ್ಟಿನತ್ತ ಒಂದು ಹೆಜ್ಜೆ’ ಎನ್ನುತ್ತಾರೆ  ಈ ತಂಡದ ಆರಂಭಿಕ ಸದಸ್ಯರಲ್ಲೊಬ್ಬರಾದ ನಿತ್ಯಾ ರಾಮಕೃಷ್ಣನ್‌. ಸದ್ಯಕ್ಕೆ ಈ ಸಮೂಹದಲ್ಲಿ ಸುಮಾರು 100 ಜನ ಸದಸ್ಯರು ಹೆಚ್ಚು ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೂ ಅನೇಕ ಜನರು ಅವಶ್ಯವಿರುವಾಗ ಸಹಾಯಕ್ಕೆ ಸದಾ ಸಿದ್ಧರಿರುತ್ತಾರೆ.

ಗುಂಪುಗಳಲ್ಲಿ ಕಾರ್ಯನಿರ್ವಹಣೆ
‘ವೈಟ್‌ಫೀಲ್ಡ್‌ ರೈಸಿಂಗ್‌’ ತನ್ನ ಚಟುವಟಿಕೆಗಳನ್ನು ನಿರ್ದಿಷ್ಟ ವಿಷಯಕ್ಕೆ ಸೀಮಿತಪಡಿಸಿಕೊಂಡಿಲ್ಲ. ಬದಲಿಗೆ ವೈಟ್‌ಫೀಲ್ಡ್‌ ಅನ್ನು ಸುಧಾರಿಸುವ ನಿಟ್ಟಿನಲ್ಲಿ ಸಹಾಯಕವಾಗುವ ಯಾವುದೇ ಕಾರ್ಯಗಳಿಗೂ  ವೇದಿಕೆಯಾಗುವ ಉದ್ದೇಶ ಹೊಂದಿದೆ. ಸದಸ್ಯರು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸುಧಾರಣಾ ಕಾರ್ಯೋನ್ಮುಖರಾಗಲು ಮುಂದಾದಲ್ಲಿ ‘ವೈಟ್‌ಫೀಲ್ಡ್‌ ರೈಸಿಂಗ್‌’ ಅವರಿಗೆ ಬೆಂಬಲ ನೀಡುತ್ತದೆ. ಇದು ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ಆಸಕ್ತ ನಾಗರಿಕರ ಗುಂಪುಗಳನ್ನು ಮಾಡಿಕೊಂಡು ಕೆಲಸ ನಿರ್ವಹಿಸುತ್ತದೆ.  ಆಯಾ ವಿಷಯದಲ್ಲಿ ಅನುಭವ ಇರುವ ಸದಸ್ಯರು ಅದರ ಮುಖಂಡತ್ವ ವಹಿಸುತ್ತಾರೆ. ಒಂದಷ್ಟು ಜನ ಅನುಭವಿಗಳ ಗುಂಪು ‘ವೈಟ್‌ಫೀಲ್ಡ್‌ ರೈಸಿಂಗ್‌’ ಚಟುವಟಿಕೆಗಳ ಸಮನ್ವಯ ಕಾರ್ಯವನ್ನು ನಿರ್ವಹಿಸುತ್ತದೆ.

ಸರ್ಕಾರಿ ಇಲಾಖೆಗಳೊಂದಿಗೆ ಸಹಯೋಗ
‘ವೈಟ್‌ಫೀಲ್ಡ್‌ ರೈಸಿಂಗ್‌’ ಸಂಬಂಧಪಟ್ಟ ಸರ್ಕಾರಿ ಇಲಾಖೆಯೊಂದಿಗೆ ಸಹಯೋಗ ಸಾಧಿಸಿಯೇ ಕೆಲಸ ನಿರ್ವಹಿಸುತ್ತದೆ.
‘ನಾವು ಈಗಾಗಲೇ ಸರ್ಕಾರಕ್ಕೆ ತೆರಿಗೆ ಪಾವತಿಸಿದ್ದೇವೆ. ಆದ್ದರಿಂದ ಈ ನಾಗರಿಕ ಕಾರ್ಯಗಳಿಗೆ ಸ್ವಂತ ಹಣ ವ್ಯಯಿಸುವ ಅವಶ್ಯಕತೆ ಇಲ್ಲ. ಆದ್ದರಿಂದ ಸರ್ಕಾರಿ ಇಲಾಖೆಗಳೊಂದಿಗೆ ಹೊಂದಾಣಿಕೆಯಲ್ಲಿ ಕೆಲಸ ಮಾಡುತ್ತೇವೆ.’ ಎಂದು ವಿವರಿಸುತ್ತಾರೆ ಇನ್ನೋರ್ವ ಸದಸ್ಯ ಹರಿ ಗೌಡ. ಇವರ ಕೆಲಸವನ್ನು ಸರ್ಕಾರ ಅನೇಕ ಯೋಜನೆಗಳಲ್ಲಿ ಸಹಯೋಗವನ್ನೂ ನೀಡಿರುವುದು ಇವರ ವಿಶ್ವಾಸವನ್ನು ಹೆಚ್ಚಿಸಿದೆ.

ಓಪನ್ ಹೌಸ್‌
ಈ ತಂಡ  ತಿಂಗಳಿಗೊಮ್ಮೆ ‘ಓಪನ್‌ ಹೌಸ್‌’ ನಡೆಸುತ್ತದೆ. ಹೊಸದಾಗಿ ಸೇರ್ಪಡೆಗೊಂಡವರಿಗೆ ‘ವೈಟ್‌ಫೀಲ್ಡ್‌ ರೈಸಿಂಗ್‌’ನ ಚಟುವಟಿಕೆಗಳ ಪರಿಚಯ ಮಾಡಿಕೊಡುವುದು ಮತ್ತು ಅವರ ವಿಚಾರ ವಿನಿಮಯ ಮಾಡಲು ಅವಕಾಶ ನೀಡುವುದು ಇದರ ಉದ್ದೇಶ. ಆಗಾಗ ವಿವಿಧ ಸರ್ಕಾರಿ ಅಧಿಕಾರಿಗಳ ಜತೆ ಸಂವಾದ ಮಾಹಿತಿ ವಿನಿಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಯಶೋಗಾಥೆಗಳು ಹಲವು
ಅಸ್ತಿತ್ವಕ್ಕೆ ಬಂದ ಕಿರು ಅವಧಿಯಲ್ಲಿಯೇ ‘ವೈಟ್‌ಫೀಲ್ಡ್‌ ರೈಸಿಂಗ್‌’ ಹಲವು ಯಶೋಗಾಥೆಗಳಿಗೆ ಸಾಕ್ಷಿಯಾಗಿದೆ.
‘ಲೈಫ್‌ಡ್ರೀಮ್‌ ಸ್ಕಿಲ್ಸ್‌’ ಅಂತಹ ಒಂದು ಯೋಜನೆ. ಶಾಲೆಯಲ್ಲಿ ಅನುತ್ತೀರ್ಣರಾದವರು, ಬದುಕಿನ ನಿರ್ವಹಣೆಗಾಗಿ ಉದ್ಯೋಗದ ನಿರೀಕ್ಷೆಯಲ್ಲಿರುವವರು ಉದ್ಯೋಗ ತರಬೇತಿ ನೀಡುವ ಮೂರು ತಿಂಗಳ ಅವಧಿಯ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಮೊದಲ ಬ್ಯಾಚ್‌ನಲ್ಲಿಯೇ 20 ಜನರು ಉದ್ಯೋಗ ಗಿಟ್ಟಿಸಿಕೊಂಡಿರುವುದು ಇದರ ಯಶಸ್ಸಿಗೆ ಪುರಾವೆಯಾಗಿದೆ.

ಕಸ ನಿರ್ವಹಣೆಗಾಗಿ  ಶುರುಮಾಡಿದ ‘ಗಾರ್ಬೇಜ್‌ ಕಾರ್ಟ್‌’ ಯೋಜನೆ ಇಂದು ಅಭಿಯಾನದ ರೂಪ ಪಡೆದುಕೊಂಡಿದ್ದು ವೈಟ್‌ಫೀಲ್ಡ್‌ ಪ್ರದೇಶದಲ್ಲಿ ಕಸದ ಸಮಸ್ಯೆ ನಿರ್ವಹಣೆಯಲ್ಲಿ ಬಹಳಷ್ಟು ಬದಲಾವಣೆ ತಂದಿದೆ. ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಇಲಾಖೆಯ ಜತೆ ಸೇರಿಕೊಂಡು ಟ್ರಾಫಿಕ್‌ ಸಮಸ್ಯೆಯ ನಿರ್ವಹಣೆಯಲ್ಲಿಯೂ ಈ ತಂಡದ ಸದಸ್ಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಐದು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದು, ಅಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ.

ವರ್ತೂರು ಕೆರೆ ಸೇರಿದಂತೆ ಈ ಪ್ರದೇಶದಲ್ಲಿನ ಹಲವು ಕೆರೆಗಳ ರಕ್ಷಣೆಗೆ ಪ್ರತ್ಯೇಕ ಗುಂಪುಗಳನ್ನು ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದೆ. ಇದಲ್ಲದೇ ಆರೋಗ್ಯ, ಆರ್ಥಿಕ ನಿರ್ವಹಣೆ, ಅಪೌಷ್ಟಿಕತೆ, ಪೌರಕಾರ್ಮಿಕ ಸಮಸ್ಯೆ, ಬಿಎಂಟಿಸಿ ಬಸ್‌ ಚಾಲಕರೊಂದಿಗೆ ಸಂವಾದ, ಸಿಗ್ನಲ್‌ ಫ್ರೀ ಕಾರಿಡಾರ್‌ ನಿರ್ಮಾಣ, ಬಿಬಿಎಂಪಿ ನೀರು ಸೋರಿಕೆ, ಬೀದಿ ದೀಪಗಳ ಅಳವಡಿಕೆ, ಬೀದಿ ನಾಯಿ ಸಮಸ್ಯೆ ನಿಯಂತ್ರಣ ಹೀಗೆ ವೈಟ್‌ಫಿಲ್ಡ್‌ ರೈಸಿಂಗ್‌ ಜಾಲತಾಣ, ಫೇಸ್‌ಬುಕ್‌ ಖಾತೆಗಳಲ್ಲಿ ಒಮ್ಮೆ ದೃಷ್ಟಿ ಹಾಯಿಸಿದರೆ ಇಂತಹ ಹಲವಾರು ಯಶಸ್ಸಿನ ಉದಾಹರಣೆ ಸಿಗುತ್ತವೆ.

ಸಮೂಹ ಸಹಯೋಗ
ವೈಟ್‌ಫೀಲ್ಡ್‌ ರೈಸಿಂಗ್‌ನಿಂದ ಸ್ಫೂರ್ತಿ ಪಡೆದು ಕೋರಮಂಗಲ, ಇಂದಿರಾನಗರ ಹೀಗೆ ನಗರದ ಹಲವೆಡೆ ಇಂತಹ ಜಾಗೃತ ನಾಗರಿಕ ಸಮೂಹಗಳು ಹುಟ್ಟಿಕೊಂಡಿವೆ. ಇವುಗಳಿಗೂ ವೈಟ್‌ ಫೀಲ್ಡ್‌ ರೈಸಿಂಗ್‌ ಮಾರ್ಗದರ್ಶನ ನೀಡುತ್ತದೆ. ಸದ್ಯಕ್ಕೆ ಇ ಮೇಲ್‌ ಮತ್ತು ಫೇಸ್‌ಬುಕ್‌ ಬಳಕೆದಾರರಿಗೆ ಮಾತ್ರ ತಲುಪುತ್ತಿರುವ ಈ ಸಮೂಹ ಮುಂದೆ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತಿರಿಸಿಕೊಳ್ಳುವ ಉದ್ದೇಶವನ್ನೂ ಹೊಂದಿದೆ.

‘ಒಂದು ಬೀದಿಯನ್ನು ಮಾದರಿಯನ್ನಾಗಿ ರೂಪಿಸಬೇಕು ಎಂದು ಆರಂಭಗೊಂಡ ವೈಟ್‌ ಫೀಲ್ಡ್‌ ರೈಸಿಂಗ್‌ ಇಂದು ಇಡೀ ವೈಟ್‌ ಫೀಲ್ಡ್‌ಗೆ ವಿಸ್ತರಿಸಿಕೊಂಡಿದೆ. ಹೀಗೆಯೇ ಇಡೀ ಬೆಂಗಳೂರು ಮಾದರಿ ನಗರವಾಗಬೇಕು ಎಂಬುದು ನಮ್ಮ ಆಸೆ’ ಎಂಬ ಹರಿ ಗೌಡ ಅವರ ಮಾತು ಸುಂದರ ನಗರ ನಿರ್ಮಾಣದ ಸಾಧ್ಯತೆಯ ದಾರಿಯಾಗಿಯೂ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT