ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಚ್ಚ ವೆಂಕಟ್‌ ಅಭಿಮಾನ ಗೀತೆ

ಪಂಚರಂಗಿ
Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

‘ಅರ್ಥ ಆಯ್ತಾ?’ ‘ನನ್‌ ಮಗಂದ್‌ ಇವೆಲ್ಲಾ ಬ್ಯಾನ್‌ ಆಗ್‌ಬಿಡ್ಬೇಕ್‌’ ‘ಬೆಂಡೆತ್‌ ಬಿಡ್ತೀನಿ’ ಇಂಥ ಡೈಲಾಗ್‌ಗಳನ್ನು ಎಲ್ಲಿ ಕೇಳಿದರೂ ‘ಓ ಹುಚ್ಚಾ ವೆಂಕಟ್‌’ ಎಂಬ ಉದ್ಗಾರ ಹೊರಟುಬಿಡುತ್ತದೆ.

ವೆಂಕಟೇಶ್‌ ಅವರ ‘ಹುಚ್ಚ ವೆಂಕಟ್‌’ ಚಿತ್ರ ತೆರೆಕಂಡ ಮೂರೇ ದಿನಕ್ಕೆ ಚಿತ್ರಮಂದಿರದಿಂದ ಟೆಂಟು ಕಿತ್ತುಕೊಂಡು ಹೋದದ್ದೇನೋ ನಿಜ. ಆದರೆ ಅದೇ ನೋವಿನಲ್ಲಿ ಅವರು ‘ಪರಮಾತ್ಮ’ನನ್ನು ಆವಾಹಿಸಿಕೊಂಡು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನ ಮಾತ್ರ ವಿಪರೀತ ಜನಪ್ರಿಯವಾಯ್ತು.

ಕಾಲೇಜು ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ರಿಕ್ಷಾ ಚಾಲಕರು ಹೀಗೆ ವಿವಿಧ ವರ್ಗದ ಜನರು ತಮ್ಮ ಕ್ಷೇತ್ರದ ಹುಳುಕುಗಳನ್ನು ವೆಂಕಟ್‌ ಶೈಲಿಯಲ್ಲಿಯೇ ವ್ಯಕ್ತಪಡಿಸತೊಡಗಿದ್ದು  ಹಳೆಯ ಸುದ್ದಿ. ವಿಡಿಯೊ ತುಣುಕುಗಳು, ಧ್ವನಿ ಮುದ್ರಿಕೆಗಳು, ಬರಹಗಳು ಹೀಗೆ ವೆಂಕಟ್‌ ಶೈಲಿಯನ್ನು ಅನುಸರಿಸಿ ಏನೇ ಬಂದರೂ ಜನ ಕುತೂಹಲದಿಂದ ನೋಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮಟ್ಟಿಗೆ  ‘ಹವಾ’ ಸೃಷ್ಟಿಯಾಗಿದೆ.

ವೆಂಕಟ್‌ ಮೇನಿಯಾಕ್ಕೊಂದು ಹೊಸ ಸೇರ್ಪಡೆ ‘ಹುಚ್ಚ ವೆಂಕಟ್‌ ಫ್ಯಾನ್ಸ್‌ ಸಾಂಗ್‌’. ಚಿತ್ರದುರ್ಗದ ಚಳ್ಳೆಕೆರೆಯ ಹುಡುಗನೊಬ್ಬ ರೂಪಿಸಿರುವ ‘ಹುಚ್ಚ ವೆಂಕಟ್‌ ಫ್ಯಾನ್ಸ್‌ ಸಾಂಗ್‌’ ಎಂಬ ಹೆಸರಿನಲ್ಲಿನ ಈ ವಿಡಿಯೊ ಸಾಂಗ್‌ ಫೇಸ್‌ಬುಕ್‌, ಯೂಟ್ಯೂಬ್‌ಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

‘ಓಪನ್ನಾಗೇಳ್ತಾರೆ ನಮ್ಮಣ್ಣ ವೆಂಕಟು.. ಅಣ್ಣಾ ಬಾಯ್ಬಿಟ್ರೇನೆ ಮಾತಲ್ಲೇ ಬುಲೆಟ್ಟು.. ಅಣ್ಣಾ ಕೈಯಿಟ್ರೆನೆ ಬಾಕ್ಸಾಫೀಸ್‌ ಉಡೀಸು’ ಎಂದು ಆರಂಭವಾಗುವ 3.50 ನಿಮಿಷ ಅವಧಿಯ ಈ ಹಾಡು ಉದ್ದಕ್ಕೂ ಹುಚ್ಚ ವೆಂಕಟ್‌ ಅವರ ಗುಣಗಾನಕ್ಕೇ ಮೀಸಲಾಗಿದೆ.

ಕಾಲೇಜು ಹುಡುಗಿಯರ ನೋಟ್‌ಬುಕ್‌, ಹುಡುಗರ ಪರ್ಸ್‌, ಆಟೊ ಹಿಂದೆ ಎಲ್ಲೆಲ್ಲೂ ಹುಚ್ಚ ವೆಂಕಟ್‌ ಕಟೌಟ್‌ ಅಂಟಸಿ ವೆಂಕಟ್‌ ಅವರನ್ನು ಕನ್ನಡದ ಸೂಪರ್‌ ಸ್ಟಾರ್‌ ಎನ್ನುವಂತೆ ಬಿಂಬಿಸಲಾಗಿದೆ. ತೆಳು ವ್ಯಂಗ್ಯದಿಂದಲೇ ವ್ಯಕ್ತಗೊಳ್ಳುವ ಈ ಹಾಡು ತಾಂತ್ರಿಕವಾಗಿಯೂ ಕಳಪೆಯಾಗಿಲ್ಲ.

ಈ ಹಾಡನ್ನು ಬರೆದು ನಿರ್ದೇಶಿಸಿರುವುದು ಚಿತ್ರದುರ್ಗದ ಚಳ್ಳೆಕೆರೆಯ ಪ್ರದೀಪ ಶಾಸ್ತ್ರಿ. ನಿರ್ದೇಶನದ ಜತೆ ಛಾಯಾಗ್ರಹಣ, ನೃತ್ಯ ಸಂಯೋಜನೆ, ಸಂಕಲನಗಳ ಜವಾಬ್ದಾರಿಯನ್ನೂ ತಾವೇ ನಿರ್ವಹಿಸಿದ್ದಾರೆ. ಗಿರೀಶ್‌ ರಾಮಾಂಜನೇಯ ಸಂಗೀತ ಸಂಯೋಜಿಸಿ ತಾವೇ ಹಾಡಿದ್ದಾರೆ.

ಹಾಗೆಂದು ಪ್ರದೀಪ್‌ ಅವರು ಹುಚ್ಚ ವೆಂಕಟ್‌ ಅಭಿಮಾನಿಯೇನೂ ಅಲ್ಲ. ಈ ವಿಡಿಯೊ ಬಗ್ಗೆ ಅವರಲ್ಲಿ ಕೇಳಿದರೆ ‘ನಾವು ಟ್ರೆಂಡ್‌ ಅನ್ನು ಸೃಷ್ಟಿಸಬೇಕು. ಇಲ್ಲವೇ ಇರುವ ಟ್ರೆಂಡ್‌ ಅನ್ನು ಹಿಂಬಾಲಿಸಬೇಕು. ನಾನು ಮಾಡಿರುವುದೂ ಅದೇ. ಹುಚ್ಚ ವೆಂಕಟ್‌ ಹೆಸರಿನಲ್ಲಿ ಒಂದು ಟ್ರೆಂಡ್‌ ಸೃಷ್ಟಿಯಾಗಿದೆ. ಈಗ ನಾನು ಅದನ್ನು  ಹಿಂಬಾಲಿಸುತ್ತಿದ್ದೇನೆ. ಜನ ಮನರಂಜನೆ ಕೇಳ್ತಾರೆ. ಮೂರೂವರೆ ನಿಮಿಷದಲ್ಲಿ ವೆಂಕಟ್‌ ಅವರನ್ನು ದೊಡ್ಡ ಸ್ಟಾರ್‌ ಅನ್ನುವಂತೇ ಬಿಲ್ಡ್ಅಪ್‌ ಕೊಟ್ಟು ತೋರಿಸಿದ್ದೇನೆ. ಅದು ಜನರಿಗೆ ಇಷ್ಟವಾಗಿದೆ’ ಎಂದು ನಗುತ್ತಾರೆ.

ಮೊದಲಿನಿಂದಲೂ ಸಿನಿಮಾ ವ್ಯಾಮೋಹಿಯಾಗಿದ್ದ ಪ್ರದೀಪ್‌ ಸ್ವತಃ ಅವಕಾಶ ಅರಸಿಕೊಂಡು ಗಾಂಧಿನಗರದ ಗಲ್ಲಿ ಗಲ್ಲಿ ಸುತ್ತಿ ಸುಸ್ತಾಗಿ ಊರಿಗೆ ಮರಳಿದ್ದಾರೆ. ಊರಿನಲ್ಲಿದ್ದೇ ಏನಾದರೂ ಮಾಡಬೇಕು ಎಂದು ನಿರ್ಧರಿಸಿ ‘ಲೋಕಲ್‌ ಹುಡುಗ್ರು’ ಎಂಬ ಹೆಸರಿನ ವಿಭಿನ್ನ ಕನ್ನಡ ಆಲ್ಬಂ ಮಾಡುವ ಸಿದ್ಧತೆಯಲ್ಲಿದ್ದಾರೆ.

ತನ್ನ ಆಲ್ಬಂ ಬಿಡುಗಡೆ ಮಾಡುವುದಕ್ಕಿಂತ ಮೊದಲು ಜನರಿಗೆ ತಮ್ಮ ಬಗ್ಗೆ ತಿಳಿಯುವಂತೆ ಏನಾದ್ರೂ ಮಾಡಬೇಕು ಎಂಬ ಆಲೋಚನೆಯಲ್ಲಿದ್ದ ಪ್ರದೀಪ್‌ಗೆ ಹೊಳೆದದ್ದು ಹುಚ್ಚಾ ವೆಂಕಟ್‌ ಅಭಿಮಾನ ಗೀತೆ.

ತಕ್ಷಣವೇ ಪೆನ್ನು ಹಾಳೆ ಕೈಗೆತ್ತಿಕೊಂಡ ಪ್ರದೀಪ್‌ ಕೇವಲ ಹತ್ತೇ ನಿಮಿಷದಲ್ಲಿ ವೆಂಕಟ್‌ ಮೇಲೊಂದು ಅಭಿಮಾನಗೀತೆ ಬರೆದು ಮುಗಿಸಿದರು. ಗಿರೀಶ್‌ ತಾವೇನು ಕಮ್ಮಿ ಎಂಬಂತೆ ಕೇವಲ ಅರ್ಧ ಗಂಟೆಯಲ್ಲಿ ಆ ಗೀತೆಗೆ ಸಂಗೀತದ ಮಟ್ಟು ಹಾಕಿದರು. ಮುಂದಿನ ನಾಲ್ಕೇ ದಿನದಲ್ಲಿ ಚಿತ್ರೀಕರಣವನ್ನೂ ಮುಗಿಸಿದ್ದಾರೆ.

ಇದುವರೆಗೆ ಛಾಯಾಗ್ರಹಣ, ದೃಶ್ಯ ಸಂಯೋಜನೆಯ ಬಗ್ಗೆ ಏನೂ ಗೊತ್ತಿಲ್ಲದ ಪ್ರದೀಪ್‌ ಈ ವಿಡಿಯೊಗಾಗಿಯೇ ಅಂತರ್ಜಾಲದ ಮೂಲಕ ಕ್ಯಾಮೆರಾ ಮತ್ತು ಸಂಕಲನ ತಂತ್ರಜ್ಞಾನವನ್ನು ಕಲಿತುಕೊಂಡಿದ್ದಾರೆ.

‘ಹಾಡಿನಲ್ಲಿ ಬರುವ ಒಂದು ಬ್ಯಾನರ್‌ಗಾಗಿ ಮುನ್ನೂರೈವತ್ತು ರೂಪಾಯಿ ಖರ್ಚು ಮಾಡಿದ್ದು ಬಿಟ್ಟರೆ ಇದು ಝೀರೋ ಬಜೆಟ್‌ನಲ್ಲಿ ನಿರ್ಮಿತವಾದ ಹಾಡು’ ಎನ್ನುತ್ತಾರೆ ಪ್ರದೀಪ್‌.

ಈ ಹಾಡಿನ ಚಿತ್ರೀಕರಣವನ್ನು ಚಳ್ಳೆಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ನಡೆಸಿದ್ದಾರೆ. ಹಾಡಿನಲ್ಲಿಯೂ ತಮ್ಮ ಸ್ನೇಹಿತರನ್ನೇ ಬಳಸಿಕೊಂಡಿದ್ದಾರೆ.

ವೆಂಕಟ್‌ ಫುಲ್ ಖುಷ್‌
ಈ ವಿಡಿಯೊ ನೋಡಿ ಸ್ವತಃ ವೆಂಕಟ್‌ ಫುಲ್ ಖುಷ್‌ ಆಗಿದ್ದಾರೆ. ಈ ವಿಷಯವನ್ನು ಪ್ರದೀಪ್‌ಗೆ ಫೋನ್‌ ಮಾಡಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ ಕೂಡ. ಯೂಟ್ಯೂಬ್‌ಗೆ ಹೋಗಿ HUCCHA VENKAT FANS SONG ಎಂದು ಟೈಪಿಸಿದರೆ ನೀವೂ ಹುಚ್ಚ ವೆಂಕಟ್‌ ಅಭಿಮಾನದ ಹೊಳೆಯಲ್ಲಿ ಮೂರೂವರೆ ನಿಮಿಷ ತೇಲಬಹುದು. 
*
ಈ ಹಾಡಿನಲ್ಲಿ ವೆಂಕಟ್‌ ಅವರನ್ನೇ ಹೋಲುವ ಹುಡುಗನೊಬ್ಬ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಅಶ್ವತ್ಥ ಎಂಬ ಹೆಸರಿನ ಈ ಹುಡುಗ ತನ್ನ ಪರ್ಸ್‌, ಮೋಬೈಲ್‌ಗಳಲ್ಲಿ ಫೋಟೊ ಇಟ್ಟುಕೊಳ್ಳುವಷ್ಟು ವೆಂಕಟ್‌ ಅವರ ಕಟ್ಟಾ ಅಭಿಮಾನಿ. ಅದಕ್ಕಾಗಿಯೇ ಪ್ರದೀಪ್ ಅವರು ಅಶ್ವತ್ಥ ಅವರನ್ನು ಈ ಹಾಡಿನಲ್ಲಿ ವಿಶೇಷವಾಗಿ ಬಳಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT