ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆಗೆ ರತ್ನಗಂಬಳಿ

ಜಪಾನಿ ಉದ್ದಿಮೆದಾರರಿಗೆ ಮೋದಿ ಆಹ್ವಾನ
Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಟೋಕಿಯೊ (ಪಿಟಿಐ): ಭಾರತವನ್ನು ತಯಾರಿಕಾ ವಲ­ಯದ ಗಮ್ಯ ಎಂಬಂತೆ ಬಿಂಬಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಜಪಾನ್‌ ಹೂಡಿಕೆದಾರರಿಗೆ ರತ್ನ­ಗಂಬಳಿ ಸ್ವಾಗತ ನೀಡುವುದಾಗಿ ಭರವಸೆ ನೀಡಿದ್ದಾರೆ.

ಜಪಾನ್‌ ಪ್ರವಾಸದ ನಾಲ್ಕನೆಯ ದಿನವಾದ ಮಂಗ­ಳ­ವಾರ ಜಪಾನಿ ಹೂಡಿಕೆದಾರರ ಜತೆ ವಿಚಾರಸಂಕಿರಣ­ದಲ್ಲಿ ಭಾಗಿಯಾಗಿದ್ದ ಮೋದಿ ಅವರು, ಭಾರತದಲ್ಲಿ ಈಗ ವಿಳಂಬ ಗತಿಯ (ರೆಡ್‌ ಟೇಪಿಸಂ) ಅಧ್ಯಾಯ ಮುಕ್ತಾಯ­ಗೊಂಡಿದ್ದು,  ವಾಣಿಜ್ಯ ವ್ಯವಹಾರಗಳಿಗೆ ರತ್ನ ಗಂಬಳಿ (ರೆಡ್‌ ಕಾರ್ಪೆಡ್‌) ಸ್ವಾಗತ ಕೋರುವ ಮುಕ್ತ ಯುಗ ಆರಂಭ­ವಾಗಿದೆ ಎಂದರು.

ಜಪಾನ್‌ ಬಾಹ್ಯ ವ್ಯಾಪಾರ ಸಂಸ್ಥೆ (ಜೆಟ್ರೊ) ಮತ್ತು ನಿಕ್ಕಿ ಸಂಸ್ಥೆಗಳು ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಜಪಾನಿ ಹೂಡಿಕೆದಾರ­ರನ್ನು ಉದ್ದೇಶಿಸಿ  ಮಾತ­ನಾಡಿದ ಅವರು ‘ಭಾರತದಲ್ಲಿ ತಯಾರಿಕೆ’ (ಮೇಕ್‌ ಇನ್‌ ಇಂಡಿಯಾ) ಪರಿಕಲ್ಪನೆ ತೆರೆದಿಟ್ಟರು.

100 ದಿನಗಳ ತಮ್ಮ ಸರ್ಕಾರ ವಾಣಿಜ್ಯ ವ್ಯವಹಾ­ರಕ್ಕೆ ಅನುಕೂಲ­ವಾಗುವ ಹಲವು ನಿರ್ಧಾರಗಳನ್ನು ತೆಗೆದು­ಕೊಂಡಿದೆ. ಪ್ರಜಾಪ್ರಭುತ್ವ, ಜನ­ಸಂಖ್ಯೆ ಮತ್ತು ಉತ್ಪನ್ನಗಳ  ಬೇಡಿಕೆಯ ದೃಷ್ಟಿಯಿಂದ ನೋಡುವುದಾ­ದರೆ ಬಂಡವಾಳ  ಹೂಡಿಕೆಗೆ ಭಾರತದಷ್ಟು ಅವಕಾಶ ಒದಗಿಸುವ ದೇಶ ಮತ್ತೊಂದಿಲ್ಲ. ಕಡಿಮೆ ವೆಚ್ಚದಲ್ಲಿ ಉತ್ಪಾ­ದನೆ ಮಾಡಲು ಸಾಧ್ಯವಾಗು­ವುದರಿಂದ ಇಲ್ಲಿ ‘ಪವಾಡ’ವನ್ನೇ ಮಾಡಬಹುದು ಎಂದರು. 

ಭಾರತದಲ್ಲಿ ಲಕ್ಷ ಲಕ್ಷ ಕೋಟಿ ಡಾಲರ್‌ಗಳನ್ನು ಹೂಡುವ ಅಗತ್ಯವಿದೆ. ಎಲೆಕ್ಟ್ರಾನಿಕ್‌ ಮಾರುಕಟ್ಟೆ, ಮುಖ್ಯವಾಗಿ ಮೊಬೈಲ್‌ ಫೋನ್‌ ಹ್ಯಾಂಡ್‌ಸೆಟ್‌ ವಲಯವು ಬೃಹತ್‌ ಮಾರುಕಟ್ಟೆ­ಯಾಗಿದೆ ಎಂದರು.

ಜಾಗತಿಕ ಮಾರುಕಟ್ಟೆ ತಲುಪಲು ಭಾರತವು ‘ದೇವರು ಕೊಡುಗೆಯಾಗಿ ನೀಡಿರುವ ಸ್ಥಳ’ ಎಂದು ಮೋದಿ ಹೇಳಿದರು. ‘ಜಪಾನ್‌ ಇಲ್ಲದೆ ಭಾರತ ಅಪೂರ್ಣ. ಭಾರತವಿಲ್ಲದೆ ಜಪಾನ್‌ ಅಪೂರ್ಣ’ ಎಂದು ಘೋಷಿಸಿದ ಮೋದಿ ಅವರು, ಜಪಾನ್‌ನ ಹಾರ್ಡ್‌­ವೇರ್‌ ಕೌಶಲ ಮತ್ತು ಭಾರತದ ಸಾಫ್ಟ್‌ವೇರ್‌ ಪರಿಣತರು ಸೇರಿ  ಪವಾಡ ಸೃಷ್ಟಿಸ­ಬಲ್ಲರು. 10 ವರ್ಷದಲ್ಲಿ ಸಾಧಿಸಬಹು­ದಾದ ಪವಾಡವನ್ನು ಎರಡು ವರ್ಷ­ದಲ್ಲಿ ಸಾಧಿಸಲು ಇಲ್ಲಿ ಅವಕಾಶಗಳಿವೆ ಎಂದರು.

ವಿದೇಶಿ ಕಂಪೆನಿಗಳು ಭಾರತದಲ್ಲಿ ಉತ್ಪನ್ನಗಳನ್ನು ತಯಾರಿಸಿದರೆ, ನಿಮ್ಮ ‘ರಾಷ್ಟ್ರೀಯವಾದಿ’ ವರ್ಚಸ್ಸಿಗೆ ಧಕ್ಕೆಯಾ­ಗು­ವುದಿಲ್ಲವೇ ಎಂಬ ಪ್ರಶ್ನೆಗೆ, ಇದರಲ್ಲಿ ದ್ವಂದ್ವ ಇಲ್ಲ. ಅದನ್ನು ನಾನು ವಿಸ್ತರಣೆಯ ಭಾಗವಾಗಿ ನೋಡು­ತ್ತೇನೆ.  ಪ್ರವಾಸಿಗಳು  ಬೇರೆ ಜಾಗಕ್ಕೆ ಹೋದರೆ ಅವರ ಗುರುತು ಬೇರೆಯಾಗುತ್ತದೆಯೇ ಎಂದರು.

ಜಪಾನ್‌ ಪ್ರವಾಸ ಯಶಸ್ವಿ: ಜಪಾನ್ ಪ್ರವಾಸವನ್ನು ‘ಅತ್ಯಂತ ಯಶಸ್ವಿ’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಐದು ವರ್ಷಗಳಲ್ಲಿ ಜಪಾನ್‌ ನೀಡಿರುವ ಭರವಸೆಯಂತೆ ದೊರಕುವ 35 ಶತಕೋಟಿ ಡಾಲರ್‌ ನೆರವಿನಿಂದ  ಮೂಲಸೌಕರ್ಯ­ಗಳ ಸುಧಾರಣೆ ಹಾಗೂ ದೇಶವನ್ನು ಸ್ವಚ್ಛಗೊಳಿ­ಸುವುದು ಸಾಧ್ಯ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಉದ್ಘೋಷ
* ಭಾರತದ ಮೇಲೆ ನಂಬಿಕೆ ಇರಿಸಿದ್ದಕ್ಕೆ ಹಾಗೂ ಫೆವಿಕಾಲ್‌ಗಿಂತಲೂ ಗಟ್ಟಿಯಾದ ಬಾಂಧವ್ಯ ಪ್ರದರ್ಶಿಸಿರು­ವುದಕ್ಕೆ  ಧನ್ಯವಾದ. ಇದು ದೊಡ್ಡ ಸಾಧನೆ. ಜಪಾನ್‌ ನಮ್ಮನ್ನು ನಂಬಿರು­ವುದು ಅತೀವ ಸಂತಸ ತಂದಿದೆ

* ಹಿಂದೆ ನಾವು ಹಾವುಗಳೊಂದಿಗೆ ಆಟವಾಡು­ತ್ತಿದ್ದೆವು. ಆದರೆ, ಈಗ ಕಂಪ್ಯೂ­ಟರ್‌ ಮೌಸ್‌ ಜತೆ ಆಡುತ್ತಿ­ದ್ದೇವೆ. ನಾವು ಮೌಸ್‌ ಒತ್ತಿದಾಗ, ಜಗತ್ತೇ ಚಲಿಸುತ್ತದೆ

ಭಾರತೀಯರೊಂದಿಗೆ ಬೆರೆತ ಮೋದಿ
ಜಪಾನ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭದ್ರತಾ ವ್ಯವಸ್ಥೆ ಭೇದಿಸಿ ಸ್ಥಳೀಯ ಭಾರತೀಯ ಸಮುದಾಯದೊಂದಿಗೆ  ಮುಕ್ತವಾಗಿ ಬೆರೆಯುವುದರೊಂದಿಗೆ ಗಮನ ಸೆಳೆ­ದರು. ವಿವೇಕಾನಂದ ಕೇಂದ್ರ ಉದ್ಘಾಟಿಸಿ  ಭಾರ­ತೀಯ ರಾಯಭಾರ ಕಚೇರಿಯಿಂದ ಹೊರ­ಬಂದ ಅವರು  ಜಮಾಯಿಸಿದ್ದ ಭಾರ­ತೀಯ ಅಭಿಮಾನಿ­ಗಳನ್ನು ಗಮನಿಸಿದರು. ಕಾರಿನತ್ತ ತೆರಳುವ ಬದಲು ಗುಂಪಿನತ್ತ ತೆರಳಿ ಹಸ್ತಲಾಘವ ನೀಡಿ, ಕೆಲವರಿಗೆ ಹಸ್ತಾಕ್ಷರವನ್ನೂ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT