ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಧಾರ್ಮಿಕ ಭಯೋತ್ಪಾದನೆ

ಹಂಪಿ ಕನ್ನಡ ವಿ.ವಿ. ಕುಲಪತಿ ಮಲ್ಲಿಕಾ ಘಂಟಿ ಆತಂಕ
Last Updated 31 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಮೈಸೂರು: ಜನರ ದೌರ್ಬಲ್ಯಗಳನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಧಾರ್ಮಿಕ ಭಯೋತ್ಪಾದನೆಯನ್ನು ಬಿತ್ತುವ ಬೆಳವಣಿಗೆಗಳು ಈಗ ಹೆಚ್ಚಾಗಿವೆ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾ ಘಂಟಿ ಆತಂಕ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಕಲಾಮಂದಿರದಲ್ಲಿ ಶನಿವಾರ ನಡೆದ ಕಸಾಪ ‘ಶತಮಾನೋತ್ಸವ ಸಮಾರೋಪ’ ಕಾರ್ಯಕ್ರಮದಲ್ಲಿ ಅವರು, ‘ಬರಹಗಾರರ ಅಭಿವ್ಯಕ್ತಿ ಸ್ವಾತಂತ್ರ್ಯ’ ವಿಚಾರಗೋಷ್ಠಿಯಲ್ಲಿ, ‘ಭಯೋತ್ಪಾದನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ ಕುರಿತು ಮಾತನಾಡಿದರು.

ಜಾತಿ, ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ಮುಗ್ಧರನ್ನು ಹೆದರಿಸಲಾಗುತ್ತಿದೆ. ಆ ಮೂಲಕ ಜಾತಿ, ಧಾರ್ಮಿಕ ಸಮುದಾಯಗಳನ್ನು ದುರುಪಯೋಗಪಡಿಸಿಕೊಂಡು ಭಯೋತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದರು.

‘ಈ ದೇಶದಲ್ಲಿ ಧರ್ಮರಾಜಕಾರಣವು ಶಕ್ತಿ ರಾಜಕಾರಣಕ್ಕೆ ಸಹಾಯ ಮಾಡುತ್ತಿದೆ. ಧರ್ಮರಾಜಕಾರಣದ ಭಯೋತ್ಪಾದನೆಯನ್ನು 20 ವರ್ಷಗಳಿಂದ ನೋಡುತ್ತಿದ್ದೇವೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಭಾವನಾತ್ಮಕವಾಗಿ ಜನರನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಅವರ ದೌರ್ಬಲ್ಯಗಳನ್ನೇ ಭಯೋತ್ಪಾದಕರು ಅಸ್ತ್ರ ಮಾಡಿಕೊಂಡಿದ್ದಾರೆ ಎಂದರು.

ಹೆಚ್ಚಿದ ಆಕ್ರಮಣ: ವೈಯಕ್ತಿಕ ಜೀವನದ ಮೇಲೆ ಆಕ್ರಮಣ ಮಾಡುವ ತಂತ್ರಗಾರಿಕೆ ಈಗ ಹೆಚ್ಚಾಗಿದೆ. ಉದಾಹರಣೆಗೆ, ಆಹಾರ ಪದ್ಧತಿ ಮೇಲೆ ಈಗ ಆಕ್ರಮಣ ಹೆಚ್ಚಿದೆ. ಕರಾವಳಿ ಪ್ರದೇಶದಲ್ಲಿ ನೈತಿಕ ಪೊಲೀಸ್‌ಗಿರಿ ವ್ಯಾಪಕಗೊಂಡಿದೆ. ಸಂವಿಧಾನವನ್ನು ಧಾರ್ಮಿಕ ಶಕ್ತಿಗಳು ನಿರ್ಲಕ್ಷಿಸಿವೆ ಎಂದು ತಿಳಿಸಿದರು.

ಕೀಳುಭಾಷೆಯ ಭಯೋತ್ಪಾದನೆ: ಚರ್ಚೆಗೆ ಅವಕಾಶ ಕೊಡದೆ, ಕೀಳು ಭಾಷೆಯನ್ನು ಬಳಸುವ ಮೂಲಕ ಭಾಷಿಕ ಭಯೋತ್ಪಾದನೆಯನ್ನು ಮಾಡುವ ಹೊಸ ಬೆಳವಣಿಗೆ ಫೇಸ್‌ಬುಕ್‌ ಮಾದರಿಯ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ. ಫೇಸ್‌ಬುಕ್‌ನಲ್ಲಿ ಬರಹಗಾರರ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಿದು. ಸುಶಿಕ್ಷಿತರು ಅಶ್ಲೀಲ ಪದಬಳಕೆ ಮಾಡುತ್ತಿದ್ದಾರೆ. ಇದನ್ನು ಯಾವ ರೀತಿ ವ್ಯಾಖ್ಯಾನಿಸಬೇಕು ಎಂದು ಅವರು ಪ್ರಶ್ನಿಸಿದರು.

ಬಂದೂಕಿನ ಗುಂಡು ಉತ್ತರವಲ್ಲ: ವಾದವೊಂದನ್ನು ಮಂಡಿಸಿದಾಗ ಅದಕ್ಕೆ ಉತ್ತರಿಸುವ ಧೈರ್ಯವಿಲ್ಲದೆ, ಬಂದೂಕಿನ ಗುಂಡಿನ ಮೂಲಕ ಉತ್ತರಿಸುವುದು ಶೋಭೆ ತಾರದು. ವಾದಕ್ಕೆ ಪ್ರತಿವಾದ ಉತ್ತರವಾಗಬೇಕು. ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಕಡಿವಾಣ ಹಾಕುವ ಕೆಲಸವನ್ನು ಧಾರ್ಮಿಕ ಭಯೋತ್ಪಾದಕರು ಮಾಡುತ್ತಿದ್ದಾರೆ. ಇದರಿಂದ ನೊಂದಿರುವ ಲೇಖಕರಿಗೆ ಅವರ ಕುಟುಂಬ ಸದಸ್ಯರು ಎಚ್ಚರದಿಂದ ಮಾತನಾಡುವಂತೆ ಕೋರುತ್ತಿದ್ದಾರೆ. ಇದು ಭಯೋತ್ಪಾದನೆ ಆಗಿದೆ ಎನ್ನುವುದಕ್ಕೆ ಸಾಕ್ಷಿ ಎಂದರು.

ವ್ಯಕ್ತಿಯನ್ನು ಕೊಲ್ಲಬಹುದೇ ಹೊರತು, ವಿಚಾರವನ್ನಲ್ಲ. ಸಂಶೋಧಕ ಕಲಬುರ್ಗಿ ಇನ್ನೂ ಬದುಕಿದ್ದಾರೆ. ಬಸವಣ್ಣ, ಬುದ್ಧ, ಪೈಗಂಬರ್ ಸತ್ಯ ಹೇಳಿಯೇ ಮೃತಪಟ್ಟರು.  ಕೊಲ್ಲುವ ಕೈಗಳು ಹೆಚ್ಚಿರುವ ಈ ಸಂದರ್ಭದಲ್ಲಿ ಕಾಯುವ ಕೈಗಳು ಹೆಚ್ಚಬೇಕಿದೆ ಎಂದು ಆಶಿಸಿದರು.

‘ಆಧುನಿಕ ಕರ್ನಾಟಕದ ಹರಿಕಾರ ನಾಲ್ವಡಿ’ ಎಂದು ಘೋಷಿಸಲು ನಿರ್ಣಯ:  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಆಧುನಿಕ ಕರ್ನಾಟಕದ ಹರಿಕಾರ ಎಂದು ಸರ್ಕಾರ ಘೋಷಿಸಬೇಕು ಹಾಗೂ ಅವರಿಗೆ ಸಂಬಂಧಿಸಿದಂತೆ ಪಠ್ಯಪುಸ್ತಕದಲ್ಲಿರುವ ಕೆಲವು ಅಸಂಬದ್ಧ ವಿಷಯಗಳನ್ನು ತೆಗೆದುಹಾಕಬೇಕು ಎಂದು ಇಲ್ಲಿ ಶನಿವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ನಿರ್ಣಯ ಸ್ವೀಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT