ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿದೆ ಪಾರ್ಶ್ವವಾಯು: ಬೇಕಿದೆ ಜಾಗೃತಿ

ವಾರದ ಸಂದರ್ಶನ: ಡಾ. ಜಿ.ಟಿ.ಸುಭಾಷ್‌ ನರರೋಗ ತಜ್ಞ
Last Updated 23 ಜುಲೈ 2016, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಈ ಹಿಂದೆ ಜನ ಹೆಚ್ಚಾಗಿ ಸಾವನ್ನಪ್ಪುತ್ತಿದ್ದುದು ಸಾಂಕ್ರಾಮಿಕ ರೋಗಗಳಿಂದ. ಈಗ ಪರಿಸ್ಥಿತಿ ಬದಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳೇ ಜನರನ್ನು ಹೆಚ್ಚಾಗಿ ಬಲಿ ಪಡೆಯುತ್ತಿವೆ. 50 ವರ್ಷಗಳ ಹಿಂದೆ ಕೇವಲ ಶೇಕಡ 30ರಷ್ಟು ಮಂದಿ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಬಲಿಯಾಗುತ್ತಿದ್ದರು. ಈ ಪ್ರಮಾಣ ಈಗ ಶೇಕಡ 53ಕ್ಕೆ ಹೆಚ್ಚಳವಾಗಿದೆ. 2020ರ ವೇಳೆಗೆ ಇದು ಶೇಕಡ 70ಕ್ಕೆ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.

ಅತಿ ಹೆಚ್ಚು ಪ್ರಮಾಣದಲ್ಲಿ  ಜನರನ್ನು ಬಲಿ ಪಡೆಯುತ್ತಿರುವ ಮೂರು ಸಾಂಕ್ರಾಮಿಕವಲ್ಲದ ಕಾಯಿಲೆಗಳ ಪೈಕಿ ಕ್ಯಾನ್ಸರ್‌ ಮೊದಲ ಸ್ಥಾನದಲ್ಲಿ, ಹೃದ್ರೋಗ ಎರಡನೇ ಸ್ಥಾನದಲ್ಲಿ ಹಾಗೂ  ನರವ್ಯೂಹ ಸಂಬಂಧಿ ಕಾಯಿಲೆಯಾದ ಪಾರ್ಶ್ವವಾಯು ಮೂರನೇ ಸ್ಥಾನದಲ್ಲಿವೆ. ಪಾರ್ಶ್ವವಾಯುವನ್ನು ಗುಣಪಡಿಸಬಲ್ಲ ಚಿಕಿತ್ಸೆ ಈಗ ಲಭ್ಯ. ‘ಕ್ಲಾಟ್‌ ಬಸ್ಟರ್‌’ (ಟಿಪಿಎ) ಚುಚ್ಚುಮದ್ದು  ಈ ರೋಗವನ್ನು ಸಂಪೂರ್ಣ ಗುಣಪಡಿಸಬಲ್ಲದು. ಈ ರೋಗಕ್ಕೆ ಶಸ್ತ್ರಚಿಕಿತ್ಸೆಯೂ ಲಭ್ಯ. ಆದರೂ ಈ ಕುರಿತ ಮಾಹಿತಿ ಇಲ್ಲದೆ ಪಾರ್ಶ್ವವಾಯುವಿಗೆ ಜನ ತುತ್ತಾಗುವುದು ತಪ್ಪುತ್ತಿಲ್ಲ. ಈ ರೋಗದಿಂದ ಜನ ಸಾವಿಗೀಡಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ, ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ನರರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಜಿ.ಟಿ.ಸುಭಾಷ್‌ ಇಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಬೆಂಗಳೂರು ಪಾರ್ಶ್ವವಾಯು ಸೇವಾ ಸಂಘ’ದ ಅಧ್ಯಕ್ಷರೂ ಆಗಿರುವ ಸುಭಾಷ್‌, ಈ ರೋಗವನ್ನು ನಿಯಂತ್ರಿಸುವ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲೂ  ಶ್ರಮಿಸುತ್ತಿದ್ದಾರೆ.

* ಸಾಂಕ್ರಾಮಿಕವಲ್ಲದ ರೋಗಗಳಿಂದಾಗಿ ಜನ ಇತ್ತೀಚೆಗೆ ಹೆಚ್ಚಾಗಿ ಸಾಯುತ್ತಿದ್ದಾರೆ. ಇದಕ್ಕೆ ಕಾರಣವೇನು?     
ಉತ್ತಮ ವೈದ್ಯಕೀಯ ಸೌಲಭ್ಯಗಳಿಂದಾಗಿ ದೇಶದಲ್ಲಿ ವ್ಯಕ್ತಿಯ ಸರಾಸರಿ  ಜೀವಿತಾವಧಿ ಈಗ 65 ವರ್ಷಕ್ಕೆ ಹೆಚ್ಚಳವಾಗಿದೆ. ಜನರ ಸಾಮಾಜಿಕ ವರ್ತನೆಗಳು ಬದಲಾಗುತ್ತಿವೆ.  ಆಹಾರ ಪದ್ಧತಿಯಲ್ಲಿ ಆಗಿರುವ ಮಾರ್ಪಾಡು, ನಿದ್ರಿಸುವ ಅವಧಿ ಬದಲಾಗಿರುವುದು, ಧೂಮಪಾನ, ಮದ್ಯಪಾನದಂತಹ ಚಟಗಳು, ಬೊಜ್ಜು, ದೈಹಿಕ ವ್ಯಾಯಾಮದ ಕೊರತೆ ಹೊಸ ನಮೂನೆಯ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಬದಲಾದ ಜೀವನಶೈಲಿಯಿಂದಾಗಿ ಹಾಗೂ ಜೀವಿತಾವಧಿ ಹೆಚ್ಚಳದಿಂದಾಗಿ ಜನರು ಬೇರೆ ಬೇರೆ ವಿಧದ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

* ಪಾರ್ಶ್ವವಾಯು ಎಂದರೇನು? ಈ ರೋಗಕ್ಕೆ ಕಾರಣವೇನು?
ಇದ್ದಕ್ಕಿದ್ದಂತೆ ಮಿದುಳಿಗೆ ರಕ್ತ ಪೂರೈಕೆ ಕಡಿಮೆಯಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದನ್ನೇ ಪಾರ್ಶ್ವವಾಯು ಎನ್ನುತ್ತಾರೆ. ದೇಹದ ಒಟ್ಟು ರಕ್ತದ ಐದನೇ ಒಂದು ಭಾಗ ಮಿದುಳಿಗೆ ಹರಿಯುತ್ತದೆ. ಮಿದುಳಿನಲ್ಲಿ ಆಮ್ಲಜನಕವನ್ನು ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಇಲ್ಲ. ಇಲ್ಲಿಗೆ ಸದಾ ರಕ್ತದ ಮೂಲಕ ಆಮ್ಲಜನಕ ಪೂರೈಕೆ ಆಗುತ್ತಿರಬೇಕು. 3ರಿಂದ 5 ನಿಮಿಷ ಕಾಲ ರಕ್ತ ಪೂರೈಕೆ ವ್ಯತ್ಯಯವಾದರೆ ಮಿದುಳಿಗೆ ಶಾಶ್ವತ ಹಾನಿ ಉಂಟಾಗುತ್ತದೆ. ವಯಸ್ಸಾದಂತೆ ರಕ್ತನಾಳದಲ್ಲಿ ಕೊಬ್ಬು ಶೇಖರಗೊಳ್ಳುವುದು (ಅಥೆರೊಸ್ಲ್ಕೀರೋಸಿಸ್‌), ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವುದು (ಥ್ರೋಂಬೋಸಿಸ್‌), ಮಿದುಳಿಗೆ ಹೆಪ್ಪುಗಟ್ಟಿದ ರಕ್ತ ಸೇರುವುದು ಪಾರ್ಶ್ವವಾಯು ಕಾಯಿಲೆಗೆ ಪ್ರಮುಖ ಕಾರಣಗಳು. ರಕ್ತ ಸಂಚಾರದಲ್ಲಿ ಏರುಪೇರಾದರೆ ಮಿದುಳಿನ ನಿರ್ದಿಷ್ಟ ಭಾಗವು ನಿರ್ವಹಿಸುವ ಕೆಲಸ ಸ್ಥಗಿತಗೊಳ್ಳುತ್ತದೆ. ಉದಾಹರಣೆಗೆ ಮಾತನ್ನು ನಿಯಂತ್ರಿಸುವ ಭಾಗಕ್ಕೆ ರಕ್ತ ಪೂರೈಕೆ ಆಗದಿದ್ದರೆ ಮಾತನಾಡಲು ಸಾಧ್ಯವಾಗುವುದಿಲ್ಲ ಅಥವಾ ತೊದಲುತ್ತಾರೆ. ದೃಷ್ಟಿ ನಿಯಂತ್ರಿಸುವ ಭಾಗಕ್ಕೆ ರಕ್ತ ಪೂರೈಕೆ ಕ್ಷೀಣಿಸಿದರೆ ಕಣ್ಣು ಮಂಜಾಗಬಹುದು ಅಥವಾ ಅಂಧತ್ವ ಬರಬಹುದು. ನೆನಪಿನ ಶಕ್ತಿ ನಿಯಂತ್ರಿಸುವ ಭಾಗಕ್ಕೆ ರಕ್ತ ಪೂರೈಕೆ ಆಗದಿದ್ದರೆ ವ್ಯಕ್ತಿ ತಾನು ಯಾರು ಎಂಬುದನ್ನೇ ಮರೆಯಬಹುದು.

* ಪಾರ್ಶ್ವವಾಯುವಿನ ಲಕ್ಷಣಗಳು ಯಾವುವು? ಲಕ್ಷಣಗಳು ಕಾಣಿಸಿಕೊಂಡಾಗ ಏನು ಮಾಡಬೇಕು?
ಈ ರೋಗದ ಲಕ್ಷಣಗಳನ್ನು ಗ್ರಹಿಸುವುದಕ್ಕೆ ಫಾಸ್ಟ್‌ (ಎಫ್‌ಎಎಸ್‌ಟಿ) ಸುಲಭ  ಸೂತ್ರ ಇದೆ. ಎಫ್‌ ಎಂದರೆ ಫೇಸ್‌. ಅಂದರೆ, ಮುಖದಲ್ಲಾಗುವ ಬದಲಾವಣೆ ಗುರುತಿಸುವುದು. ಉದಾಹರಣೆಗೆ, ನಗುವಾಗ ಮುಖ ಓರೆಯಾಗುವುದು ಈ ಕಾಯಿಲೆಯ ಲಕ್ಷಣಗಳಲ್ಲೊಂದು.  ಎ ಎಂದರೆ ಆರ್ಮ್‌; ಕೈಯಲ್ಲಿ ಆಗುವ ಬದಲಾವಣೆ (ನಿಶ್ಶಕ್ತಿ, ಕೈ ಮೇಲಕ್ಕೆ ಎತ್ತಲು ಆಗದಿರುವುದು, ಬರೆಯಲು ಆಗದಿರುವುದು ಇತ್ಯಾದಿ) ಗುರುತಿಸುವುದು. ಎಸ್‌ ಎಂದರೆ ಸ್ಪೀಚ್‌; ಅಂದರೆ ಮಾತುಗಳಲ್ಲಿ ಆಗುವ ಬದಲಾವಣೆ ಗುರುತಿಸುವುದು (ಮಾತನಾಡುವಾಗ ತೊದಲುವುದು, ಮಾತನಾಡಲು ಸಾಧ್ಯವಾಗದಿರುವುದು ಇತ್ಯಾದಿ). ಟಿ ಎಂದರೆ ಟೈಮ್‌. ರೋಗ ಲಕ್ಷಣ ಕಂಡುಬಂದಾಗ ತಕ್ಷಣ ಚಿಕಿತ್ಸೆ ಕೊಡಿಸಲು ತೆಗೆದುಕೊಳ್ಳುವ ಸಮಯ. ಇದು ತೀರಾ ಮುಖ್ಯವಾದುದು.

* ರೋಗವನ್ನು ಸಂಪೂರ್ಣ ಗುಣಪಡಿಸುವ ಔಷಧಿ ಇದೆಯೇ? 
‘ಕ್ಲಾಟ್ ಬಸ್ಟರ್‌’ ಚುಚ್ಚುಮದ್ದು ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವುದಕ್ಕೆ ನೆರವಾಗಬಲ್ಲದು. ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಈ ಚುಚ್ಚುಮದ್ದನ್ನು ಪಾರ್ಶ್ವವಾಯು ಲಕ್ಷಣ ಕಾಣಿಸಿಕೊಂಡ 3 ತಾಸಿನ ಒಳಗೆ ನೀಡಬೇಕಾಗುತ್ತದೆ. ಕನಿಷ್ಠಪಕ್ಷ ನಾಲ್ಕೂವರೆ ತಾಸಿನ ಒಳಗೆ ನೀಡಿದರೂ ಉತ್ತಮ ಫಲಿತಾಂಶ ಪಡೆಯಬಹುದಾದ ಸಾಧ್ಯತೆ ಇದೆ. ಎಲ್ಲ ರೋಗಿಗಳಿಗೂ ಈ ಚುಚ್ಚುಮದ್ದನ್ನು ನೀಡುವುದಿಲ್ಲ. ಇದನ್ನು ಯಾರಿಗೆ ನೀಡಬಹುದು ಎಂಬುದನ್ನು 42 ಬಗೆಯ ವಿವಿಧ ಅಂಶಗಳನ್ನು ಪರಿಗಣಿಸಿ ನಿರ್ಧರಿಸಲಾಗುತ್ತದೆ. ಮಿದುಳಿನ ರಕ್ತಸ್ರಾವ ಕಾಣಿಸಿಕೊಂಡರೆ ಕ್ಲಾಟ್‌ ಬಸ್ಟರ್‌ ಚುಚ್ಚುಮದ್ದು ಪ್ರಯೋಜನಕ್ಕೆ ಬರುವುದಿಲ್ಲ. ಅವರಿಗೆ ಶಸ್ತ್ರಚಿಕಿತ್ಸೆ  ಅನಿವಾರ್ಯ.

* ಪಾರ್ಶ್ವವಾಯು ಬರದಂತೆ ತಡೆಯಬಹುದೇ?
ಪಾರ್ಶ್ವವಾಯು ಬರದಂತೆ ತಡೆಯಲು ಸಾಧ್ಯವಿಲ್ಲ. ಆದರೆ ಇದಕ್ಕೆ ಕಾರಣವಾಗುವ ಅಪಾಯಕಾರಿ ಅಂಶಗಳನ್ನು ಮೊದಲೇ ತಿಳಿದುಕೊಂಡರೆ, ಈ ರೋಗದಿಂದ ಆಗುವ ಹಾನಿಯನ್ನು ತಪ್ಪಿಸಬಹುದು. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಬೊಜ್ಜು, ಹೃದ್ರೋಗ ಲಕ್ಷಣಗಳು ವ್ಯಕ್ತಿಯಲ್ಲಿವೆಯೇ ಎಂಬ ಬಗ್ಗೆ ಸದಾ ನಿಗಾ ಇಡಬೇಕು. ಸಕ್ಕರೆ ಕಾಯಿಲೆ ಇರುವವರು, ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿ ಇರುವವರು, ಮದ್ಯ ಸೇವಿಸುವವರು, ಧೂಮಪಾನ ಮಾಡುವವರ ವಿವರ ಮೊದಲೇ ಲಭ್ಯವಿದ್ದರೆ ಪಾರ್ಶ್ವವಾಯು ತಡೆಯುವುದು ಸುಲಭವಾಗುತ್ತದೆ.

* ದೇಶದಲ್ಲಿ ಪಾರ್ಶ್ವವಾಯುವಿನಿಂದ ಬಳಲುವವರ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ ಎನ್ನುತ್ತಾರೆ. ಇದನ್ನು ಪುಷ್ಟೀಕರಿಸುವ ಅಂಕಿ–ಅಂಶಗಳಿವೆಯೇ?
ತಮಿಳುನಾಡಿನ ವೆಲ್ಲೂರಿನ ಸಿಎಂಸಿ ಆಸ್ಪತ್ರೆ ವತಿಯಿಂದ 1960ರ ದಶಕದಲ್ಲೇ ಪಾರ್ಶ್ವವಾಯು ಬಗ್ಗೆ ಸಮೀಕ್ಷೆ ನಡೆಸಲಾಯಿತು. ಆಗ ಪ್ರತಿ ಲಕ್ಷ ಮಂದಿ ಪೈಕಿ 52ರಿಂದ 472ರಷ್ಟು ಮಂದಿ ಪಾರ್ಶ್ವವಾಯು ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದುದು ಕಂಡು ಬಂದಿತ್ತು. 2015ರಲ್ಲಿ ಈ ಪ್ರಮಾಣ  ಹೆಚ್ಚಳವಾಗಿದೆ. ಈಗ ಪ್ರತಿ 10 ಸಾವಿರ ಮಂದಿಯಲ್ಲಿ 108ರಿಂದ 135 ಮಂದಿ ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದಾರೆ. ದೇಶದಲ್ಲಿ 3 ಕೋಟಿ ಮಂದಿ ನರಸಂಬಂಧಿ (ಪಾರ್ಶ್ವವಾಯು, ತಲೆನೋವು, ನಡುಕ, ಪಾರ್ಕಿನ್ಸನ್‌ ಕಾಯಿಲೆ ಮುಂತಾದ) ಕಾಯಿಲೆಗಳನ್ನು ಹೊಂದಿದ್ದಾರೆ. 17 ಲಕ್ಷಕ್ಕೂ ಅಧಿಕ ಮಂದಿ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ಅಂದಾಜು 1 ಲಕ್ಷ ಮಂದಿಗೆ ಈ ಕಾಯಿಲೆ ಇದೆ. ಬೆಂಗಳೂರಿನಲ್ಲೇ 15 ಸಾವಿರಕ್ಕೂ ಅಧಿಕ ಮಂದಿ ಈ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದಲ್ಲಿ 94 ಲಕ್ಷ ಮಂದಿ ಪ್ರತಿ ವರ್ಷ ಸಾವಿಗೀಡಾಗುತ್ತಾರೆ. ಈ ಪೈಕಿ ಪಾರ್ಶ್ವವಾಯುವಿನಿಂದ ಸಾಯುವವರ ಪ್ರಮಾಣ 6.5 ಲಕ್ಷ.

ಒಬ್ಬ ವ್ಯಕ್ತಿ ಪಾರ್ಶ್ವವಾಯುವಿನಿಂದ ಬಳಲಿದರೆ ಅದರ ಪರಿಣಾಮ ಸರಾಸರಿ 10 ಮಂದಿಯ ಮೇಲಾಗುತ್ತದೆ. 25ರಿಂದ 40 ವರ್ಷದೊಳಗಿನವರೇ ಹೆಚ್ಚಾಗಿ ಇರುವ ಯುವ ದೇಶ ನಮ್ಮದು. ಇನ್ನು 20 ವರ್ಷಗಳಲ್ಲಿ ಈ ರೋಗದ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ. ಈಗಾಗಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡರೆ ಅನೇಕರು ಅರಿವಿಲ್ಲದೆಯೇ ಈ ರೋಗಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.

* ರೋಗ ನಿಯಂತ್ರಣ ಸಾಧ್ಯವಿದ್ದರೂ ಈ ನಿಟ್ಟಿನಲ್ಲಿ ಗಮನಾರ್ಹ ಪ್ರಯತ್ನಗಳು ನಡೆಯುತ್ತಿಲ್ಲ ಏಕೆ?
ಇಂತಹ ಪ್ರಯತ್ನಗಳು ನಡೆಯುತ್ತಿಲ್ಲವೆಂದೇನಿಲ್ಲ. 2008ರಲ್ಲಿ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಏಳು ರಾಜ್ಯಗಳಲ್ಲಿ (ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಜೊರಾಂ, ಜಮ್ಮು ಮತ್ತು ಕಾಶ್ಮೀರ) ಈ ಕುರಿತು ಪ್ರಾಯೋಗಿಕ ಸಮೀಕ್ಷೆ ನಡೆಸಲಾಗಿದೆ.  ಸಿಂಗಪುರದಲ್ಲಿ 2001ರಲ್ಲಿ ಇದೇ ರೀತಿ ಸಮೀಕ್ಷೆ ನಡೆಸಿ, ಪಾರ್ಶ್ವವಾಯುವನ್ನು ಉಂಟುಮಾಡುವ ಅಪಾಯಕಾರಿ ಅಂಶಗಳ ಪ್ರಮಾಣ ಹೆಚ್ಚು ಇರುವವರನ್ನು ಗುರುತಿಸಲಾಗಿತ್ತು. ಅವರ ಆರೋಗ್ಯದ ಮೇಲೆ ನಿಗಾ ಇಡಲಾಯಿತು. 2008ರಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಸಿದಾಗ, ಈ ರೋಗವನ್ನುಂಟು ಮಾಡುವ ಅಂಶಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದವು. ಈ ಪ್ರಯತ್ನ ಅನೇಕ ಮಂದಿ ಪಾರ್ಶ್ವವಾಯುವಿಗೆ ಒಳಗಾಗುವುದನ್ನೇ ತಪ್ಪಿಸಿತು ಎನ್ನಬಹುದು.

ನಮ್ಮಲ್ಲೂ ಕೇಂದ್ರ ಸರ್ಕಾರ ರಾಷ್ಟ್ರೀಯ ಮಧುಮೇಹ, ಹೃದಯ ಸಂಬಂಧಿ ರೋಗ ಹಾಗೂ ಪಾರ್ಶ್ವವಾಯು ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.  ಇದು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ.

* ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಏನು ಮಾಡಬಹುದು?
ಕಾಯಿಲೆ ತರುವ ಅಪಾಯಕಾರಿ ಅಂಶಗಳ ಬಗ್ಗೆ ಸಮೀಕ್ಷೆ ನಡೆಸುವುದಕ್ಕೆ ಸರ್ಕಾರೇತರ ಸಂಘಟನೆಗಳ ನೆರವನ್ನು ಪಡೆಯಬಹುದು. ಜನಗಣತಿ, ಜಾತಿಗಣತಿ ನಡೆಸುವಾಗಲೇ ಆರೋಗ್ಯ ಸಂಬಂಧಿ ಮಾಹಿತಿಯನ್ನೂ ಕಲೆ ಹಾಕಬಹುದು. 1980ರ ದಶಕದಲ್ಲೇ ಗೌರಿಬಿದನೂರಿನಲ್ಲಿ ಇಂತಹ ಪ್ರಯತ್ನ ನಡೆದಿತ್ತು.

* ಪಾರ್ಶ್ವವಾಯುವಿನಿಂದಾಗುವ ಹಾನಿ ತಗ್ಗಿಸಲು ಮಾರ್ಗೋಪಾಯಗಳಿವೆಯೇ?
ಪಾರ್ಶ್ವವಾಯು ಲಕ್ಷಣ ಕಾಣಿಸಿಕೊಂಡಾಗ ಏನು ಮಾಡಬೇಕು ಎಂಬ ಬಗ್ಗೆ ಜನರಲ್ಲಿ ಅರಿವು  ಮೂಡಿಸಿದರೆ ಇದರಿಂದಾಗುವ ಹಾನಿಯನ್ನು ಕಡಿಮೆ ಮಾಡಬಹುದು. ರೋಗಲಕ್ಷಣಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬಹುದು. ಪಠ್ಯದಲ್ಲೇ ಈ ಕುರಿತ ಮಾಹಿತಿ ನೀಡಬಹುದು. ಟಿ.ವಿ ಸಿನಿಮಾಗಳ ಜಾಹೀರಾತುಗಳ ಮೂಲಕವೂ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬಹುದು.  ಪಾರ್ಶ್ವವಾಯು ಪೀಡಿತರ ಪೈಕಿ ಶೇ 70ರಷ್ಟು ಮಂದಿಯನ್ನು  ಸ್ವಲ್ಪಮಟ್ಟಿಗಾದರೂ  ಗುಣಮುಖರಾಗಿ ಮಾಡಲು ಸಾಧ್ಯವಿದೆ. ಇವರ ಪೈಕಿ ಶೇ 50ರಷ್ಟು  ರೋಗಿಗಳನ್ನು ಸಂಪೂರ್ಣ ಗುಣಪಡಿಸಬಹುದು. ಶೇ 30 ಮಂದಿಯನ್ನು ಭಾಗಶಃ ಗುಣಪಡಿಸಬಹುದು. (ಮಾತು ಕಳೆದುಕೊಂಡವರಿಗೆ ಮಾತು ಬರಿಸುವುದು, ಓಡಾಡದವರು ಓಡಾಡುವಂತೆ ಮಾಡುವುದು ಇತ್ಯಾದಿ)   ಅವರ ಕೆಲಸವನ್ನು ಅವರೇ ಮಾಡಿಕೊಳ್ಳುವಷ್ಟು  ಸಜ್ಜುಗೊಳಿಸಬಹುದು.  ರೋಗ ಲಕ್ಷಣ ಕಾಣಿಸಿಕೊಂಡ ಶೇಕಡ  20ರಿಂದ 40 ಮಂದಿ ಸಾವಿಗೀಡಾಗುತ್ತಾರೆ. ಇವರಲ್ಲಿ ವಯಸ್ಸಾದವರ ಪ್ರಮಾಣ ಹೆಚ್ಚು.

* ಪಾರ್ಶ್ವವಾಯುವಿನ ಪರಿಣಾಮ ಕಡಿಮೆ ಮಾಡುವ ನಿಟ್ಟಿನಲ್ಲಿ ತಕ್ಷಣ ಆಗಬೇಕಾದ ಕಾರ್ಯಗಳಾವುವು?
ರೋಗ ಲಕ್ಷಣ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಕೊಡಿಸುವ ಸಲುವಾಗಿ ರೋಗಿಯನ್ನು ಆದಷ್ಟು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಬೇಕು. ಈ ಸಲುವಾಗಿ, ಆಸುಪಾಸಿನ ಯಾವ ಆಸ್ಪತ್ರೆಗಳಲ್ಲೆಲ್ಲಾ ಈ ರೋಗಕ್ಕೆ ಚಿಕಿತ್ಸೆ ಲಭ್ಯ ಇದೆ ಎಂಬುದನ್ನು ಮೊದಲೇ ಗುರುತಿಸಿಕೊಳ್ಳಬೇಕು. ಈ ಮಾಹಿತಿಯನ್ನು ಜನರಿಗೆ ತಲುಪಿಸಬೇಕು.

* ದೇಶದಲ್ಲಿ ಈ ರೋಗ ನಿಯಂತ್ರಣದಲ್ಲಿನ ಸವಾಲುಗಳೇನು?
ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳ ನಡುವೆ ಸಮನ್ವಯ ಇದ್ದರೆ ಈ ರೋಗವನ್ನು ಸಾಧ್ಯವಾದಷ್ಟು ತಡೆಯಬಹುದು. ಪಿಎಚ್‌ಸಿ ಸಿಬ್ಬಂದಿಗೆ ತರಬೇತಿ ಕೊಡಬೇಕು. ರೋಗಿಯನ್ನು 3  ತಾಸಿನ ಒಳಗೆ ಆಸ್ಪತ್ರೆಗೆ ಸೇರಿಸಲು ಅನುಕೂಲವಾಗುವ ಮುಕ್ತ ಸಂಚಾರ ವ್ಯವಸ್ಥೆ ಕಲ್ಪಿಸಬೇಕು.  ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಲಾಟ್‌ ಬಸ್ಟರ್‌ ಚುಚ್ಚುಮದ್ದು ಲಭ್ಯ ಇರುವಂತೆ ನೋಡಿಕೊಳ್ಳಬೇಕು.  ಕೇವಲ ಚುಚ್ಚುಮದ್ದು ಒದಗಿಸಿದರೆ ಸಾಲದು. ಸಿ.ಟಿ. ಸ್ಕ್ಯಾನ್‌, ಐಸಿಯು ಸೌಲಭ್ಯವೂ ಇದಕ್ಕೆ ಅಗತ್ಯ. ನರರೋಗ ತಜ್ಞರು, ಸಹಾಯಕ ತಂತ್ರಜ್ಞರ ತಂಡವು ಸದಾ ಲಭ್ಯ ಇರಬೇಕು.

ನಮ್ಮ ದೇಶದಲ್ಲಿ ಪ್ರತಿ 30 ಲಕ್ಷ ಮಂದಿಗೆ ಒಬ್ಬ ನರರೋಗ ತಜ್ಞರು ಇದ್ದಾರೆ. ಇವರೆಲ್ಲ ನಗರದಲ್ಲೇ ಬೀಡುಬಿಟ್ಟಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನುರಿತ ನರರೋಗ ತಜ್ಞರು ಇಲ್ಲದಿದ್ದರೆ ಟೆಲಿಮೆಡಿಸಿನ್‌ ಸೇವೆಯನ್ನು ಬಳಸಿಕೊಳ್ಳಬಹುದು. ಕ್ಲಾಟ್‌ ಬಸ್ಟರ್‌ ಒಂದು ಜೀವರಕ್ಷಕ ಔಷಧಿ. ಇದರ ಬೆಲೆ ₹ 50 ಸಾವಿರ.  ಇತರ ವೆಚ್ಚ ಸೇರಿ  ಈ ಚಿಕಿತ್ಸೆಗೆ ₹  90 ಸಾವಿರ ಖರ್ಚಾಗುತ್ತದೆ. ಸರ್ಕಾರ ಔಷಧಿ ಬೆಲೆ ಭರಿಸಿದರೆ ಬಡ ರೋಗಿಗಳಿಗೆ ಅನುಕೂಲವಾಗುತ್ತದೆ. ದೆಹಲಿಯ  ಎಐಐಎಂಎಸ್‌ನಲ್ಲಿ ಈ ಚುಚ್ಚುಮದ್ದನ್ನು ಉಚಿತವಾಗಿ ಪೂರೈಸಲಾಗುತ್ತಿದೆ.

ಬೆಂಗಳೂರಿನ 10ಕ್ಕೂ ಅಧಿಕ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಇದೆ. ವಿಕ್ಟೋರಿಯ  ಆಸ್ಪತ್ರೆಯಲ್ಲಿ ಇಬ್ಬರಿಗೆ ಮಾತ್ರ ಈ ಚುಚ್ಚುಮದ್ದು ಬಳಸಲು ಸಾಧ್ಯವಾಗಿದೆ. ನಾರಾಯಣ ಹೃದಯಾಲಯ, ನಿಮ್ಹಾನ್ಸ್‌ನಲ್ಲೂ ಈ  ಚಿಕಿತ್ಸೆ ಲಭ್ಯ. ಖಾಸಗಿಯವರಲ್ಲಿ ಈ ಚಿಕಿತ್ಸೆ ದುಬಾರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT