ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿರುವ ರಾಸಾಯನಿಕ ಬಳಕೆ ಬಣ್ಣಕ್ಕೆ ಮರುಳಾದೀರಿ ಜೋಕೆ

ಫೋಕಸ್
Last Updated 3 ನವೆಂಬರ್ 2015, 8:25 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಳದಿ ಬಣ್ಣದಿಂದ ಕಂಗೊಳಿಸುವ ಮಾವು, ಪುಟ್ಟಬಾಳೆ, ಪಚ್ಚಬಾಳೆ, ಚಿನ್ನದ ಲೇಪನದಂತೆ ಕಾಣುವ ಪಪ್ಪಾಯ, ಎಲ್ಲ ಹಣ್ಣುಗಳೂ ಸಮ ಗಾತ್ರದಂತೆ ಕಾಣುವ ಕಲ್ಲಂಗಡಿ.. ಇಂಥ ಮಜಬೂತ ಹಣ್ಣುಗಳನ್ನು ಕಂಡರೆ ಯಾವ ಗ್ರಾಹಕನ ಬಾಯಲ್ಲಾದರೂ ನೀರೂರದಿರುತ್ತದೆಯೇ...?

ಹೌದು. ಗ್ರಾಹಕರು ಹಣ್ಣಿಗೆ ಆಕರ್ಷಿತರಾಗುವುದೇ, ಅವುಗಳ ಬಣ್ಣ ಮತ್ತು ಆಕಾರದಿಂದ. ಆದರೆ, ಹೀಗೆ ಲಕ ಲಕ ಅಂತ ಹೊಳೆಯುವ, ಸುಂದರ ಆಕಾರವಿರುವ ಹಣ್ಣುಗಳು ಎಷ್ಟು ಸುರಕ್ಷಿತ? ಜೀವ ವಿಜ್ಞಾನದ ಪ್ರಕಾರ ಯಾವುದೇ ಕಾಯಿ ಸ್ವಾಭಾವಿಕವಾಗಿ ಹಣ್ಣಾದರೆ ಪರಿಪೂರ್ಣವಾಗಿ ಹಳದಿ ಯಾಗಿರಲು ಸಾಧ್ಯವಿಲ್ಲ. ಹಾಗೆಯೇ, ಒಂದು ಮರದಲ್ಲಿ ಎಲ್ಲ ಹಣ್ಣುಗಳು ಏಕ ಆಕಾರದಲ್ಲಿರುವುದಿಲ್ಲ. ವಿಜ್ಞಾನಿಗಳ ಪ್ರಕಾರ ಹೀಗೆ ಏಕರೂಪ ಬಣ್ಣದಲ್ಲಿ ಹಣ್ಣು ಮಾಗಬೇಕೆಂದರೆ, ಆ ಪ್ರಕ್ರಿಯೆ ಙಯಲ್ಲಿ ರಾಸಾಯನಿಕಗಳು ಬಳಕೆಯಾಗಿ ರುತ್ತವೆ. ಇಲ್ಲವೇ ಗಿಡ, ಬಳ್ಳಿಗಳಿಗೆ ಬೆಳವಣಿಗೆ ಹಂತದಲ್ಲೇ ಔಷಧಗಳ ರೂಪದಲ್ಲಿ ರಾಸಾಯನಿಕಗಳನ್ನು ನೀಡಲಾಗಿರುತ್ತದೆ.

ಅಡ್ಡದಾರಿ....: ಒಂದು ಬುಟ್ಟಿ ಅಥವಾ ಪೆಟ್ಟಿಗೆಯಲ್ಲೂ ಹಣ್ಣುಗಳನ್ನು ಇಟ್ಟು ಅದರ ಮಧ್ಯ ಕ್ಯಾಲ್ಸಿಯಂ ಕಾರ್ಬೈಡ್ ಪೌಡರ್ ಅನ್ನು ಕಾಗದದ ಹಾಳೆಯಲ್ಲಿ ಸುತ್ತಿ ಇಡುತ್ತಾರೆ. ನಂತರ ಆ ಪೆಟ್ಟಿಗೆಯನ್ನು ಗಾಳಿಯಾಡದಂತೆ ಮುಚ್ಚುತ್ತಾರೆ. ಆಗ ಕ್ಯಾಲ್ಸಿಯಂ ಕಾರ್ಬೈಡ್ ಹಣ್ಣುಗಳಲ್ಲಿನ ತೇವಾಂಶ ವನ್ನು ಹೀರಿಕೊಂಡು ಅಸಿಟಲೀನ್ ಅನಿಲವನ್ನು ಉತ್ಪತ್ತಿಮಾಡುತ್ತದೆ. ಈ ಅನಿಲವು ಕಾಯಾದ ಹಣ್ಣುಗಳನ್ನು ತ್ವರಿತವಾಗಿ ಹಣ್ಣು ಮಾಡಲು  ಸಹಾಯ ಮಾಡುತ್ತದೆ.

ಹೀಗೆ 'ಅಡ್ಡ ದಾರಿ'ಯಲ್ಲಿ ಹಣ್ಣು ಮಾಡಿದ  ಫಲಗಳು ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಮುಖ್ಯವಾಗಿ ಜೀರ್ಣಾಂಗ ವ್ಯವಸ್ಥೆ, ಮೂತ್ರಪಿಂಡ, ಹೃದಯ, ಯಕೃತ್ತು ಮತ್ತು ಮಿದುಳಿಗೆ ಮತ್ತು ದೀರ್ಘಾವಧಿಯಲ್ಲಿ ಕ್ಯಾನ್ಸರ್ ಸಂಬಂಧಿಸಿದ ರೋಗಗಳು ಬರುವ ಸಂಭವವಿರುತ್ತದೆ ಎಂದು ಹಲವು ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಕೃತಕವಾಗಿ ಹಣ್ಣಾಗಿಸಲು ಬಳಸುವ ರಾಸಾಯನಿಕಗಳ ಮೇಲೆ ನಿಷೇಧ ಹೇರಿದೆ.
ರಾಸಾಯನಿಕ ಬಳಕೆ ಅಪರಾಧ: ಕೃತಕವಾಗಿ ಹಣ್ಣಾಗಿಸಲು ಹೆಚ್ಚು ಬಳಕೆಯಾಗುವುದು ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕ. ಇದು ಅಪಾಯಕಾರಿ ರಾಸಾಯನಿಕವಾಗಿದ್ದು, ಪಿ.ಎಫ್.ಎ ನಿಯಮ 8-44 ಎಎ, 1954ರ ಅನುಸಾರ ಈ ರಾಸಾಯನಿಕ ಬಳಸಿ ಹಣ್ಣುಗಳನ್ನು ಮಾಗಿಸುವುದನ್ನು ನಿಷೇಧಿಸಲಾಗಿದೆ.

ಕಾನೂನು ಉಲ್ಲಂಘಿಸಿ, ಈ ವಿಧಾನ ಅನುಸರಿಸಿ ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಿದೆ. ಇದರ ಅನ್ವಯ ಪ್ರತಿ ವರ್ಷ ಹಣ್ಣುಗಳ ಕಾಲದಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಡುವ ಗೋದಾಮುಗಳ ಮೇಲೆ ದಾಳಿ ಮಾಡುತ್ತಾರೆ. ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಮಾಗಿಸಲಾಗಿದ್ದ ಹಣ್ಣುಗಳನ್ನು ನಾಶಗೊಳಿಸುತ್ತಾರೆ. ಗ್ರಾಹಕರು, ವ್ಯಾಪಾರಸ್ಥರು ಹಾಗೂ ರೈತರಿಗೆ ಹಣ್ಣುಗಳನ್ನು ಮಾಗಿಸುವ ವಿಧಾನ ಕುರಿತು ಜಾಗೃತಿ ಮೂಡಿಸುತ್ತಾರೆ.

ಈ ವಿಧಾನ ಬಳಸಲು ಕಾರಣ : ಮಾವು, ಚಿಕ್ಕು, ಪಪ್ಪಾಯಿ, ಬಾಳೆ ಕಾಯಿಗಳನ್ನು ಭತ್ತದ ಹುಲ್ಲು, ಸೊಪ್ಪಿನ ಮಧ್ಯೆ ಇಟ್ಟು ನೈಸರ್ಗಿಕವಾಗಿ ಹಣ್ಣಾಗಿಸುವ ವಿಧಾನಕ್ಕೆ 7ರಿಂದ 10 ದಿನ ಬೇಕಾಗುತ್ತದೆ. ಆದರೆ ಅಷ್ಟು ಸಮಯ ಕಾಯದೇ, ಬೇಗ ಹಣ ಗಳಿಸಬೇಕು, ಮಾರುಕಟ್ಟೆಯಲ್ಲಿರುವ ಬೇಡಿಕೆಯನ್ನು ತನ್ನದಾಗಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಇಂಥ ರಾಸಾಯನಿಕಗಳನ್ನು ಬಳಸಿ, ಎಳೆ ಕಾಯಿಗಳನ್ನೇ ಹಣ್ಣಾಗಿಸಲು ವ್ಯಾಪಾರಿಗಳು ಮುಂದಾಗುತ್ತಾರೆ. ಹಣ ಉಳಿತಾಯ, ಸಮಯ ಉಳಿತಾಯ, ಲಾಭದ ಆಸೆಯೇ ಈ ವಿಧಾನ ಅನುಸರಿಸಲು ಕಾರಣ.

ವಿಷಕಾರಕ ರಾಸಾಯನಿಕ ಬಳಸಿ ಹಣ್ಣು ಮಾಡುವುದರಿಂದ ಹಣ್ಣುಗಳು ರುಚಿ ಕಳೆದುಕೊಳ್ಳುತ್ತವೆ. ರುಚಿಯ ಜೊತೆಗೆ, ಹಣ್ಣಿನಲ್ಲಿ ಪೌಷ್ಟಿಕಾಂಶಗಳ ಕೊರತೆಯಾಗಲು ಕಾರಣವಾಗುತ್ತದೆ. ಹಣ್ಣಾಗುವಾಗ ಉಂಟಾಗುವ ಜೀವ ರಾಸಾಯನಿಕ ಪ್ರಕ್ರಿಯೆಯಲ್ಲಾಗುವ ವ್ಯತ್ಯಾಸ ಇದಕ್ಕೆ ಕಾರಣವಾಗಬಹುದು. ಹಾಗಾಗಿ ರಾಸಾಯನಿಕ ಪ್ರಕ್ರಿಯೆಯಲ್ಲಿ ಹಣ್ಣುಗಳನ್ನು ಮಾಗಿಸುವುದು ಒಳ್ಳೆಯದಲ್ಲ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ತೋಟಯ್ಯ.

ಸುಲಭ ಸರಳ ವಿಧಾನ : ಗ್ರಾಹಕರ ಅಭಿರುಚಿ, ರೈತರು ಮತ್ತು ವ್ಯಾಪಾರಸ್ಥರ ಸಮಸ್ಯೆಗಳನ್ನು ಗಮನಿಸಿದ ಬೆಂಗ ಳೂರಿನ ಹೆಸರುಘಟ್ಟದ ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ  ಕೇಂದ್ರದ ವಿಜ್ಞಾನಿಗಳು ಕಾಯಿಗಳನ್ನು ಸ್ವಾಭಾವಿಕವಾಗಿ ಮಾಗಿಸುವ ಸರಳ ಹಾಗೂ ಕಡಿಮೆ ವೆಚ್ಚದ ವಿಧಾನವೊಂದನ್ನು ಅನುಶೋಧಿಸಿದ್ದಾರೆ. ಎರಡು ಮೂರು ವರ್ಷಗಳಿಂದ ಆ ವಿಧಾನವನ್ನು ಪ್ರಚಾರ ಮಾಡುತ್ತಿದ್ದಾರೆ.  ಈ ವಿಧಾನದಲ್ಲಿ ಕಾಯಿಗಳನ್ನು ನೈಸರ್ಗಿಕವಾಗಿ ಹಣ್ಣಾಗಿಸುವ ಇಥಲೀನ್ ಅನಿಲವನ್ನು ಇಥ್ರೆಲ್ ಅಥವಾ ಇಥೊಫಾನ್ ದ್ರಾವಣದಿಂದ ಉತ್ಪಾದಿಸಿ ಅದರಿಂದ ರಾಸಾಯನಿಕ ಮುಕ್ತ ಹಣ್ಣು ಪಡೆಯಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಸರಳ ಸುಲಭ ವಿಧಾನ: ಗಾಳಿಯಾಡುವ ಕ್ರೇಟ್‌ಗಳಲ್ಲಿ ಕಾಯಿಗಳನ್ನಿಟ್ಟು ಅವನ್ನು ಪ್ಲಾಸ್ಟಿಕ್ ಟೆಂಟ್ ನಲ್ಲಿ ಇಡಬೇಕು(ಚಿತ್ರ 1 ನೋಡಿ). ನಂತರ ಅದರೊಳಕ್ಕೆ ಇಥ್ರೆಲ್ ದ್ರಾವಣವನ್ನು ಇಟ್ಟು ಅದಕ್ಕೆ ಸೋಡಿಯಂ ಹೈಡ್ರಾಕ್ಸೈಡ್ (ಕಾಸ್ಟಿಂಗ್ ಸೋಡಾ) ಬೆರೆಸಿ, ಟೆಂಟ್ ಅನ್ನು ಗಾಳಿಯಾಡದಂತೆ ಮುಚ್ಚಬೇಕು. ಹೀಗೆ ಮಾಡುವುದರಿಂದ ಟೆಂಟ್‌ನೊಳಗೆ ಉತ್ಪತ್ತಿಯಾಗುವ ಇಥಿಲೀನ್ ಅನಿಲವು ಕಾಯಿಗಳನ್ನು ಸಹಜವಾಗಿ ಹಣ್ಣಾಗಲು ಸಹಾಯಮಾಡುತ್ತದೆ.

ಒಂದು ದಿನದ ನಂತರ ಹಣ್ಣುಗಳನ್ನು ಟೆಂಟ್‌ಗಳಿಂದ ಹೊರತೆಗೆದು ಸಾಮಾನ್ಯ (18-24 ಸೆಂಟೀಗ್ರೆಡ್) ಉಷ್ಣಾಂಶದಲ್ಲಿ ಇಡಬೇಕು. ಈ ವಿಧಾನದಲ್ಲಿ  ಮಾವು, ಬಾಳೆ, ಸಪೋಟ, ಪಪ್ಪಾಯಿ ಹಾಗೂ ಸೀತಾಫಲ  ಇತ್ಯಾದಿಗಳ ದೋರಕಾಯಿಗಳನ್ನು ಹಣ್ಣು ಮಾಡಬಹುದು. ಹೀಗೆ ಮಾಡುವ ಹಣ್ಣುಗಳು ಆಕರ್ಷವಾದ ಬಣ್ಣ ಪಡೆದುಕೊಳ್ಳುತ್ತವೆ. ಆರೋಗ್ಯದ ದೃಷ್ಟಿಯಿಂದ ಈ ಹಣ್ಣುಗಳು ಉತ್ತಮ ವಾಗಿರುತ್ತವೆ.  ಪ್ಲಾಸ್ಟಿಕ್ ಟೆಂಟ್‌ನ ಬದಲು ಗಾಳಿಯಾಡದ ಕೊಠಡಿಯಲ್ಲೇ ಇಥಿಲೀನ್ ಅನಿಲ ಉತ್ಪಾದಿಸಲು ಈ ಕ್ರಮ ಬಳಸಬಹುದು.

ಯಾವ ಹಣ್ಣಿಗೆ ಎಷ್ಟು ಕಾಲ : ಬಲಿತ ಮಾವಿನ ಕಾಯಿಗಳಿಗೆ 24 ಗಂಟೆಗಳ ಕಾಲ 100 ಪಿಪಿಎಮ್ ಇಥಿಲೀನ್ ಅನಿಲವನ್ನು ಒದಗಿಸಿದರೆ ಕೇವಲಐದು ದಿನಗಳಲ್ಲಿ ಹಣ್ಣಾಗುತ್ತವೆ. ಬಾಳೆಕಾಯಿಗೆ 18 ಗಂಟೆ ಕಾಲ 100 ಪಿಪಿಎಮ್ ಇಥಿಲೀನ್ ಅನಿಲದಿಂದ ಉಪಚರಿಸಿ ಸಾಮಾನ್ಯ ಉಷ್ಣಾಂಶದಲ್ಲಿಇಟ್ಟರೆ ನಾಲ್ಕು ದಿನಗಳಲ್ಲಿ ಹಣ್ಣಾಗುತ್ತವೆ. 20 ಸೆಂಟಿಗ್ರೇಡ್ ಉಷ್ಣಾಂಶದಲ್ಲಿಟ್ಟರೆ ಆರು ದಿನಗಳಲ್ಲಿ ಹಣ್ಣಾಗುತ್ತವೆ.

ಟೆಂಟ್ ವಿಸ್ತೀರ್ಣ ಖರ್ಚು : ಒಂದು ಮೀಟರ್ ಉದ್ದ, ಅಗಲ, ಎತ್ತರದ (ಒಂದು ಘನ ಮೀಟರ್) ಟೆಂಟ್‌ನಲ್ಲಿ ಸುಮಾರು 200 - 250 ಕೆ.ಜಿ ಕಾಯಿಗಳನ್ನಿಟ್ಟು ಹಣ್ಣು ಮಾಡಬಹುದು. ಇದಕ್ಕೆ ಎರಡು ಎಂ.ಎಲ್ ಇಥ್ರೆಲ್ ದ್ರಾವಣಕ್ಕೆ ಎರಡು ಗ್ರಾಂ ಸೋಡಿಯಂ ಹೈಡ್ರಾಕ್ಸೈಡ್ ಬೆರೆಸಬೇಕು. ಒಂದು ಘನ ಮೀಟರ್‌ನ ಟೆಂಟ್ ನಿರ್ಮಿಸಲು ಸುಮಾರು ₹1500 -1600 ವೆಚ್ಚವಾಗುತ್ತದೆ. ಕಾಲಕ್ಕೆ ತಕ್ಕಂತೆ ಈ ವೆಚ್ಚ ಬದಲಾಗಬಹುದು.

ಟೆಂಟ್ ಎಲ್ಲಿ ನಿರ್ಮಿಸ ಬಹುದು ?
ಟೆಂಟ್ ನಿರ್ಮಾಣಕ್ಕೆ ಇಂಥದ್ದೇ ಸ್ಥಳ ಬೇಕೆಂದಿಲ್ಲ. ಒಟ್ಟಾರೆ ಮುಚ್ಚಿದ ಕೋಣೆಯಿದ್ದರೆ ಸಾಕು. ಕಾಯಿ ಬಿಡಿಸುವ ತೋಟಗಳಲ್ಲಿ, ತೋಟದ ಮನೆಗಳಲ್ಲಿ ನಿರ್ಮಿಸಬಹುದು.

ಮುಚ್ಚಿದ ಕೊಠಡಿಗಳಿದ್ದರೆ ಖರ್ಚು ಮತ್ತಷ್ಟು ಕಡಿಮೆಯಾಗುತ್ತದೆಎನ್ನುತ್ತಾರೆ ವಿಜ್ಞಾನಿ ಡಾ.ಡಿ.ವಿ.ಸುಧಾಕರ್. 'ಈ ವಿಧಾನವನ್ನು ರೈತರೇ ತೋಟಗಳಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದು. ಇದರಿಂದ, ಆರೋಗ್ಯಪೂರ್ಣ ಹಣ್ಣುಗಳನ್ನು ನೀಡುವ ಜೊತೆಗೆ, ಕೊಳೆಯುವ ಹಣ್ಣುಗಳ ಪ್ರಮಾಣ ನಿಯಂತ್ರಿಸಬಹುದು' ಎನ್ನುತ್ತಾರೆ ಅವರು.

ಈ ಸುಲಭ ಸರಳ ವಿಧಾನದಲ್ಲಿ ಹಣ್ಣಾಗಿಸುವ ವಿಧಾನ ಕುರಿತು ಮಾಹಿತಿಗಾಗಿ, ನಿರ್ದೇಶಕರು, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹೆಸರಘಟ್ಟ, ಬೆಂಗಳೂರು-560 089 (080-28466420 / 373) ಅಥವಾ ಡಾ.ಡಿ.ವಿ. ಸುಧಾಕರ ರಾವ್ - 9900820270 ಅವರನ್ನು ಸಂಪರ್ಕಿಸಬಹುದು.

ಹಣ್ಣು ಮಾಗಿಸುವ ತಂತ್ರ....
ಚಿತ್ರದುರ್ಗ: ‘ಈ ಕೊಠಡಿಯಲ್ಲಿ 24 ಗಂಟೆ ದೋರೆಗಾಯಿಗಳನ್ನಿಟ್ಟು, ಗ್ಯಾಸ್ ಹಾಯಿಸಿ, ಭದ್ರವಾಗಿ ಬಾಗಿಲು ಮುಚ್ಚಿದರೆ ಸಾಕು, ಆರೋಗ್ಯ ಪೂರ್ಣ, ಗುಣಮಟ್ಟದ ಹಣ್ಣುಗಳು ಲಭ್ಯವಾಗುತ್ತವೆ. ಈ ಹಣ್ಣುಗಳಿಗೆ ತಾಳಿಕೆ ಗುಣ (ಕೀಪಿಂಗ್ ಕ್ವಾಲಿಟಿ) ಹೆಚ್ಚು, ರುಚಿಯೂ ಸೊಗಸು...’

ನಗರದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿರುವ ಹಾಪ್‌ಕಾಮ್ಸ್‌ ಮಳಿಗೆ ಪಕ್ಕದಲ್ಲಿರುವ ವೈಜ್ಞಾನಿಕ ‘ಹಣ್ಣು ಮಾಗಿಸುವ’ ಕೊಠಡಿಯಲ್ಲಿ ಹಾಪ್‌ಕಾಮ್ಸ್‌ ಸಂಸ್ಥೆಯ ಕಾರ್ಯದರ್ಶಿ ಸುರೇಂದ್ರ ಪ್ರಸಾದ್ ಪಚ್ಚಬಾಳೆ ಗೊನೆಗಳನ್ನು ಜೋಡಿಸುತ್ತಾ, ಹಣ್ಣಾಗಿ­ಸುವ ವಿಧಾನವನ್ನು ವಿವರಿಸಿದರು. ‘ರಾಜ್ಯದ ಬಹುತೇಕ ಜಿಲ್ಲೆಗಳ ಹಾಪ್‌ಕಾಮ್ಸ್‌ ಘಟಕಗಳಲ್ಲಿ ಇಂಥ ಹಣ್ಣುಮಾಗಿಸುವ ಯೂನಿಟ್‌ಗಳಿವೆ. ಆದರೆ ಜನರು ಈ ಕೊಠಡಿ ಬಳಸುವುದು ಕಡಿಮೆ’ ಎನ್ನುತ್ತಾರೆ ಅವರು.

₹ 16 ಲಕ್ಷದ ಘಟಕ : ಎರಡು ವರ್ಷಗಳ ಹಿಂದೆ ₹16 ಲಕ್ಷ ವೆಚ್ಚದಲ್ಲಿ ಘಟಕ ನಿರ್ಮಿಸಲಾಗಿದೆ. ಗಾಳಿಯಾಡದಂತೆ ಕೊಠಡಿಯಲ್ಲಿ ಎರಡು ಹವಾನಿಯಂತ್ರಕ ಯಂತ್ರಗಳಿವೆ. ಕೊಠಡಿ ಹೊರಭಾಗದ ಮೂಲೆಯಲ್ಲಿ ಇಥಲೀನ್ ಗ್ಯಾಸ್ ಹರಿಸುವ ಸಿಲೆಂಡರ್‌ಗಳಿವೆ. ಗ್ರಾಹಕರು ತಂದ ದೋರೆಗಾಯಿಗಳನ್ನು (ಬಲಿತ ಕಾಯಿ) ಕೊಠಡಿಯೊಳಗೆ ಜೋಡಿಸಿ, ಬಾಗಿಲು ಮುಚ್ಚಿ, ಸಿಲೆಂಡರ್‌ನಿಂದ ಪೈಪ್‌ಗಳ ಮೂಲಕ ಕೊಠಡಿಗೆ ಇಥಲೀನ್ ಗ್ಯಾಸ್ ಹರಿಸಲಾಗುತ್ತದೆ. ಇಪ್ಪತ್ನಾಲ್ಕು ಗಂಟೆಯೊಳಗೆ ಹಣ್ಣಾಗಿ, ಗ್ರಾಹಕರು ಕೊಂಡೊಯ್ಯಬಹುದು. ಇಥಲೀನ್ ಗ್ಯಾಸ್ ಅನ್ನು ಸಿಲಿಂಡರ್‌ಗಳ ಮೂಲಕ ಖರೀದಿಸಲಾಗುತ್ತದೆ. ಒಂದು ಸಿಲಿಂಡರ್‌ಗೆ ₹3,400. ಆಂಧ್ರಪ್ರದೇಶದ ತಿರುಪತಿಯಿಂದ ಈ ಸಿಲಿಂಡರ್‌ಗಳನ್ನು ಹಾಪ್‌ಕಾಮ್ಸ್‌ ಘಟಕದವರು ತರಿಸಿಕೊಳ್ಳುತ್ತಾರೆ.

ಇಥಲೀನ್ ಗ್ಯಾಸ್ ಬಳಕೆ : ‘ಒಂದು ಬಾರಿಗೆ 10 ಟನ್‌ನಷ್ಟು ಬಾಳೆ ಗೊನೆಗಳನ್ನು ಹಣ್ಣು ಮಾಡಬಹುದು. ಒಂದು ಟನ್ ಗೊನೆ ಹಣ್ಣು ಮಾಡಲು ₹100 ಶುಲ್ಕ ತೆಗೆದುಕೊಳ್ಳಲಾಗುತ್ತದೆ. ಸದ್ಯಕ್ಕೆ ನಿತ್ಯ ಎರಡು ಟನ್‌ ಪಚ್ಚಬಾಳೆಯನ್ನು ಹಣ್ಣು ಮಾಡಲಾಗುತ್ತಿದ್ದು, ಈ ಘಟಕದಲ್ಲಿ ಮಾವು, ಸಪೋಟ, ಪುಟ್ಟಬಾಳೆ ಸೇರಿದಂತೆ ಹಲವು ಫಲಗಳನ್ನು ಹಣ್ಣು ಮಾಡುಬಹುದಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಯತ್ನ ಮಾಡುತ್ತೇವೆ’ ಎನ್ನುತ್ತಾರೆ ಪ್ರಸಾದ್.

‘ಗಿಡದಲ್ಲಿದ್ದಾಗ ಹಾಗೂ ಬಲಿತ ಕಾಯಿಗಳು ಹಣ್ಣಾಗುವುದು ಕೂಡ ಸ್ವಾಭಾವಿಕ ಇಥಲೀನ್ ಗ್ಯಾಸ್ ಬಳಕೆಯಿಂದಲೇ. ಹಾಗಾಗಿ, ಈ ಗ್ಯಾಸ್‌ನಿಂದ ಹಣ್ಣು ಮಾಡುವ ಪ್ರಕ್ರಿಯ ವಿಶ್ವದಾದ್ಯಂತ ಬಳಕೆಯಿದೆ. ಇದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಕ ನಿರ್ದೇಶಕ ತೋಟಯ್ಯ.

ಪರಿಣಾಮಕಾರಿ: ‘ಹಣ್ಣುಗಳ ಉಸಿರಾಟ (ರೆಸ್ಪಿರೇಷನ್) ಮತ್ತು ಅವುಗಳು ಬಿಡುಗಡೆ ಮಾಡುವ ಇಥಲೀನ್ ಗ್ಯಾಸ್ ಸೇರಿಕೊಂಡೇ ಹಣ್ಣು ಮಾಗುತ್ತದೆ. ಈ ಸ್ವಾಭಾವಿಕ ವಿಧಾನವನ್ನು ಹಣ್ಣು ಮಾಗಿಸುವ ಕೊಠಡಿಯಲ್ಲಿ ಬಳಸಲಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.

ಊದಿನ ಕಡ್ಡಿ ಹೊಗೆಯ ವಿಧಾನದಿಂದ ಮಾಗುವ ಹಣ್ಣುಗಳಲ್ಲಿ ತಾಳಿಕೆ ಗುಣ ಕಡಿಮೆಯಾಗುತ್ತದೆ. ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಮಾಗಿಸುವ ಹಣ್ಣುಗಳ ಸೇವನೆಯಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಹಾಗಾಗಿ ಇಥಲೀನ್ ಗ್ಯಾಸ್ ಬಳಸಿ ಮಾಗಿಸುವ ಹಣ್ಣುಗಳು ಉತ್ತಮ ಹಾಗೂ ಆರೋಗ್ಯ ಪೂರ್ಣ ಎನ್ನುವುದು ತೋಟಯ್ಯ ಅವರ ಅಭಿಪ್ರಾಯವಾಗಿದೆ.

ಯಾವ ಗ್ರಾಹಕರೂ ಬೇಕಾದರೂ ಕಾಯಿಗಳನ್ನು ಹಾಪ್‌ಕಾಮ್ಸ್‌ ಘಟಕದಲ್ಲಿ ಹಣ್ಣು ಮಾಗಿಸಬಹುದು. ಮಾಹಿತಿಗೆ ಜಿಲ್ಲಾ ಹಾಪ್‌ಕಾಮ್ಸ್‌, ನಂ. 08194–231115 ಮತ್ತು ದೂರವಾಣಿ : 9916063262.

ಕೃತಕ ಹಣ್ಣು ಪತ್ತೆ ವಿಧಾನ
ಗೋಡನ್ ವಿಧಾನ

ಕೇಂದ್ರ ಆಹಾರ ಪ್ರಯೋಗಾಲಯ ನಿಗದಿ ಪಡಿಸಿದ ರಾಸಾಯನಿಕ ದ್ರಾವಣದಲ್ಲಿ ಫಿಲ್ಟರ್ಕಾಗದವನ್ನು ಅದ್ದಿ ಕೃತಕವಾಗಿ ಹಣ್ಣಾಗಿಸುವ ಗೋಡನ್‌ನ ಒಳಗೆ ಹಿಡಿದರೆಅಥವಾ ಹಣ್ಣುಗಳ ಮೇಲೆ ಇಟ್ಟರೆ ಕಾಗದದ ಬಣ್ಣ ಬದಲಾಗುತ್ತದೆ. ಸಾಮಾನ್ಯ ನಾಗರಿಕರು ಇದನ್ನು ಮಾಡಬಹುದಾಗಿದ್ದು, ಸ್ಥಳದಲ್ಲೇ ಪತ್ತೆ ಹಚ್ಚುವ ಸರಳ ವಿಧಾನ ಇದು.

ಪಲ್ಪ್ ಮೆಥೆಡ್
ಕ್ಯಾಲ್ಸಿಯಂ ಕಾರ್ಬೈಡ್ ಹರಳುಗಳನ್ನು ಕಾಗದದಲ್ಲಿ ಸುತ್ತಿಟ್ಟು ತ್ವರಿತವಾಗಿ ಮಾಗಿಸಿದ ಹಣ್ಣುಗಳ ಪಲ್ಪ್‌ಗಳನ್ನು ಪ್ರಯೋಗಾಲಯದಲ್ಲಿ ಆದರೆ, ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವರದಿ ಬರಲು ನಾಲ್ಕೈದು ದಿನ ಸಮಯ ಬೇಕಾಗುತ್ತದೆ.

ಗ್ರಾಹಕರಿಗೆ ಟಿಪ್ಸ್..
* ರಾಸಾಯನಿಕ ಬಳಸಿ ಮಾಗಿಸಿದ ಹಣ್ಣುಗಳು ಹೆಚ್ಚು ರುಚಿಯಾಗಿರುವುದಿಲ್ಲ,

* ಪರಿಮಳ ಮಾತ್ರ ವಿಭಿನ್ನವಾಗಿರುತ್ತದೆ. ಎಲ್ಲಾ ಹಣ್ಣುಗಳ ಬಣ್ಣ ಒಂದೇ ರೀತಿ ಇರುತ್ತದೆ, ಮಾವಿನ ಹಣ್ಣಿನ ಬಣ್ಣ ಹಸಿರಿನಿಂದ ಗಾಢ ಹಳದಿ ಬಣ್ಣಕ್ಕೆ ತಿರುಗಿರುತ್ತದೆ, ಈ ಹಣ್ಣುಗಳನ್ನು ಹೆಚ್ಚು ದಿನ ಶೇಖರಿಸಿಡುವುದು ಅಸಾಧ್ಯ,

* ಹಣ್ಣುಗಳು ತುಂಬಾ ಮೃದುವಾಗಿರುತ್ತವೆ, ಕೆಲವೊಂದು ಹಣ್ಣುಗಳಲ್ಲಿ ಅಲ್ಲಲ್ಲಿ ಕಪ್ಪು ಮತ್ತು ಬೇರೆ ಬೇರೆ ಬಣ್ಣದ (ಕೆಂಪು, ಹಳದಿ, ಹಸಿರು) ಕಲೆಗಳಾಗಿರುತ್ತವೆ ಇಂಥ ಹಣ್ಣುಗಳನ್ನು ಬಳಸಬೇಡಿ.

* ಕಾಲವಲ್ಲದ ಕಾಲದಲ್ಲಿ ಹಣ್ಣುಗಳನ್ನು ಸೇವಿಸಬಾರದು. ಅದರಲ್ಲೂ ಸೀಸನ್ ಮುನ್ನ ಸಮಯದಲ್ಲಿ ಹಣ್ಣನ್ನು ತಿನ್ನಬಾರದು ಮತ್ತು ಇವುಗಳನ್ನು ತಿನ್ನುವ ಮೊದಲು ನಲ್ಲಿಯ ನೀರಿನಲ್ಲಿ ಕೆಲವು ನಿಮಿಷಗಳ ಕಾಲ ಚೆನ್ನಾಗಿ ತೊಳೆಯಬೇಕು. ಉಪ್ಪು ಅರಿಶಿನ ನೀರಿನಲ್ಲೂ ತೊಳೆಯಬೇಕು

* ಯಾವುದೇ ಹಣ್ಣುಗಳು ಪೂರ್ಣವಾಗಿ ಬಣ್ಣ ಹೊಂದಿರುವುದಿಲ್ಲ. ಹಾಗಿದ್ದರೆ, ಅವು ರಾಸಾಯನಿಕ ಬಳಸಿ ಹಣ್ಣು ಮಾಡಿರುವ ಸಾಧ್ಯತೆಗಳಿರುತ್ತವೆ. ಆದ್ದರಿಂದ, ಸ್ವಾಭಾವಿಕವಾಗಿ ಮಾಗುವ ಹಣ್ಣುಗಳನ್ನೇ ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT