ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿವೆ ಫಾರ್ಮ್ ಹೌಸ್

Last Updated 18 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ನಗರ ಪ್ರದೇಶದ ಶ್ರೀಮಂತ, ಮಧ್ಯಮ ವರ್ಗದ ಜನತೆಗೆ ವಾರಪೂರ್ತಿ ಕಚೇರಿ, ಕೆಲಸ, ಮನೆ ಎಂದು ದುಡಿದು ವಾರಾಂತ್ಯದಲ್ಲಿ ಜನಜಂಗುಳಿ­ಯಿಂದ ದೂರವಾದ, ಹಿತಕರವಾದ ವಾತಾವರಣ­ದಲ್ಲಿ ಹಸಿರಿನ ಮಧ್ಯೆ ಒಂದು ದಿನ ಪೂರ್ತಿ ಕಳೆಯ­ಬೇಕು ಎಂದು ಮನಸ್ಸು ಹಾತೊರೆಯು­ತ್ತಿರುತ್ತದೆ. ಪ್ರತಿವಾರ ಪ್ರವಾಸ, ಟ್ರಿಪ್ ಎಂದು ಹೋಗಲು ಸಾಧ್ಯವೂ ಆಗುವುದಿಲ್ಲ. ನಗರದೊಳಗೇ ಸುತ್ತಾ­ಡೋಣ­­ವೆಂದರೆ ಅದೇ ವಾಹನ ದಟ್ಟಣೆ, ಜನಜಂಗುಳಿ, ಟ್ರಾಫಿಕ್ ಜಾಮ್‌ ಕಿರಿಕಿರಿ. ಇಂತಹ ಪರಿಸ್ಥಿತಿಯ ಮಧ್ಯೆ ಇಂದು ನಗರ ಪ್ರದೇಶದಿಂದ ಆಚೆಗೆ ೩೦ರಿಂದ -೪೦ ಕಿ.ಮೀ ದೂರದಲ್ಲಿ ತಲೆ ಎತ್ತುತ್ತಿವೆ ಫಾರ್ಮ್‌ಹೌಸ್‌ಗಳು.

ನಗರ ಪ್ರದೇಶದಿಂದ ಸ್ವಲ್ಪ ದೂರ ಹೋದಂತೆ ಇಂತಹ ಹತ್ತಾರು ಫಾರ್ಮ್‌ಹೌಸ್‌ಗಳನ್ನು ಕಾಣಬಹುದು. ನಗರಗಳಲ್ಲಿ ವಾಸಿಸುವ ಸ್ಥಿತಿವಂತರು ಹೊರವಲ­ಯಗಳಲ್ಲಿ ನಾಲ್ಕಾರು ಎಕರೆ ಜಮೀನು ಖರೀದಿಸಿ ತಮ್ಮ ಇಚ್ಛೆಯಂತೆ ಫಾರ್ಮ್‌ಹೌಸ್‌ಗಳನ್ನು ಕಟ್ಟಿಸಿಕೊ­ಳ್ಳುತ್ತಾರೆ. ಇಲ್ಲಿ ತೆಂಗಿನ ಮರಗಳು, ವಿವಿಧ ತರಕಾರಿಗಳು, ಹಣ್ಣಗಳು, ಕೆಲವರು ಧಾನ್ಯಗಳನ್ನೂ ಬೆಳೆಯುತ್ತಾರೆ. ಪ್ರಾಣಿ ಪಕ್ಷಿಗಳನ್ನೂ ಸಾಕಿ -ಸಲಹುತ್ತಾರೆ.

ಬೆಂಗಳೂರಿನ ಕೃಷ್ಣಮೂರ್ತಿ, ಶೋಭಾ ದಂಪತಿ ಬೆಂಗಳೂರಿನ ಹೊರವಲಯದಲ್ಲಿ ಎರಡು ಎಕರೆ ಜಾಗ ಖರೀದಿಸಿದರು. ಅದರಲ್ಲಿ ಒಂದು ಸುಂದರ­ವಾದ ಮನೆಯನ್ನೂ ನಿರ್ಮಿಸಿದರು. ಹೂದೋಟ, ತರಕಾರಿ, ಹಣ್ಣಿನ ಗಿಡಗಳು, ಜತೆಗೆ ನಾಯಿಗಳನ್ನೂ ಸಾಕತೊಡಗಿದರು. ಇದೆಲ್ಲದರ ಉಸ್ತುವಾರಿಯನ್ನು ನೋಡಿಕೊಳ್ಳಲು ಕೆಲಸಗಾರನ್ನು ನೇಮಿಸಿಕೊಂಡರು. ವಾರಾಂತ್ಯ ಮತ್ತು ರಜಾದಿನಗಳನ್ನು ಕೃಷ್ಣಮೂರ್ತಿ ದಂಪತಿ ಈ  ಫಾರ್ಮ್‌ಹೌಸ್‌ನಲ್ಲಿಯೇ ಕಳೆಯುತ್ತಾರೆ.

‘ರಜೆ ಬಂತೆಂದರೆ ನಾವೆಲ್ಲಾ ಕುಟುಂಬ ಸಮೇತ ಫಾರ್ಮ್‌ಹೌಸ್‌ಗೆ ಹೋಗಿ ಬಿಡ್ತೀವಿ. ಅಲ್ಲಿನ ಪ್ರಶಾಂತ ವಾತಾವರಣ, ಪರಿಸರ ತುಂಬಾ ಖುಷಿ ಕೊಡುತ್ತದೆ. ನಮ್ಮ ತೋಟದಲ್ಲಿ ಹಣ್ಣು, ತರಕಾರಿ ಬೆಳೆಯುವುದರಿಂದ ಮನೆ ಉಪಯೋಗಕ್ಕೂ ಆಗುತ್ತದೆ. ಇವೆಲ್ಲವನ್ನೂ ನೋಡಿಕೊಳ್ಳಲು ಕೆಲಸದವರೂ ಇದ್ದಾರೆ. ನಾಯಿ, ಬೆಕ್ಕು, ಪಕ್ಷಿ ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳನ್ನೂ ಸಾಕಿದ್ದೇವೆ’ ಎನ್ನುತ್ತಾರೆ ತೆರಿಗೆ ಇಲಾಖೆ ಉದ್ಯೋಗಿಯಾದ ಕೃಷ್ಣಮೂರ್ತಿ.

ನಗರದಲ್ಲಿ ದೊಡ್ಡ ಬಂಗಲೆಗಳೇ ಇದ್ದರೂ, ಸಿರಿವಂತರೂ   ಫಾರ್ಮ್‌ಹೌಸ್‌ ಬದುಕು ಇಷ್ಟಪಡುತ್ತಿದ್ದಾರೆ. ಇಂತಹವರು  ನಗರದಿಂದ ತುಸು ದೂರದಲ್ಲಿ ಭೂಮಿ ಖರೀದಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಒತ್ತಡದ ಬದುಕು, ಯಾಂತ್ರಿಕ ಜೀವನಶೈಲಿಯಿಂದ ಸ್ವಲ್ಪ ಕಾಲವಾದರೂ ಬಿಡುಗಡೆ ಪಡೆಯಲು, ಹಸಿರಿನ ಮಧ್ಯೆ ಇದ್ದು ತುಸು ರಿಲ್ಯಾಕ್ಸ್ ಆಗಲು ಫಾರ್ಮ್‌ಹೌಸ್‌ಗಳು ಇವರೆಲ್ಲರಿಗೂ ನೆರವಾಗುತ್ತಿವೆ.

ಕೃಷಿಯಲ್ಲಿ ಆಸಕ್ತಿ ಇರುವವರೂ ಸಹ ನಿವೃತ್ತಿ ನಂತರ ನಗರದಂಚಿನಲ್ಲಿ ಜಮೀನು ಖರೀದಿಸಿ  ಫಾರ್ಮ್‌ಹೌಸ್‌ ನಿರ್ಮಿಸಿಕೊಳ್ಳುವ ಪರಿಪಾಟ ಹೆಚ್ಚುತ್ತಿದೆ.ಹಾಗಾಗಿಯೇ ವಾಸ್ತವ್ಯಕ್ಕೆ ನಗರದಲ್ಲಿ ಸೈಟು, ಮನೆ ಇದ್ದರೂ, ಹೆಚ್ಚುವರಿ ಹಣ ಇದ್ದಲ್ಲಿ ಹೊರವಲಯದಲ್ಲಿ ಜಮೀನು ಖರೀದಿಸಲು ಜನರು ಆಸಕ್ತಿ ತೋರಿಸುತ್ತಿದ್ದಾರೆ.

ಫಾರ್ಮ್‌ಹೌಸ್‌ನಿಂದ ಮನಸ್ಸಿಗೆ ಸಂತೋಷ, ಮನೆಗೆ ಬೇಕಾದ ಕೃಷಿ ಉತ್ಪನ್ನಗಳು ಸಿಗುತ್ತವೆ. ಹೀಗಾಗಿ ಇಂದು ನಗರ ಪ್ರದೇಶಗಳ ಸುತ್ತಮುತ್ತಲ ಜಮೀನುಗಳಿಗೆ ಭಾರೀ ಬೇಡಿಕೆ ಇದೆ. ಹಾಗೆಂದು ಜಮೀನು ಬಹಳ ದೂರವಿದ್ದರೂ ಖರೀದಿಸಲು ಇಚ್ಛಿಸುತ್ತಾರೆ ಎನ್ನುವಂತಿಲ್ಲ. ಪ್ರಯಾಣಕ್ಕೇ ಹೆಚ್ಚು ಹೊತ್ತು ವಿನಿಯೋಗವಾಗಬಾರದು, ಸಿಟಿಯಿಂದ ಹೆಚ್ಚೆಂದರೆ ಎರಡು ಗಂಟೆ ಪ್ರಯಾಣದ ಹಾದಿಯಾಗಿರಬೇಕು ಎಂಬುದು ಫಾರ್ಮ್‌ಹೌಸ್‌ ಪ್ರಿಯರ ಅಭಿಮತ.

ಇನ್ನೊಂದೆಡೆ, ವಾರಾಂತ್ಯ ಹೊರತುಪಡಿಸಿ ನಾಲ್ಕೈದು ದಿನಗಳ ಕಾಲ ಖಾಲಿಯೇ ಇರುವ ಕೆಲವು ಫಾರ್ಮ್‌ಹೌಸ್‌ಗಳು ವಿರಾಮದ ಸಮಯದಲ್ಲಿ ತಂಗಲು ಇಚ್ಛಿಸುವವರಿಗೆ ಬಾಡಿಗೆಗೆ ಸಿಗುತ್ತವೆ. ಜನರ ಆಸಕ್ತಿಯನ್ನು ಅರಿತು ಅನೇಕ ಕಂಪೆನಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಫಾರ್ಮ್‌ಹೌಸ್‌ ನಿರ್ಮಿಸಿ ಬಾಡಿಗೆ ಕೊಡುವ ಪ್ರಯತ್ನ ನಡೆಸುತ್ತಿದ್ದಾರೆ.ಸ್ವಂತವಾಗಿ ಫಾರ್ಮ್‌ಹೌಸ್‌ ಖರೀದಿಸುವುದು ಸಾಧ್ಯವಾಗದವರಿಗೆ ಇಂತಹ ಬಾಡಿಗೆ ಸೌಲಭ್ಯ ನೆರವಿಗೆ ಬರುತ್ತಿದೆ. ಬಾಡಿಗೆಗೆ ಇಂದು ಹೋಮ್‌ಸ್ಟೇ, ರೆಸಾರ್ಟ್, ಫಾರ್ಮ್‌ಹೌಸ್‌ಗಳು ಸಿಗುತ್ತಿವೆ.

ಆಯ್ಕೆ ವಿಧಾನ
ಫಾರ್ಮ್‌ಹೌಸ್‌ ಖರೀದಿಸುವಾಗ ಮುಖ್ಯವಾಗಿ ಸುರಕ್ಷತೆ ವಿಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಜನಸಂಚಾರದಿಂದ, ಮುಖ್ಯ ರಸ್ತೆಯಿಂದ ದೂರವಿರುವ, ನಿರ್ಜನ ಪ್ರದೇಶದಲ್ಲಿರಲು ಯಾರೂ ಬಯಸುವುದಿಲ್ಲ. ಹಾಗಾಗಿಯೇ ರಸ್ತೆಯ ಬದಿಯಲ್ಲಿರುವ ಕೃಷಿ ಭೂಮಿಗೆ ಹೆಚ್ಚಿನ ಬೇಡಿಕೆ ಇದೆ. ಜತೆಗೆ, ಫಾರ್ಮ್‌ಹೌಸ್  ನಿರ್ಮಿಸಿಕೊಂಡಲ್ಲಿ ಸಮೀಪದಲ್ಲೇ ದೂರವಾಣಿ, ಮೊಬೈಲ್, ಇಂಟರ್ನೆಟ್ ಸೌಲಭ್ಯ ದೊರೆಯುವಂತೆ ಮೊಬೈಲ್‌ ಟವರ್‌ ಇರಬೇಕು ಎಂಬುದು ಹಲವರ ಬಯಕೆ.

ಕೋಟಿ ಲೆಕ್ಕದ ಹೂಡಿಕೆ
ನಗರಗಳ ಸುತ್ತಮುತ್ತ ಎಕರೆಗಟ್ಟಲೆ ಜಮೀನು ಖರೀದಿಸಬೇಕೆಂದರೆ ಕೋಟಿಗಟ್ಟಲೆ ಹಣದ ಅವಶ್ಯಕತೆ ಇರುತ್ತದೆ. ಜಮೀನು ಖರೀದಿಗೂ ಮುನ್ನ ಆಸ್ತಿಗೆ ಸಂಬಂಧಿಸಿದಂತೆ ಯಾವುದಾದರೂ ಕಾನೂನು ತೊಡಕು, ದಾವೆ ಇದೆಯೇ ಎಂಬುದನ್ನು ಪರೀಕ್ಷಿಸಿಯೇ ಮುಂದುವರಿಯಬೇಕಾಗುತ್ತದೆ.  ನೀರಿನ ಲಭ್ಯತೆ ಹೇಗಿದೆ ಎಂಬುದನ್ನೂ ಪರಿಶೀಲಿಸಬೇಕಿದೆ.

ರಸ್ತೆಗೆ ಎಷ್ಟು ಹತ್ತಿರವಾಗಿದೆ? ಫಾರ್ಮ್‌ಹೌಸ್‌ ಕಟ್ಟಿದರೆ ನೇರವಾಗಿ ಹೋಗಲು ಮಾರ್ಗವಿದೆಯೇ? ಎಂಬ ಅಂಶಗಳನ್ನೂ ಪರಿಶೀಲಿಸಬೇಕಿದೆ. ಜಮೀನು ಖರೀದಿಸಿದ ಬಳಿಕ ಅದರಲ್ಲಿ ಸುಂದರವಾದ ಮನೆ, ತೋಟಗಳನ್ನು ನಿರ್ಮಿಸಿ ಅದರ ಉಸ್ತುವಾರಿ ನೋಡಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯ. ಇದಕ್ಕೂ ಸಾಕಷ್ಟು ಬಂಡವಾಳ ಮುಖ್ಯ. ಆದರೂ ಸಣ್ಣದೊಂದು ಮನೆ, ಸುಂದರವಾದ ಸ್ವಂತ ತೋಟ ಬೇಕೆಂದು ಅನಿಸಿದವರಿಗೆ ಫಾರ್ಮ್‌ಹೌಸ್ ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT