ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣಿನ ಕಡುದುಃಖದ ಮೊತ್ತ

Last Updated 13 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಪೀಠಾಧಿಪತಿಯ ಪತ್ನಿ
ಲೇ: ತೆಹಮಿನಾ ದುರ್ರಾನಿ
ಕನ್ನಡಕ್ಕೆ: ರಾಹು (ಆರ್‌.ಕೆ. ಹುಡುಗಿ)
ಪು: 370 ; ಬೆ: ರೂ. 350
ಪ್ರ: ಸೃಷ್ಟಿ ಪಬ್ಲಿಕೇಷನ್ಸ್‌,
ನಂ. 121, 13ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ವಿಜಯನಗರ,ಬೆಂಗಳೂರು- 560 040

ಪಾಳೇಗಾರಿ ರಾಜಕಾರಣಿಯ ಕ್ರೌರ್ಯದ ಹಿಡಿತದಲ್ಲಿ ನರಳಿ ಅದರಿಂದ ಹೊರ ಬಂದು ಬರೆದ ತೆಹಮಿನಾ ದುರ್ರಾನಿ ಅವರ ಆತ್ಮಕಥೆ ‘ಆರನೇ ಹೆಂಡತಿಯ ಆತ್ಮಕಥೆ’  ಓದುಗರಲ್ಲಿ ವಿಚಿತ್ರ ತಳಮಳ, ತಲ್ಲಣಗಳ ಕಂಪನವನ್ನು ಹುಟ್ಟಿಸಿತ್ತು. ತೆಹಮಿನಾ ದುರ್ರಾನಿ ಬರೆದ ಆತ್ಮಕಥೆ ಪಾಕಿಸ್ತಾನದ ಮುಸ್ಲಿಂ ಜಗತ್ತಿನ ಅಮಾನವೀಯ ಜಗತ್ತನ್ನು, ಹೆಣ್ಣನ್ನು ಗುಲಾಮಳಂತೆ, ತೊತ್ತಿನ ಜೀವಿಯಂತೆ ಕಾಣುವ ಆ ಅಧೋಲೋಕವನ್ನು ತೆರೆದಿಟ್ಟಿತ್ತು. ಇದೀಗ ಅದಕ್ಕಿಂತ ಭೀಕರ ನರಕವನ್ನು ಕಾಣಿಸುವ ತೆಹಮಿನಾ ದುರ್ರಾನಿ ಬರೆದಿರುವ ಕಾದಂಬರಿಯನ್ನು ಅವರ ಆತ್ಮಕಥೆಯನ್ನು ಅನುವಾದಿಸಿದ ಲೇಖಕ ರಾಹು (ಆರ್‌.ಕೆ. ಹುಡುಗಿ) ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ.

ಪಾಕಿಸ್ತಾನದ ಸೂಫಿ ಪರಂಪರೆಯಲ್ಲಿ ಬರುವ ಸಂತನೊಬ್ಬನ ಪೀಠದ ಧರ್ಮಗುರುವಿನ ಹೆಂಡತಿಯ ಕಥೆಯನ್ನು ಈ ಕಾದಂಬರಿ ಹೇಳುತ್ತದೆ. ಆ ಧರ್ಮಗುರುವಿನ ಹೆಂಡತಿ ಪಡುವ ಪಾಡು ಮಾತ್ರವಲ್ಲದೇ ಅನೇಕ ಹೆಣ್ಣುಮಕ್ಕಳ ದುರಂತದ ಕಥೆಯನ್ನು ಇದು ನಿರೂಪಿಸುತ್ತದೆ. ಎಣೆಯಿಲ್ಲದ ಅಮಾನವೀಯತೆ, ಕ್ರೌರ್ಯ ಈ ಕಾದಂಬರಿಯುದ್ದಕ್ಕೂ ಅಲ್ಲಿ ಬರುವ ಹೆಣ್ಣುಮಕ್ಕಳ ಮೇಲೆ ದಾಳಿ ಮಾಡುತ್ತಿರುತ್ತದೆ. ಪೀಠಾಧಿಪತಿ ಕಟ್ಟಿಕೊಂಡ ಕೋಟೆಯ ಒಳಕ್ಕೆ ಬರುವ ಹೆಣ್ಣುಮಕ್ಕಳು ಮೊದಲಿಗೆ ಕಳೆದುಕೊಳ್ಳುವುದು ತಮ್ಮ ದನಿಯನ್ನು ಅಷ್ಟೇ ಅಲ್ಲ, ತಮ್ಮ ಸ್ವಾತಂತ್ರ್ಯವನ್ನೂ ಕೂಡ. ಧಾರ್ಮಿಕ ಶಾಂತಿಯನ್ನು ಬೋಧಿಸಬೇಕಾದ ಪೀಠಾಧಿಪತಿಯೇ ಭಯದ ವಾತಾವರಣದಲ್ಲಿ ಅವರು ನರಳುವಂತೆ ಮಾಡುತ್ತಾನೆ. ಇಲ್ಲಿ ಧರ್ಮ ಮಾತ್ರವಿಲ್ಲ, ಈ ಶಕ್ತಿಕೇಂದ್ರಗಳ ಮೂಲಕ ನಡೆದ ಅಧಿಕಾರದ ರಾಜಕಾರಣವೂ ಇದೆ. ಗಂಡು ಹೆಣ್ಣನ್ನು ತನ್ನ ಅಧಿಕಾರಕ್ಕೆ ಒಳಪಟ್ಟಿರುವ, ಅನುಭವಿಸುವ ಆಸ್ತಿಯನ್ನಾಗಿಸಿಕೊಂಡದ್ದರ ಆದಿಮ ರೂಪ ಇದು.

ತೆಹಮಿನಾ ದುರ್ರಾನಿ ಇಲ್ಲಿ ಏಕಕಾಲಕ್ಕೆ ಧರ್ಮದ, ಅದರಲ್ಲಿ ಅಂತರ್ಗತವಾಗಿರುವ ಕ್ರೌರ್ಯದ, ರಾಜಕಾರಣದ, ಜೊತೆಗೆ ಪಾಕಿಸ್ತಾನದ ಹೆಣ್ಣಿನ ಅಸಹಾಯಕತೆಯ, ಸಂಕಟದ ಕಥೆಯನ್ನೂ ಹೇಳುತ್ತಾರೆ. ಇದು ಕಲ್ಪಿತ ಕಥನವಾಗಿರಲು ಸಾಧ್ಯವಿಲ್ಲ. ಮನುಷ್ಯನ ಕಲ್ಪನೆ ವಾಸ್ತವವನ್ನು ಆಧರಿಸಿಯೇ ಬೆಳೆಯುವುದರಿಂದ ಇದು ಪಾಕಿಸ್ತಾನದ ಅನೇಕ ಹೆಣ್ಣುಮಕ್ಕಳ ನಿಜ ಕಥೆಯಾಗಿರುವುದು ಸಾಧ್ಯ. ಅದಕ್ಕೂ ಮುಖ್ಯವಾಗಿ ಇದನ್ನು ಬರೆಯುವ ಧೈರ್ಯ, ಅಲ್ಲಿನ ವಾಸ್ತವವನ್ನು ಕಥನವೊಂದರಲ್ಲಿ ಬಿಂಬಿಸುವ ಕಲೆಗಾರಿಕೆ ಅಪರೂಪದ ಸಂಗತಿಯೇ. ಅದರಲ್ಲೂ ಪಾಕಿಸ್ತಾನದ ಸಂದರ್ಭದಲ್ಲಿ ಲೇಖಕಿಯಾಗಿ ಹೆಣ್ಣಿನ ಕಡುಸಂಕಟವನ್ನು ಚಿತ್ರಿಸುವಲ್ಲಿ ತೆಹಮಿನಾ ತಳೆದಿರುವ ದಿಟ್ಟ ನಿಲುವು ಮೆಚ್ಚುಗೆಗೆ ಪಾತ್ರವಾಗುವುದು ಮಾತ್ರವಲ್ಲ, ಅಭಿಮಾನಕ್ಕೆ ಅರ್ಹವೂ ಆಗಿದೆ.

ಹಾಗೆನೋಡಿದರೆ ಇಲ್ಲಿ ಒಂದೇ ಕಥೆ ಎನ್ನುವುದು ಇಲ್ಲ. ಹಲವಾರು ಕಥೆಗಳ ಮೊತ್ತ ಇಲ್ಲಿದೆ. ಧರ್ಮಗುರು ಪೀರ ಸಾಯಿಯ ಮೂರನೆ ಹೆಂಡತಿಯಾಗುವ ಸುಂದರಿ ಹೀರ್‌ಳ ಕಥೆ ಒಂದೆಡೆ ಇದ್ದರೆ ಇಂಥ ಹಲವು ಹೀರ್‌ಗಳ ಕಥೆಗಳ ಬೇರೆಬೇರೆ ಆವೃತ್ತಿಗಳು ಉದ್ದಕ್ಕೂ ಮರುಕಳಿಸುತ್ತಿರುತ್ತವೆ. ಬಲತ್ಕಾರ, ಭಯ ಎಂಬುದು ಪೀರ್ ಸಾಯಿಯ ರೂಪದಲ್ಲಿ ಇಲ್ಲೆಲ್ಲೋ ಬೇಟೆಯಾಡಲು ಹೊಂಚು ಹಾಕಿ ಕೂತಿದೆ ಎಂದು ಭಾಸವಾಗುವಂತೆ ಈ ಕಥೆಯ ಆವರಣ ಇದೆ. ಹಿಂಸೆಯನ್ನು ಮನುಷ್ಯ ಎಷ್ಟು ತಾಳಿಕೊಳ್ಳಬಹುದು... ಆದರೆ, ಇಷ್ಟನ್ನು ಮಾತ್ರ ಅಲ್ಲ ಎನ್ನಿಸುವಂತೆ ಅದರ ಹಲವು ರೂಪಗಳು ಈ ಕಾದಂಬರಿಯ ಪ್ರತಿ ಪುಟದಲ್ಲಿ ತುಂಬಿವೆ. ಹಿಂಸೆ ಸ್ಥಾವರವಷ್ಟೇ ಅಲ್ಲ, ಇಲ್ಲಿನ ಜಂಗಮ ಭಾವ. ಇಲ್ಲಿ ಕಾಮ, ಧರ್ಮ, ಸುಖ, ಸಂಕಟ, ಹೊರಬರದ ಆರ್ತನಾದಗಳು ಇವೆಲ್ಲವೂ ಓದುವಾಗಲೇ ಅಸಹನೀಯ ಹಾಗೂ ಅಸಹ್ಯ ಪಡುವಷ್ಟು, ತುಂಬಿತುಳುಕುತ್ತವೆ. ಅವುಗಳನ್ನು ಅತಿಗೆ ಅಥವಾ ತುದಿಗೆ ಲೇಖಕಿ ತೆಗೆದುಕೊಂಡು ಹೋಗಿದ್ದಾರೆ.

ಈ ಕಾದಂಬರಿಯಯನ್ನು ಅದೊಂದು ಲಲಿತಕಲೆ ಎಂಬ ದೃಷ್ಟಿಯಿಂದ ನೋಡಬೇಕೆ ಅಥವಾ ಪಾಕಿಸ್ತಾನದ ವಾಸ್ತವದ ಪ್ರತಿಬಿಂಬವನ್ನಾಗಿ ನೋಡಬೇಕೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಅಲ್ಲಿನ ಕೆಲವು ಹೆಣ್ಣುಮಕ್ಕಳ ಬದುಕೆಂದರೆ ಇಷ್ಟು ಮಾತ್ರದ್ದೇ ಎಂಬ ಪ್ರಶ್ನೆಯೂ ಇಲ್ಲಿದೆ. ಜೊತೆಗೆ ಇಂಥ ದಾರುಣ ನೋವುಗಳಿಗೆ ಕೊನೆಯೇ ಇಲ್ಲವೆ, ಪ್ರೀತಿ, ಕರುಣೆ, ದಯೆಗಳಿಗೆ ಇಲ್ಲಿ ಜಾಗವೇ ಇಲ್ಲವೆ ಎಂಬುದನ್ನು ಇದು ಕೇಳಿಕೊಳ್ಳುವಂತೆ ಮಾಡುತ್ತದೆ. ಇಂಥ ಅನೇಕ ಪ್ರಶ್ನೆಗಳನ್ನು ನಾವೇ ಹಾಕಿಕೊಳ್ಳಲು ಈ ಕಾದಂಬರಿ ಎಡೆ ಮಾಡಿಕೊಡುತ್ತದೆ ಎಂಬುದೇ ಅದರ ಮಹತ್ತನ್ನು ಸೂಚಿಸುವಂತಿದೆ.

ಧರ್ಮ ಒಂದು ಬಂಧನ, ಸಂಕೋಲೆಯಾಗಬಹುದು, ಉಸಿರುಗಟ್ಟಿಸಬಹುದು, ಹೆಣ್ಣಿನ ದನಿಯನ್ನು ದಮನಗೊಳಿಸಬಲ್ಲದು ಎಂಬುದಕ್ಕೆ ಈ ಕೃತಿಯೇ ಉದಾಹರಣೆಯಾಗಿದೆ. ಅದರಿಂದ ಹೊರಜಗತ್ತಿಗೆ ಬರುವ ದಾರಿಯಾಗಲಿ, ಬಾಗಿಲಾಗಲಿ, ಕೊನೆಯ ಪಕ್ಷ ಒಂದು ಸಣ್ಣ ಬೆಳಕಿನ ಕಿಂಡಿಯಾಗಲಿ ಎಲ್ಲೂ ಕಾಣಿಸುವುದಿಲ್ಲ. ಹೆಣ್ಣುಮಕ್ಕಳ ಮೇಲಿನ ಈ ಹಿಂಸೆ, ನೋವುಗಳು ನಿರಂತರವಾಗಿ ಮುಂದಿನ ತಲೆಮಾರಿಗೂ ದಾಟುತ್ತ, ಪೀಠಾಧಿಪತಿಯ ಪುರುಷ ಪ್ರಕೃತಿಗಳು ಸೃಷ್ಟಿಗೊಳ್ಳುತ್ತ, ತನ್ನ ಧರ್ಮದ ಕೋಟೆಯೊಳಗೆ ಗಟ್ಟಿಯಾಗುತ್ತಲೇ ಇರುತ್ತದೆ ಎಂಬ ದನಿಯನ್ನು ಈ ಕಾದಂಬರಿ ಧ್ವನಿಸುವಂತಿದೆ.

ಧರ್ಮದ ಕ್ರೂರ ಮುಖ, ಹೆಣ್ಣಿನ ಮೇಲಿನ ದಬ್ಬಾಳಿಕೆಯ ಅನೇಕ ಕಾದಂಬರಿಗಳು ಬಂದಿದ್ದರೂ ತೆಹಮಿನಾರ ಈ ಕಾದಂಬರಿ ಪಾಳೇಗಾರಿ ಮನೋಭಾವದ ಗಂಡಸಿನ, ಅವನು ಮಾಡಿಕೊಂಡ ವ್ಯವಸ್ಥೆಯ ಹೊಸತೊಂದೇ ದಟ್ಟಜಗತ್ತನ್ನು ಸೃಷ್ಟಿಸಿದೆ. ಕನ್ನಡಕ್ಕಂತೂ ಇದು ಅಪರೂಪದ ಅನುವಾದವೆಂದೇ ಹೇಳಬೇಕು. ಕಾದಂಬರಿ, ಸಣ್ಣಪುಟ್ಟದ್ದಕ್ಕೆ ಪುರುಷರ ವಿರುದ್ಧ ಕೂಗಾಡುವ, ಖಂಡಿಸುವ ನಮ್ಮ ಸ್ತ್ರೀವಾದಿ ವಿಮರ್ಶಕರ ಕಣ್ಣುತೆರೆಸುವಂತಿದ್ದರೆ, ಸಂವೇದನೆಯ ದೃಷ್ಟಿಯಿಂದ ನಮ್ಮ ಸ್ಥಗಿತಗೊಂಡ ಚೇತನವನ್ನು ಸಜೀವಗೊಳಿಸಬಲ್ಲದು. ಹೆಣ್ಣೊಬ್ಬಳ ಆತ್ಮನಿವೇದನೆಯ ಧಾಟಿಯಲ್ಲಿರುವ ಇಲ್ಲಿನ ಕಥನ ಒಟ್ಟಾಗಿ ಪುರುಷ ವ್ಯವಸ್ಥೆಯ ವಿರುದ್ಧ ಹೆಣ್ಣುಮಕ್ಕಳು ಎಚ್ಚರಗೊಂಡು ಪ್ರತಿಭಟಿಸಲು ಸಜ್ಜಾಗುವಂತೆ, ಸೆಟೆದು ನಿಲ್ಲುವಂತೆ ಮಾಡುತ್ತದೆ. ಕಾದಂಬರಿಯ ನಾಯಕಿ ಹೀರ್‌ಳ ದೈಹಿಕವಾಗಿ, ಮಾನಸಿಕವಾಗಿ ಒಡೆದು ಚೂರಾದ ವ್ಯಕ್ತಿತ್ವದ ಎದುರು ಯಾವ ನೋವು ಸಂಕಟವೂ ದೊಡ್ಡದಲ್ಲ ಎನ್ನಿಸುತ್ತದೆ. ತೆಹಮಿನಾರ ಈ ಬರವಣಿಗೆಯ ಇನ್ನೊಂದು ಬಗೆಯ ಸಾರ್ಥಕತೆ ಇರುವುದು ನಮ್ಮ ಸ್ಥಾವರಗೊಂಡ ಪೀಠಾಧಿಪತಿಗಳನ್ನು ಪ್ರಶ್ನಿಸುವಂತೆ, ಅವರನ್ನು ಸದಾ ಅನುಮಾನದಿಂದ ನೋಡುವಂತೆ ಪ್ರೇರೇಪಿಸುವಲ್ಲಿ.

ಕಾದಂಬರಿ ಇಷ್ಟು ಮಹತ್ವದ್ದೆನ್ನಿಸಲು ಅದರ ಲೇಖಕಿ ತೆಹಮಿನಾರ ಬರವಣಿಗೆ ಮಾತವಲ್ಲ, ರಾಹು ಅವರ ಅನನ್ಯ ಅನುವಾದವೂ ಕಾರಣ. ಬೇರೆ ದೇಶ, ಹಿನ್ನೆಲೆಯ ಕಡುದುಃಖವನ್ನು ಕನ್ನಡ ಭಾಷೆಯ ವಾತಾವರಣದಲ್ಲಿ, ವಾಕ್ಯರಚನೆಯಲ್ಲಿ ಹಿಡಿದಿಡುವುದು ಸುಲಭದ ಸಂಗತಿಯಲ್ಲ. ಅಂಥ ಕಷ್ಟದ ದಾರಿಯನ್ನು ತುಳಿದೂ ಆ ಅನುಭವದ ಮೊತ್ತ ಓದುಗರಿಗೆ ದಕ್ಕುವಂತೆ ಅವರು ಮಾಡಿದ್ದಾರೆ. ಇದು ತೆಹಮಿನಾರ ಕಾದಂಬರಿ ಅಷ್ಟೇ ಅಲ್ಲ, ರಾಹು ಅವರ ಕನ್ನಡದ ಕಾದಂಬರಿಯೂ ಹೌದು ಎಂಬುದು ಈ ಕೃತಿಗೆ ಸಂಬಂಧಿಸಿದಂತೆ ಅವರ ಅನುವಾದದ ಸಮೀಪದ ವರ್ಣನೆಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT