ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣಿನ ಘನತೆ, ಸರ್ಕಾರಕ್ಕೆ ಗೌರವವೇ ಇಲ್ಲ

ಡಿ.ಕೆ.ರವಿ ಸಾವಿನ ಪ್ರಕರಣ: ಸುಧೀರ್‌ರೆಡ್ಡಿ ಪರ ವಕೀಲ ಸಜನ್‌ ಪೂವಯ್ಯ ವಾದ ಮಂಡನೆ
Last Updated 7 ಏಪ್ರಿಲ್ 2015, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರೊಂದಿಗೆ  ನನ್ನ ಕಕ್ಷಿದಾರರ ಪತ್ನಿ  ಹೊಂದಿದ್ದ ಸಂಬಂಧ ಆತ್ಮೀಯವಾಗಿತ್ತೇ,  ಸಹಜವಾಗಿತ್ತೇ ಅಥವಾ ಇವನ್ನೆಲ್ಲಾ ಮೀರಿದ ಇನ್ನೇನಾದರೂ ಸಂಬಂಧ ಬೆಳೆಸಬೇಕು ಎಂದುಕೊಂಡ ಇರಾದೆ  ಹೊಂದಿತ್ತೇ ಎಂಬುದನ್ನೆಲ್ಲಾ ಕಟ್ಟಿಕೊಂಡು ಈ ಸರ್ಕಾರಕ್ಕೆ ಏನಾಗಬೇಕು? ಅಷ್ಟಕ್ಕೂ ತಾವು ಬಯಸಿದ ಸಂಬಂಧ ಹೊಂದಲು ಅವರು ಪ್ರಬುದ್ಧರಿದ್ದಾರೆ’.

ಐಎಎಸ್‌ ಅಧಿಕಾರಿ ರೋಹಿಣಿ ಅವರ ಪತಿ ಸುಧೀರ್‌ ರೆಡ್ಡಿ ಪರ ಹಿರಿಯ ವಕೀಲರಾದ ಸಜನ್‌ ಪೂವಯ್ಯ ಅವರು ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ಅವರಿದ್ದ ಏಕಸದಸ್ಯ ಪೀಠಕ್ಕೆ ಒಂದರ ಮೇಲೊಂದರಂತೆ ಎಸೆದ ಕಾನೂನಿನ ಬಾಣಗಳಿವು.

ಮಂಗಳವಾರ ತಮ್ಮ ವಾದ ಮಂಡಿಸಿದ ಪೂವಯ್ಯ, ‘ಸರ್ಕಾರ ರವಿ ಸಾವಿನ ಪ್ರಕರಣದಲ್ಲಿ  ಪ್ರದರ್ಶಿಸುತ್ತಿರುವ ನೈತಿಕ ವರ್ತನೆ  ಅತ್ಯಂತ ಆಕ್ಷೇಪಾರ್ಹ’ ಎಂದು ಆತಂಕ ವ್ಯಕ್ತಪಡಿಸಿದರು. 

‘ರವಿ ಜೊತೆ ನನ್ನ ಕಕ್ಷಿದಾರರ ಪತ್ನಿ ಹಣಕಾಸಿನ ವ್ಯವಹಾರ ಹೊಂದಿದ್ದರು. ಪ್ರೀತಿಪೂರ್ವಕ ಸ್ನೇಹದಿಂದ ಇದ್ದರು ಎಂದೆಲ್ಲಾ ಹೇಳಲಾಗಿದೆ. ಗೃಹ ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಇಂತಹ ಹೇಳಿಕೆಯಲ್ಲಿರುವ ಇಡೀ ಬರಹದ ಶೈಲಿಯೇ ಈ ಸರ್ಕಾರದ ನೈತಿಕ ಮನೋಧರ್ಮವನ್ನು ಪ್ರಶ್ನಿಸುವಂತಿದೆ. ಇದು ಅತ್ಯಂತ ಕಳವಳಕಾರಿ ವಿಚಾರ. ಈ ದೇಶದಲ್ಲಿ ಹೆಣ್ಣೊಬ್ಬಳ ಬಗೆಗಿನ ದೃಷ್ಟಿಕೋನ ಎಂತಹುದಿದೆ ಎಂಬುದು ಇದರಿಂದ ಅರ್ಥವಾಗುತ್ತದೆ. ವ್ಯಕ್ತಿಯೊಬ್ಬ ಯಾರೊಂದಿಗಾದರೂ ಹೊಂದಿರುವ ಸಂಬಂಧವನ್ನು ಅಳೆಯಲು ಇವರು ಯಾರು’ ಎಂದು ಪೂವಯ್ಯ ಖಾರವಾಗಿ ಪ್ರಶ್ನಿಸಿದರು.

‘ಇದು ನನ್ನ ಕಕ್ಷಿದಾರ ಮತ್ತು ಅವರ ಹೆಂಡತಿಗೆ ಸಂಬಂಧಪಟ್ಟ ವಿಚಾರ. ಸರ್ಕಾರಕ್ಕೆ ನಿಸ್ಸಂಶಯವಾಗಿಯೂ ಶಾಸನಸಭೆಯಲ್ಲಿ ಮಾತನಾಡುವ ಪರಮಾಧಿಕಾರ ಇದೆ. ಆದರೆ ಇಂತಹ ಅಧಿಕಾರ ಇದೆ ಎಂದಾಕ್ಷಣ ಕಕ್ಷಿದಾರರ ಪತ್ನಿಯ ಮೂಲಭೂತ ಹಕ್ಕಿಗೆ ಧಕ್ಕೆಯಾಗುವ ರೀತಿಯಲ್ಲಿ ಮಾತನಾಡುವ ತರದೂದು ತೋರಿರುವುದು ಸರ್ವಥಾ ಸರಿಯಲ್ಲ. ಈ ಪ್ರಕರಣದಲ್ಲಿ  ನ್ಯಾಯಾಲಯವು ನನ್ನ ಕಕ್ಷಿದಾರರು ಮತ್ತು ಅವರ ಕುಟುಂಬದ ವೈಯಕ್ತಿಕ ಹಕ್ಕುಗಳಿಗೆ ರಕ್ಷಣೆ ಕೊಡಲೇಬೇಕು. ಇಲ್ಲವಾದಲ್ಲಿ ನ್ಯಾಯಶಾಸ್ತ್ರಕ್ಕೆ ಅಪಚಾರ ಬಗೆದಂತೆ. ಕಕ್ಷಿದಾರರು ಒಂದು ಮಗುವಿನ ತಂದೆ ಮತ್ತು ಅವರ ಹೆಂಡತಿ ಉನ್ನತ ಅಧಿಕಾರದಲ್ಲಿದ್ದು ಗೌರವದ ಬದುಕು ನಡೆಸುತ್ತಿದ್ದಾರೆ. ಇವರೆಲ್ಲರ ಮರ್ಯಾದೆಯ ವಿಚಾರ ಇದರಲ್ಲಿ ಅಡಗಿದೆ.  ಕಾನೂನು ಪಾಲನೆಯ ಸಮಸ್ಯೆ ಅಥವಾ ವಿರೋಧ ಪಕ್ಷಗಳ ಬೊಬ್ಬೆ ಜಾಸ್ತಿಯಾಗಿದೆ ಎಂಬ  ಕಾರಣಕ್ಕಾಗಿ ನನ್ನ ಕಕ್ಷಿದಾರರ ಹೆಂಡತಿಯ ಮರ್ಯಾದೆಯನ್ನು ಸದನದಲ್ಲಿ ಹರಾಜುಗೊಳಿಸಲು ಹೊರಟಿರುವ ಸರ್ಕಾರದ ಹೆಜ್ಜೆ ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಸದನದಲ್ಲಿ ಸತ್ಯ ಹೇಳಲು ಹೊರಟಿದ್ದ ನನ್ನ ಕೈಕಟ್ಟಿ ಹಾಕಲಾಗಿದೆ’ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನಿಖಾ ಸಂಸ್ಥೆಯ ಅಂತಿಮ ನಿರ್ಧಾರಗಳಿಗೇ ಸವಾಲೆಸೆದಿದ್ದಾರೆ.  ಮಧ್ಯಾಂತರ ವರದಿಯೇ ಅಂತಿಮ ಎಂದು ಇವರು ಹೇಗೆ ನಿರ್ಧರಿಸುತ್ತಾರೆ?  ಇಡೀ ಪ್ರಕರಣದಲ್ಲಿ ಮುಖ್ಯಮಂತ್ರಿ, ಗೃಹಮಂತ್ರಿ, ಹಿರಿಯ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಎಲ್ಲರೂ ರವಿ ಸಾವನ್ನು ಆತ್ಮಹತ್ಯೆ ಎಂದೇ ಮತ್ತೆ ಮತ್ತೆ ಪ್ರತಿಪಾದಿಸುತ್ತಿದ್ದಾರೆ.  ಕ್ರಿಮಿನಲ್‌ ಪ್ರಕರಣವೊಂದು ತನಿಖೆಯ ಹಂತದಲ್ಲಿರುವಾಗ ಈ ರೀತಿ ಹೇಳುವುದು ಕಾನೂನು ಬಾಹಿರ’ ಎಂದು ಪೂವಯ್ಯ ಹೇಳಿದರು.

‘ಸಿಐಡಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಹೀಗೆಂದರೆ ಏನರ್ಥ? ರವಿ ಅವರು ರೋಹಿಣಿಯ ಮೊಬೈಲ್‌ಗೆ ಸಾಯುವ ಮುನ್ನ 44 ಬಾರಿ ಕರೆ ಮಾಡಿದ್ದರು ಎಂದು ಸಿದ್ದರಾಮಯ್ಯ  ಹೇಳಿರುವ ಸುಳ್ಳು ಸರಿಯೇ’ ಎಂದು ಪೂವಯ್ಯ ಪ್ರಶ್ನಿಸಿದರು.
‘ಈ ವಿಷಯದಲ್ಲಿ ಮಾಧ್ಯಮಗಳಂತೂ ಹದ್ದು ಮೀರಿ ವರ್ತಿಸುತ್ತಿವೆ. ನ್ಯಾಯಾಂಗದ ದೈನಂದಿನ ಕಲಾಪಗಳಲ್ಲಿ ಮೂಗು ತೂರಿಸುವ ಮೂಲಕ ಅಡ್ಡಿಪಡಿಸುತ್ತಿವೆ. ಇದು ಸಂಪೂರ್ಣ ನ್ಯಾಯಾಂಗ ನಿಂದನೆ’ ಎಂದು ಕಿಡಿ ಕಾರಿದರು.
*
ಎ.ಎಸ್‌.ಪೊನ್ನಣ್ಣ ನಿರಾಕರಣೆ
ಇದಕ್ಕೂ ಮುನ್ನ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ ಅವರು,  ‘ಈಗಾಗಲೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿದೆ. ಈ ವಿಷಯದಲ್ಲಿ ಸರ್ಕಾರ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಒದಗಿಸುವ ತುರ್ತು ಹೊಂದಿಲ್ಲ’ ಎಂದು ಸ್ಪಷ್ಟಪಡಿಸಿದರು.

ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ‘ಈ ವಿಷಯದಲ್ಲಿ ಈಗಾಗಲೇ ಸರ್ಕಾರ ಏನನ್ನೂ ಹೇಳಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತಿರುವಾಗ ಅರ್ಜಿದಾರರ ಪ್ರಾರ್ಥನೆ ಪರಿಗಣನೆಗೆ ಎಷ್ಟು ಸೂಕ್ತ’ ಎಂದು ಪ್ರಶ್ನಿಸಿದರು.  ‘ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನೆಲ್ಲಾ ಈಗಲೇ ತೀರ್ಮಾನಿಸಿ ಊಹಾಪೋಹದ ಮೇಲೆ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ’ ಎಂದರು.
ಹೇಳಿಕೆಗಳನ್ನು ಪರಿಸಮಾಪ್ತಿಗೊಳಿಸಲು ಎರಡೂ ಕಡೆಯ ವಕೀಲರಿಗೆ ಸೂಚಿಸಿದ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಗುರುವಾರಕ್ಕೆ (ಏ.9) ಮುಂದೂಡಿದರು.
*
ರವಿ ಮತ್ತು ರೋಹಿಣಿ  ನಡುವೆ ವಿನಿಮಯವಾಗಿರುವ ಎಸ್‌ಎಂಎಸ್, ಎಂಎಂಎಸ್‌, ವಾಟ್ಸ್‌ ಆ್ಯಪ್‌ ಸಂದೇಶಗಳಿಗೆ ಸರ್ಕಾರ ಬಣ್ಣ ಹಚ್ಚುತ್ತಿರುವುದು ಸಮರ್ಥನೀಯವೇ?
- ಸಜನ್‌ ಪೂವಯ್ಯ,
ಹಿರಿಯ ವಕೀಲ

*
ಮುಖ್ಯಾಂಶಗಳು
ಸರ್ಕಾರದ ವರ್ತನೆಗೆ ವಕೀಲರಿಂದ ತೀವ್ರ ಆಕ್ಷೇಪ
ಮುಖ್ಯಮಂತ್ರಿ ಹೇಳಿಕೆಯೇ ಸುಳ್ಳು ಎಂಬ ವಾದ ಮಂಡನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT