ಸ್ಫೂರ್ತಿ ಒಂದು ವಸ್ತುವಲ್ಲ. ಅದು ಸಬ್ಜೆಕ್ಟಿವ್ ಆಗಿರುವಂಥದ್ದು, ಅದೊಂದು ಮಾನಸಿಕ ರಾಸಾಯನಿಕ ಕ್ರಿಯೆ. ಅಂತೆಯೇ ಅದು ಖಾಸಗಿಯಾಗಿರುವಂಥದ್ದು. ಅದು ನಮ್ಮೊಳಗೆ ಹುಟ್ಟಿ ಸ್ಫುರಿಸುವಂಥದ್ದು. ಪ್ರತಿಯೊಬ್ಬ ಮನುಷ್ಯನ ಸ್ಫೂರ್ತಿಗೆ, ಚೈತನ್ಯಕ್ಕೆ ಚಿಮ್ಮುವ ಸಾಧ್ಯತೆ ಖಂಡಿತ ಇದೆ. ಆದರದು ಹೊರಗೆ ಬರಲು ಒಂದು ವಾತಾವರಣ ಬೇಕು.

ಸಾಮಾನ್ಯವಾಗಿ ಮಹಿಳೆಯರಿಗೆ ಅವರ ಸ್ಫೂರ್ತಿ ಅರಳಲು ಪೂರಕವಾದಂತಹ ವಾತಾವರಣ ಮನೆಗಳಲ್ಲಿ ಸಿಗುವುದು ಸ್ವಲ್ಪ ಕಷ್ಟವೇ. ಈ ಹೆಣ್ಣು ಹೇಗೆಂದರೆ; ಆಕೆಯನ್ನು ಬಂಡೆ ಮೇಲೆ ಹಾಕಿದರೂ, ಮರಳುಭೂಮಿ ಮೇಲೆ ಬಿಟ್ಟರೂ, ಮೇಲಿಂದ ಮೇಲೆ ಎತ್ತಿ ಒಗೆದರೂ ಒಂದು ರೀತಿ ಚಿರತೆಯಂತೆ ಚಿಗಿತು ಬೆಳೆಯುವಂತಹ, ಸುಲಭವಾಗಿ ಸೋಲೊಪ್ಪದ, ನವೆಯದ ಜೀವಸೆಲೆ ಅವಳಲ್ಲಿ. ಆದ್ದರಿಂದ ಅವಳ ಸ್ಫೂರ್ತಿಯ ಸೆಲೆ, ಅವಳ ಸಂಕಟಗಳು ಮತ್ತು ಅವಳ ಮಕ್ಕಳೇ ಆಗಿರುತ್ತಾರೆ ಸಾಮಾನ್ಯವಾಗಿ. ಈ ಸ್ಫೂರ್ತಿಗೆ ಬಲ ಸಿಗುವುದು ಸಮಾಜದಿಂದ, ಧೈರ್ಯದಿಂದ, ಆರ್ಥಿಕ ಚಟುವಟಿಕೆ, ಕೌಟುಂಬಿಕ ಚಟುವಟಿಕೆ ಮುಂತಾದವುಗಳಿಂದ.

ಸ್ಫೂರ್ತಿ ಹುಟ್ಟುವುದು ಪ್ರೇಮಿಗಳು ಸಂಧಿಸಿದಾಗ, ಸಮಾಜದೊಡನೆ ಸ್ನೇಹಿತರ ಜತೆಗೆ ಮುಖಾಮುಖಿ ಆದಾಗ. ಈ ಸ್ಫೂರ್ತಿ ಉದ್ದೀಪನಗೊಳ್ಳಲಿಕ್ಕೆ, ಕ್ರಿಯೇಟ್ ಆಗಲಿಕ್ಕೆ ಬೇರೆ ಬೇರೆ ವರ್ಗದ, ಜಾತಿಯ, ಲಿಂಗದ ಹೀಗೆ ಬೇರೆ ಬೇರೆ ಹಿನ್ನಲೆ ಇರುತ್ತವೆ. ಸಾಮಾನ್ಯವಾಗಿ ಸಾಧನೆಯ ಮುಖವಾಗಿರುವ ಪುರುಷ ಸಹಜವಾಗಿ ಸ್ಫೂರ್ತಿ ಪಡೆದರೆ, ಸವೆತದತ್ತ ಮುಖ ಮಾಡಿರುವ ಹೆಣ್ಣಿಗೆ ಅದು ಸಹಜವಾಗಿ ದಕ್ಕುವುದಿಲ್ಲ. ಹಾಗೆಯೇ ಮೇಲ್ವರ್ಗದ ಮಹಿಳೆಯ ಸ್ಫೂರ್ತಿಯ ನೆಲೆಯೇ ಬೇರೆ, ದುಡಿಯುವ ವರ್ಗದ ಮಹಿಳೆಯ ಸ್ಫೂರ್ತಿಯ ನೆಲೆಯೇ ಬೇರೆ.

ಸ್ಫೂರ್ತಿಯನ್ನು ಯಾವ ದೃಷ್ಟಿಯಿಂದ ನೋಡಬೇಕು? ಅದಕ್ಕೆ ಮಾದರಿ ಏನು? ಎಂದು ಯೋಚಿಸಿದರೆ ಈಗಂತೂ ಎಲ್ಲವೂ ಯಶಸ್ಸನ್ನು ಆಧರಿಸಿದೆ. ಯಶಸ್ಸು ಆಧಾರಿತ ಸ್ಪರ್ಧೆ ಸ್ಫೂರ್ತಿಗೆ ಖಂಡಿತ ನೆಲೆಯಾಗಬಾರದು. ಮೂಲಭೂತವಾಗಿ ಎಲ್ಲರಿಗೂ ಒತ್ತಡ ಇರುವುದು ‘ಟು ಬಿಕಮ್ ಸಮ್ತಿಂಗ್, ಟು ಪ್ರೂವ್ ಸಮ್ತಿಂಗ್’.

ನಾನು ಏನಾಗಿದ್ದೀನಿ ಎನ್ನುವುದರಲ್ಲಿ ತೃಪ್ತಿಯಿಲ್ಲ. ಯಾರೋ ಕೊಟ್ಟಿರುವ, ಇಟ್ಟಿರುವ, ತೋರಿಸಿರುವ ಸ್ಕೇಲ್ ಇಟ್ಟುಕೊಂಡು ನಾನೂ ಹಾಗಾದರಷ್ಟೇ ಸಾರ್ಥಕ ಎನ್ನುವ ಮನೋಭಾವವೇ ಎಲ್ಲೆಡೆ. ನಾನಂತೂ ಇದನ್ನು ಒಪ್ಪುವುದಿಲ್ಲ. ನಾವು ಏನೋ ಆಗಿ ನಮ್ಮನ್ನು ಪ್ರೂವ್ ಮಾಡುವಂತಹ ಧೋರಣೆಯನ್ನು, ಪದ್ಧತಿಯನ್ನು ನಾನು ಒಪ್ಪುವುದಿಲ್ಲ. ಸ್ಫೂರ್ತಿ ನಮ್ಮನ್ನ ಸಹಜವಾಗಿ, ನೆಮ್ಮದಿಯಾಗಿ, ಆರೋಗ್ಯಕರವಾಗಿ, ಸಂತೋಷವಾಗಿ ಇರಿಸುವಂತಿರಬೇಕು.

ನಮಗೆ ಸ್ವಾತಂತ್ರ್ಯವನ್ನು ನೀಡಿ, ನಿರ್ಭೀತ ಪರಿಸ್ಥಿತಿ ಕಲ್ಪಿಸಿ ಅದು ನಮ್ಮ ಇಡೀ ವ್ಯಕ್ತಿತ್ವವನ್ನು ರೂಪಿಸುವಂತಿರಬೇಕು. ನಮ್ಮ ಒಟ್ಟಾರೆ ವ್ಯಕ್ತಿತ್ವಕ್ಕೆ ಬೇಕಾದದ್ದು ಬುದ್ಧಿವಂತಿಕೆ. ಸ್ಫೂರ್ತಿ ಈ ಬುದ್ಧಿವಂತಿಕೆಯನ್ನು ಉದ್ದೀಪನಗೊಳಿಸುವಂಥದ್ದು ಆಗಿರಬೇಕೇ ಹೊರತು ಕೌಶಲವನ್ನಲ್ಲ. ನಾವು ವಾಸ್ತವವಾಗಿ ರೂಢಿಗತ ಮಾನದಂಡದಿಂದಲೇ ಅಂದರೆ ಆ ಸ್ಕೇಲ್ನಿಂದಲೇ ಪ್ರತಿಯೊಬ್ಬರನ್ನೂ ಅಳೆದು ಬಿಡುತ್ತೇವೆ. ಅದು ನಿಜಕ್ಕೂ ಅಮಾನವೀಯ.

ಒಬ್ಬ ಯಶಸ್ವಿ ಮಹಿಳೆ ಆಗಲಿಕ್ಕೆ ದೊಡ್ಡ ಪದವಿಗೇ ಏರಬೇಕಿಲ್ಲ. ಕೂಲಿ ಮಾಡುವ ಹೆಣ್ಣುಮಕ್ಕಳೂ ತಮಗೆ ಸಿಗುವ 1000–15000 ರೂಪಾಯಿ ದುಡ್ಡಿನಲ್ಲಿ ಅಷ್ಟು ಇಷ್ಟು ಕೂಡಿಟ್ಟು ಬದುಕುತ್ತಾರೆ. ತಮ್ಮ ಮಕ್ಕಳನ್ನ ಓದಿಸುತ್ತಾರೆ, ಬೆಳೆಸುತ್ತಾರೆ. ಜೀವನದ ಅಗತ್ಯ ವಸ್ತುಗಳೆನಿಸಿದ ಗಾಡ್ರೇಜ್ ಬೀರು, ಫ್ರಿಜ್ಜು, ಸೋಫಾಸೆಟ್ಟು ಈ ಎಲ್ಲವನ್ನೂ ಖರಿದಿಸುತ್ತಾರೆ. ಸ್ವಂತ ಮನೆಯನ್ನೂ ಕಟ್ಟಿಕೊಳ್ಳುರೆ. ಇವರುಗಳು ನಿಜವಾದ ಅರ್ಥಶಾಸ್ತ್ರಜ್ಞರು.

ನನ್ನ ಸ್ಫೂರ್ತಿ ಇವರೇ. ನಮ್ಮಲ್ಲಿ ಅದ್ಭುತ ಸಾಧನೆ ಮಾಡಿರುವಂತಹ ಮಹಿಳೆಯರು ಅನೇಕರಿದ್ದಾರೆ. ಅಕ್ಕಮಹಾದೇವಿ, ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ, ಇಂದಿರಾಗಾಂಧಿ, ಮದರ್ ತೆರೆಸಾ, ಬಚೇಂದ್ರಿಪಾಲ್, ಕಿರಣ್ಬೇಡಿ, ಬ್ಯೂಟಿ ಕ್ವೀನ್ಗಳಾಗಿರೋ ಸುಶ್ಮಿತಾ ಸೇನ್, ಐಶ್ವರ್ಯಾ ರೈ, ಇತ್ತೀಚಿನ ದೀಪಿಕಾ ಪಡುಕೋಣೆ... ಇವರ ಸಾಧನೆಯ ಬಗ್ಗೆ, ಸೇವೆಯ ಬಗ್ಗೆ, ಇವರ ಸಾಮರ್ಥ್ಯದ ಬಗ್ಗೆ ತುಂಬಾ ಮೆಚ್ಚುಗೆಯಿದೆ, ಗೌರವವಿದೆ. ಆದರೆ ಇವರು ಯಾವತ್ತೂ ನನ್ನ ಸ್ಫೂರ್ತಿಯ ನೆಲೆಯಾಗಲಿಲ್ಲ.

ಬಿರು ಬಿಸಿಲಿನಲ್ಲಿ ಎಂಟ್ಹತ್ತು ಕಿ.ಮೀ. ದೂರದಿಂದ ಒಣಮೀನನ್ನು ತಲೆಮೇಲೆ ಹೊತ್ತು ಮಾರಲು ಬರುತ್ತಿದ್ದ ಹಣ್ಣು ಹಣ್ಣು ಮುದುಕಿ, ಆಕೇನ ನೋಡಿ ಅಯ್ಯೋ ಅಂದರೆ ‘ಹಂಗನ್ಬ್ಯಾಡ... ಹಂಗಂದು ದುಡ್ದು ತಿಂಬೋ ನನ್ನ ಶಕ್ತಿಗೆ, ನನ್ನ ಸ್ವಾಭಿಮಾನುಕ್ಕೆ ಅವ್ಮಾನ ಮಾಡ್ಬ್ಯಾಡ.. ನನ್ನ ಶಕ್ತಿಗುಂದಿಸೋ, ಆತ್ಮವಿಶ್ವಾಸ ನಂದಿಸೋ ಕರುಣೆ ತೋರ್ಬ್ಯಾಡ...’ ಅಂತ ಸಿಟ್ಟು ಮಾಡ್ತಿದ್ದ ಮುದುಕಿ ಹಮೀನಾ ನನ್ನ ಸ್ಫೂರ್ತಿ.

ಮೂರು ಹೊತ್ತು ಕುಡಿದು ಬಿದ್ದಿರುವ ಗಂಡನನ್ನು, ಆ ಕುಡುಕ ಸಮಯ ಸ್ಫೂರ್ತಿಯಿಂದ ರಾತ್ರಿ ಮಾಡುವ ಅವಘಡಕ್ಕೆ ಹುಟ್ಟಿರುವ ಹನ್ನೆರಡು ಮಕ್ಕಳು–ಅವರನ್ನೆಲ್ಲಾ ಒಬ್ಬಳೇ ಹಗಲು ರಾತ್ರಿ ಕೆಲಸ ಮಾಡಿ ಸಾಕಿ ಸಲಹುವ ಪದ್ಮಾ ತನ್ನ ಹೊಟ್ಟೆ ಬಟ್ಟೆ ಕಟ್ಟಿ, ಆ ಮಕ್ಕಳಿಗೂ ತನ್ನ ಗತಿ ಬರಬಾರದು, ಅವರು ಹೆಂಗಾದರೂ ಓದ್ಬೇಕು ದೊಡ್ಡೊರಾಗ್ಬೇಕು ಅನ್ನೋ ಆಕೆ ಹಂಬಲ, ಅವಳ ಕನಸು ನನ್ನ ಸ್ಫೂರ್ತಿ.

ನಮ್ಮನೇಲಿ ನನ್ನೊಟ್ಟಿಗೆ ಬೆಳೆಯುತ್ತಾ ಇದ್ದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸಂಬಂಧಿಕರ ಮಕ್ಕಳನ್ನೆಲ್ಲಾ ಒಟ್ಟಿಗೇ, ನಮ್ಮೊಂದಿಗೇ ಕೂರಿಸಿ, ಎಲ್ಲರನ್ನೂ ಒಂದೇ ರೀತಿಯಲ್ಲಿ ಪ್ರೀತಿಸಿ, ಉಣ್ಣಿಸುತ್ತಿದ್ದ ನಮ್ಮಮ್ಮ ಎಲ್ಲಮ್ಮ ನಂಗೆ ಸ್ಫೂರ್ತಿ. ಹಾಗೆಯೇ ನಮ್ಮನೇಲಿ ಫೋಟೊಗಳ ಹಿಂದೆ ಗೂಡು ಕಟ್ಟಿ ಇರುತ್ತಾ ಇತ್ತು ಗುಬ್ಬಚ್ಚಿಯೊಂದು.

ಹೊಲಸಾಗುತ್ತದೆ ಅಂತ ಅಮ್ಮ ಗೂಡನ್ನು ತೆಗೆದು ಕ್ಲೀನ್ ಮಾಡಿದಾಗಲೆಲ್ಲಾ ಮತ್ತೆ ಮತ್ತೆ ಒಂದೊಂದೇ ಹುಲ್ಲಿನ ಗರಿಯನ್ನು ಹೆಕ್ಕಿ ಹೆಕ್ಕಿ ತಂದು, ಮತ್ತೆ ಬೆಚ್ಚನೆಯ ಗೂಡೊಂದನ್ನು ಕಟ್ಟಿ, ಮೊಟ್ಟೆಯಿಟ್ಟು ಮರಿ ಮಾಡುತ್ತಿದ್ದ ಅದರ ಛಲ, ಸೋಲೊಪ್ಪದ ಅದರ ಪ್ರಯತ್ನ ನನ್ನ ಸ್ಫೂರ್ತಿ. ಈಗೊಂದು ಹತ್ತು ವರ್ಷಗಳ ಹಿಂದೆ ನಮ್ಮ ದೇಶದ ಪ್ರಾತಿನಿಧಿಕ ಹುಡುಗಿ ಅಳುಮುಂಜಿಯಾಗಿದ್ದಳು. ತನ್ನ ಗೊಂದಲದಲ್ಲಿ ತನಗೆ ಇಷ್ಟವಿಲ್ಲದ್ದನ್ನು ಆರಿಸಿಕೊಂಡು ದುರಂತ ಅನುಭವಿಸುತ್ತಿದ್ದಳು. ಆದರೆ ಈಗ ಹಾಗಿಲ್ಲ.

ಹೆಣ್ಣುಮಕ್ಕಳು ಆಧುನೀಕರಾಗಿದ್ದಾರೆ. ಧೈರ್ಯ, ಆತ್ಮವಿಶ್ವಾಸದ ಜೊತೆಗೆ ವಿವೇಚನೆ, ವಿವೇಕವೂ ಅವರಲ್ಲಿ ಮೇಳೈಸಿ ಅವರ ವ್ಯಕ್ತಿತ್ವಕ್ಕೆ ಮೆರುಗು ಕೊಡಬೇಕು. ಹಿರಿಯರಿಗೆ ಅವರ ಬಗ್ಗೆ ಪ್ರೀತಿ ಹುಟ್ಟುವ ಮಾದರಿಯಲ್ಲಿ ಅವರಿಗೆ ಅವರ ಬಗ್ಗೆಯೇ ಗೌರವ ಮೂಡುವ ನಿಟ್ಟಿನಲ್ಲಿ ಅವರ ವ್ಯಕ್ತಿತ್ವ ರೂಪುಗೊಳ್ಳಬೇಕು.

ಬದುಕಿನ ಯಾವ ಸಂಗತಿಯನ್ನೂ, ಘಟನೆಯನ್ನೂ ಇಷ್ಟೇ, ಸಣ್ಣದು ಅಂತ ನಿರ್ಲಕ್ಷಿಸಬಾರದು. ಯಾಕೆಂದರೆ, ಅಂತಹ ಸಣ್ಣ ಸಂಗತಿಗಳೇ ನಮಗೆ ಜೀವನ ದರ್ಶನ ಮಾಡಿಸುವುದು. ಅಂತಹ ಸಣ್ಣ ಸಂಗತಿಗಳಲ್ಲೇ ಗಾಢ ಅನುಭವಗಳು ದಕ್ಕುವುದು. ಕೊನೆಯದಾಗಿ ನನ್ನ ಮತ್ತು ನನ್ನ ಮಕ್ಕಳ ನಡುವೆ ಇರುವ ಮೂವತ್ತು ಇಲ್ಲ ನಲವತ್ತು ವರ್ಷಗಳ ಅಂತರ ಅವರ ಒಂದು ಮುಗುಳ್ನಗೆಯಲ್ಲಿ ಕರಗಿ ಹೋಗಿಬಿಟ್ಟರೆ ಅದಕ್ಕಿಂತಲೂ ಸ್ಫೂರ್ತಿ ಇನ್ನೇನಿದ್ದೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.