ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದರಿ ಓಡುತ್ತಿರುವ ಹುಲಿಯ ಬೆನ್ನೇರಿ...!

ಅನಧಿಕೃತ ಶಾಲೆ ಯಾಕೀ ಕಣ್ಣಾಮುಚ್ಚಾಲೆ?
Last Updated 14 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಭವ್ಯವಾದ ಕಟ್ಟಡ, ಪಾಠೋಪಕರಣ ಹಾಗೂ ಪೀಠೋಪ­ಕರಣ­ಗಳ  ಸುವ್ಯವಸ್ಥೆ, ಸುಭದ್ರ­ವಾದ ಆವರಣ, ದೊಡ್ಡ­ದಾದ ಗೇಟು, ತುಂಬಾ ತಿಳಿದವ­ರಂತೆ ಕಾಣುವ ಶಿಕ್ಷಕರು, ವಾಹನಗಳಲ್ಲಿ ನಿಗದಿತ ಸಮಯಕ್ಕೆ  ಬಂದು ಹೊರಡುವ ಮಕ್ಕಳು, ಸದ್ದುಗದ್ದಲದ ಪಾಠ ಪ್ರವಚನ, ಆಟೋಟ, ಆಧುನಿಕ ದಿರಿಸು ತೊಟ್ಟ ಪೋಷಕರು, ವಾರ್ಷಿಕೋತ್ಸವದಂಥ ವಿಶೇಷ ಸಂದರ್ಭಗಳಲ್ಲಿ ಬರುವ ಗಣ್ಯರು, ದೊಡ್ಡ ವಾಹನಗಳಲ್ಲಿ ಬಂದು ಹೋಗುವ ಆಡಳಿತ ಮಂಡಳಿಯವರು...

ಹೀಗೆಲ್ಲಾ ಇರುವಾಗ ಈ ಶಾಲೆ ಅಧಿಕೃತವೇ ಅಥವಾ ಅನಧಿಕೃತವೇ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ  ಅಂತಹ ಶಾಲೆಯಲ್ಲಿ ಎಳೆಯ ಬಾಲೆಯ ಮೇಲೆ ಅತ್ಯಾಚಾರ ಘಟಿಸಿದರೆ ಶಿಕ್ಷಣ ಇಲಾಖೆ ಮೊದಲು ನೋಡುವುದು ಆ ಶಾಲೆ ಅಧಿಕೃತವೇ ಅಲ್ಲವೇ ಎಂಬುದನ್ನು. ಒಂದು ವೇಳೆ ಅದು ಅನಧಿಕೃತವೆಂದು ಕಂಡು ಬಂದರೆ ಎಲ್ಲಾ ಹೊಣೆಯನ್ನು ಶಾಲೆಯವರ ಮೇಲೆ ಹಾಕಿ ತಾವು ನಿರಪರಾಧಿಗಳೆಂದು ಶಿಕ್ಷಣಾಧಿಕಾರಿಗಳು ಕೈ ತೊಳೆದುಕೊಂಡು ಬಿಡುತ್ತಾರೆ. ಆಗ ಜನಸಾಮಾನ್ಯರು ಗೊಂದಲದಲ್ಲಿ ಬೀಳುತ್ತಾರೆ.

ಏನಿದು ಅನಧಿಕೃತ!
ಇದರಲ್ಲಿ ಏನೂ ವಿಶೇಷವಿಲ್ಲ ಎಂಬ ಸಂಗತಿ ಗೊತ್ತಿರುವುದು ಖಾಸಗಿ ಶಾಲೆಗಳನ್ನು ನಡೆಸು­ವವರಿಗೆ ಮತ್ತು ಶಿಕ್ಷಣ ಇಲಾಖೆಯವರಿಗೆ ಮಾತ್ರ. ಶಾಲಾ ಆಡಳಿತ ಮಂಡಳಿಯವರು ಶಿಕ್ಷಣ ಇಲಾಖೆಯಿಂದ ಮಾನ್ಯತೆಯ ಆದೇಶವನ್ನು ಪಡೆದಿದ್ದರೆ ಆಗ ಆ ಶಾಲೆ ಅಧಿಕೃತ,  ಇಲ್ಲದಿದ್ದರೆ ಅನಧಿಕೃತ. ಇದನ್ನು ಪಡೆಯುವುದು ಅಷ್ಟೇನೂ ಸುಲಭವಲ್ಲ. ಶಿಕ್ಷಣ ಇಲಾಖೆ ಪರಿಶೀಲನೆ ನಡೆಸಿ ಎಲ್ಲ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ನೋಡಿಯೇ ಮಾನ್ಯತೆ ನೀಡುವುದು. ಆದರೆ ಇದು ನೇರ ದಾರಿಯಲ್ಲಿ ಹೋಗುವವರಿಗೆ ಮಾತ್ರ ಅನ್ವಯಿಸುವ ಸಂಗತಿ. ಹಾಗೆ ಹೋಗ­ದವರಿಗೆ ಬೇರೆ ಯಾವ ದಾರಿಗಳಿವೆ ಎಂಬು­ದನ್ನು ಇಲ್ಲಿ ಪ್ರಸ್ತಾಪಿಸಬೇಕಾದ ಅಗತ್ಯ ಇಲ್ಲ.

ಒಂದು ಶಾಲೆ ನಡೆಸುವವನಾಗಿ ನನ್ನ ಅನುಭವದ ಪ್ರಕಾರ, ಶಿಕ್ಷಣ ಇಲಾಖೆಯ ಕಚೇರಿಯೊಳಗೆ ಕುಳಿತವರೇ ಈ ಮಾನ್ಯತೆಯ ಆದೇಶದ ಮೇಲೆ ನಿಯಂತ್ರಣ ಹೊಂದಿರುತ್ತಾರೆ.  ಅವರಿಗೆ ಶಾಲೆ ನಡೆಸುವ ಸವಾಲು­ಗಳ ಅರಿವೂ ಇಲ್ಲ, ಅದನ್ನು ತಿಳಿಯುವ ಆಸಕ್ತಿಯೂ ಇಲ್ಲ. ಶಾಲೆಗಳಲ್ಲಿ ಶಿಕ್ಷಣದ ಪ್ರಕ್ರಿಯೆ ಚೆನ್ನಾಗಿ ನಡೆಯಬೇಕೆಂಬ ಬಗ್ಗೆ ಅವರಿಗೆ ಗೌರವವೂ ಇಲ್ಲ. ಅದು ಹಾಗೆ ನಡೆಯದಿದ್ದರೆ ಅವರಿಗೆ ಆತಂಕವೂ ಇಲ್ಲ. ‘ಕೈ’ಗೆ ಬರಬೇಕಾದ್ದು ಬಂದರೆ ಶಾಲೆ ಮಾನ್ಯವೇ. ಹಾಗಾಗಿ ಮಾನ್ಯತೆ ಪಡೆಯುವುದು ಅನುದಾನಿತ ಹಾಗೂ ಅನುದಾನ­ರಹಿತ ಆಡಳಿತ ಮಂಡಳಿಗಳಿಗೆ ತಮ್ಮದೇ ಆದ ಅವಶ್ಯಕತೆಯನ್ನು ಅವಲಂಬಿಸಿರುತ್ತದೆ.

ಉದಾ­ಹರಣೆಗೆ, ಅನುದಾನಿತ ಶಾಲೆಗಳ ಶಿಕ್ಷಕರ ಸಂಬಳವು ಮಾನ್ಯತೆಗೆ ಲಗತ್ತಾಗಿ ಇರುತ್ತದೆ. ಹಾಗಾಗಿ ಅವರಿಗದು ಅನಿವಾರ್ಯ. ಅನುದಾನ ರಹಿತ ಶಾಲೆಗಳವರಿಗೆ ಹೇಗೂ ಸರ್ಕಾರದಿಂದ ಏನೂ ಬರುವುದಿಲ್ಲ, ಹಾಗಾಗಿ ಪರಿಶೀಲನಾ ಅಧಿಕಾರಿಗಳನ್ನು ನೋಡಿಕೊಂಡರಾಯಿತು, ಪ್ರಾಥಮಿಕ ಶಾಲೆಗಳನ್ನು ಮಾನ್ಯತೆ ಇಲ್ಲದೆಯೇ ನಿರಾತಂಕವಾಗಿ ನಡೆಸಬಹುದು ಎಂಬ ಭಾವನೆ. ಈ ರೀತಿ ಅಲಕ್ಷ್ಯ ತಾಳಿರುವ ಶಾಲೆಗಳು ಎಷ್ಟಿವೆ ಎಂಬುದರ ತನಿಖೆ ನಡೆದರೆ ಶಿಕ್ಷಣ ಇಲಾಖೆಯ ಕಾರ್ಯಕ್ಷಮತೆಯ ಬಣ್ಣ ಬಯಲಾಗುತ್ತದೆ. ಅದಕ್ಕಾಗೇ ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಆಯುಕ್ತರು ತಮ್ಮ ಇಲಾಖೆಯ ಒಳಗಿನವ­ರಿಂದಲೇ ತನಿಖೆಗೆ ಹೊರಟಿದ್ದಾರೆ. ಏಕೆಂದರೆ ಬಾಹ್ಯ ತಂಡದಿಂದ ತನಿಖೆ ನಡೆಸಿದರೆ ಆಗ ಅಲ್ಲಿ ಸ್ವಚ್ಛತಾ ಆಂದೋಲನವೇ ಬೇಕಾದೀತು!

ಖಾಸಗಿ ಶಾಲೆಗಳು ಕಡ್ಡಾಯ ಶಿಕ್ಷಣ ನೀತಿಯ ಪ್ರಕಾರ ವಿಧಿಸಲಾಗಿರುವ ನಿಯಮಗಳಲ್ಲಿ ಯಾವುದನ್ನೂ ಅವಗಣಿಸುವಂತಿಲ್ಲ.  ಆದರೆ ಎದುರೆದುರಲ್ಲೇ ನಿಯಮ ಮುರಿದ ಸರ್ಕಾರಿ ಶಾಲೆಗಳೂ ಇವೆ, ಖಾಸಗಿ ಶಾಲೆಗಳೂ ಇವೆ. ಆದರೂ ಹೇಗೆ ಮಾನ್ಯತೆ ದೊರಕಿಸಿಕೊಂಡವು ಎಂಬುದು ಮಾತ್ರ ಯಕ್ಷಪ್ರಶ್ನೆ.

ಎಲ್ಲಕ್ಕಿಂತ ಮುಖ್ಯ ಪ್ರಶ್ನೆ ಎಂದರೆ, ಶಾಲೆಯನ್ನು ನೋಂದಣಿ ಮಾಡುವಾಗ ಹಾಗೂ ಮಾನ್ಯತೆ ಪಡೆಯುವಾಗ ‘ಕನ್ನಡ ಮಾಧ್ಯಮದಲ್ಲಿ ಪ್ರಾಥ­ಮಿಕ ಶಾಲೆ ನಡೆಸುತ್ತೇವೆ’ ಎಂದು ಬರೆದುಕೊಟ್ಟ ಆಡಳಿತ ಮಂಡಳಿಯವರು ಆಂಗ್ಲ ಮಾಧ್ಯಮ­ದಲ್ಲಿ ರಾಜಾರೋಷವಾಗಿ ಕಳೆದ ಎರಡು ಮೂರು ದಶಕಗಳಿಂದಲೂ ಶಾಲೆ ನಡೆಸಿಕೊಂಡು ಬಂದವರಿದ್ದಾರೆ. ಇದು ಇಂದಿಗೂ ಆ ಶಾಲೆಗಳ ಅನಧಿಕೃತತೆಗೆ ಆಧಾರವಾಗಿಯೇ ಇಲ್ಲ.

ಇಂತಹ ಅನಧಿಕೃತ ಶಾಲೆಗಳನ್ನು ನಡೆಸಲು ಅನುವು ಮಾಡಿಕೊಟ್ಟು, ಈಗ ಬೋಧನಾ ಮಾಧ್ಯಮಕ್ಕೆ ಸಂಬಂಧಿಸಿದ ತಕರಾರಿನಲ್ಲಿ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ  ವಿಫಲ­ವಾದಾಗ ಅವಮಾನದ ಲೇಶವನ್ನಾದರೂ ಅನುಭವಿಸದ ಶಿಕ್ಷಣ ಇಲಾಖೆಯು ಕನ್ನಡದ ಮೇಲೆ ಮಾಡುತ್ತಿರುವುದು ಒಂದು ರೀತಿ ಅತ್ಯಾಚಾರವಲ್ಲವೇ? ಈಗ ಶಾಲಾ ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರಗಳು ನಡೆಯುತ್ತಿರು­ವಾ­ಗಲೂ ಇಂತಹ ನ್ಯೂನತೆಗಳಿಗೆ ಪರಿಹಾರ ಸಿಗುವ ಲಕ್ಷಣಗಳಿಲ್ಲ. ಏಕೆಂದರೆ ಇಲಾಖೆಯು ದಂಧೆಗಿಳಿದ ಆಡಳಿತ ಮಂಡಳಿ­ಗಳೆಂಬ ಹುಲಿಯನ್ನೇರಿ ಆಗಿದೆ. ಅದೂ ಹೆದರಿಯೇ ಓಡುತ್ತಿದೆಯೆಂದು ಅದನ್ನೇರಿದ ಇಲಾಖೆಗೆ ಗೊತ್ತಿಲ್ಲ. ಇಳಿದರೆ ಹುಲಿ ತಮ್ಮನ್ನೇ ತಿಂದು ಬಿಟ್ಟೀತೆಂಬ ಭಯ. ಹಾಗಾಗಿ ಕುಳಿತಿರುವಂತೆಯೂ ಇಲ್ಲ, ಇಳಿಯುವಂತೆಯೂ ಇಲ್ಲ. ಎಂತಹ ವಿಪರ್ಯಾಸ!

ಖಾಸಗಿ ಶಾಲೆಗಳಿಗೆ ಮಾನ್ಯತೆ ನೀಡುವಾಗ, ಯಾವ ಒಂದು ಅಂಶ ಇಲ್ಲದಿದ್ದರೂ  ‘ಶಾಲೆಯನ್ನು ಮುಚ್ಚಲು ಕ್ರಮ ಕೈಗೊಳ್ಳ­ಲಾಗುತ್ತದೆ’ ಎಂದು ಆದೇಶ ನೀಡುತ್ತಾರೆ. ಆದರೆ ಇವುಗಳಲ್ಲಿ ಅನೇಕ ಅಂಶಗಳು ಇರದಿದ್ದರೂ ಸರ್ಕಾರಿ ಶಾಲೆಗಳಿಗೆ ಮಾನ್ಯತೆ ನೀಡಲು ಇಲಾಖೆ ಮುಕ್ತ ಅವಕಾಶವನ್ನು ಬಳಸಿಕೊಳ್ಳುತ್ತಿದೆ. ಖಾಸಗಿಯವರನ್ನು ಮಾತ್ರ ನಿಯಂತ್ರಿಸುವ ಈ ಮಾನ್ಯತೆಯೆಂಬ ಕುಣಿಕೆಯೇ ಶಾಲೆಗಳ ಅಧಿಕೃತತೆ ಹಾಗೂ ಅನಧಿಕೃತತೆಯನ್ನು ನಿರ್ಧರಿಸುತ್ತದೆ.

ಸ್ವಯಂಕೃತ ಅಪರಾಧ
ಒಂದು ಅನಧಿಕೃತವಾದ ಶರಾಬು ಅಂಗಡಿ ಇರಲು ಸಾಧ್ಯ. ಏಕೆಂದರೆ ಅದರ ಸಾರ್ವತ್ರಿಕತೆಗೆ ಮಿತಿಯುಂಟು. ಆದರೆ ಪೂರ್ಣ ಸಾರ್ವತ್ರಿಕವಾದ ಒಂದು ಶಾಲೆ ಅನಧಿಕೃತವಾಗಿ ಇರಲು ಸಾಧ್ಯವೇ? ‘ಸಾಧ್ಯ’ ಎನ್ನುವುದಕ್ಕೆ ನಮ್ಮ ಶಿಕ್ಷಣ ಇಲಾಖೆ ಪುರಾವೆ ನೀಡುತ್ತದೆ. ಅದು ಕೂಡಾ ಆ ಶಾಲೆಯಲ್ಲಿ ಮಗುವಿನ ಮೇಲೆ ಅತ್ಯಾ­ಚಾರ­ವಾದ ಬಳಿಕವೇ ತಮಗೆ ಅದು ಅನಧಿಕೃತ­ವೆಂದು ತಿಳಿಯಿತು ಎಂದು ಕಣ್ಣೊರೆಸಿಕೊಳ್ಳುತ್ತದೆ. ಒಂದು ಶಾಲೆ ಅನಧಿಕೃತವೆಂದು ಇಲಾಖೆಗೆ ತಿಳಿಯಲು ಆ ಶಾಲೆಯಲ್ಲಿ ಅತ್ಯಾಚಾರ ಆಗಬೇಕೇ?
ತನಗೆ ಗೊತ್ತಿರಲಿಲ್ಲ ಎಂಬ ಇಲಾಖೆಯ ಮಾತು ಅಪ್ಪಟ ಸುಳ್ಳು ಎನ್ನುವುದಕ್ಕೆ  ಒಂದು ಉದಾಹರಣೆ ನೀಡುತ್ತೇನೆ. ಬೆಂಗಳೂರಿನ ಒಂದು ಮೂಲೆಯಲ್ಲಿ ಪ್ರೊಫೆಸರ್ ಒಬ್ಬರ ಹೆಂಡತಿ ಸಮಯ ಕಳೆಯಲೆಂದು ನೆರೆಹೊರೆಯ  ಪುಟ್ಟ ಮಕ್ಕಳಿಗೆ ಮನೆಯಂಗಳದಲ್ಲೇ ಒಂದು ತರಗತಿ ಆರಂಭಿಸಿದರು. ಅದು ಹಾಗೇ ಜನಪ್ರಿಯವಾಗಿ ದೂರದಿಂದಲೂ ಮಕ್ಕಳು ಬರತೊಡಗಿದರು.

ಶಿಕ್ಷಣ ಇಲಾಖೆಗೆ ಇದು ತಿಳಿಯಿತು. ಸಿಬ್ಬಂದಿ ಪರಿಶೀಲನೆಗೆ ಬಂದರು. ಬಾಲವಾಡಿಯನ್ನು ನೋಂದಾಯಿಸಬೇಕು ಎಂದರು. ಅದನ್ನು ಮಾಡಿ ಆಯಿತು. ತರಬೇತಿ ಪಡೆದ ಶಿಕ್ಷಕರನ್ನೇ ನೇಮಿಸಬೇಕೆಂದರು. ಅದೂ ಆಯಿತು. ನಂತರ ಬಂದವರು ಮಾನ್ಯತೆ ಪಡೆಯಬೇಕೆಂದು ನೋಟೀಸ್‌ ನೀಡಿದರು. ಆದರೆ ಅದಕ್ಕಾಗಿ ಲಂಚ ನೀಡಬೇಕೆಂಬ ಸುಳಿವು ಸಿಗುತ್ತಲೇ ಆ ಮಹಿಳೆ ಬಾಲವಾಡಿಯನ್ನೇ ನಿಲ್ಲಿಸಿದರು. ಈಗ ಅವರ ಅಂಗಳದಲ್ಲಿ ಜೋಕಾಲಿ, ಜಾರುಬಂಡಿ, ಗೋಡೆಯಲ್ಲಿನ ಚಿತ್ರಗಳು ದೂಳು ತಿನ್ನುತ್ತಿವೆ. ಮಕ್ಕಳ ಕಲರವ ಮರೆಯಾಗಿದೆ. ಪಕ್ಕದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗೆ ಇದೇ ಬೇಕಾಗಿತ್ತು. ಅವರು ಈ ಬಾಲವಾಡಿಯಲ್ಲಿ ಕಲಿತವರಿಗೆ ತಮ್ಮಲ್ಲಿ ಒಂದನೇ ತರಗತಿಗೆ ಸೀಟು ಇಲ್ಲ ಎನ್ನುತ್ತಿದ್ದರಂತೆ. ಹೇಗಿದೆ ದುರುಳರ ದಾಳ!

ಇಷ್ಟು ಸಣ್ಣ ಬಾಲವಾಡಿಯನ್ನೂ ಬಿಡದ ಇಲಾಖೆಗೆ ದೊಡ್ಡ ಕೌಂಪೌಂಡಿನೊಳಗಿನ  ಭವ್ಯ ಕಟ್ಟಡದಲ್ಲಿ ನಡೆಯುವ ಅನಧಿಕೃತ ಶಾಲೆಗೆ ನೂರಾರು ಮಕ್ಕಳು ವಾಹನಗಳಲ್ಲಿ ಬಂದು ಹೋಗುವ ಸಂಗತಿ  ತಿಳಿಯದೇ ಹೋದೀತೆ? ಕನ್ನಡ ಮಾಧ್ಯಮ ನಡೆಸಲು ಅನುಮತಿ ಪಡೆದು ಆಂಗ್ಲ ಮಾಧ್ಯಮದಲ್ಲಿ ತರಗತಿಗಳನ್ನು ನಡೆಸುವುದು ಗಮನಕ್ಕೆ ಬಾರದೇ ಹೋದೀತೆ? ಹತ್ತಿರದ ಸರ್ಕಾರಿ  ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಿರುವುದು ವರದಿಯಾಗದೇ ಉಳಿದೀತೇ? ಕಿರಿಯ ಪ್ರಾಥಮಿಕ ಶಾಲೆಗೆ ಅನುಮತಿ ಪಡೆದು ಹಿರಿಯ ಪ್ರಾಥಮಿಕ ಹಂತದವರೆಗೂ ತರಗತಿಗಳನ್ನು ನಡೆಸುವ ಅಕ್ರಮ ಗೊತ್ತಾಗದೇ ಉಳಿಯುವುದು ಹೇಗೆ? ಹೋಗಲಿ, ಆಗಬಾರದ್ದು ಆದಾಗ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಧಿಕಾರಿ ವರ್ಗಕ್ಕೆ ಯಾವ ಶಿಕ್ಷೆಯೂ ಆಗದೇ ಉಳಿದದ್ದು ಏಕೆ?

ಇದೆಲ್ಲಕ್ಕೂ ಉತ್ತರ ಒಂದೇ-. ಅದೆಂದರೆ, ಇದು ಪ್ರಜ್ಞಾಪೂರ್ವಕವಾಗಿ ಮಾಡಿದ ಸ್ವಯಂಕೃತ ಅಪರಾಧ. ಅಪರಾಧಿಗಳನ್ನು ಅಪರಾಧಿಗಳಷ್ಟೇ ರಕ್ಷಿಸಬಲ್ಲರು ಎಂಬುದು ಹೌದಾದರೆ, ಇಡೀ ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗದಲ್ಲಿ ನಿರಪರಾಧಿಗಳೇ ಇಲ್ಲ. ಹಾಗಾದರೆ ಇವರನ್ನೇ ಪರಿಶೀಲನಾ ಅಧಿಕಾರಿಗಳಾಗಿ ನೇಮಿಸಿ, ಅನಧಿಕೃತ ಶಾಲೆಗಳನ್ನು ಹುಡುಕುವ ಇಲಾಖೆಯ ಹೊಸ ಪ್ರಯತ್ನ ಯಾರ ಕಣ್ಣೊರೆಸುವ ತಂತ್ರ?

(ಲೇಖಕರು ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ  ಸಂಸ್ಥೆಯೊಂದರ ಅಧ್ಯಕ್ಷರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT