‘ನಮಸ್ಕಾರ. ಹೌದು ಹೇಳಿಕೋಬೇಕೆನಿಸ್ತಿದೆ, ಹತ್ತು ಹಲವು ವಿಚಾರಗಳನ್ನು. ಮನದಲ್ಲೇಳುವ ಅಲ್ಲೋಲ ಕಲ್ಲೋಲಗಳನ್ನು’ – ಹೀಗೆ ತಮ್ಮ ಪರಿಚಯ ಶುರು ಹಚ್ಚಿಕೊಳ್ಳುವ ಜಯಲಕ್ಷ್ಮಿ ಪಾಟೀಲರು ಮೂಲತಃ ಬಿಜಾಪುರದವರು. ಈಗ ಬೆಂಗಳೂರು ವಾಸಿ. ‘ಹೇಳಬೇಕೆನಿಸುತ್ತಿದೆ...’ (antaraala-jayalaxmi.blogspot.in) ಅವರ ಬ್ಲಾಗ್ನ ಹೆಸರು.

ಕಿರುತೆರೆಯ ವೀಕ್ಷಕರಿಗೆ ಜಯಲಕ್ಷ್ಮಿ ಪಾಟೀಲರದು ಪರಿಚಿತ ಮುಖ. ಪ್ರಸ್ತುತ ’ಈಟೀವಿ’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ
ಟಿ.ಎನ್. ಸೀತಾರಾಂ ಅವರ ‘ಮಹಾಪರ್ವ’ ಧಾರಾವಾಹಿಯಲ್ಲಿ ಜಯಲಕ್ಷ್ಮಿ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ನಡೆಯಲಾಗದೆ, ಕುರ್ಚಿಯಲ್ಲಿ ಕೂತಿರಬೇಕಾದ ಸ್ಥಿತಿಯಲ್ಲಿಯೂ ಜೀವನೋತ್ಸಾಹ ಕಳೆದುಕೊಳ್ಳದ ಹೆಣ್ಣುಮಗಳ ಪಾತ್ರದಲ್ಲಿ ಅವರು ಸಹೃದಯರಿಗೆ ಇಷ್ಟವಾಗಿದ್ದಾರೆ. ಪಾತ್ರದ ಜೀವಂತಿಕೆ ಅವರ ವ್ಯಕ್ತಿತ್ವಕ್ಕೂ ಹೊಂದುವಂತಹದು. ಓದು, ಬರಹ ಮತ್ತು ಸಂಗೀತ ಎಂದರೆ ಅವರಿಗೆ ತುಂಬಾನೇ ಇಷ್ಟ. ನಟನೆಯಂತೂ ಬದುಕಿನ ಅವಿಭಾಜ್ಯ ಭಾಗ ಎನ್ನುವಷ್ಟು ಆಪ್ತ. ಧಾರಾವಾಹಿಗಳ ಜೊತೆಗೆ ಕಲಾತ್ಮಕ ಸಿನಿಮಾಗಳಲ್ಲೂ ನಟಿಸುವ ಹಂಬಲ ಅವರದು. ಎಂಥ ಪಾತ್ರದಲ್ಲಿ ಬೇಕಾದರೂ ನಟಿಸಿಯೇನು, ಬದುಕಿನಲ್ಲಿ ಮಾತ್ರ ನಟನೆ ಕಷ್ಟ ಎನ್ನುವುದು ಅವರ ಅನಿಸಿಕೆ.

‘ಹೇಳಬೇಕೆನಿಸುತ್ತಿದೆ...’ ಜಯಲಕ್ಷ್ಮಿ ಪಾಟೀಲರ ಬಹುಮುಖಿ ಆಸಕ್ತಿಗಳ ಅಭಿವ್ಯಕ್ತಿಯಂತಿದೆ. ತಮ್ಮ ಅನಿಸಿಕೆಗಳು, ವಿಚಾರಗಳು ಹಾಗೂ ಅನುಭವಗಳ ಜೊತೆಗೆ ತಮ್ಮ ಒಡನಾಟಕ್ಕೆ ಬಂದವರ ಬರಹಗಳನ್ನೂ ಇಲ್ಲಿ ದಾಖಲಿಸಿದ್ದಾರೆ. ಹಾಗಾಗಿಯೇ ಪುಸ್ತಕವೊಂದರ ಮಾತುಕತೆಯ ಜೊತೆಗೆ ಸಂಗೀತ ಕಛೇರಿ ವಿವರಗಳೂ ಬ್ಲಾಗಿನಲ್ಲಿವೆ. ಕಳೆದ ಬದುಕಿನ ಸಾವಧಾನ ಮತ್ತು ಏರುಗತಿಯ ವರ್ತಮಾನದ ಬದುಕಿನ ಸಾಮ್ಯತೆಗಳು ಮತ್ತು ವೈರುಧ್ಯಗಳನ್ನು ಕಾಣಿಸಲು ಈ ಬ್ಲಾಗ್ನ ಬರಹಗಳು ಹಂಬಲಿಸುವಂತೆ ಕಾಣಿಸುತ್ತವೆ. ಉದಾಹರಣೆಯಾಗಿ ಬರಹವೊಂದರ ತುಣುಕು ನೋಡಿ–

‘‘ಆರು ತಿಂಗಳ ಹಿಂದೆ ಪತಿಯನ್ನು ಕಳಿದುಕೊಂಡಿದ್ದ ೨೭ರ ಹರೆಯದ, ಪುಟ್ಟ ಮಗಳಿರುವ ನನ್ನ ತಂಗಿಗೆ (ಕಾಕಾನ ಮಗಳು) ಮೊದಲಿನಂತೆ ಅವಳು ಉಡುವುದು ತೊಡುವುದು ಮಾಡಲು ನಾವೆಲ್ಲ ಮನವೊಲಿಸುತ್ತಾ ಧೈರ್ಯ ತುಂಬಿ ಅವಳನ್ನು ರೆಡಿ ಮಾಡಿದ್ದೆವು. ಆದರೆ ಎಲ್ಲರಿಗೂ ಕಷ್ಟಕ್ಕೆ ಬಂದಿದ್ದು ಆಯಿಯನ್ನು ಒಪ್ಪಿಸುವ ವಿಷಯದಲ್ಲಿ. ಈಗ ನೋಡಿದರೆ ಎಲ್ಲಾ ಉಲ್ಟಾಪಲ್ಟಾ! ಹಣೆಯ ಕೆಂಪು ಬಿಂದಿ, ಕತ್ತಲ್ಲಿನ ಎರಡೆಳೆ ಸರ, ಕಿವಿಯ ಝುಮುಕಿ, ಮುಡಿಯ ಮಲ್ಲಿಗೆ ಎಲ್ಲವನ್ನು ಗಮನಿಸಿಯೂ ಯಾವುದನ್ನೂ ನಿರಾಕರಿಸಲಿಲ್ಲ ಅವರು! ಆಯಿಯ ಆಧುನಿಕತೆಗೆ ಖುಷಿಯಿಂದ ನಾವೆಲ್ಲ ಮೂಕರಾಗಿದ್ದೆವು. ಆಯಿಯ ಬಗೆಗೆ ನೋವು ಬೆರೆತ ಹೆಮ್ಮೆ ನನ್ನವ್ವನ ಕಣ್ಣಲ್ಲಿ.

ಮನೆಯಲ್ಲಿ ಮದುವೆ ಸಮಾರಂಭ. ಆಯಿ ಎಂದಿನಂತೆ ಎಲ್ಲರಿಗೂ ಕೆಲಸ ಹಂಚಿ ತಾವು ಮೇಲ್ವಿಚಾರಣೆ ಮಾಡುತ್ತಾ ನಿಂತಿದ್ದರು. ಆಕೆ ಯಾವತ್ತೂ ಯಾವ ಶುಭಕಾರ್ಯದಲ್ಲೂ ನೇರ ಭಾಗವಹಿಸಿದವರೇ ಅಲ್ಲ, ಯಾರಿಗಾದರೂ ಕುಂಕುಮವಿಟ್ಟಿದ್ದನ್ನೂ ಕಾಣೆ ನಾನು. ಅಂದೂ ಮತ್ತೊಮ್ಮೆ ಆಯಿ ಹೂವು ಮುಡಿಯಲಿ ಎಂಬ ಆಸೆಯಿಂದ ಮಾರುದ್ದ ಮಾಲೆಯನ್ನು ತೆಗೆದುಕೊಂಡು ಹೋಗಿ ಆಯಿಯ ಎದುರು ಹಿಡಿದೆ. ಸೌಮ್ಯವಾಗಿ ನನ್ನನ್ನು ನೋಡಿ, ‘ನನಗ ಬ್ಯಾಡ, ನೀ ಮುಡ್ಕೊ, ಸಣ್ಣಮಕ್ಕಳು ಮುಡ್ಕೊಂಡ್ರನ ಛಂದ’ ಎಂದು ಹೇಳಿ ನನ್ನನ್ನು ಸಾಗಹಾಕಿದರು ಅಲ್ಲಿಂದ. ಆಯಿಗೆ ನನ್ನ ಕಂಡರೆ ಪ್ರೀತಿಯಿಲ್ಲ, ಅದಕ್ಕೇ ನನ್ನ ಕೈಯಿಂದ ಆಕೆ ಹೂವು ಸ್ವೀಕರಿಸುತ್ತಿಲ್ಲ ಎನ್ನುವ ಭಾವನೆಯಿಂದ ಅವ್ವನ ಹತ್ತಿರ ಆಯಿಯನ್ನು ದೂರಿದೆ.
ಆಗ ಅವ್ವ, ‘ಬ್ಯಾಡ, ಆಯಿಗೆ ಇನ್ನೊಮ್ಮೆ ಹಂಗ ಹೂವ್ ಕೊಡಾಕ ಹೋಗಬ್ಯಾಡ, ಅವ್ರು ಮುಡ್ಕೊಳ್ಳಾಂಗಿಲ್ಲ.’ ಅಂದ್ಳು.
‘ಯಾಕ?’
‘ಯಾಕಂದ್ರ ಉಡಕಿಯಾದವ್ರು ಹೂವು ಮುಡೀಬಾರ್ದಂತ, ಯಾವ್ದ ಕಾರ್ಯಾದಾಗೂ ಭಾಗವಹಿಸ್ಬಾರ್ದಂತ, ಅದಕ ನಿಮ್ಮ್ ಆಯಿ ಹೂವ್ ಮುಡ್ಕೊಳ್ಳಾಂಗಿಲ್ಲ, ಯಾರಿಗೂ ಕುಂಕುಮಾ ಹಚ್ಚಂಗಿಲ್ಲ, ಆರ್ತಿ ಮಾಡಾಂಗಿಲ್ಲ. ಅದಕೇನಾಕ್ಕತಿ ನೀವು ನನಗ ಕುಂಕುಮಾ ಹಚ್ಚಿ ಆರ್ತಿ ಮಾಡ್ರಿ ಅಂತ ನಾ ಒಮ್ಮಿ ಹೇಳಿದ್ದಕ್ಕ ನನಗ ಬೈದು ಸುಮ್ನಾಗಿಸಿದ್ರು” ಅಂದಳು ಅವ್ವ.

ಉಡಕಿ ಅಂದರೆ ಮರುಮದುವೆ. ಆಯಿಗೆ ತೊಟ್ಟಿಲಲ್ಲೇ ಅಂದರೆ ಹಸುಗೂಸಾಗಿದ್ದಾಗಲೇ ತಾಳಿಕಟ್ಟಲಾಗಿತ್ತಂತೆ. ಹಾಗೆ ತಾಳಿ ಕಟ್ಟಿದ ಹುಡುಗ ತನ್ನ ಏಳನೇ ವಯಸ್ಸಲ್ಲಿ ಯಾವುದೋ ಖಾಯಿಲೆ ಬಂದು ತೀರಿಕೊಂಡ. ಮುಂದೆ ಆಯಿ ಹನ್ನೊಂದು ವರ್ಷದವಳಿದ್ದಾಗ ಹೆಂಡತಿ ಸತ್ತ ಹದಿನಾರು ವರ್ಷದ ನನ್ನ ಮುತ್ತ್ಯಾರ (ಮುತ್ತ್ಯಾ=ಅಜ್ಜ) ಜೊತೆ ಮದುವೆಯಾಯಿತು. ಹೀಗೆ ಉಡುಕಿಯಾದ ಹೆಣ್ಣು ಹೂ ಮುಡಿಯುವುದು, ಶುಭಕಾರ್ಯದಲ್ಲಿ ಭಾಗವಹಿಸುವುದರ ಹೊರತಾಗಿ ಉಳಿದೆಲ್ಲರಂತೆ ಸಂಸಾರ ಮಾಡಬಹುದು ಎನ್ನುವುದು ಈ ಮದುವೆಯ ನಿಯಮವಂತೆ. ಹಾಗಾಗಿ ಮೊಳಕಾಲುದ್ದದ ಕೂದಲು ಅದಕ್ಕೂ ಮಿಗಿಲಾದ ಆಸೆಗಳಿದ್ದರೂ ಆಯಿ ಅದನ್ನೆಲ್ಲ ಹತ್ತಿಕ್ಕಿ ಬಿಗಿ ತುರುಬು ಕಟ್ಟಿ ಬದುಕಿದ್ದರು. ತನ್ನ ಕೈಯಲ್ಲಿ ಸಾಧ್ಯವಾಗದ್ದನ್ನು ಮೊಮ್ಮಗಳಿಂದ ಸಾಧ್ಯ ಮಾಡಿಸಿದರು, ಅವಳನ್ನು ಬೆಂಬಲಿಸುವುದರ ಮೂಲಕ ಕೆಟ್ಟ ಪರಂಪರೆಯೊಂದನ್ನು ನಮ್ಮನೆಯಿಂದ ಒದ್ದೋಡಿಸಿದರು’’.

ಜಯಲಕ್ಷ್ಮಿ ಅವರ ಮೇಲಿನ ಬರಹ ಎರಡು ತಲೆಮಾರುಗಳ ಕಥನಗಳನ್ನು ಅತಿರೇಕವಿಲ್ಲದೆ ಓದುಗರ ಮುಂದಿಡುತ್ತದೆ. ಹೀಗೆ ಬದುಕಿನ ವೈವಿಧ್ಯ ಕಾಣಿಸುವ ಇಂಥ ಬರಹಗಳು ಬ್ಲಾಗ್ನಲ್ಲಿ ಸಾಕಷ್ಟಿವೆ. ಅಂದಹಾಗೆ, ಅವರು ಕವಿತೆಯನ್ನೂ ಬರೆಯಬಲ್ಲರು. ರಚನೆಯೊಂದರ ತುಣುಕು ನೋಡಿ–
ಜಾಗತೀಕರಣದ ವ್ಯಾಕರಣ
ಸಸ್ತಾ ಮಾಲಾಗಿ ಏಳು ಸಮುದ್ರದಾಚೆಯ ಭದ್ರ ಕೋಟೆಯೊಳಗಿನ ರಾಜಕುಮಾರಿ
ಕಂಡವರ ಬೆರಳ ತುದಿ ತಾಕಿ ಬೆತ್ತಲೆ
ಬೆಲೆ ಕಳೆದುಕೊಂಡ ಬದುಕೀಗ
ಹಗಲಿನಲ್ಲೇ ಕತ್ತಲೆ
ಬದುಕಿನಲ್ಲಿ ಇರುವ ಬೆರಗು, ಕೊರಗು ಎರಡನ್ನೂ ಜಯಲಕ್ಷ್ಮಿ ಪಾಟೀಲರ ಬ್ಲಾಗು ಸಮಚಿತ್ತದಲ್ಲಿ ದಾಖಲಿಸಲು ಪ್ರಯತ್ನಿಸುತ್ತದೆ. ಜೀವನಪ್ರೀತಿಯ ಈ ಬರಹಗಳು ಓದಿನ ರುಚಿ ಹೆಚ್ಚಿಸುವಂತಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.