ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಟೆಕ್‌ ಸ್ಪರ್ಶದಿಂದ ಕಬಡ್ಡಿಗೆ ಧಕ್ಕೆಯಾಗದು

Last Updated 24 ಜುಲೈ 2016, 19:30 IST
ಅಕ್ಷರ ಗಾತ್ರ

ಪ್ರೊ ಕಬಡ್ಡಿ ಲೀಗ್‌ನಲ್ಲಿ 40ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ 30ರ ಹರಯದ ಜಸ್ವೀರ್‌ ಸಿಂಗ್‌ 600ಕ್ಕೂ ಹೆಚ್ಚು ರೈಡ್ ಮಾಡಿದ್ದಾರೆ. ಅವರು 2014ರ ಇಂಚೆನ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಭಾರತ ತಂಡದಲ್ಲಿ ಆಡಿದ್ದರು. ಅವರನ್ನು ವಿಕ್ರಂ ಕಾಂತಿಕೆರೆ ಸಂದರ್ಶಿಸಿದ್ದಾರೆ.

ಪ್ರೊಕಬಡ್ಡಿಯ ಎಲ್ಲ ಆವೃತ್ತಿಗಳಲ್ಲೂ ಗಮನ ಸೆಳೆದ ತಂಡಗಳಲ್ಲಿ  ಜೈಪುರ ಪಿಂಕ್ ಪ್ಯಾಂಥರ್ಸ್‌ ಕೂಡ ಒಂದು. ಮೊದಲ ಆವೃತ್ತಿಯ ಚಾಂಪಿಯನ್‌ ಆದ ತಂಡಕ್ಕೆ ನಂತರದ ಎರಡು ಆವೃತ್ತಿಗಳಲ್ಲಿ ಅಂತಿಮ ನಾಲ್ಕರ ಘಟ್ಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದಿದ್ದರೂ ಲೀಗ್‌ ಹಂತದ ಪಂದ್ಯಗಳಲ್ಲಿ ಮಿಂಚು ಹರಿಸಿದ ಖ್ಯಾತಿ ಉಳಿಸಿಕೊಳ್ಳಲು ಯಶಸ್ವಿಯಾಗಿದೆ.

ತಂಡದ ಮಾಲೀಕ, ನಟ ಅಭಿಷೇಕ್ ಬಚ್ಚನ್‌ ಅವರ ಬೆಂಬಲ, ಕೋಚ್‌ ಬಲವಾನ್ ಸಿಂಗ್ ಅವರ ನೈತಿಕ ಬಲದ ಜೊತೆಗೆ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವವರು ಸ್ಟಾರ್‌ ರೈಡರ್‌ ಜಸ್ವೀರ್‌ ಸಿಂಗ್‌. ಚಿರತೆಯ ವೇಗ, ಎದುರಾಳಿ ರಕ್ಷಣಾ ಕೋಟೆಯ ಮೇಲೆ ಹದ್ದಿನ ಕಣ್ಣು ಮತ್ತು ಸಿಂಹದಂತೆ ಎರಗಿ ದಾಳಿ ಮಾಡುವ ಚಾಕಚಕ್ಯತೆ ಹೊಂದಿರುವ ಜಸ್ವೀರ್‌ ಮಾತಿನಲ್ಲಿ ಬಲು ಮುಗ್ಧ.

ಪ್ರೊ ಕಬಡ್ಡಿ ಲೀಗ್‌ನಲ್ಲಿ 40ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ 30ರ ಹರಯದ ಈ ಆಟಗಾರ 600ಕ್ಕೂ ಹೆಚ್ಚು ರೈಡ್ ಮಾಡಿದ್ದಾರೆ. 275ಕ್ಕೂ ಹೆಚ್ಚು ಪಾಯಿಂಟ್‌ಗಳ ಪೈಕಿ 250ಕ್ಕೂ ಅಧಿಕ ಪಾಯಿಂಟ್‌ಗಳನ್ನು ರೈಡಿಂಗ್‌ನಿಂದಲೇ ಗಳಿಸಿದ್ದಾರೆ. ಹರಿಯಾಣ ಮೂಲದ ಜಸ್ವೀರ್‌ ಸಿಂಗ್‌, ಪಂಜಾಬ್ ಪೊಲೀಸ್‌ನಲ್ಲಿ ಉದ್ಯೋಗಿಯಾಗಿದ್ದವರು. ಈಗ ಓಎನ್‌ಜಿಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಅವರ ಜತೆಗೆ ‘ಪ್ರಜಾವಾಣಿ’  ನಡೆಸಿದ ಸಂಭಾಷಣೆ ಇಲ್ಲಿದೆ.

* ಕಬಡ್ಡಿ ಆಟಕ್ಕೆ ನಿಮ್ಮ ಪ್ರವೇಶ ಹೇಗಾಯಿತು?
ನಮ್ಮದು ಕಬಡ್ಡಿಗೆ ಹೆಸರಾಗಿರುವ ಊರು. ಸಣ್ಣ ವಯಸ್ಸಿನಿಂದಲೇ ಈ ಆಟವನ್ನು ಆಡುತ್ತ ಬೆಳೆದೆ. ಅಣ್ಣ ಉತ್ತಮ ಆಟಗಾರನಾಗಿದ್ದ. ಆತನ ಪ್ರೇರಣೆಯಿಂದ  ಕಬಡ್ಡಿಯನ್ನು ಬದುಕಿನಲ್ಲಿ ಗಂಭೀರವಾಗಿ ಸ್ವೀಕರಿಸಿದೆ. ಮನೆಯಲ್ಲಿ ಎಲ್ಲರಿಂದಲೂ ಉತ್ತಮ ಬೆಂಬಲ ಲಭಿಸಿತು. ಹೀಗಾಗಿ ಬೇಗ ಹೆಸರು ಮಾಡಲು ಸಾಧ್ಯವಾಯಿತು. 

* ಪ್ರೊ ಕಬಡ್ಡಿಗೆ ಪದಾರ್ಪಣೆ ಮಾಡಿದ ಬಗ್ಗೆ ವಿವರಿಸುವಿರಾ...
2000ನೇ ಇಸವಿಯಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಬಡ್ಡಿ ಆಡುತ್ತಿದ್ದೇನೆ. ಆದ್ದರಿಂದ ಪ್ರೊ ಕಬಡ್ಡಿಗೆ ಸುಲಭವಾಗಿ ಪ್ರವೇಶ ಪಡೆದೆ.

* 2014ರ ಇಂಚೆನ್‌ ಏಷ್ಯಾ ಕೂಟದಲ್ಲಿ ಚಿನ್ನ ಗೆದ್ದ ಭಾರತ ತಂಡದ ಸದಸ್ಯರು ನೀವು. ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿಗೂ ಪ್ರೊ ಕಬಡ್ಡಿಗೂ ಏನಾದರೂ ವ್ಯತ್ಯಾಸ ಕಾಣುತ್ತಿದೆಯೇ?
ನನ್ನ ಪ್ರಕಾರ ಯಾವುದೇ ವ್ಯತ್ಯಾಸವಿಲ್ಲ. ಎಲ್ಲವೂ ಕಬಡ್ಡಿಯೇ. ಆಟದಲ್ಲಿ ಜಯ ಗಳಿಸುವುದಷ್ಟೇ ಮುಖ್ಯ. ಆದ್ದರಿಂದ ಪಂದ್ಯ ಯಾವ ಮಟ್ಟದ್ದು ಎಂಬುದು ಮಹತ್ವದ್ದಲ್ಲ.

* ಕಬಡ್ಡಿಯಿಂದ ನಿಮ್ಮ ವೈಯಕ್ತಿಕ ಬದುಕಿಗೆ ಏನು ಏನು ಲಾಭವಾಗಿದೆ?
ಉತ್ತಮ ಹೆಸರು ಬಂದಿದೆ. ಕಬಡ್ಡಿಯಿಂದಾಗಿಯೇ ನನಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಸಿಕ್ಕಿತ್ತು. ಈಗ ಓಎನ್‌ಜಿಸಿಯಲ್ಲಿ ಕೆಲಸ ಸಿಗುವುದಕ್ಕೂ ಈ ಆಟವೇ ಕಾರಣ.

* ಪ್ರೊ ಕಬಡ್ಡಿಗಿಂತ ಮೊದಲು ಮತ್ತು ನಂತರ ಊರಿನ ಜನರು ನಿಮ್ಮ ಮೇಲೆ ಹೊಂದಿರುವ ಗೌರವದಲ್ಲಿ ಏನಾದರೂ ವ್ಯತ್ಯಾಸ ಕಾಣುತ್ತಿದೆಯೇ?
ವ್ಯತ್ಯಾಸವೇನೂ ಇಲ್ಲ. ಕಬಡ್ಡಿ ಆಟಗಾರ ಎನ್ನುವ ಕಾರಣದಿಂದ ಮೊದಲಿನಿಂದಲೂ ನನ್ನ ಮೇಲೆ ಬಹಳ ಗೌರವ ಇತ್ತು. ಟೂರ್ನಿಗಳನ್ನು ಮುಗಿಸಿ ಊರಿಗೆ ಮರಳಿದಾಗ ಸಿಗುವ ಪ್ರೀತಿ, ಅಭಿಮಾನಕ್ಕೆ ಬೆಲೆ ಕಟ್ಟಲಾಗದು.

* ಪ್ರೊ ಕಬಡ್ಡಿ ಲೀಗ್‌ನಲ್ಲಿ ನೀವು ಆಡಿದ ಪಂದ್ಯಗಳ ಸಂಖ್ಯೆ 50 ಸಮೀಪಿಸುತ್ತಿದೆ. 275ಕ್ಕೂ ಹೆಚ್ಚು ಪಾಯಿಂಟ್‌ ಗಳಿಸಿದ್ದೀರಿ. ನಿಮ್ಮ ಪ್ರದರ್ಶನದ ಬಗ್ಗೆ ಏನನಿಸುತ್ತಿದೆ?
ಬಲಿಷ್ಠ ತಂಡದಲ್ಲಿ ಆಡಲು ಅವಕಾಶ ಲಭಿಸಿರುವುದು ಮಹತ್ವದ ವಿಷಯ. ತಂಡಕ್ಕಾಗಿ ಆಡುತ್ತಿದ್ದೇನೆ. ಎಲ್ಲರ ಸಹಕಾರದಿಂದ ಪಾಯಿಂಟ್‌ಗಳನ್ನು ಸಂಗ್ರಹಿಸಲು ಸಾಧ್ಯವಾಗಿದೆ. ತರಬೇತುದಾರ ಮತ್ತು ಸಹ ಆಟಗಾರರ ಸಹಕಾರದಿಂದ ಸಾಧನೆ ಮಾಡಿದ್ದೇನೆ.

* ಜೈಪುರ ಪಿಂಕ್‌ ಪ್ಯಾಂಥರ್ಸ್‌ಗೆ ನಾಯಕನಾಗಿದ್ದೀರಿ. ಈ ಕರ್ತವ್ಯವನ್ನು ಹೇಗೆ ನಿಭಾಯಿಸುತ್ತೀರಿ?
ನಾಯಕ ಸ್ಥಾನ ನನಗೆ ದೊಡ್ಡ ಹೊರೆಯಾಗಲಿಲ್ಲ. ನಮ್ಮದು ಅತ್ಯುತ್ತಮ ತಂಡಗಳಲ್ಲಿ ಒಂದು. ಹೀಗಾಗಿ ನಾಯಕ ನಾಗಿ ಕಾರ್ಯನಿರ್ವಹಿಸುವುದು ಸುಲಭ. ತರಬೇತುದಾರರು ಸಮರ್ಥವಾಗಿ ತಂಡಕ್ಕೆ ನಿರ್ದೇಶನ ನೀಡುವುದರಿಂದ ನನ್ನ ಕೆಲಸ ಇನ್ನಷ್ಟು ಸುಲಭ; ನಾನು ನಿರಾಳ

* ನೀವು ರೈಡರ್‌ ಎಂದು ಗುರುತಿಸಿ ಕೊಂಡವರು. ಆದರೂ ಟ್ಯಾಕ್ಲಿಂಗ್‌ನಲ್ಲಿ ಉತ್ತಮ ಪಾಯಿಂಟ್‌ಗಳನ್ನು ಕಲೆ ಹಾಕಿ ದ್ದೀರಿ. ಇದು ಹೇಗೆ ಸಾಧ್ಯವಾಯಿತು?
ಎಲ್ಲವೂ ಅಭ್ಯಾಸ ಬಲ. ಯಾವ ರೀತಿ ಆಡಬೇಕು, ಯಾವ ಸಂದರ್ಭದಲ್ಲಿ ಯಾವ ತಂತ್ರ ಬಳಸಬೇಕು ಎಂಬಿತ್ಯಾದಿ ಸಲಹೆಗಳನ್ನು ತರಬೇತುದಾರರು ನೀಡುತ್ತಾರೆ. ಅದಕ್ಕೆ ತಕ್ಕಂತೆ ಆಡುತ್ತೇನೆ. ಆದ್ದರಿಂದ ಟ್ಯಾಕ್ಲಿಂಗ್‌ನಲ್ಲೂ ಪಾಯಿಂಟ್‌ ಗಳಿಸಲು ಸಾಧ್ಯವಾಗಿದೆ.

* ಆರು ರೈಡರ್‌ಗಳು, ಮೂವರು ಡಿಫೆಂಡರ್‌ಗಳು ಮತ್ತು ಏಳು ಮಂದಿ ಆಲ್‌ರೌಂಡರ್‌ಗಳನ್ನು ಹೊಂದಿರುವ ನಿಮ್ಮ ತಂಡ ಈ ವರೆಗೆ ಗಳಿಸಿರುವ ಪಾಯಿಂಟ್‌ಗಳಲ್ಲಿ ಹೆಚ್ಚಿನವು ಟ್ಯಾಕ್ಲಿಂಗ್‌ನಲ್ಲಿ ಬಂದಿವೆ. ಇದರ ಬಗ್ಗೆ ವಿಶ್ಲೇಷಣೆ ಮಾಡಿದ್ದೀರಾ?
ವಿಶ್ಲೇಷಣಾತ್ಮಕವಾಗಿ ನೋಡಿಲ್ಲ. ಸಂದರ್ಭಕ್ಕೆ ತಕ್ಕಂತೆ ಆಡುತ್ತೇವೆ. ಯಾವ ವಿಧಾನದಿಂದಲೇ ಬರಲಿ, ಪಾಯಿಂಟ್‌ ಪಾಯಿಂಟೇ ಅಲ್ಲವೇ? ಒಟ್ಟಿನಲ್ಲಿ ತಂಡದ ಗೆಲುವು ಮುಖ್ಯ. ಅದಕ್ಕಾಗಿ ಆಡುತ್ತೇವೆ.

* ಯಾವ ಬದಿಯಿಂದ ರೈಡ್ ಮಾಡುವುದು ನಿಮಗೆ ಹೆಚ್ಚು ಖುಷಿ ನೀಡುತ್ತದೆ. 
ಎರಡೂ ಬದಿಯಿಂದಲೂ ರೈಡ್ ಮಾಡುತ್ತೇನೆ. ಪರಿಸ್ಥಿತಿಗೆ ತಕ್ಕಂತೆ ಯಾವ ಭಾಗದಿಂದ ಆಕ್ರಮಣ ನಡೆಸಬೇಕು ಎಂಬುದನ್ನು ನಿರ್ಧರಿಸುತ್ತೇನೆ. ಆದರೂ ಬಲಬದಿಯಿಂದ ರೈಡ್ ಮಾಡುವುದು ನನಗೆ ಹೆಚ್ಚು ಖುಷಿ ನೀಡುತ್ತದೆ.

* ಪ್ರೊ ಕಬಡ್ಡಿಯಿಂದಾಗಿ ಗ್ರಾಮೀಣ ಕ್ರೀಡೆಯೊಂದು ಹೈಟೆಕ್‌ ಸ್ಪರ್ಶ ಪಡೆದಿದೆ, ಇದರಿಂದ ಈ ಆಟದ ಸೊಬಗಿಗೆ ಧಕ್ಕೆ ಬಂದಿದೆ ಎಂಬ ದೂರು ಇದೆ. ಈ ಬಗ್ಗೆ ನೀವೇನನ್ನುತ್ತೀರಿ?
ಈ ವಾದ ಸರಿಯಲ್ಲ. ಎಲ್ಲಿ ಆಡಿದರೂ ಹೇಗೆ ಆಡಿದರೂ ಆಟದ ಸೊಬಗಿಗೆ ಧಕ್ಕೆ ಬರಲಾರದು.  ಕ್ರಿಕೆಟ್ ಅನ್ನು ಊರಿನಲ್ಲಿ ಆಡುವುದರಿಂದ ಆ ಕ್ರೀಡೆಗೆ ಧಕ್ಕೆಯಾಗಿದೆಯೇ? ಹೈಟೆಕ್‌ ಸ್ಪರ್ಶದಿಂದ ಕಬಡ್ಡಿಯ ಸೊಬಗಿಗೆ ಏನೂ ಆಗಲಾಗದು ಎಂಬುದು ನನ್ನ ಅನಿಸಿಕೆ.

* ತಂಡದ ಮಾಲೀಕ ಅಭಿಷೇಕ್‌ ಬಚ್ಚನ್‌ ಮತ್ತು ತರಬೇತುದಾರ ಬಲವಾನ್ ಸಿಂಗ್‌ ಅವರ ಸಹಕಾರ ಹೇಗಿದೆ?
ನಮ್ಮ ತಂಡ ಒಂದು ಕುಟುಂಬ ಇದ್ದಂತೆ. ಎಲ್ಲರೂ ಕೂಡಿ ಕಲೆತು ಅಭ್ಯಾಸ ಮಾಡುತ್ತೇವೆ. ಅಭಿಷೇಕ್ ಬಚ್ಚನ್‌ ಆಟಗಾರರಿಗೆ ಉತ್ತಮ ರೀತಿಯಲ್ಲಿ ಉತ್ತೇಜನ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT