ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನಿನಿಂದ ತಿಂಗಳಿಗೆ ಲಕ್ಷ ಆದಾಯ

Last Updated 28 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

‘ರೈತರೇ, ಹೈನುಗಾರಿಕೆಯನ್ನು ಉಪ ಕಸುಬು ಮಾಡಿಕೊಂಡು ಆದಾಯ ಹೆಚ್ಚಿಸಿಕೊಳ್ಳಿ’ ಎಂಬ ಸಲಹೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮೇಲಿಂದ ಮೇಲೆ ಕೇಳಿ ಬರುತ್ತದೆ. ಆದರೆ ಇದಕ್ಕೆ ಓಗೊಡುವವರು ತೀರಾ ವಿರಳ. ಇಲ್ಲೊಬ್ಬರು ಹೈನುಗಾರಿಕೆಯನ್ನೇ ಮುಖ್ಯ ಕಸುಬು ಮಾಡಿಕೊಂಡು ಸಾಕಷ್ಟು ಹಣ ಸಂಪಾದಿಸುತ್ತಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಗ್ರಾಮದ ಎ.ಪಿ. ರಮೇಶ್‌ ಎಂಬುವರು ಪಶುಪಾಲನೆಯನ್ನೇ ಮುಖ್ಯ ವೃತ್ತಿ ಮಾಡಿಕೊಂಡವರು. ಹಾಲು ಮಾರಾಟದಿಂದಲೇ ತಿಂಗಳಿಗೆ ಲಕ್ಷಗಳ ಲೆಕ್ಕದಲ್ಲಿ ಹಣ ಗಳಿಸುತ್ತಿದ್ದಾರೆ. ರಮೇಶ್‌ ಮಿಶ್ರ ತಳಿಯ 34 ಹಸುಗಳನ್ನು ಸಾಕಣೆ ಮಾಡುತ್ತಿದ್ದಾರೆ. ತುಂಬು ಕರಾವಿನ 12, ಅರೆ ಕರಾವಿನ 9 ಹಾಗೂ 10ಕ್ಕೂ ಹೆಚ್ಚು ಗಬ್ಬದ ಹಸುಗಳಿವೆ. ಪ್ರತಿ ದಿನ 300ರಿಂದ 320 ಲೀಟರ್‌ವರೆಗೆ ಹಾಲು ಉತ್ಪಾದಿಸಿ ಮಾರಾಟ ಮಾಡುತ್ತಾರೆ. ಒಂದು ಹೊತ್ತಿಗೆ 18 ಲೀಟರ್‌ ಹಾಲು ಕೊಡುವ ಎಚ್‌ಎಫ್‌ ತಳಿಯ ಹಸು ರಮೇಶ್‌ ಅವರ ಕೊಟ್ಟಿಗೆಯಲ್ಲಿದೆ.

ಜಿಲ್ಲೆಗೇ ಪ್ರಥಮ
ಇತಿಹಾಸ ವಿಷಯದಲ್ಲಿ ಎಂ.ಎ ಪದವಿ ಪಡೆದಿರುವ ರಮೇಶ್‌ ಕಳೆದ 15 ವರ್ಷಗಳಿಂದ ಹೈನುಗಾರಿಕೆ ನಡೆಸುತ್ತಿದ್ದಾರೆ. ಇವರ ಬಳಿ ಎಚ್‌ಎಫ್‌, ಜರ್ಸಿ ಹಾಗೂ ನಾಟಿ ಹೋರಿಯಿಂದ ಕ್ರಾಸ್‌ ಮಾಡಿಸಿದ ಹಸುಗಳಿವೆ. ಹಾಲು ಉತ್ಪಾದನೆಯಲ್ಲಿ 2002ರಿಂದ ಜಿಲ್ಲೆಗೇ ಪ್ರಥಮ ಸ್ಥಾನದಲ್ಲಿದ್ದಾರೆ. ಮಂಡ್ಯ ಹಾಲು ಒಕ್ಕೂಟ (ಮನ್‌ಮುಲ್‌)ದ ಮಟ್ಟದಲ್ಲಿ ರಮೇಶ್‌ 2002–03ರಿಂದ ಸತತವಾಗಿ ಗರಿಷ್ಠ ಹಾಲು ಉತ್ಪಾದಕ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ವೈಜ್ಞಾನಿಕ ಕೊಟ್ಟಿಗೆ ನಿರ್ಮಾಣ
ರಮೇಶ್‌ ಹಸುಗಳ ಕೊಟ್ಟಿಗೆಯನ್ನು ವೈಜ್ಞಾನಿಕವಾಗಿ ನಿರ್ಮಿಸಿದ್ದಾರೆ. ಸೆಗಣಿ ಮತ್ತು ಮೂತ್ರ ಸಲೀಸು ಹೊರ ಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ. 52/23 ಅಡಿ ಅಳತೆಯ ಕೊಟ್ಟಿಗೆ ಇದೆ. ಪ್ರತಿ ಹಸುವಿಗೆ 3 ಅಡಿ ಅಗಲ, 4 ಅಡಿ ಉದ್ದ ಇರುವಂತೆ ಕೊಟ್ಟಿಗೆ ಇದ್ದು, ಒಂದರಿಂದ ಮತ್ತೊಂದು ಹಸುವಿಗೆ ಸಮಾನಾಂತರ ಸ್ಥಳ ಬಿಡಲಾಗಿದೆ. ಎರಡು ಹಸುಗಳ ನಡುವೆ ಕಬ್ಬಿಣದ ಸರಪಳಿ ಅಳವಡಿಸಲಾಗಿದೆ. ಸೆಗಣಿ ಮತ್ತು ಮೂತ್ರ ಕೊಟ್ಟಿಗೆಯಲ್ಲಿ ಲವಲೇಶವೂ ಇರದಂತೆ ಕೊಟ್ಟಿಗೆ ರೂಪುಗೊಂಡಿದೆ. ಮಂಗಳೂರು ಹೆಂಚು ಹೊದಿಸಿದ ಶೆಡ್‌ ನಿರ್ಮಿಸಲಾಗಿದೆ. ಆ ಮೂಲಕ ಮಳೆ, ಚಳಿ ಮತ್ತು ಬೇಸಿಗೆ ಕಾಲದಲ್ಲಿ ಒಂದೇ ಬಗೆಯ ಹವಾಮಾನ ಇರುವಂತೆ ನೋಡಿಕೊಳ್ಳಲಾಗಿದೆ.

ಆಹಾರ ಕ್ರಮ ಹೀಗಿವೆ
ಹಸುಗಳಿಗೆ ಬೂಸಾ, ಹಿಂಡಿ, ಕಡಲೆ ಹೊಟ್ಟು ಕೊಡುವ ಬದಲು ಮನ್‌ಮುಲ್‌ ಸರಬರಾಜು ಮಾಡುವ ನಂದಿನಿ ಗ್ರೇಡ್‌–1 ಆಹಾರ ಕೊಡಲಾಗುತ್ತಿದೆ. ಅದರ ಜತೆಗೆ ಅಗತ್ಯ ಪ್ರಮಾಣದಲ್ಲಿ ಹಸಿ ಮೇವು ನೀಡಲಾಗುತ್ತಿದೆ. ಅದಕ್ಕಾಗಿ ಎರಡೂವರೆ ಎಕರೆ ಪ್ರದೇಶದಲ್ಲಿ ಸಿಒ–3 ತಳಿಯ ಹುಲ್ಲು ಬೆಳೆಸಿದ್ದಾರೆ. ಕೊಯ್ದು ತಂದ ಹುಲ್ಲನ್ನು ಚಾಪ್‌ ಕಟ್ಟರ್‌ನಿಂದ ಅರ್ಧ ಇಂಚಿಗೆ ಕತ್ತರಿಸಿ ನಿಗದಿತ ಪ್ರಮಾಣದಲ್ಲಿ ಹಸುಗಳ ಗೊಂತಿಗೆ ಹಾಕಲಾಗುತ್ತದೆ.

ಪ್ರತಿ ಹಸುವಿಗೆ ದಿನವೊಂದಕ್ಕೆ 24 ಕೆ.ಜಿ. ಹಸಿರು ಹುಲ್ಲು, 12 ಕೆ.ಜಿ. ಕೃತಕ ಆಹಾರ ನೀಡಲಾಗುತ್ತದೆ. ಒಂದು ಲೀಟರ್‌ ಹಾಲಿಗೆ ಅರ್ಧ ಕೆ.ಜಿ ಪ್ರಮಾಣದಲ್ಲಿ ಆಹಾರ ನೀಡುವ ಕ್ರಮ ಅನುಸರಿಸಲಾಗುತ್ತದೆ. ಹಸುವಿನ ದೇಹಕ್ಕೆ ಅಗತ್ಯ ಪೋಷಕಾಂಶ ಒದಗಿಸುವ ಉದ್ದೇಶದಿಂದ ಪ್ರತ್ಯೇಕವಾಗಿ ಒಂದು ಕೆ.ಜಿ. ಕೃತಕ ಆಹಾರವನ್ನು ಕೊಡಲಾಗುತ್ತದೆ. ಆಹಾರದ ಜತೆಗೆ ಮಿನರಲ್‌ ಮಿಕ್ಸರ್‌, ಮುಕ್ಕಣ್ಣು ನುಚ್ಚು (ಅಕ್ಕಿ ಗಿರಣಿಯಲ್ಲಿ ಸಿಗುವ ಉಪ ಉತ್ಪನ್ನ) ಹಾಗೂ ಒಂದು ಮುಷ್ಟಿ ಅಡುಗೆ ಉಪ್ಪು ಸೇರಿಸಲಾಗುತ್ತದೆ. ಶೇ 80ರಷ್ಟು ಕೃತಕ ಆಹಾರದ ಜತೆಗೆ ಶೇ 20ರಷ್ಟು ಪೂರಕ ಆಹಾರ (supportive feeds) ಸೇರಿರುತ್ತದೆ.

ಹಾಲು ಕರೆಯುವ ವಿಧಾನ
ರಮೇಶ್‌ ಕೈಗಳಿಂದ ಹಸುವಿನ ಹಾಲು ಹಿಂಡುವುದಿಲ್ಲ. ಸಕ್ಕಿಂಗ್‌ ಯಂತ್ರದ ಸಹಾಯದಿಂದ ಹಾಲು ಕರೆಯುತ್ತಾರೆ. 5 ನಿಮಿಷದಲ್ಲಿ 15 ಲೀಟರ್‌ ಹಾಲು ಕರೆದುಕೊಡಬಲ್ಲ ಎರಡು ಯಂತ್ರಗಳು ಇವರ ಬಳಿ ಇವೆ. ಹಾಲು ಕರೆಯಲು ಮತ್ತು ನಿರ್ವಹಣೆಯ ಕೆಲಸಕ್ಕೆ ಆಳುಗಳನ್ನು ನೇಮಿಸಿಕೊಂಡಿಲ್ಲ.

   ರಮೇಶ್‌ ತಮ್ಮ ಪತ್ನಿ ಮಮತಾ ಅವರ ಜತೆಗೂಡಿ ತಾವೇ ಎಲ್ಲ ಕೆಲಸವನ್ನು ಮಾಡುತ್ತಾರೆ. ಹಾಲನ್ನು ತಮ್ಮ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸರಬರಾಜು ಮಾಡುತ್ತಾರೆ. ದನದ ಕೊಟ್ಟಿಗೆಯಿಂದ ಡೈರಿಗೆ ಹಾಲು ಸರಬರಾಜು ಮಾಡಲು ಮನ್‌ಮುಲ್‌ ಇವರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನೂ ನೀಡುತ್ತಿದೆ.

‘15 ವರ್ಷಗಳ ಹಿಂದೆ ನನ್ನ ಬಳಿ ಒಂದು ಗೊಡ್ಡು ಹಸು ಮಾತ್ರ ಇತ್ತು. ರೈಸ್‌ಮಿಲ್‌ ನಡೆಸುವ ಜತೆಗೆ ಹಂತ ಹಂತವಾಗಿ ಹೈನುಗಾರಿಕೆಯನ್ನು ಹೆಚ್ಚಿಸುತ್ತಾ ಹೋದೆ. 2002ರ ವೇಳೆಗೆ ಪ್ರತ್ಯೇಕ ಕೊಟ್ಟಿಗೆ ನಿರ್ಮಿಸಿ ಪಶುಪಾಲನೆಯನ್ನೇ ಪ್ರಧಾನ ಕಸುಬು ಮಾಡಿಕೊಂಡೆ. ಈಗ ನನ್ನ ‘ಪಂಚಮುಖಿ’ ಹಸು ಸಾಕಣೆ ಕೇಂದ್ರದಲ್ಲಿ ದಿನವೊಂದಕ್ಕೆ 320 ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಖರ್ಚು ಕಳೆದು ತಿಂಗಳಿಂದ ಒಂದು ಲಕ್ಷ ರೂಪಾಯಿಗೂ ಹೆಚ್ಚು ಹಣ ಮಿಗುತ್ತಿದೆ’ ಎಂದು ರಮೇಶ್‌ ತಮ್ಮ ಹೈನು ಉದ್ಯಮದ ಗುಟ್ಟನ್ನು ಬಿಚ್ಚಿಡುತ್ತಾರೆ.

ಇವರ ಯಶಸ್ವಿ ಹೈನುಗಾರಿಕೆಗಾಗಿ ಅನೇಕ ಪ್ರಶಸ್ತಿ, ಗೌರವಗಳು ಸಿಕ್ಕವೆ. ಮನ್‌ಮುಲ್‌ನಿಂದ 2003–04 ಸೇರಿದಂತೆ ಹಲವು ಬಾರಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಈಚೆಗೆ ನಡೆದ ‘ವಿಶ್ವ ಹಾಲು ದಿನಾಚರಣೆ’ಯಲ್ಲಿ ರಮೇಶ್‌ ಅವರಿಗೆ ಮುಖ್ಯಮಂತ್ರಿಗಳಿಂದ ‘ನಂದಿನಿ ಹಾಲು ಉತ್ಪಾದಕ’ ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ. 2013ರಲ್ಲಿ ಇವರಿಗೆ ‘ಮೈಸೂರು ದಸರಾ ಮಹೋತ್ಸವ ಪ್ರಶಸ್ತಿ’ ಕೂಡ ಲಭಿಸಿದೆ. ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌)ವೂ ಇವರನ್ನು ಗೌರವಿಸಿದೆ.
ಸಂಪರ್ಕಕ್ಕೆ: 96204 57271.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT