ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂಡದೊಳಗಿನ ‘ಸತ್ಯ’

ರಸ್ತೆ ಗುಂಡಿ– ಅಂತ್ಯ ಹೇಗೆ?
Last Updated 25 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಪ್ರತಿ ವರ್ಷ ನಾವು ರಸ್ತೆಗಳಿಗಾಗಿ ನೂರಾರು ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ. ಆ ದುಡ್ಡು ಮಳೆಯಲ್ಲಿ ಕೊಚ್ಚಿ ಹೋಗುತ್ತದೆ. ಕೆಲವೊಮ್ಮೆ ದುರಸ್ತಿಗೊಂಡ ರಸ್ತೆಗಳು ಕೆಲವು ದಿನಗಳ ಮಟ್ಟಿಗೂ ಸುಸ್ಥಿರವಾಗಿ ಉಳಿಯುವುದಿಲ್ಲ. ಇದೊಂದು ನಿವಾರಿಸಿಕೊಳ್ಳಬಹುದಾದ ಬಿಕ್ಕಟ್ಟು. ಆದರೆ ನಮ್ಮ ನಗರಾಡಳಿತಗಳಿಗೆ ವ್ಯರ್ಥವಾಗಿ ಹೋಗುವ ಈ ಖರ್ಚನ್ನು ನಿವಾರಿಸುವುದು ಬೇಕಾಗಿಲ್ಲ. ಹೀಗಾಗಿ ರಸ್ತೆ ದುರಸ್ತಿಗಾಗಿ ದುಡ್ಡು ಪೋಲು ಮಾಡುವ ವ್ಯವಸ್ಥೆ ಮುಂದುವರಿದಿದೆ.

ಹೊಂಡಗಳಿಲ್ಲದಂತೆ ರಸ್ತೆಗಳನ್ನು ಇಟ್ಟುಕೊಳ್ಳುವುದು ಸುಲಭ ಮತ್ತು ತುಂಬ ಸರಳ ಕೂಡ. ಜಗತ್ತಿನ ಎಲ್ಲೆಡೆ ನಗರಗಳು ಎಲ್ಲ  ಸಮಯದಲ್ಲೂ ಇದನ್ನು ಮಾಡುತ್ತಿರುತ್ತವೆ. ಅದು ಹೇಗೆಂದರೆ ಮೂರು ಅಥವಾ ನಾಲ್ಕು ಪ್ರಮುಖ ಕೆಲಸಗಳನ್ನು ಮಾಡುವ ಮೂಲಕ.

ಮೊದಲನೆಯದಾಗಿ, ಅವರು ರಸ್ತೆಗಳನ್ನು ಅತ್ಯುತ್ತಮ ಗುಣಮಟ್ಟದಿಂದ ನಿರ್ಮಿಸುತ್ತಾರೆ. ಆದರೆ ನಾವು ಅಗ್ಗದಲ್ಲಿ ನಿರ್ಮಾಣಗೊಳ್ಳುತ್ತದೆ ಎಂದು ಭಾವಿಸಿ ಕಳಪೆ ಗುಣಮಟ್ಟದಿಂದ ಕೂಡಿದ ರಸ್ತೆಗಳನ್ನು ನಿರ್ಮಿಸುತ್ತೇವೆ. ಆದರೆ ಅದು ನಿಜವಾಗಿಯೂ ಸತ್ಯವಲ್ಲ. ಇಂತಹ ಕಳಪೆ ರಸ್ತೆಗಳು ಮಳೆಗಾಲದಲ್ಲಿ ಶಿಥಿಲಗೊಳ್ಳುತ್ತವೆ. ಹೀಗಾಗಿ ಮತ್ತೆ ಮತ್ತೆ ರಸ್ತೆಗಳನ್ನು ದುರಸ್ತಿಗೊಳಿಸುತ್ತಲೇ ಇರಬೇಕಾಗುತ್ತದೆ. ದೀರ್ಘಾವಧಿಯಲ್ಲಿ ಇಂತಹ ರಸ್ತೆಗಳಿಗೆ ತಗಲುವ ವೆಚ್ಚ ಅಧಿಕವೇ ಆಗಿರುತ್ತದೆ. ಅದಕ್ಕಾಗಿ ಅಧಿಕ ವೆಚ್ಚ ಮತ್ತು ಗುಣಮಟ್ಟದಿಂದ ಕೂಡಿದ ರಸ್ತೆಯನ್ನು ಮೊದಲಾಗಿಯೇ ನಿರ್ಮಿಸುವುದು ಉತ್ತಮ.

ಬೆಂಗಳೂರಿನ ವಿಠಲ ಮಲ್ಯ ರಸ್ತೆಯನ್ನೇ ನೋಡಿ. ಈ ರಸ್ತೆ ಕಳೆದ ಐದು ವರ್ಷಗಳಿಂದ ಯಾವುದೇ ನಿರ್ವಹಣೆ ಇಲ್ಲದೆ ಅತ್ಯಂತ ಉತ್ತಮ ಸ್ಥಿತಿಯಲ್ಲೇ ಇದೆ. ಸಮೀಪದ ಅನೇಕ ರಸ್ತೆಗಳಲ್ಲಿ ಮೇಲಿಂದ ಮೇಲೆ ದುರಸ್ತಿ ಕೆಲಸಗಳು ನಡೆದಿವೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು  ಗಮನಿಸಿ. ಗುಣಮಟ್ಟದ ಕಾಮಗಾರಿ ಕಾರಣಕ್ಕೇ ಅವು ಹೆಚ್ಚು ಸಮಯ ಕೆಟ್ಟುಹೋಗದೆ ಉಳಿದುಕೊಳ್ಳುತ್ತವೆ.

ಬಿಬಿಎಂಪಿ ಟೆಂಡರ್‌ ಶ್ಯೂರ್‌ (ಸ್ಪೆಸಿಫಿಕೇಷನ್‌ ಫಾರ್‌ ಅರ್ಬನ್‌ ರೋಡ್‌ ಎಕ್ಸಿಕ್ಯೂಷನ್‌) ಕಾರ್ಯಕ್ರಮದ ಅಡಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವುದಕ್ಕೆ ಆರಂಭಿಸಿದೆ. ಆದರೆ ಇವು ಅಪವಾದಗಳು ಮಾತ್ರ. ಸಾಮಾನ್ಯವಾಗಿ ಪ್ರತಿ ರಸ್ತೆಯೂ ಉತ್ತಮ ಗುಣಮಟ್ಟದಿಂದ ಕೂಡಿರಲೇಬೇಕು. ಸರ್ಕಾರ ಆಯ್ಕೆ ಮಾಡಿದ ಕೇವಲ 40 ಅಥವಾ 50ರಷ್ಟು ರಸ್ತೆಗಳಲ್ಲ. ಟೆಂಡರ್ ಶ್ಯೂರ್‌ ರಸ್ತೆಗಳ ಪಕ್ಕದಲ್ಲೇ ಬಿಬಿಎಂಪಿ ಅತ್ಯಂತ ಕೆಟ್ಟ ರಸ್ತೆಗಳನ್ನು ನಿರ್ಮಿಸುತ್ತಿರುವುದನ್ನು ಈಗಲೂ ನೋಡಬಹುದು. ಅಂದರೆ ಟೆಂಡರ್‌ ಶ್ಯೂರ್‌ನಂತಹ ಉತ್ತಮ ಯೋಜನೆಗಳಿಂದ ದೊರೆತ ಅನುಭವಗಳಿಂದಲೂ ನಾವು ಪಾಠ ಕಲಿತಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಎರಡನೆಯದಾಗಿ, ಜಗತ್ತಿನಾದ್ಯಂತ ನಗರಗಳಲ್ಲಿ ಆಂತರಿಕವಾಗಿ ದುರಸ್ತಿ ಮಾಡಿಕೊಳ್ಳಲೆಂದು ಒಂದಿಷ್ಟು ಹಣವನ್ನು ಸ್ಥಳೀಯಾಡಳಿತ ಸಂಸ್ಥೆಗಳು ಮೀಸಲಾಗಿ ಇಟ್ಟುಕೊಂಡಿರುತ್ತವೆ. ಅಂದರೆ ತಮಗೆ ಬೇಕಾದಂತಹ ಎಂಜಿನಿಯರಿಂಗ್ ಕೆಲಸಗಳನ್ನು ಶೇ 100ರಷ್ಟು ಹೊರಗುತ್ತಿಗೆ ಮಾಡಿಕೊಳ್ಳುವುದಿಲ್ಲ. ಶೇ 10ರಷ್ಟು ಸಂಪನ್ಮೂಲವನ್ನು ತಮ್ಮಲ್ಲಿಯೇ ಇಟ್ಟುಕೊಂಡು ಕೆಲಸ ಮಾಡಿಕೊಳ್ಳುತ್ತವೆ. ರೋಡ್‌ ರೋಲರ್‌ಗಳು, ಜೆಸಿಬಿಗಳಂತಹ ಸಾಮಗ್ರಿಗಳ ಖರೀದಿಗೆ ಮತ್ತು ಇತರ ಕೆಲವು ವಿಚಾರಗಳಿಗೆ ತಮ್ಮಲ್ಲಿ ಬಜೆಟ್‌ ಇಟ್ಟುಕೊಂಡಿರುತ್ತವೆ. ಹೀಗಿರುವುದರಿಂದ ರಸ್ತೆ ಹೊಂಡಗಳಂತಹ ಸಮಸ್ಯೆಗಳು ಎದುರಾದಾಗ ಹೊಂಡಗಳನ್ನು ತಕ್ಷಣ ಮುಚ್ಚುವುದು ಸಾಧ್ಯವಾಗುತ್ತದೆ. ಪ್ರಮುಖ ರಸ್ತೆಗಳಲ್ಲಂತೂ ಇದು ಬಹಳ ಮುಖ್ಯ. ಅಂತಹ ರಸ್ತೆಗಳಲ್ಲಿ ಭಾರಿ ವಾಹನ ದಟ್ಟಣೆ ಇರುತ್ತದೆ. ಜನವಸತಿ ಪ್ರದೇಶಗಳಲ್ಲಿನ ರಸ್ತೆಗಳನ್ನು ಬಳಸುವ ಬದಲಿಗೆ ಇಂತಹ ಮುಖ್ಯ ರಸ್ತೆಗಳನ್ನೇ ಬಳಸಬೇಕು ಎಂದು ನಾವೆಲ್ಲ ಬಯಸುತ್ತೇವೆ. ಆದರೆ ಪ್ರಮುಖ ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳದಿದ್ದರೆ ಜನರಿಗೆ ಇವು ‘ಪ್ರಮುಖ’ ರಸ್ತೆಗಳು ಎಂಬ ಭಾವನೆಯೇ ಬರುವುದಿಲ್ಲ.

ಆಂತರಿಕ ಸಂಪನ್ಮೂಲ ಇಲ್ಲದಿದ್ದರೂ ರಸ್ತೆ ಹೊಂಡಗಳನ್ನು ತ್ವರಿತವಾಗಿ ಮುಚ್ಚುವುದು ಕಷ್ಟವೇನಲ್ಲ. ಇದಕ್ಕಾಗಿ ನಾವು ಮುನ್ನೋಟದ ಗುತ್ತಿಗೆ ಪದ್ಧತಿಯನ್ನು (ಫಾರ್ವರ್ಡ್‌ ಕಾಂಟ್ರಾಕ್ಟ್‌ ಸಿಸ್ಟಂ) ಅನುಸರಿಸಬೇಕು. 2010ರಲ್ಲಿ ಕಳೆದ ಬಾರಿಯ ಬಿಬಿಎಂಪಿ ಆಡಳಿತ ರೂಪುಗೊಳ್ಳುವುದಕ್ಕೆ ಕೆಲವು ತಿಂಗಳ ಮೊದಲು ಈ ಪದ್ಧತಿ ನಮ್ಮಲ್ಲಿ ಜಾರಿಗೆ ಬಂದಿತ್ತು. ಕರ್ನಾಟಕ ಲ್ಯಾಂಡ್ ಆರ್ಮಿಗೆ ಇಡೀ ನಗರ ವ್ಯಾಪ್ತಿಯಲ್ಲಿ ರಸ್ತೆ ಹೊಂಡ ಮುಚ್ಚುವುದಕ್ಕೆ ಗುತ್ತಿಗೆ ನೀಡಲಾಗಿತ್ತು. ಅದಕ್ಕಾಗಿ 5 ಕೋಟಿ ರೂಪಾಯಿಯನ್ನು ಮುಂಗಡವಾಗಿ ತೆಗೆದು ಇರಿಸಲಾಗಿತ್ತು. ರಸ್ತೆ ಹೊಂಡ ಮುಚ್ಚಿದ ಕೆಲಸ ನಡೆದಾಗಲೆಲ್ಲ ಸ್ಥಳೀಯ ವಾರ್ಡ್‌ ಎಂಜಿನಿಯರ್‌ ಮತ್ತು ಸ್ಥಳೀಯ ಸಂಚಾರ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ ಇದನ್ನು ಪ್ರಮಾಣೀಕರಿಸಬೇಕಿತ್ತು. ಬಳಿಕ ಹಣವನ್ನು ಗುತ್ತಿಗೆ ಸಂಸ್ಥೆಗೆ ಪಾವತಿ ಮಾಡಲಾಗುತ್ತಿತ್ತು. ಮೀಸಲಿಟ್ಟ ಹಣ ಮುಗಿದರೆ ಅದಕ್ಕೆ ಹಣ ಸೇರಿಸುವ ವ್ಯವಸ್ಥೆ ಇತ್ತು.

ಆಂತರಿಕವಾಗಿ ರಸ್ತೆ ಹೊಂಡ ಮುಚ್ಚುವ ಪರಿಕರಗಳು ಇಲ್ಲದಾಗ ಅಥವಾ ಫಾರ್ವರ್ಡ್‌ ಕಾಂಟ್ರಾಕ್ಟ್‌ ಪದ್ಧತಿ ಇಲ್ಲದಾಗ ನಾವು ಮೊದಲು ರಸ್ತೆಯಲ್ಲಿ ಹಲವಾರು ಹೊಂಡ, ಗುಂಡಿಗಳು ನಿರ್ಮಾಣಗೊಳ್ಳುವುದಕ್ಕಾಗಿ ಕಾಯಬೇಕಾಗುತ್ತದೆ. ಬಳಿಕ ಈ ಹೊಂಡಗಳನ್ನು ಮುಚ್ಚುವುದಕ್ಕಾಗಿ ಗುತ್ತಿಗೆದಾರರಿಂದ ಬಿಡ್‌ ಕರೆಯಬೇಕು. ಈ ಎಲ್ಲ ಪ್ರಕ್ರಿಯೆಗಳಿಂದ ವಿಳಂಬವಾಗುತ್ತದೆ. ಆಗ ಸಾರ್ವಜನಿಕರು ಬಹಳ ಕಷ್ಟ ಅನುಭವಿಸಬೇಕಾಗುತ್ತದೆ.

ಬೆಂಗಳೂರಿನಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದ ಫಾರ್ವರ್ಡ್‌ ಕಾಂಟ್ರಾಕ್ಟ್‌ ಪದ್ಧತಿ ಸ್ಥಗಿತಗೊಂಡಿದ್ದು ಏಕೆ? ಇದನ್ನು ತಿಳಿದುಕೊಳ್ಳುವುದು ಬಹಳ ಸರಳ ವಿಚಾರ. ಬಿಬಿಎಂಪಿಗೆ ಚುನಾವಣೆಯಾಗಿ ಪಾಲಿಕೆಯ ಕಾರ್ಯಕಲಾಪ ಆರಂಭವಾದ ತಕ್ಷಣ ರಸ್ತೆ ಹೊಂಡ ಮುಚ್ಚುವುದು ‘ಸಣ್ಣಪುಟ್ಟ’ ಕೆಲಸ ಎಂದು ಪಾಲಿಕೆ ಸದಸ್ಯರು ವಾದ ಮಾಡಿದರು. ಇಂತಹ ಕೆಲಸವನ್ನು ಯಾರು ಬೇಕಾದರೂ ಮಾಡಬಹುದು ಎಂದರು. ನಗರದಾದ್ಯಂತ ಕೆಲಸ ಮಾಡುವುದಕ್ಕಾಗಿ ಗುತ್ತಿಗೆ ಕೊಡುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.

ರಸ್ತೆ ಹೊಂಡಗಳನ್ನು ಮುಚ್ಚುವ ಕೆಲಸವನ್ನು ಸ್ಥಳೀಯ ಪಾಲಿಕೆ ಸದಸ್ಯರ ಮೇಲ್ವಿಚಾರಣೆಯಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ವಹಿಸಬೇಕು ಎಂದು ಪಟ್ಟು ಹಿಡಿದರು. ಇದರರ್ಥ ಏನೆಂದರೆ ತಮಗೆ ‘ಗೊತ್ತಿರುವ’ ವ್ಯಕ್ತಿಗೇ ರಸ್ತೆ ಗುಂಡಿ ಮುಚ್ಚುವ ಕೆಲಸ ನೀಡಬೇಕೆಂಬುದು. ಇದರ ಫಲ ಏನಾಯಿತೆಂದರೆ ‘ಹಳೆ ಕಲ್ಲು ಹೊಸ ಬಿಲ್ಲು’ ಎಂಬಂತಹ ವ್ಯವಸ್ಥೆ ಜಾರಿಗೆ ಬಂತು. ಬಿಬಿಎಂಪಿಯಲ್ಲಿ ಇದೊಂದು ವಾರ್ಷಿಕ ಕಾರ್ಯಕ್ರಮವೆಂಬಂತೆ ರೂಪುಗೊಂಡಿತು. ಇಲ್ಲಿ ನೀಡಿದ ಪರಿಹಾರಗಳೆಲ್ಲ ಬಿಬಿಎಂಪಿ ಪರಿಷತ್‌ಗೆ ಮತ್ತು ಆಡಳಿತಗಾರರಿಗೆ ಗೊತ್ತಿದೆ. ಆದರೆ ಅವರು ಅವುಗಳನ್ನು ಏಕೆ ಕಾರ್ಯಗತಗೊಳಿಸುವುದಿಲ್ಲ ಎಂಬುದು ಜನರಿಗೆ ಗೊತ್ತಿದೆ. ಅದು ಬೇರೇನೂ ಅಲ್ಲ, ದುಡ್ಡು, ದುಡ್ಡು.

ಅನಗತ್ಯವಾಗಿ ಮೇಲಿಂದ ಮೇಲೆ ಹಣವನ್ನು ವ್ಯಯಿಸುವುದರಿಂದ ಭಾರಿ ಪ್ರಮಾಣದ ಹಣ ಪೋಲಾಗುತ್ತದೆ. ಇಂತಹ ಹಣ ಲೂಟಿಯೇ ಎಲ್ಲ ಸಮಸ್ಯೆಗಳ ಮೂಲ. ಮುಂದಿನ ಬಾರಿ ಸರ್ಕಾರ ಅಥವಾ ಬಿಬಿಎಂಪಿ 30 ದಿನಗಳಲ್ಲಿ ಅಥವಾ 60 ದಿನಗಳಲ್ಲಿ ರಸ್ತೆ ಹೊಂಡಗಳನ್ನು ಮುಚ್ಚುತ್ತೇವೆ ಎಂಬ ಭರವಸೆಯನ್ನು ನಮಗೆ ನೀಡಿದ್ದೇ ಆದರೆ ಮುಂದಿನ 60 ದಿನಗಳಲ್ಲಿ ಮತ್ತಷ್ಟು ಹೊಸ ರಸ್ತೆ ಹೊಂಡಗಳು ಕಂಡುಬಂದಿರುತ್ತವೆ ಎಂಬುದನ್ನು ನೀವು ಈಗಲೇ ಖಚಿತಪಡಿಸಿಕೊಳ್ಳಬಹುದು. ರಸ್ತೆ ಹದಗೆಡುವುದು ಹೇಗೆ, ಏಕೆ ಎಂಬುದಕ್ಕೆ ನಿಖರ ಕಾರಣ ನಮಗೀಗ ತಿಳಿದಿದೆ. ರಸ್ತೆಗಳಲ್ಲಿ ಹೊಂಡಗಳು ಬೀಳಲೇಬಾರದು ಎಂದು ಪಟ್ಟುಹಿಡಿಯುವ ಕೆಲಸವನ್ನು ನಾವು ಈಗ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT