ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಣೆಗೇಡಿತನಕ್ಕೆ ಕನ್ನಡಿ

ಅಕ್ಷರ ಗಾತ್ರ

ಮಳೆ ನೀರು ಸಂಗ್ರಹದ ಬಗ್ಗೆ ‘ಪ್ರಜಾವಾಣಿ’ ಸಂಪಾದಕೀಯದಲ್ಲಿ (ಜುಲೈ 4) ಉಪಯುಕ್ತ  ಸಲಹೆಗಳಿವೆ.  ಮಳೆ ನೀರನ್ನು ಸಂಗ್ರಹಿಸಿ ಬಳಸುವುದು  ಮತ್ತು ಅಂತರ್ಜಲ ಮಟ್ಟವನ್ನು ಉತ್ತಮಪಡಿಸುವುದು ಈ ಯೋಜನೆಯ  ಪ್ರಧಾನ ಉದ್ದೇಶ.

ಬೆಂಗಳೂರು ಮಲೆನಾಡಿನ ಪ್ರದೇಶವಲ್ಲವಾದ್ದರಿಂದ ಕಡಿಮೆ ಮಳೆಯಾಗುತ್ತದೆ. ಎಷ್ಟೇ ಸಂಗ್ರಹ ಮಾಡಿದರೂ ಅದು ವರ್ಷಪೂರ್ತ ಬಳಕೆಗೆ ಸಾಕಾಗುವುದಿಲ್ಲ. ನೀರಿನ ಅವಶ್ಯಕತೆಯು ಪ್ರತೀ ಕುಟುಂಬದ ಸದಸ್ಯರ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಇದರಿಂದ ಆಗುವ ಪ್ರಯೋಜನ ಕನಿಷ್ಠವಾದುದು.

ಎರಡನೆಯದಾಗಿ ಅಂತರ್ಜಲ ಮಟ್ಟ ಉತ್ತಮಪಡಿಸುವುದು. ಇದು ಸರ್ಕಾರದ ಮಟ್ಟದಲ್ಲಿ ರಾಜ್ಯದಾದ್ಯಂತ ಕೈಗೊಳ್ಳಬೇಕಾದ ಕಾರ್ಯಕ್ರಮ. ಜನಸಾಮಾನ್ಯರಿಂದ ಸಾಧ್ಯವಿಲ್ಲ. ಇದಕ್ಕೆ ಅಗಾಧ ಪ್ರಮಾಣದ ಹಣ ಬೇಕಾಗುತ್ತದೆ. ಬೆಂಗಳೂರು ನಗರದ ವಿಚಾರ ಪರಿಗಣಿಸಿದರೆ, ಮಳೆಗಾಲದಲ್ಲಿ ಚರಂಡಿ ಮತ್ತು ರಾಜಕಾಲುವೆಗಳ ಮುಖಾಂತರ ವ್ಯರ್ಥವಾಗಿ ಹೆಚ್ಚಿನ ಪ್ರಮಾಣದ ಮಳೆ ನೀರು ಹರಿದುಹೋಗುತ್ತದೆ.


ಸರ್ಕಾರ ಮತ್ತು ಅದರ ಅಧೀನ ಸಂಸ್ಥೆಗಳು ಜಂಟಿಯಾಗಿ ಕಾರ್ಯಕ್ರಮ ಯೋಜಿಸಿ ಕಾಲುವೆಗಳಲ್ಲಿನ ನೀರನ್ನು ಇಂಗುತೊಟ್ಟಿಗಳ ಮುಖಾಂತರ ಅಂತರ್ಜಲ ಮಟ್ಟ ಹೆಚ್ಚಿಸಲು ಬಳಸಬಹುದು.

ನಗರದಲ್ಲಿ ಅಂತರ್ಜಲವನ್ನು ಮೇಲೆತ್ತಿ ಅದನ್ನು ಮಾರಿಕೊಂಡು ಲಾಭ ಗಳಿಸುವುದು  ಉದ್ಯಮವಾಗಿದೆ. ಈ ದಂಧೆ ಮಾಡುತ್ತಿರುವವರನ್ನು  ಮತ್ತು ಕೊಳವೆಬಾವಿ ತೆಗೆಸಿ ಅಂತರ್ಜಲ ಉಪಯೋಗಿಸುವವರನ್ನು ಕಡ್ಡಾಯವಾಗಿ ಮಳೆ ನೀರು ಸಂಗ್ರಹ ಮಾಡಬೇಕೆಂದು ಜಲಮಂಡಳಿ ಒತ್ತಾಯಿಸಲಿ. ಅದನ್ನು ಬಿಟ್ಟು ವಾಸದ ಮನೆಗಳ ಮಾಲೀಕರಿಗೆ ಜುಲ್ಮಾನೆ ವಿಧಿಸುವುದಾಗಿ ಬೆದರಿಸುವುದು ಸರಿಯಲ್ಲ.

ನಗರದಲ್ಲಿ ಎಷ್ಟು ಕೊಳವೆಬಾವಿಗಳಿವೆ,  ಅವುಗಳಿಂದ ಹೊರ ತೆಗೆಯುತ್ತಿರುವ  ಅಂತರ್ಜಲ ಪ್ರಮಾಣ ಎಷ್ಟು ಎಂಬುದರ ಕುರಿತು ಜಲಮಂಡಳಿಯ ಬಳಿ ನಿಖರ ಅಂಕಿಅಂಶಗಳೇ ಇಲ್ಲ. ಎರಡು ಕೊಳವೆ ಬಾವಿಗಳ ಮಧ್ಯೆ ನಿರ್ದಿಷ್ಟ ಅಂತರವಿರಬೇಕೆಂದು ವೈಜ್ಞಾನಿಕವಾಗಿ ನಿಗದಿಪಡಿಸಲಾಗಿದೆ. ಆದರೆ ಈಗ ನಿರ್ಮಾಣಗೊಳ್ಳುತ್ತಿರುವ ಪ್ರತೀ ಮನೆಯವರು ಕೊಳವೆ ಬಾವಿ ತೆಗೆಸುತ್ತಿದ್ದಾರೆ.

ನಿಗದಿತ ಅಂತರ ಕಾಯ್ದುಕೊಳ್ಳುವ ವಿಚಾರವನ್ನು ಗಾಳಿಗೆ ತೂರಲಾಗಿದೆ. ಇದನ್ನು ನಿಗ್ರಹಿಸಲು ಜಲಮಂಡಳಿ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಬಹುಪಾಲು  ಕೊಳವೆ ಬಾವಿಗಳು ಅನಧಿಕೃತ ಎಂದು ಪ್ರತ್ಯೇಕ ವಾಗಿ ಹೇಳಬೇಕಾಗಿಲ್ಲ. ಇದನ್ನೆಲ್ಲ ಮರೆತು ನಿವಾಸಿಗಳಿಗೆ ದಂಡ ವಿಧಿಸಲು ಹೊರಟಿರುವುದು
ಎಷ್ಟರಮಟ್ಟಿಗೆ ಸರಿ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT