ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊದ್ಲು ಅರಳುವ ಪರಿ

ಕವನ ಸ್ಪರ್ಧೆ2014
Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಹುರಿಯುವವರಿಗಷ್ಟೇ ಗೊತ್ತು
ಭತ್ತವ ಹೊದ್ಲಾಗಿಸುವ
ಬೆಂಕಿಯ ಹದ!

ಉರಿ ಇಳಿದರೆ ನೆಲ್ಲು
ಉರಿ ಏರಿದರೆ ಕತ್ತು ಕರಗಮ್ಮು
ಏರಿಳಿಯದ ಬಿಸಿಯಲ್ಲಿ
ಬುರುಬುರನೆ ಒದಗುವ ಹೊದ್ಲು

ಇದು ಭತ್ತದ ಸ್ಥಿತಿ
ಒಲೆಯ ಮೇಲಿಟ್ಟ ಬಾಂಡಿಯಲ್ಲಿ
ನಿರಂತರ ಹೊಯ್ದಾಟ
ಉಳಿದರೆ ಬೇಯುವ ಪರಿ
ಜಿಗಿದರೊ ಸುಡುವ ಉರಿ
ಇದು ಹೊದ್ಲು ಅರಳುವ ಪರಿ

ಅಲ್ಲೊಂದು ಇಲ್ಲೊಂದು
ಪಟಪಟನೆ ಸಿಡಿದರೂ
ಕೆಂಪು ಕೆನ್ನಾಲಿಗೆಯ ಬಿಗಿಹಿಡಿತ
ಸಿಡಿಯಗೊಡದನಲನ ಹಿಕ್ಮತ್ತು
ಸುಟ್ಟು ಬೂದಿಯಾಗುವುದಕ್ಕಿಂತ
ಕಾದು ಅರಳಾಗುವುದೇ ಲೇಸು

ಬಯಲ ಬಾಂಡಲಿ ಹೊಕ್ಕು
ಹುಟ್ಟಿನ ಹೊಟ್ಟಿಂದ ಹೊರಬಂದು
ಕಾದಷ್ಟು ಮೈ ಹಿಗ್ಗಿ
ಬಿಳಿಯ ಅರಳಾಗುವುದು ಅಷ್ಟು ಸುಲಭವೆ?

ಮೆಲ್ಲುವವರಿಗೆಷ್ಟು ಗೊತ್ತು
ಭತ್ತವ ಹೊದ್ಲಾಗಿಸಿದ
ಬೆಂಕಿಯ ಹದ!
(ಹೊದ್ಲು=ಭತ್ತದ ಅರಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT