ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗಿನ ಜನ ಬಂದದ್ದು ನಿಜ

ಮಡಿಕೇರಿ ಟಿಪ್ಪು ಜಯಂತಿ ಗಲಭೆ: ಗೃಹ ಸಚಿವರ ಉತ್ತರ
Last Updated 27 ನವೆಂಬರ್ 2015, 19:35 IST
ಅಕ್ಷರ ಗಾತ್ರ

ಬೆಂಗಳೂರು: ಮಡಿಕೇರಿಯಲ್ಲಿ ನ.10ರಂದು ನಡೆದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಕೇರಳ ಮತ್ತು ಇತರ ಕಡೆಗಳಿಂದ 5–6 ಸಾವಿರ ಜನ ಬಂದಿದ್ದರು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ರಾಜೀನಾಮೆಗೆ ಒತ್ತಾಯಿಸಿ  ಬಿಜೆಪಿ ಸದಸ್ಯರು ಕೋಲಾಹಲ ಎಬ್ಬಿಸಿದ ಹೊತ್ತಿನಲ್ಲೇ ಅವರು ರಾಜ್ಯದ ಕಾನೂನು–ಸುವ್ಯವಸ್ಥೆ ಕುರಿತ ಉತ್ತರ ಮಂಡಿಸಿದರು.

ಮಡಿಕೇರಿಗೆ ಬಂದಿದ್ದವರು ಎಸ್‌ಡಿಪಿಐ, ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ), ಟಿಪ್ಪು ಸುಲ್ತಾನ್‌ ಅಭಿಮಾನಿಗಳ ಸಂಘಕ್ಕೆ ಸೇರಿದವರು ಎಂಬ ಮಾಹಿತಿ ಕೂಡ ಪರಮೇಶ್ವರ್‌ ನೀಡಿರುವ ಉತ್ತರದಲ್ಲಿದೆ.

ಪರಮೇಶ್ವರ್‌ ವಿವರಣೆ: ‘ಎಸ್‌ಡಿಪಿಐ, ಪಿಎಫ್‌ಐ, ಟಿಪ್ಪು ಅಭಿಮಾನಿಗಳ ಸಂಘದವರು ನವೆಂಬರ್‌ 10ರಂದು ಕಾವೇರಿ ಕಲಾಕ್ಷೇತ್ರದ ಬಳಿ ಇದ್ದರು. ಈ ಸಂದರ್ಭದಲ್ಲಿ ಕಪ್ಪು ಪಟ್ಟಿ ಧರಿಸಿದ್ದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲಿ ಮಾತಿನ ಚಕಮಕಿ ನಡೆದು, ಕಲ್ಲು ತೂರಾಟ ಆರಂಭವಾಯಿತು’.

ಕುಟ್ಟಪ್ಪ ಸತ್ತಿದ್ದು ಹೇಗೆ?: ಮಡಿಕೇರಿ ಗಲಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ದೇವಪಂಡ ಕುಟ್ಟಪ್ಪ ಸಾವಿಗೀಡಾಗಿದ್ದು ಹೇಗೆ ಎಂಬ ಪ್ರಶ್ನೆಗೆ ಸಚಿವರ ವಿವರಣೆ ಹೀಗಿದೆ: ‘ಮಡಿಕೇರಿ ಮುಖ್ಯರಸ್ತೆಯಲ್ಲಿ ಮೆರವಣಿಗೆಯಲ್ಲಿ ಬಂದ ಟಿಪ್ಪು ಅಭಿಮಾನಿಗಳು ಜಿಲ್ಲಾ ಆಸ್ಪತ್ರೆ ಹತ್ತಿರ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕುಟ್ಟಪ್ಪ ಆಸ್ಪತ್ರೆಯ ಆವರಣ ಗೋಡೆ ಬಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲ ನೀಡದೆ  ಮರಣಹೊಂದಿದ್ದಾರೆ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT