ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗೇ ಉಳಿದ ಮಕ್ಕಳು

Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಹೊರಗುಳಿದ ಮಕ್ಕಳನ್ನು  ಶಾಲೆಗೆ ಕರೆತರಲು ತಳಮಟ್ಟದಲ್ಲಿ  ಗಂಭೀರ ಸಮಸ್ಯೆಗಳಿವೆ. ಅವುಗಳನ್ನು ನಿವಾರಿಸುವ ಕೆಲಸ ತುರ್ತಾಗಿ ಆಗಬೇಕಿದೆ

ಕರ್ನಾಟಕದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತ ಪತ್ರಿಕಾ ವರದಿಗಳನ್ನಾಧರಿಸಿ ರಾಜ್ಯ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ  ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನು ದಾಖಲಿಸಿಕೊಂಡು ಈಗ್ಗೆ ಎರಡು ವರ್ಷಗಳೇ ಆಗುತ್ತಾ ಬಂತು. ‘ಎಷ್ಟು ಮಕ್ಕಳು ಶಾಲೆಯಿಂದ ಹೊರಗಿದ್ದಾರೆ, ಸರಿಯಾದ ಮಾಹಿತಿ ನೀಡಿ’ ಎಂದು ನ್ಯಾಯಾಲಯ ಕೇಳಿದಾಗ ಎಚ್ಚೆತ್ತುಕೊಂಡ ಸಾರ್ವಜನಿಕ ಶಿಕ್ಷಣ ಇಲಾಖೆಯು ಮೊದಲಿಗೆ ಶಾಲೆಯಿಂದ ಹೊರಗಿರುವ ಮಕ್ಕಳ ಕುರಿತು 2013ರ ನವೆಂಬರ್‌ನಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿತ್ತು. ಆಗ ರಾಜ್ಯದಾದ್ಯಂತ 1.70 ಲಕ್ಷ  ಮಕ್ಕಳು ಶಾಲೆಯಿಂದ ಹೊರಗಿರುವ ಅಂಶವು ಬೆಳಕಿಗೆ ಬಂದಿತ್ತು. ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಸೂದೆ- 2009’ ಜಾರಿಯಾದ ನಂತರವೂ ಇಷ್ಟೊಂದು ಮಕ್ಕಳು ಶಾಲೆಯಿಂದ ಹೊರಗಿರುವುದು ಆತಂಕಕಾರಿ.

ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಶಿಕ್ಷಣ ಇಲಾಖೆಯ ಪ್ರಯತ್ನದಿಂದಾಗಿ ಒಂದು ವರ್ಷದ ಅವಧಿಯಲ್ಲಿ ಒಂದು ಲಕ್ಷ ಹತ್ತು ಸಾವಿರಕ್ಕೂ ಅಧಿಕ ಮಕ್ಕಳನ್ನು ಶಾಲಾ ಮುಖ್ಯವಾಹಿನಿಯ ಒಳಗೆ ಕರೆತಂದಿರುವುದಾಗಿಯೂ ಇನ್ನೂ 53 ಸಾವಿರ ಮಕ್ಕಳು ಶಾಲೆಯಿಂದ ಹೊರಗಿರುವುದಾಗಿ ನ್ಯಾಯಾಲಯಕ್ಕೆ ಸರ್ಕಾರ ವಿವರವನ್ನು ಕೊಟ್ಟಿತ್ತು. ಆದರೆ ನ್ಯಾಯಪೀಠವು ಮತ್ತೆ ಮತ್ತೆ ಸರ್ಕಾರವನ್ನು ‘ಇದೊಂದು ಗಂಭೀರ ಸಮಸ್ಯೆ, ಎಲ್ಲ ಮಕ್ಕಳನ್ನೂ ಶಾಲೆಯ ಒಳಗೆ ಕರೆತನ್ನಿ. ಶಾಲೆಯಿಂದ ಹೊರಗಿರುವ ಮಕ್ಕಳ ಸಂಖ್ಯೆ ಸೊನ್ನೆಗಿಳಿಯಬೇಕು’ ಎಂದು ತಾಕೀತು ಮಾಡುತ್ತಲೇ ಬಂದಿದೆ. ಪ್ರಕರಣದ ಗಂಭೀರತೆಯನ್ನು ಅರಿತ ಸರ್ಕಾರ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು ಅಭಿಯಾನ ನಡೆಸುವುದಾಗಿ ಶಿಕ್ಷಣ ಇಲಾಖೆಯ ಮೂಲಕ ಹೈಕೋರ್ಟ್‌ಗೆ ಪ್ರಮಾಣಪತ್ರವನ್ನೂ ಸಲ್ಲಿಸಿದೆ.

ಆದರೆ ಅಭಿಯಾನದ ಮಾತಿರಲಿ, ಮಕ್ಕಳನ್ನು ಶಾಲೆಗೆ ತರಲು ಬೇಕಿರುವ ಪ್ರಾಮಾಣಿಕ ಮತ್ತು ಶ್ರದ್ಧೆಯ ಕೆಲಸ ಶಿಕ್ಷಣ ಇಲಾಖೆಯಿಂದ ಆಗುತ್ತಿದೆಯೇ ಎಂದು ಹುಡುಕಲು ಹೊರಟರೆ ನಿರಾಸೆಯಾಗುತ್ತದೆ. ಮಕ್ಕಳನ್ನು ಒಳಗೊಳ್ಳುವ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದರಿಂದ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಕಾರದಿಂದ ಈ ಕೆಲಸವನ್ನು ಮಾಡಿ ಎಂದು ನ್ಯಾಯಪೀಠವೇನೋ ಹೇಳಿತು. ಕೆಲವು ಸ್ವಯಂಸೇವಾ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಈ ಕೆಲಸದಲ್ಲಿ ತೊಡಗಿಕೊಂಡವು. ಆದರೆ ಇತರ ಇಲಾಖೆಗಳಿಗೆ ಈ ಕುರಿತ ನಿರ್ದೇಶನವೇನೂ ಹೋಗಲಿಲ್ಲ. ಸ್ವಯಂಪ್ರೇರಿತವಾಗಿ ತಾವಾಗಿಯೇ ಇಂತಹ ಮಕ್ಕಳನ್ನು ಶಾಲೆಗೆ ಸೇರಿಸಲು ಇತರ ಇಲಾಖೆಗಳು ಹೆಚ್ಚಿನ ಮುತುವರ್ಜಿಯನ್ನೇನೂ ವಹಿಸಿಲ್ಲ.

‘ನಮಗೆ ನಮ್ಮದೇ ನಿಗದಿತ ಕೆಲಸಗಳೇ ಸಾಕಷ್ಟಿರುವಾಗ ಈ ಹೆಚ್ಚಿನ ಹೊರೆ ಹೊತ್ತುಕೊಳ್ಳಲು ಹೇಗೆ ಸಾಧ್ಯ?’ ಎಂಬುದು ಇತರ ಇಲಾಖೆಗಳ ಪ್ರಶ್ನೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಅಂತರ ಇಲಾಖಾ ಉನ್ನತಾಧಿಕಾರಿಗಳ ಸಮಿತಿ ಸಭೆಗಳು ಕೆಲವು ನಡೆದರೂ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಪರಿಶಿಷ್ಟ ಜಾತಿ ಮತ್ತು ಪಂಗಡ, ಕಾರ್ಮಿಕ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುವುದಕ್ಕೆ ಯಾವ ಕುರುಹುಗಳೂ ಸಿಕ್ಕುತ್ತಿಲ್ಲ.

ಏಕೆಂದರೆ ಶಾಲೆಯಿಂದ ಹೊರಗಿರುವ ಮಕ್ಕಳ ಕುರಿತು ಕ್ರಮಕ್ಕೆ ನಿರ್ದೇಶಿಸಿರುವ ಯಾವುದೇ ಆದೇಶ ಈ ಇಲಾಖೆಗಳಿಂದ ಜಿಲ್ಲೆ, ತಾಲ್ಲೂಕು ಮತ್ತೂ ಕೆಳಹಂತದ ಆಡಳಿತಶಾಹಿಗೆ ತಲುಪಿಯೇ ಇಲ್ಲ! ಕೇವಲ ಉನ್ನತಾಧಿಕಾರಿಗಳ ಸಭೆಗಳಲ್ಲಿ ಚರ್ಚೆಗಳಾಗಿ ಅಲ್ಲೇ ವಿಷಯವನ್ನು ಬಿಟ್ಟು ಹೋಗಿದ್ದಾರೇನೋ! ಬೇರೆ ಆದೇಶದ ಜೊತೆಗೆ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಪ್ರತಿ ಇಲಾಖೆ ತನ್ನ ಜವಾಬ್ದಾರಿಯನ್ನು ಬೇರೆ ಇಲಾಖೆಗೆ ಹೊತ್ತು ಹಾಕಲು ಹಾತೊರೆಯುತ್ತಿರುವಾಗ ಬೀದಿಯಲ್ಲಿರುವ ಮಕ್ಕಳಿಗೆ ನ್ಯಾಯ ದೊರೆಯುವುದೆಂದು ನಂಬುವುದು ಹೇಗೆ?
ಪ್ರಕರಣದ ಕಳೆದ ಬಾರಿಯ ವಿಚಾರಣೆಯ ಹಂತದಲ್ಲಿಯೇ ನ್ಯಾಯಪೀಠವು ‘ಅಧಿಕಾರಿಗಳಿಗೆ ಗಂಭೀರತೆ ಬರಬೇಕೆಂದರೆ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷರನ್ನಾಗಿ ನ್ಯಾಯಮೂರ್ತಿಯೊಬ್ಬರನ್ನು ನೇಮಿಸುವುದೇ ಒಳ್ಳೆಯದು’ ಎಂದು ಕಠಿಣವಾಗಿ ಹೇಳಿದೆ. ಬಹುಶಃ ನ್ಯಾಯಮೂರ್ತಿಯೊಬ್ಬರ ಅಧ್ಯಕ್ಷತೆಯಲ್ಲಿ ಈ ಸಮಿತಿ ರೂಪುಗೊಂಡರೆ ಮಾತ್ರ ಶಾಲೆ ಬಿಟ್ಟ ಎಲ್ಲ ಮಕ್ಕಳನ್ನು ಶೈಕ್ಷಣಿಕ ಮುಖ್ಯವಾಹಿನಿಗೆ ತರಬಹುದೇನೋ.

‘ಶಾಲೆಯಿಂದ ಹೊರಗಿರುವ ಮಕ್ಕಳ ಪೋಷಕರ ಮತ್ತು ಮಕ್ಕಳ ಮನವೊಲಿಸಲು ಸತತ ಪ್ರಯತ್ನಿಸಿದ್ದು, ಹೊರಗುಳಿದ ಮಕ್ಕಳನ್ನು ಶಾಲೆಗೆ ಕಳಿಸಲು ಮೂರು ಬಾರಿ ಪೋಷಕರಿಗೆ ಮತ್ತು ಎಸ್‌ಡಿಎಮ್‌ಸಿಗೆ ನೋಟಿಸ್ ಕಳಿಸಿದ್ದೇವೆ. ಆದರೂ ಮಕ್ಕಳು ಶಾಲೆಗೆ ಬರುತ್ತಿಲ್ಲ, ಇನ್ನಿದು ನಿಮ್ಮ ಜವಾಬ್ದಾರಿ. ನೀವು ಪ್ರಯತ್ನಿಸಿ’ ಎಂದು ಶಿಕ್ಷಣ ಇಲಾಖೆಯು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಇಂತಹ ಮಕ್ಕಳ ಜವಾಬ್ದಾರಿಯನ್ನು ವಹಿಸಿ ಕೈತೊಳೆದುಕೊಳ್ಳುತ್ತಿದೆ. ಈ ಸಮಿತಿ, ಘಟಕದವರು ಕೆಲವು ಪ್ರಕರಣಗಳನ್ನು ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತಸಮಾಲೋಚಕರ ಮೂಲಕ ನಿರ್ವಹಿಸಿದ್ದಾರೆ. ಮಕ್ಕಳನ್ನು ಶಾಲೆಗೆ ಸೇರಿಸಬೇಕೆಂದು ಪೋಷಕರಿಗೆ ತಾಕೀತು ಮಾಡಿ ಕಳಿಸಿದ್ದರೂ ಕೆಲವು ಬಾರಿ ಯಥಾಸ್ಥಿತಿಯೇ ಮುಂದುವರೆದಿದೆ. ‘ನಮಗೆ ನಮ್ಮ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗೆ ನೂರಕ್ಕೂ ಹೆಚ್ಚಿರುವ ಮಕ್ಕಳನ್ನು ಒಳತರುವ ಈ ಕೆಲಸ ನಿರ್ವಹಿಸಲು ಅಧಿಕ ಸಿಬ್ಬಂದಿಯಾಗಲಿ, ವಿಶೇಷ ಅಧಿಕಾರವಾಗಲಿ ಇಲ್ಲ. ಶಿಕ್ಷಣ ಇಲಾಖೆ ಇಂತಹ ಮಕ್ಕಳ ಜವಾಬ್ದಾರಿಯನ್ನು ನಮಗೇಕೆ ವಹಿಸಿದೆ? ನಮಗೆ ಮಕ್ಕಳ ಪೋಷಣೆ ಮತ್ತು ರಕ್ಷಣೆಯ ಕೆಲಸವೇ ಹೊರೆಯಾಗಿರುವಾಗ ಈ ಕೆಲಸವನ್ನೂ ಮಾಡುವುದು ಹೇಗೆ ಸಾಧ್ಯ?’ ಎನ್ನುತ್ತಿದ್ದಾರೆ.

ಮತ್ತೆ ಇಂದು (ಏ. 20) ಶಾಲೆಯಿಂದ ಹೊರಗಿರುವ ಮಕ್ಕಳ ಕುರಿತು ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಅಂತರ ಇಲಾಖಾ ಉನ್ನತಾಧಿಕಾರಿಗಳ ಸಮಿತಿ ಸಭೆ ನಡೆಯುತ್ತಿರುವುದು ತಿಳಿದು ಬಂದಿದೆ.  ಹೊರಗಿರುವ ಮಕ್ಕಳನ್ನು ಶಾಲೆಯ ಒಳಗೆ ಕರೆತರಲು ತಳಮಟ್ಟದಲ್ಲಿ ಅನೇಕ ಗಂಭೀರ ಸಮಸ್ಯೆಗಳಿದ್ದು ಅವುಗಳನ್ನು ನಿವಾರಿಸಿಕೊಳ್ಳಲು ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳನ್ನು ಜವಾಬ್ದಾರಿಯುತರನ್ನಾಗಿ ಮಾಡುವುದು ಹೇಗೆ? ಪ್ರತಿ ಹಂತದಲ್ಲೂ ಆಡಳಿತ ಯಂತ್ರವನ್ನು ಇದಕ್ಕಾಗಿ ಸಜ್ಜುಗೊಳಿಸುವುದು ಹೇಗೆ? ಒಟ್ಟಾರೆ ಎಲ್ಲಾ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ಕರೆತರಲು ತಳಮಟ್ಟದಲ್ಲಿ ಸಮಿತಿಗಳನ್ನು ನೇಮಿಸಿ, ಯೋಜನೆಗಳನ್ನು ರೂಪಿಸಲು ಇನ್ನಾದರೂ ಆಡಳಿತ ಯಂತ್ರ ಗಂಭೀರವಾಗಿ ಯೋಚಿಸಬೇಕಿದೆ. ಇಲ್ಲದಿದ್ದರೆ ಶಾಲೆಯಿಂದ ಹೊರಗಿರುವ ಮಕ್ಕಳು ಹೊರಗೇ ಉಳಿದುಬಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT